ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ಸೇನೆಯ ತಿರುಗೇಟಿಗೆ ಪಾಕ್‌ನ ಐವರು ಸೈನಿಕರು ಸಾವು, ಆರು ಮಂದಿ ಗಾಯ

Last Updated 1 ಜೂನ್ 2017, 12:33 IST
ಅಕ್ಷರ ಗಾತ್ರ

ನವದೆಹಲಿ: ಗಡಿ ನಿಯಂತ್ರಣ ರೇಖೆಯಲ್ಲಿ ಕದನವಿರಾಮ ಉಲ್ಲಂಘಿಸಿ ದಾಳಿ ನಡೆಸಿರುವ ಪಾಕ್‌ಗೆ ಭಾರತೀಯ ಸೇನೆ ಗುರುವಾರ ನೀಡಿರುವ ತಿರುಗೇಟಿಗೆ ಪಾಕಿಸ್ತಾನದ ಐವರು ಸೈನಿಕರು ಸಾವಿಗೀಡಾಗಿದ್ದಾರೆ. ಇತರ ಆರು ಮಂದಿ ಗಾಯಗೊಂಡಿದ್ದಾರೆ.

ಪಾಕಿಸ್ತಾನ ಸೇನೆ ಬೆಳಿಗ್ಗೆ ಜಮ್ಮು–ಕಾಶ್ಮೀರದ ರಜೌರಿ ಮತ್ತು ಪೂಂಚ್‌ ಜಿಲ್ಲೆಗಳಲ್ಲಿ ಗುಂಡಿನ ದಾಳಿ ಮಾಡಿತ್ತು. ಭಾರತೀಯ ಸೇನೆಯು ದಾಳಿಗೆ ಪ್ರತಿ ದಾಳಿ ಮುಂದುವರಿಸಿತ್ತು.

‘ಪಾಕಿಸ್ತಾನ ಕದನವಿರಾಮ ಉಲ್ಲಂಘಿಸಿ ದಾಳಿ ನಡೆಸಿದ್ದು, ನೌಶೇರ ವಲಯದ ರಜೌರಿ ಮತ್ತು ಪೂಂಚ್‌ ಜಿಲ್ಲೆಗಳ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತಿಯ ಸೇನೆ ನಡೆಸಿದ ಪ್ರತಿ ದಾಳಿಗೆ ಪಾಕ್‌ನ ಐವರು ಸೈನಿಕರು ಮೃತಪಟ್ಟಿದ್ದಾರೆ. ಬಿಂಬರ್‌ ಮತ್ತು ಬಟಾಲ್‌ ವಲಯದಲ್ಲಿ ಇತರ ಆರು ಮಂದಿ ಗಾಯಗೊಂಡಿದ್ದಾರೆ’ ಎಂದು ಸೇನಾ ಮೂಲಗಳು ತಿಳಿಸಿದ್ದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.

ಪ್ರತಿಭಟನೆ ದಾಖಲು
ಸೇನೆ ದಾಳಿ ಸಂಬಂಧ ಪಾಕಿಸ್ತಾನದಲ್ಲಿನ ಭಾರತದ ಉಪ ಹೈಕಮಿಷನರ್‌ ಜೆ.ಪಿ. ಸಿಂಗ್‌ ಅವರನ್ನು ಕರೆಸಿಕೊಂಡಿರುವ ಪಾಕಿಸ್ತಾನ, ತನ್ನ ಪ್ರತಿಭಟನೆ ದಾಖಲಿಸಿದೆ.

ಬಟಾಲ್ ವಲಯದಲ್ಲಿ ಭಾರತೀಯ ಸೇನೆ ಗುರುವಾರ ಬೆಳಿಗ್ಗೆ ನಡೆಸಿದ ಗುಂಡಿನ ದಾಳಿಗೆ ಒಬ್ಬ ನಾಗರಿಕ ಸಾವಿಗೀಡಾಗಿದ್ದು, ಇತರ ನಾಲ್ವರು ಗಾಯಗೊಂಡಿದ್ದಾರೆ ಪಾಕಿಸ್ತಾನ ಆರೋಪಿಸಿದೆ.

‘ನಾಗರಿಕರ ಮೇಲೆ ನಡೆದ ದಾಳಿ ನಿಜಕ್ಕೂ ಖಂಡನೀಯ. ಇದು ಮಾನವೀಯ ಘನತೆ ಮತ್ತು ಅಂತರರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಮಾನವೀಯ ಕಾನೂನುಗಳಿಗೆ ವಿರುದ್ಧವಾಗಿದೆ’ ಎಂದು ಪಾಕಿಸ್ತಾನದ ಹಿರಿಯ ಅಧಿಕಾರಿ(ಎಸ್‌ಎ ಮತ್ತು ಸಾರ್ಕ್‌ನ ಮಹಾ ನಿರ್ದೇಶಕ) ಡಾ.ಮೊಹಮ್ಮದ್ ಫೈಸಲ್ ಹೇಳಿದ್ದಾರೆ.

ಕದನವಿರಾಮ ಉಲ್ಲಂಘನೆ: ಪಿಟಿಐ ವರದಿ: ಕದನವಿರಾಮ ಉಲ್ಲಂಘಿಸಿರುವ ಪಾಕಿಸ್ತಾನ ಸೇನೆಯು ರಜೌರಿ ಜಿಲ್ಲೆಯ ನೌಶೇರಾ ವಲಯದ ಗಡಿ ನಿಯಂತ್ರಣ ರೇಖೆಯಲ್ಲಿ ಸೇನಾ ನೆಲೆಗಳನ್ನು ಗುರಿಯಾಗಿರಿಸಿ ಬೆಳಿಗ್ಗೆ 7.30ಕ್ಕೆ ಗುಂಡು ಹಾರಿಸಿದೆ ಎಂದು ರಕ್ಷಣಾ ಪಡೆಯ ವಕ್ತಾರರು ತಿಳಿಸಿದ್ದರು.

ಮತ್ತೊಂದು ಕಡೆ ಪೂಂಚ್‌ ಜಿಲ್ಲೆಯ ಕೃಷ್ಣಗಿತಿ ವಲಯದಲ್ಲಿ ಪಾಕ್‌ ಸೇನೆ ಬೆಳಿಗ್ಗೆ 7.40ರಿಂದ ಗುಂಡಿನ ದಾಳಿ ನಡೆಸಿದೆ ಎಂದು ವರದಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT