‘ಆಕೆ’ಯ ‘ಆತ್ಮ’ಕಥೆ

7

‘ಆಕೆ’ಯ ‘ಆತ್ಮ’ಕಥೆ

Published:
Updated:
‘ಆಕೆ’ಯ ‘ಆತ್ಮ’ಕಥೆ

ಕರ್ನಾಟಕದಲ್ಲಿ ಹುಟ್ಟಿ ಇಂಗ್ಲೆಂಡಿಗೂ ತಲುಪಿ ಮತ್ತೆ ತಾಯ್ನಾಡಿಗೆ ಮರಳಿ, ತೆರೆಯ ಮೇಲೆ ಬರಲು ಸಿದ್ಧಳಾಗಿದ್ದಾಳೆ ‘ಆಕೆ’.

ಯಾರೀಕೆ?

ಪೂರ್ವಜನ್ಮದಲ್ಲಿ ತೆಲುಗಿನ ‘ಮಾಯಾ’ ಆಗಿದ್ದವಳನ್ನು ಕನ್ನಡದಲ್ಲಿ ಮರುಜನ್ಮ ನೀಡಿ ‘ಆಕೆ’ಗೆ ವಿದೇಶದರ್ಶನವನ್ನೂ ಮಾಡಿಸಿ ಕರೆತಂದಿದ್ದಾರೆ ನಿರ್ದೇಶಕ ಕೆ.ಎಂ. ಚೈತನ್ಯ.

ಚಿರಂಜೀವಿ ಸರ್ಜಾ ಮತ್ತು ಶರ್ಮಿಳಾ ಮಾಂಡ್ರೆ ಪ್ರಧಾನಭೂಮಿಕೆಯಲ್ಲಿ ನಟಿಸುತ್ತಿರುವ ಈ ಸಿನಿಮಾದ ಟ್ರೈಲರ್‌ ಮತ್ತು ಮೇಕಿಂಗ್‌ ದೃಶ್ಯತುಣುಕುಗಳನ್ನು ತೋರಿಸಲಿಕ್ಕಾಗಿಯೇ ಚಿತ್ರತಂಡ ಪತ್ರಿಕಾಗೋಷ್ಠಿಯನ್ನು ಏರ್ಪಡಿಸಿತ್ತು.

ಲಂಡನ್‌ನಲ್ಲಿನ ಚಿತ್ರ ಕಲಾವಿದ ಶಿವ ಮತ್ತು ಬೆಂಗಳೂರಿನ ಹುಡುಗಿ ಶರ್ಮಿಳಾ ಎರಡು ಪಾತ್ರಗಳ ಸುತ್ತ ಸಿನಿಮಾವನ್ನು ಹೆಣೆಯಲಾಗಿದೆ. ಈ ಚಿತ್ರದ ಮೂಲಕ ‘ಇರೋಸ್‌ ಇಂಟರ್‌ನ್ಯಾಷನಲ್‌’ ಮೊದಲ ಬಾರಿಗೆ ಕನ್ನಡ ಚಿತ್ರ ನಿರ್ಮಾಣಕ್ಕೆ ಇಳಿದಿದೆ. ಜತೆಗೆ ಕಲೈ, ಸೂರಿ ಮತ್ತು ಸುನಂದಾ ಮುರಳಿ ಮನೋಹರ್‌ ಕೂಡ ಹಣ ಹೂಡಿದ್ದಾರೆ. ಯೋಗೀಶ್‌ ದ್ವಾರಕೀಶ್‌ ನಿರ್ಮಾಣ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ.

‘ಆಕೆ’ ಭಾರತ ಮತ್ತು ಬ್ರಿಟೀಶ್‌ ದೇಶಗಳ ಚಿತ್ರಕರ್ಮಿಗಳ ಸಹಯೋಗದಲ್ಲಿ ತಯಾರಾಗುತ್ತಿರುವ ಹಾರರ್‌ ಚಿತ್ರ, ಇದರ ಅರ್ಧ ಭಾಗ ಇಂಗ್ಲೆಂಡ್‌ನಲ್ಲಿ ಚಿತ್ರೀಕರಣಗೊಂಡಿದೆ. ಹ್ಯಾರಿ ಪಾಟರ್‌ ಚಿತ್ರಕ್ಕೆ ಕೆಲಸ ಮಾಡಿದ ಇಯನ್‌ ಹಾವ್ಸ್ ಅವರು ಈ ಚಿತ್ರದ ಇಂಗ್ಲೆಂಡ್‌ ಭಾಗದ ಛಾಯಾಗ್ರಹಣ ಮಾಡಿದ್ದಾರೆ. ಭಾರತದಲ್ಲಿ ನಡೆಯುವ ಭಾಗಕ್ಕೆ ಮನೋಹರ್‌ ಜೋಷಿ ಕ್ಯಾಮೆರಾ ಕಣ್ಣಾಗಿದ್ದಾರೆ. ಹಾಗೆಯೇ ಕಲಾನಿರ್ದೇಶಕ ಪಾಲ್‌ ಬರ್ನ್ಸ್‌ ಕೂಡ ‘ದ ನಾಟ್‌’ ಎಂಬ ಹಾಲಿವುಡ್‌ ಚಿತ್ರತಂಡದಲ್ಲಿದ್ದವರು.

‘ಈ ಚಿತ್ರದಲ್ಲಿ ಸಾಕಷ್ಟು ವಿಶೇಷಗಳಿವೆ. ಭಾರತ ಮತ್ತು ಇಂಗ್ಲೆಂಡ್‌ ಎರಡೂ ದೇಶಗಳ ತಂತ್ರಜ್ಞರಿಂದ ರೂಪುಗೊಂಡ ಸಿನಿಮಾ ಇದು’ ಎಂದು ಸಿನಿಮಾ ನಿರ್ಮಾಣದ ಮಾಹಿತಿಯನ್ನಷ್ಟೇ ನೀಡಿ ಮಾತು ಮುಗಿಸಿದರು ಕೆ. ಎಂ. ಚೈತನ್ಯ.

ಈ ಚಿತ್ರದ ಸಂಗೀತ ನಿರ್ದೇಶನ ಮಾಡಿರುವ ಗುರುಕಿರಣ್‌ ಅವರಿಗೆ ಈ ಸಿನಿಮಾ ಅನುಭವ ವಿಶೇಷ ಅನಿಸಿದೆ. ‘ಇದು ಒಮ್ಮೆಲೇ ಬೆಚ್ಚಿಬೀಳಿಸುವ ಸಿನಿಮಾ ಅಲ್ಲ. ನಿಧಾನಕ್ಕೆ ಒಳಗೊಳಗೆ ತಲ್ಲಣ ಎಬ್ಬಿಸುವ ಸಿನಿಮಾ’ ಎಂದರು ಅವರು.

‘ನಟನಾಗಿ ಈ ಸಿನಿಮಾ ಮೂಲಕ ನಾನು ಇನ್ನೊಂದಿಷ್ಟು ಬೆಳೆದಿದ್ದೇನೆ. ಅದಕ್ಕೆ ಕಾರಣ ನಿರ್ದೇಶಕರು’ ಎಂದರು ನಾಯಕನಟ ಚಿರಂಜೀವಿ ಸರ್ಜಾ. ಶರ್ಮಿಳಾ ಮಾಂಡ್ರೆ ತಮ್ಮೆಲ್ಲ ತಾರಾ ಪ್ರಭಾವಳಿಗಳನ್ನು ಪಕ್ಕಕ್ಕಿಟ್ಟು ಸಾದಾ ಸೀದಾ ಹುಡುಗಿಯಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ.

ಪ್ರಕಾಶ್‌ ಬೆಳವಾಡಿ, ಬಾಲಾಜಿ ಮನೋಹರ್‌, ಅಚ್ಯುತ್‌ ಕುಮಾರ್‌ ಅವರೂ ಈ ಚಿತ್ರದ ತಾರಾಗಣದಲ್ಲಿದ್ದಾರೆ. ಚಿತ್ರ ಈಗಾಗಲೇ ಪೂರ್ತಿಗೊಂಡಿದ್ದು ಜೂನ್‌ನಲ್ಲಿಯೇ ತೆರೆಗೆ ತರುವ ಆಲೋಚನೆ ಚಿತ್ರತಂಡದ್ದು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry