ಗೌಡರ ಪಂಚಾಯಿತಿ ಮತ್ತು ಕಬ್ಬಿನ ಗದ್ದೆಯ ಪ್ರೀತಿ

7

ಗೌಡರ ಪಂಚಾಯಿತಿ ಮತ್ತು ಕಬ್ಬಿನ ಗದ್ದೆಯ ಪ್ರೀತಿ

Published:
Updated:
ಗೌಡರ ಪಂಚಾಯಿತಿ ಮತ್ತು ಕಬ್ಬಿನ ಗದ್ದೆಯ ಪ್ರೀತಿ

‘ನಮ್ಗೆ ಕಲೆ ಪ್ರೀತಿ ಜಾಸ್ತಿ. ವಯಸ್ಸಾಯ್ತು. ನಾವು ವೋದ್ಮೇಲೂ ಮುಂದ್‌ ಮುಂದ್ಕೆ ನಮ್‌ ಹೆಸರುಳ್ಕೋಬೇಕು. ಈಗಾಗ್ಲೇ ಎರಡು ಪಿಚ್ಚರ್‌ ಬಿದ್ದೋಗವೆ. ಆದರೆ ಇನ್ನೂ ಬಾಳ ಅವೆ. ಅವನ್ನೆಲ್ಲ ಎದ್‌ ನಿಲ್ಲುಸ್ತೀನಿ. ಹಿಂಗೇ ಇದ್ರೆ ಇನ್ನೂ ಪಿಚ್ಚರ್‌ ಮಾಡ್ಬೇಕು ಅಂತ ಆಸೆ ಅದೆ’.

‘ತಿಥಿ’ ಸಿನಿಮಾ ಖ್ಯಾತಿಯ ಸೆಂಚುರಿ ಗೌಡ ಒಂದೇಸಮನೆ ಮಾತಾಡುತ್ತಲೇ ಇದ್ದರು. ಅವರ ಗ್ರಾಮೀಣ ಸೊಗಡಿನ ಭಾಷೆಯಿಂದಲೇ ಸ್ಟಾರ್‌ ಹೋಟೆಲ್‌ನಲ್ಲಿಯೂ ಹಳ್ಳಿ ಪಂಚಾಯಿತಿಯ ವಾತಾವರಣ ರೂಪುಗೊಂಡಿತ್ತು.

‘ಹಳ್ಳಿ ಪಂಚಾಯಿತಿ’ ಸಿನಿಮಾ ಬಗ್ಗೆ ಮಾತನಾಡಲು ಹೋದ ಅವರು ಹಲವು ಸಂಗತಿಗಳನ್ನು ತಮ್ಮ ಮಾತಿನಲ್ಲಿ ಎಳೆದು ತಂದರು.

ನಂತರ ಮಾತಿಗಿಳಿದ ಅಭಿ, ‘ಈ ಚಿತ್ರದಲ್ಲಿ ಯಾವ್ದೇ ಡಬಲ್‌ ಮೀನಿಂಗ್‌ ಡೈಲಾಗ್‌ ಇಲ್ಲ’ ಎಂದೇ ಮಾತು ಶುರುಮಾಡಿದರು. ಜೊತೆಗೆ ತಮ್ಮ ಮತ್ತು ನಾಯಕ ನಟಿ ಮೇಘನಾ ಅವರ ನಡುವಿನ ಸಂಭಾಷಣೆಯ ತುಣುಕನ್ನೂ ಹೇಳಿ ತೋರಿಸಿದರು.

‘ಈ ಚಿತ್ರದಲ್ಲಿ ಮೊದಲು ನಾನು ಕಾಲೇಜಿವೋಯ್ತಿರ್ತೀನಿ. ನಂತ್ರ ಕಾಲೇಜು ಬಿಟ್ಟು ಅಲ್ಲಿ ಇಲ್ಲಿ ಕಬ್ಬಿನ ಗದ್ದೆ ಅಂತೆಲ್ಲ ಅಲ್ಕೊಂಡಿರ್ತೀನಿ...’ – ಅಭಿ ಮಾತಿನಲ್ಲಿ ಕಬ್ಬಿನ ಗದ್ದೆಯ ಉಲ್ಲೇಖ ಬಂದ ಕೂಡಲೇ ನಗು ಅಲೆಅಲೆಯಾಗಿ ಹೊಮ್ಮಿತು. ‘ನಾ ಏನೇ ಮಾತಾಡಿದ್ರೂ ನೀವು ಡಬಲ್‌ ಮೀನಿಂಗೇ ಅರ್ಥ ಮಾಡ್ಕಂತೀರಿ’ ಎಂದು ಹುಸಿಕೋಪದಿಂದಲೇ ದೂರಿದರು.

‘ಹಳ್ಳಿ ಪಂಚಾಯಿತಿ’ಯ ಕಥೆ–ಚಿತ್ರಕಥೆ ಬರೆದು ನಿರ್ಮಾಣ ಜವಾಬ್ದಾರಿಯನ್ನೂ ಹೊತ್ತಿರುವವರು ಪ್ರೇಮ ಯುವರಾಜು. ಮೊದಲು ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿದ್ದ ಇವರು ಹದಿನೈದು ವರ್ಷಗಳ ನಂತರ ಈ ಸಿನಿಮಾದ ಮೂಲಕ ಮತ್ತೆ ಕ್ಯಾಮೆರಾ ನಂಟಿಗೆ ಅಂಟಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ಒಂದು ಪಾತ್ರವನ್ನೂ ನಿರ್ವಹಿಸಿದ್ದಾರೆ.

‘ಹಳ್ಳಿಯ ಎಲ್ಲ ಸಮಸ್ಯೆಗಳನ್ನೂ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇನೆ’ ಎಂದ ಅವರು, ‘ಹಣ ಮಾಡುವುದೇ ಮುಖ್ಯವಲ್ಲ. ಒಳ್ಳೆಯ ಕೆಲಸ ಮಾಡಿ ಹೆಸರು ಗಳಿಸುವುದು ಮುಖ್ಯ. ಈ ಚಿತ್ರದ ಮೂಲಕ ನಾನು ಕನ್ನಡಕ್ಕೊಂದು ಸೇವೆ ಸಲ್ಲಿಸುತ್ತಿದ್ದೇನೆ’ ಎಂದು ತಮ್ಮ ಸಿನಿಮಾಗೆ ಭಾಷಾಪ್ರೇಮದ ಛಾಪನ್ನೂ ಒತ್ತಿಕೊಂಡರು.

ಮುಂದೊಮ್ಮೆ ಅವರಿಗೆ ‘ಬಾಹುಬಲಿ’ ಮಾದರಿಯಲ್ಲಿ ಕನ್ನಡದಲ್ಲಿಯೇ ಇನ್ನೂರು ಕೋಟಿ ಬಜೆಟ್‌ನ ಸಿನಿಮಾ ಒಂದನ್ನು ನಿರ್ಮಿಸುವ ಮಹತ್ವಾಕಾಂಕ್ಷೆಯೂ ಇದೆಯಂತೆ. ‘ಬಾಹುಬಲಿಯಂಥ ಸಿನಿಮಾ ಕನ್ನಡದಲ್ಲಿ ಮಾಡಿ, ಟಾಲಿವುಡ್‌ನಲ್ಲಿ (ತೆಲುಗು ಚಿತ್ರರಂಗದಲ್ಲಿ) ಕನ್ನಡಧ್ವಜ ಹಾರಿಸಿಯೇ ಹಾರಿಸುತ್ತೇನೆ’ ಎಂಬ ವೀರಪ್ರತಿಜ್ಞೆಯನ್ನೂ ಅವರು ಮಾಡಿದರು!

ಜಿ. ಉಮೇಶ್‌ ಈ ಚಿತ್ರಕ್ಕೆ ಆ್ಯಕ್ಷನ್‌–ಕಟ್‌ ಹೇಳುತ್ತಿದ್ದಾರೆ. ‘ಹಳ್ಳಿಯ ಬದುಕನ್ನು ಕಟ್ಟಿಕೊಡುವ ಸಿನಿಮಾ ಇದು’ ಎಂಬುದು ಅವರ ವಿವರಣೆ. ಇದೇ ಮೊದಲ ಬಾರಿಗೆ ಕ್ಯಾಮೆರಾ ಎದುರಿಸುತ್ತಿರುವ ಮೇಘನಾ ಗೌಡ ಈ ಚಿತ್ರದಲ್ಲಿ ಬಜಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಚಿತ್ರದ ಎರಡು ಹಾಡುಗಳಿಗೆ ಹರಿಕಾವ್ಯ ಸಂಗೀತ ಸಂಯೋಜಿಸಿದ್ದಾರೆ. ದೊಡ್ಡರಂಗೇಗೌಡ ಸಾಹಿತ್ಯ ಬರೆದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry