ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂಳು ತೆಗೆಯಲು ಮುಂದಾದ ಜನಶಕ್ತಿ

ಹಿರೇಕಾಸನಕಂಡಿ: ಕಾಯಕಕ್ಕಿಳಿದ ತುಂಗಭದ್ರಾ ಜಲಾಶಯದ ಹೂಳೆತ್ತುವ ರೈತರ ಕ್ರಿಯಾ ಸಮಿತಿ
Last Updated 1 ಜೂನ್ 2017, 10:38 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲೆಯ ಭಾಗದಲ್ಲಿ ತುಂಗಭದ್ರಾ ಹೂಳು ತೆರವು ಕಾರ್ಯಕ್ಕೆ ಕೊನೆಗೂ ಭರ್ಜರಿ ಚಾಲನೆ ಸಿಕ್ಕಿದೆ.

ರೈತರನ್ನೊಳಗೊಂಡ ಜನಶಕ್ತಿ ತಾಲ್ಲೂಕಿನ ಕಾಸನಕಂಡಿ ಭಾಗದಲ್ಲಿ ಶ್ರಮದಾನಕ್ಕಿಳಿದಿದೆ. ಅಂದಾಜು ಒಂದು ವಾರಕ್ಕಷ್ಟೇ ಸೀಮಿತಗೊಂಡಿದ್ದ ಕಾರ್ಯಕ್ರಮ ಜನ ಬೆಂಬಲದಿಂದ ಅನಿರ್ದಿಷ್ಟಾವಧಿಗೆ ವಿಸ್ತರಣೆಗೊಂಡಿದೆ. ಹತ್ತಾರು ಟ್ರ್ಯಾಕ್ಟರ್, ಟಿಪ್ಪರ್‌ಗಳು ಮಣ್ಣು ಹೊತ್ತು ಹಳ್ಳಿಗಳತ್ತ ಮುಖಮಾಡಿವೆ. ಫಲವತ್ತಾದ ಕಪ್ಪು ಮಣ್ಣು ರೈತರ ಹೊಲದಲ್ಲಿ ರಾಶಿ ಬಿದ್ದಿದೆ.

1 ನಿಮಿಷದೊಳಗೆ ಒಂದು ಟ್ರ್ಯಾಕ್ಟರ್‌, 3 ನಿಮಿಷದ ಒಳಗೆ ಒಂದು ಟಿಪ್ಪರ್‌ ಭರ್ತಿಯಾಗುತ್ತಿದೆ. ಮಣ್ಣು ಅಗೆಯುವ ಬೃಹತ್‌ ಯಂತ್ರ, ಇನ್ನೊಂದು ಸಣ್ಣ ಯಂತ್ರ ಅವಿರತ ಕೆಲಸದಲ್ಲಿ ನಿರತವಾಗಿವೆ.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಟಿ.ಜನಾರ್ದನ ಹುಲಿಗಿ ಅವರು ಈ ಕಾರ್ಯಕ್ರಮದ ರೂವಾರಿ. ಮಣ್ಣು ಅಗೆಯುವ ಯಂತ್ರ, ಟಿಪ್ಪರ್‌ಗಳನ್ನು ನೀಡಿದ್ದಾರೆ. ಡೀಸೆಲ್‌ ವೆಚ್ಚವನ್ನು ದಾನಿಗಳಿಂದ ಭರಿಸಲಾಗುತ್ತದೆ. ‘ಇದೇ ರೀತಿ ಎಲ್ಲ ರೈತರು ಕೈಜೋಡಿಸಿದರೆ ಹತ್ತಾರು ಎಕರೆ ಪ್ರದೇಶದ ಹೂಳು ತೆಗೆಯಬಹುದು’ ಎಂದು ಹುಲಿಗಿ ಹೇಳಿದರು.

ಮಣ್ಣು ಪರೀಕ್ಷೆ: ‘ಮಣ್ಣಿನ ಗುಣಮಟ್ಟದ ಬಗ್ಗೆ ಆತಂಕ ಸಹಜ. ಅದಕ್ಕಾಗಿ ಇಲ್ಲಿನ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕೊಡುತ್ತೇವೆ. ಅದನ್ನು ಆಧರಿಸಿ ಹೊಲಕ್ಕೋ, ಇಟ್ಟಿಗೆ ಭಟ್ಟಿಗಳಿಗೋ ಅಥವಾ ರಸ್ತೆ ಕಾಮಗಾರಿಗಳ ಬಳಕೆಗೋ ಎಂದು ನಿರ್ಧರಿಸಿ ಕಳುಹಿಸುತ್ತೇವೆ’ ಎಂದು ತಿಳಿಸಿದರು.

ವಿವಿಧ ಸಮಿತಿಗಳ ರಚನೆ:  ಕ್ರಿಯಾ ಸಮಿತಿಯಲ್ಲಿ ಹಲವು ತಂಡಗಳನ್ನು ರಚಿಸಲಾಗಿದೆ. ಹಣಕಾಸು, ಯಂತ್ರ ನಿರ್ವಹಣೆ, ಸಾರಿಗೆ, ಸಂಚಾರ ನಿಯಂತ್ರಣ, ಸುರಕ್ಷತೆ, ಆಹಾರ, ಸಾರ್ವಜನಿಕ ಸಂಪರ್ಕ ಹೀಗೆ ಹಲವು ಸಮಿತಿಗಳು ಕೆಲಸ ಮಾಡುತ್ತಿವೆ.

ಹಣಕಾಸು ಸಮಿತಿಯು ಲೆಕ್ಕಪತ್ರ ನಿರ್ವಹಣೆ, ಹಣ ಪೋಲಾಗದಂತೆ ನೋಡಿಕೊಳ್ಳುವುದು, ಸಂಚಾರ ನಿಯಂತ್ರಣ ಮತ್ತು ಸುರಕ್ಷತಾ ಸಮಿತಿಯು ವಾಹನಗಳು ಅತಿವೇಗ ಹಾಗೂ ಅಡ್ಡಾದಿಡ್ಡಿಯಾಗಿ ಸಂಚರಿಸದಂತೆ ನೋಡಿಕೊಳ್ಳಲಿವೆ.

ಪ್ರತಿ ವರ್ಷವೂ ಮುಂದುವರಿಕೆ: ‘ಕಾಮಗಾರಿಯನ್ನು ಹಂತಹಂತವಾಗಿ ನಡೆಸಲಾಗುವುದು. ಹೂಳು ತೆಗೆದ ಜಾಗಕ್ಕೆ ಮಣ್ಣು ಮತ್ತೆ ಸೇರದಂತೆ ಬದು ನಿರ್ಮಿಸಿ ಗಿಡ ನೆಡಲಾಗುವುದು’ ಎಂದು ಹುಲಿಗಿ ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಗವಿಸಿದ್ದಪ್ಪ ಕರಡಿ, ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ಶಾಸಕ ಶಿವರಾಜ ತಂಗಡಗಿ, ವಿಧಾನ ಪರಿಷತ್‌ ಮಾಜಿ ಸದಸ್ಯ ಎಚ್‌.ಆರ್‌. ಶ್ರೀನಾಥ್‌ ಇದ್ದರು.

****
ಗವಿಸಿದ್ದೇಶ್ವರ ಸ್ವಾಮೀಜಿ ಲೆಕ್ಕಾಚಾರ
‘ರೈತರ ಪ್ರಯತ್ನದಲ್ಲಿ ಯೋಜನೆ, ಯೋಚನೆ ಮತ್ತು ಅನುಷ್ಠಾನ ಸರಿಯಾಗಿದ್ದರೆ ಹೂಳೆತ್ತುವ ಪ್ರಯತ್ನ ಮಾಡಬಹುದು. ಕೊಪ್ಪಳ, ಗಂಗಾವತಿ, ಸಿಂಧನೂರು ಸೇರಿದಂತೆ ನದಿ ನೀರಿನ ಬಳಕೆದಾರ ಜಿಲ್ಲೆಗಳಿಂದ 25 ಸಾವಿರ ಟ್ರ್ಯಾಕ್ಟರ್‌ಗಳು, ಅದಕ್ಕೆ ತಕ್ಕ ಪ್ರಮಾಣದ ಮಣ್ಣು ಅಗೆಯುವ ಯಂತ್ರಗಳು ಇದ್ದಲ್ಲಿ ಪ್ರತಿದಿನ ಒಂದೊಂದು ಟ್ರ್ಯಾಕ್ಟರ್‌ ನಾಲ್ಕು ಬಾರಿ ಸಂಚರಿಸಿದರೂ ಒಂದು ಲಕ್ಷ ಟ್ರ್ಯಾಕ್ಟರ್‌ನಷ್ಟು ಹೂಳು ಹೊರಹಾಕಬಹುದು.

ಹೀಗೆ ಮಾಡಿದರೆ 3 ತಿಂಗಳಿನಲ್ಲಿ ಸುಮಾರು 1 ಟಿಎಂಸಿಯಷ್ಟು ಹೂಳು ತೆಗೆಯಲು ಸಾಧ್ಯವಿದೆ. ವೈಜ್ಞಾನಿಕವಾಗಿ ಈ ಕೆಲಸ ನಿರ್ವಹಿಸಬೇಕು’ ಎಂದು ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ಬಳಿಕ ಕ್ರಿಯಾಸಮಿತಿಯವರೊಂದಿಗೆ ಮಾತನಾಡಿದ ಸ್ವಾಮೀಜಿ, ‘ಇಲ್ಲಿನ ಕಾರ್ಯನಿರ್ವಹಣೆಯನ್ನು ಸೂಕ್ತ ಸಾಫ್ಟ್‌ವೇರ್‌ ಮೂಲಕ ನಿರ್ವಹಿಸುವುದು ಒಳ್ಳೆಯದು. ಹೂಳು ಹಾಕಲು ಜಾಗವಿಲ್ಲದಿದ್ದಲ್ಲಿ ಖಾಲಿ ಜಾಗಗಳಲ್ಲಿ ಬದು ನಿರ್ಮಿಸಲು ಬಳಸಬಹುದು. ಅಲ್ಲಿಯೂ ನೀರು ಸಂಗ್ರಹವಾಗುತ್ತದೆ. ಇಲ್ಲಿ ಎಲ್ಲ ಕ್ಷೇತ್ರಗಳ ತಜ್ಞರ ಅನುಭವ ಮತ್ತು ಕೊಡುಗೆ ಮುಖ್ಯ’ ಎಂದರು.

****
ಶಾಸಕ, ಮುಖಂಡರ ದೇಣಿಗೆ
ಒಂದು ವಾರ ಹೂಳೆತ್ತುವ ಯೋಜನೆಯನ್ನು ಕ್ರಿಯಾ ಸಮಿತಿ ಹಮ್ಮಿಕೊಂಡು ₹4 ಲಕ್ಷ ವೆಚ್ಚ ಅಂದಾಜಿಸಿತ್ತು. ಕಾರ್ಯಕ್ರಮದ ಮೊದಲ ದಿನವೇ ಶಾಸಕ ಶಿವರಾಜ ತಂಗಡಗಿ ಅವರು ₹ 5 ಲಕ್ಷ, ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಹಾಗೂ ವಿಧಾನ ಪರಿಷತ್‌ ಮಾಜಿ ಸದಸ್ಯ ಎಚ್‌.ಆರ್‌.ಶ್ರೀನಾಥ್‌ ಅವರು

ತಲಾ ₹ 2 ಲಕ್ಷ ದೇಣಿಗೆ ನೀಡಿದರು. ವಿವಿಧ ಸಂಘಟನೆಗಳು ₹ 11 ಸಾವಿರ ನೆರವು ನೀಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT