ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆ ವಿಮೆ ಪರಿಹಾರ ಸಿಗದೇ ಪರದಾಡಿದ ವೃದ್ಧೆ

ಬ್ಯಾಡಗಿ ತಹಶೀಲ್ದಾರ್ ಎದುರು ಗೋಳು ತೋಡಿಕೊಂಡ ಕಮಲಮ್ಮ ಮಾಸಣಗಿ
Last Updated 1 ಜೂನ್ 2017, 9:48 IST
ಅಕ್ಷರ ಗಾತ್ರ

ಬ್ಯಾಡಗಿ: ಕಳೆದ ಮೂರು ವರ್ಷಗಳಿಂದ ಬೆಳೆ ವಿಮೆ ಕಂತು ಪಾವತಿಸಿದ್ದರೂ ಪರಿಹಾರದ ಹಣ ಸಿಗದೆ ತಾಲ್ಲೂಕಿನ ಶಿಡೇನೂರ ಗ್ರಾಮದ ವೃದ್ಧೆ ಕಮಲಮ್ಮ ಮಾಸಣಗಿ (80) ಅವರು ಮಂಗಳವಾರ ತಹಶೀಲ್ದಾರ್‌ ಅವರೆದುರು ಬಿತ್ತನೆ ಬೀಜ ಕೊಳ್ಳಲು ಅನುಭವಿಸಿದ ನೋವನ್ನು ತೋಡಿಕೊಂಡರು.

12 ಎಕರೆ ಜಮೀನು ಹೊಂದಿದ್ದರೂ ಯಾರದೋ ತಪ್ಪಿನಿಂದಾಗಿ ಬೆಳೆ ವಿಮೆ ಪರಿಹಾರ ಸಿಗದೇ ಬಿತ್ತನೆ ಬೀಜ ಪರಿತಪಿಸುವಂತಾಗಿದೆ ಎಂದು ಕಮಲಮ್ಮ ವಿವರಿಸಿದರು.

ಗ್ರಾಮದ ಕೃಷಿ ಪತ್ತಿನ ಸಹಕಾರಿ ಸಂಘದ ಮೂಲಕ 2013–14ರಲ್ಲಿ ₹2,190, 2014–15ರಲ್ಲಿ ₹3,145 ಹಾಗೂ 2015–16ರಲ್ಲಿ ₹1,500 ಬೆಳೆ ವಿಮೆ ಕಂತು ಪಾವತಿಸಿದ್ದರೂ ಬೆಳೆ ವಿಮೆ ಮಂಜೂರಾಗಿಲ್ಲ.

ಬ್ಯಾಂಕ್‌ ಹಾಗೂ ಸಹಕಾರಿ ಸಂಘಕ್ಕೆ ಅಡ್ಡಾಡಿ ಸುಸ್ತಾಗಿ ಹೋಗಿದೆ ಎಂದು ಕಮಲಮ್ಮ ಹೇಳಿದಾಗ ಅವರ ಕಣ್ಣಾಲಿಗಳು ಒದ್ದೆಯಾಗಿದ್ದವು. ‘ಸಾಹೇಬ್ರ... ನೀವಾದರೂ ನನಗೆ ಪರಿಹಾರ ದೊರಕುವಂತೆ ಪ್ರಯತ್ನಿಸಿ’ ಎಂದು ಅಂಗಲಾಚುತ್ತಿರುವ ದೃಶ್ಯ ಕಲಕುವಂತಿತ್ತು.

ಹಲವು ಬಾರಿ ಬ್ಯಾಂಕಿಗೆ ಅಲೆದರೂ ವಿಮೆ ಪರಿಹಾರ ಬಾರದಾದಾಗ ಈಕೆ ರೈತ ಮುಖಂಡರ ಸಹಾಯ ಕೇಳಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.
ಬುಧವಾರ ನಡೆದ ಸಭೆಯಲ್ಲಿ ವಿಮಾ ಸಂಸ್ಥೆ ಬಿಡುಗಡೆ ಮಾಡಿದ ಬೆಳೆ ವಿಮೆ ಪರಿಹಾರದ ಪಟ್ಟಿಯಲ್ಲಿ ಇಲ್ಲದ 295 ರೈತರ ಪಟ್ಟಿ ಕೂಡಲೇ ಬಿಡುಗಡೆ ಮಾಡುವಂತೆ ಒತ್ತಡ ಹೇರಲಾಗಿದೆ.

ಯಾವುದೇ ಕಾರಣಕ್ಕೂ 15 ದಿನದಲ್ಲಿ ಬಾಕಿ ಇಲ್ಲದಂತೆ ಪರಿಹಾರದ ಹಣ ರೈತರ ಖಾತೆಗೆ ಜಮಾ ಮಾಡಲು ಕ್ರಮ ಕೈಕೊಳ್ಳಲಾಗಿದೆ ಎಂದು ಬ್ಯಾಡಗಿ ತಹಶೀಲ್ದಾರ್‌ ಶಿವಶಂಕರ ನಾಯಕ ತಿಳಿಸಿದರು.

****
ಇನ್ನೂ 295 ರೈತರಿಗೆ ಪರಿಹಾರ ಬಾಕಿ
ಬ್ಯಾಡಗಿ ತಾಲ್ಲೂಕಿನಲ್ಲಿ ಇನ್ನೂ ₹1.5ಕೋಟಿ ಹಣ ವಿತರಣೆ ಆಗಬೇಕಾಗಿದೆ. ವಿಮಾ ಸಂಸ್ಥೆ ಪಟ್ಟಿ ಬಿಡುಗಡೆ ಮಾಡದ ಕಾರಣ ಈ ವಿಳಂಬವಾಗಿದೆ. ಶಿಡೇನೂರ ಪಂಚಾಯ್ತಿ  ವ್ಯಾಪ್ತಿಯ ಫಲಾನುಭವಿ 800 ರೈತರಲ್ಲಿ ಮೂರು ಜನ ಬಾಕಿ ಉಳಿದಿದ್ದಾರೆ.

ಚಿನ್ನಿಕಟ್ಟಿ–189 ಹಾಗೂ ಮತ್ತೂರು–52 ಹಾಗೂ ಇನ್ನುಳಿದ ಪಂಚಾಯ್ತಿ ವ್ಯಾಪ್ತಿಯ 54 ಜನರು ಸೇರಿದಂತೆ ಒಟ್ಟು 295 ರೈತರಿಗೆ ಬೆಳೆ ವಿಮೆ ಪರಿಹಾರದ ಹಣ ವಿತರಣೆಯಾಗಬೇಕಾಗಿದೆ. ಇದುವರೆಗೆ ₹16.09ಕೋಟಿ ವಿತರಿಸಿದೆ ಎಂದು ಕೆಸಿಸಿ ಬ್ಯಾಂಕ್ ವ್ಯವಸ್ಥಾಪಕ ಶಿವಣ್ಣ ತಿಳಿಸಿದರು.
****
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT