ಕ್ಷೀರ ಕ್ರಾಂತಿ: ಅಭಿವೃದ್ಧಿಯತ್ತ ದಾಪುಗಾಲು

7
ವಿಜಯಪುರ–ಬಾಗಲಕೋಟೆ ಜಿಲ್ಲಾ ಸಹಕಾರಿ ಹಾಲು ಒಕ್ಕೂಟಕ್ಕೆ ಮೂರು ದಶಕದ ಸಂಭ್ರಮ

ಕ್ಷೀರ ಕ್ರಾಂತಿ: ಅಭಿವೃದ್ಧಿಯತ್ತ ದಾಪುಗಾಲು

Published:
Updated:
ಕ್ಷೀರ ಕ್ರಾಂತಿ: ಅಭಿವೃದ್ಧಿಯತ್ತ ದಾಪುಗಾಲು

ವಿಜಯಪುರ: ಬರದ ನಾಡಿನಲ್ಲಿ ಕ್ಷೀರ ಕ್ರಾಂತಿ ನಡೆದಿದೆ. ಮೂರು ದಶಕದ ಐತಿಹ್ಯ ಹೊಂದಿರುವ ವಿಜಯಪುರ–ಬಾಗಲಕೋಟೆ ಜಿಲ್ಲಾ ಸಹಕಾರಿ ಹಾಲು ಒಕ್ಕೂಟ ಅವಿಭಜಿತ ಜಿಲ್ಲೆಯ ರೈತ ಹೈನುಗಾರರ ಪಾಲಿಗೆ ಸಂಜೀವಿನಿಯಾಗಿದೆ.ಆರಂಭದ ಎರಡು ದಶಕ ಹಾಲು ಒಕ್ಕೂಟ ಸತತ ನಷ್ಟಕ್ಕೀಡಾಗಿತ್ತು. ₨ 13 ಕೋಟಿ ನಷ್ಟದ ಒಟ್ಟು ಮೊತ್ತವಾಗಿತ್ತು. 2006ರಿಂದ ಈಚೆಗೆ ಅಭಿವೃದ್ಧಿಯತ್ತ ಅಂಬೆಗಾಲಿಟ್ಟ ಒಕ್ಕೂಟ, ಎರಡ್ಮೂರು ವರ್ಷಗಳಿಂದ ದಾಪುಗಾಲಿಡುವ ಮೂಲಕ ವಾರ್ಷಿಕ ಕೋಟಿ ಕೋಟಿ ಲಾಭ ಗಳಿಸುತ್ತಿದೆ.2016–17ನೇ ಸಾಲಿನಲ್ಲಿ ₨ 3.56 ಕೋಟಿ ಲಾಭ ಗಳಿಸಿದ ಒಕ್ಕೂಟ, ಲಾಭವನ್ನು ಪುನಃ ರೈತರಿಗೆ ವರ್ಗಾಯಿಸಲು ಇದೇ ಜನವರಿಯಿಂದ ಮೇ ಅಂತ್ಯದವರೆಗೂ ಸತತ ಐದು ತಿಂಗಳು ಒಂದು ಲೀಟರ್ ಹಾಲಿಗೆ ₹ 1.50 ಪ್ರೋತ್ಸಾಹಧನವನ್ನು ತನ್ನ ಲಾಭದ ಹಣದಲ್ಲಿ ನೀಡುತ್ತಿರುವುದು ವಿಶೇಷವಾಗಿದೆ ಎಂದು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಿ.ಅಶೋಕ್ ‘ಪ್ರಜಾವಾಣಿ’ಗೆ ತಿಳಿಸಿದರು.2017–18ನೇ ಸಾಲಿನಲ್ಲಿ ₹ 242.42 ಕೋಟಿ ವಹಿವಾಟು ನಡೆಸುವ ಗುರಿ ಹಾಕಿಕೊಂಡಿರುವ ಒಕ್ಕೂಟ, ನಿವ್ವಳ ಲಾಭವನ್ನು ಹೆಚ್ಚಿಗೆ ಗಳಿಸಲು ಆದ್ಯತೆ ನೀಡದೆ, ರೈತರಿಗೆ ಗರಿಷ್ಠ ಪ್ರಯೋಜನ ಒದಗಿಸಲು ಹಲ ಯೋಜನೆ ರೂಪಿಸಿದೆ ಎಂದು ಹೇಳಿದರು.2 ಲಕ್ಷ ಲೀಟರ್‌ ಗುರಿ: ಪ್ರಸ್ತುತ ಒಕ್ಕೂಟಕ್ಕೆ 1.60 ಲಕ್ಷ ಲೀಟರ್‌ ಹಾಲು ನಿತ್ಯ ಸಂಗ್ರಹಗೊಳ್ಳುತ್ತಿದೆ. ಇದರಲ್ಲಿ ಎಮ್ಮೆ ಹಾಲಿನ ಪ್ರಮಾಣ 35ರಿಂದ 40 ಸಾವಿರ ಲೀಟರ್. ಹಿಂದಿನ ವರ್ಷ ಇದರ ಪ್ರಮಾಣ 1.45 ಲಕ್ಷ ಲೀಟರ್‌ನಷ್ಟಿತ್ತು. ಆರ್ಥಿಕ ವರ್ಷಾಂತ್ಯದೊಳಗೆ ನಿತ್ಯ 2 ಲಕ್ಷ ಲೀಟರ್ ಹಾಲು ಸಂಗ್ರಹಿಸುವ ಗುರಿಯನ್ನು ಒಕ್ಕೂಟ ಹೊಂದಿದೆ.ಸಂಗ್ರಹಗೊಳ್ಳುವ ಹಾಲಿನಲ್ಲಿ ಅವಳಿ ಜಿಲ್ಲೆಯಲ್ಲಿ 60 ಸಾವಿರ ಲೀಟರ್‌ ಹಾಲು ಮಾರಾಟವಾದರೆ, ಕೆಎಂಎಫ್‌ಗೆ ನಿತ್ಯ 10 ಸಾವಿರ ಲೀಟರ್‌ ಎಮ್ಮೆ ಹಾಲು ನೀಡಲಾಗುತ್ತಿದೆ. ಈ ಹಾಲು ಹೈದರಾಬಾದ್‌ ಮಾರುಕಟ್ಟೆ ಪ್ರವೇಶಿ ಸುತ್ತದೆ ಎಂದು ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಡಾ.ಎಸ್‌.ಡಿ.ದೀಕ್ಷಿತ್‌ ಮಾಹಿತಿ ನೀಡಿದರು.12 ಸಾವಿರ ಲೀಟರ್‌ ಮಜ್ಜಿಗೆಗೆ ನಿತ್ಯ ಬೇಡಿಕೆಯಿದೆ. 2.5 ಸಾವಿರ ಲೀಟರ್‌ ಲಸ್ಸಿ ಮಾರಾಟವಾಗಿದೆ. ಮದುವೆ ಸೀಝನ್ ಹೆಚ್ಚಿದ್ದ ಸಂದರ್ಭ ನಿತ್ಯ 25 ಸಾವಿರ ಲೀಟರ್‌ ಮೊಸರು ಮಾರಾಟ ಮಾಡಿದ ದಾಖಲೆ ವಿಜಯಪುರ–ಬಾಗಲಕೋಟೆ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ್ದು ಎನ್ನುತ್ತಾರೆ ದೀಕ್ಷಿತ್‌.

****

ಸೊಲ್ಲಾಪುರಕ್ಕೆ ಎಮ್ಮೆ ಹಾಲು

ಮೇ 1ರಿಂದ ನೆರೆಯ ಮಹಾರಾಷ್ಟ್ರದ ಸೊಲ್ಲಾಪುರಕ್ಕೆ ವಿಜಯಪುರ–ಬಾಗಲಕೋಟೆ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದಿಂದ ನಿತ್ಯ 3.5–4 ಸಾವಿರ ಲೀಟರ್‌ ಎಮ್ಮೆ ಹಾಲು ಪೂರೈಕೆಯಾಗುತ್ತಿದೆ. ಇದರಿಂದಾಗಿ ಅಲ್ಲಿನ ಮಾರುಕಟ್ಟೆಯೂ ವಿಸ್ತರಣೆಗೊಳ್ಳುತ್ತಿದೆ ಎಂದು ಡಾ.ಎಸ್‌.ಡಿ.ದೀಕ್ಷಿತ್‌ ತಿಳಿಸಿದರು.

ಕೈ ಹಿಡಿದ ಹೈನುಗಾರಿಕೆ:  ಮೂರು ವರ್ಷಗಳಿಂದ ಬೆಂಬಿಡದೆ ಕಾಡುತ್ತಿರುವ ಬರ ಅವಳಿ ಜಿಲ್ಲೆಯ ಜನತೆಯನ್ನು ಹೈರಾಣಾಗಿಸಿದೆ. ನೀರಾವರಿ ಆಶ್ರಿತ ರೈತರು ನಿರಾತಂಕವಾಗಿದ್ದರೆ, ಒಣ ಬೇಸಾಯ ಅವಲಂಬಿಸಿರುವ ಅಪಾರ ಸಂಖ್ಯೆಯ ರೈತರ ಕುಟುಂಬದ ನಿತ್ಯದ ಬದುಕು ಸಾಗಿಸುತ್ತಿರುವುದು ಹೈನುಗಾರಿಕೆಯಿಂದ. ಈಚೆಗಿನ ದಿನಗಳಲ್ಲಿ ಹೈನುಗಾರಿಕೆ ಹೆಚ್ಚಿದಂತೆ ಗುಳೆ ತಗ್ಗುತ್ತಿದೆ. ಸಹಸ್ರ, ಸಹಸ್ರ ಸಂಖ್ಯೆಯ ಕುಟುಂಬಗಳಿಗೆ ಆಸರೆ ಒದಗಿಸಿದೆ.

****

ಬಾಗಲಕೋಟೆ ಅಧಿಕ

ಹಾಲು ಉತ್ಪಾದನೆಯಲ್ಲಿ ಬಾಗಲಕೋಟೆ ಜಿಲ್ಲೆ ಮುಂದಿದೆ. ಸಂಗ್ರಹಗೊಳ್ಳುವ ಬಹುಪಾಲು ಹಾಲು ಬಾಗಲಕೋಟೆ ಜಿಲ್ಲೆಯದ್ದು. ವಿಜಯಪುರ ಜಿಲ್ಲೆಯಲ್ಲಿ ನಿತ್ಯ 30 ಸಾವಿರ ಲೀಟರ್‌ ಮಾತ್ರ ಸಂಗ್ರಹಗೊಳ್ಳುತ್ತಿದೆ.

ಮಾರಾಟದಲ್ಲಿ ವಿಜಯಪುರ ಜಿಲ್ಲೆ ಮುಂದು. ಬಹುತೇಕ ಮಾರುಕಟ್ಟೆಯಿರುವುದು ಇದೇ ಜಿಲ್ಲೆಯಲ್ಲಿ. ವಿಜಯಪುರ ಜಿಲ್ಲೆ ವ್ಯಾಪ್ತಿಯಲ್ಲೂ ಹಾಲು ಉತ್ಪಾದನೆ ಹೆಚ್ಚಳಗೊಳಿಸಲು ಅನೇಕ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry