ಜೀವನ ಪಾಠದ ‘ಡ್ರೀಮ್‌ ಗರ್ಲ್‌’

7

ಜೀವನ ಪಾಠದ ‘ಡ್ರೀಮ್‌ ಗರ್ಲ್‌’

Published:
Updated:
ಜೀವನ ಪಾಠದ ‘ಡ್ರೀಮ್‌ ಗರ್ಲ್‌’

‘ತ್ರಿಕೋನ ಪ್ರೇಮಕಥೆಯ ಈ ಸಿನಿಮಾದಲ್ಲಿ ಥ್ರಿಲ್ಲರ್ ಕೂಡ ಬೆರೆತಿದೆ. ವೈಭವೀಕರಣದ ಯಾವುದೇ ದೃಶ್ಯಗಳು ಚಿತ್ರದಲ್ಲಿಲ್ಲ. ನೈಜ ಘಟನೆಗೆ ಸಾಕ್ಷಿಯಾದ ಅನುಭವ ಪ್ರೇಕಕ್ಷರಿಗೆ ಆಗುತ್ತದೆ. ಪ್ರೀತಿ–ಪ್ರೇಮ–ಸಂಸಾರ–ಗುರಿ ಇವೆಲ್ಲವುಗಳ ಹದ ಬೆರೆಸಿದ ಕಥೆ ಇದು’. ನಿರ್ದೇಶಕ ಡಿ. ಲಕ್ಷ್ಮಣ್ ನಾಯಕ್ ತಮ್ಮ ನಿರ್ದೇಶನದ ‘ಡ್ರೀಮ್ ಗರ್ಲ್’ ಚಿತ್ರದ ಕಥೆಯ ಎಳೆಯನ್ನು ಬಿಚ್ಚಿಟ್ಟಿದ್ದು ಹೀಗೆ.

ಚಿತ್ರದ ಆರಂಭದಲ್ಲಿ ಸೂರ್ಯ ಸತೀಶ್ ಅವರಿಗೆ ನಿರ್ದೇಶನದ ಹೊಣೆ ಹೊರಿಸಿದ್ದ ಅವರು, ಬೆನ್ನ ಹಿಂದೆ ನಿಂತು ಸಹಕಾರ ನೀಡಿದ್ದರು. ಚಿತ್ರದ ಆಡಿಯೊ ಸಿ.ಡಿ ಬಿಡುಗಡೆಯ ಹಂತಕ್ಕೆ ಬಂದಿರುವ ಈ ಹೊತ್ತಿನಲ್ಲಿ, ಅವರೀಗ ಪೂರ್ಣಪ್ರಮಾಣದ ನಿರ್ದೇಶಕರಾಗಿದ್ದಾರೆ.

ನಾಯಕ್ ಅವರು ಕೇವಲ ಆ್ಯಕ್ಷನ್–ಕಟ್ ಅಷ್ಟೇ ಹೇಳದೆ ಬಂಡವಾಳವನ್ನೂ ಹೂಡಿದ್ದಾರೆ. ಅಂದಹಾಗೆ, ಈ ಚಿತ್ರ ಅವರ ‘ಜೀವನ ಸಾಥಿ’ ಎಂಬ ಕಾದಂಬರಿ ಆಧರಿಸಿದ್ದಾಗಿದೆ. ಚಿತ್ರದ ಕಥೆ, ಸಾಹಿತ್ಯ ಹಾಗೂ ಸಂಭಾಷಣೆಯೂ ಅವರದ್ದೇ.

‘ಪಟ್ರೆ’ ಅಜಿತ್ ಮತ್ತು ರಘು ಭಟ್ ಚಿತ್ರದ ನಾಯಕರಾದರೆ, ಅಮೃತಾ ರಾವ್ ಮತ್ತು ದೀಪಿಕಾ ದಾಸ್ ನಾಯಕಿಯರು. ‘ಸಾಮಾನ್ಯ ಪ್ರೇಮಕಥೆ ಎನಿಸಿದರೂ ಚಿತ್ರದಲ್ಲಿ ಆಸಕ್ತಿಕರ ಅಂಶಗಳು ಅಡಕವಾಗಿವೆ. ಪ್ರತಿ ಪಾತ್ರಗಳು ಮನಸ್ಸಿಗೆ ನಾಟುತ್ತವೆ’ ಎಂದರು ಕನಸು ಹೊತ್ತು ನಗರಕ್ಕೆ ಬರುವ ಹಳ್ಳಿ ಹೈದನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅಜಿತ್.

‘ಮಧ್ಯಮ ವರ್ಗದ ಹುಡುಗನಾಗಿ, ನಾನೂ ಕನಸುಗಳ ಮೂಟೆ ಹೊತ್ತು ನಗರಕ್ಕೆ ಬರುತ್ತೇನೆ. ಮುಂದೇನಾಗುತ್ತೇನೆ ಎಂಬುದೇ ಸಸ್ಪೆನ್ಸ್‌’ ಎಂದು ರಘು ಭಟ್ ತಮ್ಮ ಪಾತ್ರವನ್ನು ಪರಿಚಯಿಸಿಕೊಂಡರು.

ಶ್ರೀಮಂತ ಕುಟುಂಬದ ಹುಡುಗಿ ಪಾತ್ರಕ್ಕೆ ಬಣ್ಣ ಹಚ್ಚಿರುವ ಅಮೃತಾ ರಾವ್, ‘ತಂದೆಯೇ ಪ್ರಪಂಚವಾಗಿರುವ ಪಾತ್ರ ನನ್ನದು. ಬಡ ಹುಡುಗನೊಬ್ಬನ ಜತೆ ಪ್ರೇಮಾಂಕುರವಾಗುತ್ತದೆ. ಆ ಪ್ರೀತಿ ಗೆಲ್ಲುತ್ತದೋ ಸೋಲುತ್ತದೋ ಎಂಬುದೇ ಕಥೆ’ ಎಂದರು.

ಚಿತ್ರದ ಗೀತೆಗಳಿಗೆ ವಿ. ಮನೋಹರ್ ಸಂಗೀತ ನೀಡಿದ್ದರೆ, ಗಂಧರ್ವ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. ಐದು ಹಾಡುಗಳಿರುವ ಚಿತ್ರದ ಆಡಿಯೊ ಸಿ.ಡಿ.ಯನ್ನು ಸಾಯಿ ಮ್ಯೂಸಿಕ್ ಹೊರತಂದಿದ್ದು, ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ ಹಾಗೂ ನಟ ಡಿಂಗ್ರಿ ನಾಗರಾಜ್ ಸಿ.ಡಿ.ಗಳನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಬೆಂಗಳೂರು, ಮಂಗಳೂರು, ಚಿಕ್ಕಮಗಳೂರು, ಮೇಲುಕೋಟೆಯಲ್ಲಿ 45 ದಿನ ಚಿತ್ರೀಕರಣ  ನಡೆದಿದ್ದು, ವಿಜಯ್ ಎಸ್. ತಮ್ಮ ಕ್ಯಾಮೆರಾ ಕಣ್ಣಲ್ಲಿ ದೃಶ್ಯಗಳನ್ನು ಸೆರೆ ಹಿಡಿದ್ದಾರೆ. ಕೌರವ ವೆಂಕಟೇಶ್ ಸಾಹಸ ನಿರ್ದೇಶನ ಹಾಗೂ ಈಶ್ವರ್ ಈ.ಎಸ್. ಸಂಕಲನ ಚಿತ್ರಕ್ಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry