ಕಾರ್ಮಿಕರ ಮರು ನೇಮಕಕ್ಕೆ ಒತ್ತಾಯ

7
ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ ನೇತೃತ್ವದಲ್ಲಿ ಕಾರ್ಮಿಕರ ಪ್ರತಿಭಟನೆ

ಕಾರ್ಮಿಕರ ಮರು ನೇಮಕಕ್ಕೆ ಒತ್ತಾಯ

Published:
Updated:
ಕಾರ್ಮಿಕರ ಮರು ನೇಮಕಕ್ಕೆ ಒತ್ತಾಯ

ರಾಯಚೂರು: ನಗರದ ಪವರ್ ಗ್ರಿಡ್‌ನಲ್ಲಿ ದುಡಿಯುತ್ತಿದ್ದ 18 ಸ್ಥಳೀಯ ಕಾರ್ಮಿಕರನ್ನು ಗ್ರಿಡ್ ಆಡಳಿತ ವರ್ಗವು ಅನ್ಯಾಯವಾಗಿ ವಜಾಗೊಳಿಸಿದ್ದು, ಅವರನ್ನು ಸೇವೆಗೆ ಮರು ನೇಮಕ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿ ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ (ಟಿಯುಸಿಐ) ನೇತೃತ್ವದಲ್ಲಿ ಕಾರ್ಮಿಕರು ಬುಧವಾರದಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.ನಾಲ್ಕು ವರ್ಷ ಸೇವೆ ಸಲ್ಲಿಸಿರುವ ಕಾರ್ಮಿಕರು ತಮಗೆ ಬರಬೇಕಾದ ಕನಿಷ್ಠ ವೇತನ ಹಾಗೂ ಹೆಚ್ಚುವರಿ ದುಡಿಮೆಯ ಹಿಂಬಾಕಿ ಕೇಳಿದ್ದಕ್ಕಾಗಿ ಕಾರ್ಮಿಕರಾದ ಹನುಮಂತ, ಶಾಲಂ, ಸತೀಶ್, ನಾಗರಾಜ, ರಾಘವೇಂದ್ರ, ಮಹೇಶ, ವಿರುಪಾಕ್ಷಿ, ಶರಣಪ್ಪ, ಶರಣಬಸವ, ವಿಜಯಕುಮಾರ, ಮಲ್ಲಮ್ಮ, ತಿಮ್ಮಪ್ಪ, ದೊಡ್ಡ ತಿಮ್ಮಪ್ಪ, ಮುರುಳಿಧರ, ರಜಿಯಾಬೇಗಂ, ಮಹಾಲಕ್ಷ್ಮೀ, ಬಿ.ಸತೀಶ, ಸೂಪರ್‌ವೈಜರ್ ರಾಘವೇಂದ್ರ ಸೇರಿದಂತೆ 18 ಜನರನ್ನು ಕಳೆದ ವರ್ಷ ಆಗಸ್ಟ್‌ನಲ್ಲಿ ವಜಾಗೊಳಿಸಿರುವುದು ಖಂಡನೀಯ ಎಂದರು.‘ಕಾರ್ಮಿಕರನ್ನು ಮರು ನೇಮಕ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ಅಧಿಕಾರಿ, ಸಂಸದ ಬಿ.ವಿ.ನಾಯಕ, ಶಾಸಕ ಡಾ.ಶಿವರಾಜ ಪಾಟೀಲ್, ಪಿಎಸ್‌ಐ ಅಗ್ನಿ ಹಾಗೂ ಡಿವೈಎಸ್‌ಪಿ ಹರೀಶ್ ಅವರು 10 ತಿಂಗಳಿಂದ ಪದೇ ಪದೇ ಕೇಳಿದ್ದಾರೆ. ಆದರೆ ಜನಪ್ರತಿನಿಧಿಗಳ ಹಾಗೂ ಅಧಿಕಾರಿ ವರ್ಗದ ಮನವಿಗೆ ಪವರ್ ಗ್ರಿಡ್ ಆಡಳಿತ ಸ್ಪಂದಿಸುತ್ತಿಲ್ಲ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.‘ಖಾಲಿ ಇರುವ 18 ಜನರ ಜಾಗದಲ್ಲಿ ಆಂಧ್ರಪ್ರದೇಶದಿಂದ ಅಗ್ಗದಲ್ಲಿ ಕಾರ್ಮಿಕರನ್ನು ಕರೆತಂದು ದುಡಿಸಿಕೊಳ್ಳಲಾಗುತ್ತಿದೆ. ಬೇನಾಮಿ ಕೂಲಿಕಾರರ ಹೆಸರಲ್ಲಿ ಪ್ರತಿ ತಿಂಗಳು ಹತ್ತಾರು ಲಕ್ಷ ಹಣ ದುರುಪಯೋಗವಾಗುತ್ತದೆ. ಸ್ಥಳೀಯ ಕಾರ್ಮಿಕರಾದರೆ ಕನಿಷ್ಠ ವೇತನ ಕೇಳುತ್ತಾರೆ. ಕಿರುಕುಳ ಹಾಗೂ ಅನ್ಯಾಯವನ್ನು ಸಹಿಸಿಕೊಳ್ಳುವುದಿಲ್ಲ. ಈ ರೀತಿಯ ಲೆಕ್ಕಚಾರದ ಮೇಲೆ ಪವರ್ ಗ್ರಿಡ್ ಆಡಳಿತ ವರ್ಗ ಕಾರ್ಮಿಕ ವಿರೋಧಿ ಧೋರಣೆ ಅನುಸರಿಸುತ್ತಿದೆ’ ಎಂದು ಆರೋಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry