ಪರಿಸರ ಸ್ನೇಹಿ ಮನೆ ಕಟ್ಟಿ ನೋಡಿ

7

ಪರಿಸರ ಸ್ನೇಹಿ ಮನೆ ಕಟ್ಟಿ ನೋಡಿ

Published:
Updated:
ಪರಿಸರ ಸ್ನೇಹಿ ಮನೆ ಕಟ್ಟಿ ನೋಡಿ

ಕಾಂಕ್ರೀಟಿನಿಂದ ಮನೆ ನಿರ್ಮಿಸುವಾಗ  ಸಿಮೆಂಟ್‌, ಉಕ್ಕನ್ನು ಪ್ರಧಾನವಾಗಿ ಬಳಸಿಕೊಳ್ಳಲಾಗುತ್ತದೆ. ಇವು ಉಷ್ಣತೆಯನ್ನು ಹೆಚ್ಚು ಹೀರಿಕೊಂಡು, ಪರಿಸರಕ್ಕೆ ಹಾನಿಯುಂಟು ಮಾಡುತ್ತಿವೆ. ಭವಿಷ್ಯದ ಅಪಾಯಗಳನ್ನು ಮನಗಂಡು ಅನೇಕರು ಈಗ ಪರಿಸರಸ್ನೇಹಿ ಮನೆ ಕಟ್ಟುತ್ತಿದ್ದಾರೆ.

ಗ್ರೆಸ್ಕೇಲ್‌ ಡಿಸೈನ್‌ ಸ್ಟುಡಿಯೊ ಬೆಂಗಳೂರಿನಲ್ಲಿ ಹಳೆಯ ವಿಧಾನಗಳ ಮೂಲಕ ಪರಿಸರಸ್ನೇಹಿ ಮನೆ, ಕಚೇರಿಗಳನ್ನು ಕಳೆದ 10 ವರ್ಷಗಳಿಂದ ನಿರ್ಮಿಸುತ್ತಿದೆ.

ಗ್ರೆಸ್ಕೇಲ್‌ ಸ್ಟುಡಿಯೊವನ್ನು  2007ರಲ್ಲಿ  ಸಂಜಯ್ ಕುಮಾರ್, ಗಿರೀಶ್ ಮೈಸೂರು, ನೀನೂ ಅಹ್ಲುವಾಲಿಯಾ, ಮಗೇಶ್ ಮನೋಹರ್ ಆರಂಭಿಸಿದರು.

ಈ ಕಂಪೆನಿಯವರು ಹಳೆ ವಿಧಾನಗಳ ಮೂಲಕ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ಮನೆ ನಿರ್ಮಿಸುತ್ತಾರೆ. ನಗರದಲ್ಲಿ ಮನೆಯ ಒಳಾಂಗಣ ವಿಶಾಲವಾಗಿ ಕಾಣುವಂತೆ ವಿನ್ಯಾಸ ಮಾಡುವುದು ಸವಾಲಿನ ಕೆಲಸ. ಮನೆಗೆ ಗಾಳಿ, ಬೆಳಕು ಯಥೇಚ್ಛವಾಗಿ ಇರಬೇಕು ಎಂಬುದು ಎಲ್ಲರ ಬೇಡಿಕೆ. ಇವೆಲ್ಲವುಗಳನ್ನು ಗಮನದಲ್ಲಿಟ್ಟುಕೊಂಡು ನಿಸರ್ಗಸ್ನೇಹಿ ವಿಧಾನಗಳ ಮೂಲಕವೇ  ಗ್ರೆಸ್ಕೇಲ್  ಮನೆ ವಿನ್ಯಾಸಗೊಳಿಸಲಾಗುತ್ತದೆ. 

ಗ್ರೆಸ್ಕೇಲ್‌ ಮನೆ ಕಟ್ಟಲು  ಇಟ್ಟಿಗೆಗಳನ್ನು  ಬಳಸುತ್ತಾರೆ. ‘ಸುಟ್ಟ ಇಟ್ಟಿಗೆಗಳ ಬಾಳಿಕೆ ಜಾಸ್ತಿ. ಇಟ್ಟಿಗೆ ಮನೆಯೊಳಗೆ ಉಷ್ಣತೆಯನ್ನು ಬಿಟ್ಟುಕೊಡುವುದಿಲ್ಲ. ಇಟ್ಟಿಗೆ ಬಳಸಿ ಕಟ್ಟಿದ ಗೋಡೆಗಳಿಗೆ  ಪೇಂಟಿಂಗ್‌ ಅಥವಾ ಪ್ಲಾಸ್ಟರಿಂಗ್‌ ಅಗತ್ಯ ಇರುವುದಿಲ್ಲ. ಪೇಂಟಿಂಗ್‌ ಮಾಡಲೇಬೇಕಾದಾದಲ್ಲಿ ರಾಸಾಯನಿಕ ಬಣ್ಣಗಳ ಮಿತಬಳಕೆ ಮಾಡುತ್ತೇವೆ’ ಎನ್ನುತ್ತಾರೆ ಸಂಜಯ್‌.

ಇವರ ಇನ್ನೊಂದು ವಿಶೇಷ ತೊಟ್ಟಿ ಮನೆ ನಿರ್ಮಾಣ. ‘ನಗರದಲ್ಲಿ ಮನೆ ಹೊರಗಡೆ ಉದ್ಯಾನ ಇದ್ದರೂ ಮಾಲಿನ್ಯ,  ಹೊಗೆ,  ವಾಹನಗಳ ಶಬ್ದಕ್ಕೆ ಯಾರೂ ಮನೆಯಿಂದ ಹೊರಗೆ ಬರಲು ಇಷ್ಟಪಡುವುದಲ್ಲ. ಹೀಗಾಗಿ ಮನೆಯೊಳಗೆ ಆಹ್ಲಾದಕರ ವಾತಾವರಣ ಇರಲು  ತೊಟ್ಟಿ ಮನೆ ನಿರ್ಮಿಸುತ್ತೇವೆ. ಇದರಿಂದ ನೇರವಾಗಿ ಮನೆಗೆ ಬೆಳಕು ಬರುತ್ತದೆ’ ಎನ್ನುತ್ತಾರೆ ಅವರು.

ಮನೆ ಚಾವಣಿ ನಿರ್ಮಾಣಕ್ಕೆ ಹೆಚ್ಚು ಕಾಂಕ್ರೀಟ್ ಬಳಸುವುದಿಲ್ಲ. ಕಾಂಕ್ರೀಟ್ ಹಾಗೂ ಉಕ್ಕನ್ನು ಕಡಿಮೆ  ಬಳಸಿ ಇಟ್ಟಿಗೆಯ  ಹಾಲೊಬ್ಲಾಕ್ಸ್ ಅನ್ನು ಬಳಸುತ್ತಾರೆ.

ಇವರು ಮನೆಗೆ ಅಗತ್ಯವಾದ ಮರಮಟ್ಟು ಹಾಗೂ ಪೀಠೋಪಕರಣಗಳನ್ನು  ಇಂಡೋನೇಷ್ಯದಿಂದ ತರಿಸಿಕೊಳ್ಳುತ್ತಾರೆ. ‘ಮರಮುಟ್ಟುಗಾಗಿ ದೇಶದ ಸಂಪತ್ತನ್ನು ಹಾಳು ಮಾಡುವುದು ಸರಿಯಲ್ಲ. ಇಂಡೊನೇಷ್ಯದಲ್ಲಿ ವ್ಯಾಪಾರಕ್ಕಾಗಿಯೇ ಮರಗಳನ್ನು ಬೆಳೆಸಿ ಮಾರುತ್ತಾರೆ’  ಎಂದು ಸಂಜಯ್‌ ಕಾಳಜಿ ವ್ಯಕ್ತಪಡಿಸುತ್ತಾರೆ.

ಗಾಳಿ ಬರುವ ದಿಕ್ಕಿಗೆ ದೊಡ್ಡ ಕಿಟಕಿ, ಗಾಳಿ ಹೊರ ಹೋಗುವ ದಿಕ್ಕಿಗೆ ಸಣ್ಣ ಕಿಟಕಿ ಆಳವಡಿಸುತ್ತಾರೆ. ಇದರಿಂದ ಮನೆಯೊಳಗೆ ಗಾಳಿ, ಬೆಳಕು ಎರಡೂ ಸಮೃದ್ಧವಾಗಿ ದೊರೆಯುತ್ತದೆ.

ಇನ್ನು ಇವೆಲ್ಲಾ ಸ್ಮಾರ್ಟ್‌ ಮನೆಗಳು. ಸೋಲಾರ್, ಆಟೊಮ್ಯಾಟಿಕ್ ಲೈಟಿಂಗ್, ಎಲೆಕ್ಟ್ರಾನಿಕ್ ವಸ್ತುಗಳನ್ನು ಆನ್, ಆಫ್ ಮಾಡಲು ಮೊಬೈಲ್‌ ಬಳಕೆ, ಕರ್ಟನ್ ಸರಿಸಲು ರಿಮೋಟ್, ಹೀಗೆ ಅತ್ಯಾಧುನಿಕ ಸೌಲಭ್ಯಗಳಿವೆ.

ಗ್ರೆಸ್ಕೇಲ್‌ ಮನೆಯಲ್ಲಿ ಕಡ್ಡಾಯವಾಗಿ ಸೋಲಾರ್ ಆಳವಡಿಸುತ್ತದೆ. ‘ಇದರಿಂದ ವಿದ್ಯುತ್ ಬಿಲ್‌ ಕಡಿತವಾಗುತ್ತದೆ. ಸೌರಶಕ್ತಿಯನ್ನು ಬೆಸ್ಕಾಂಗೆ ಮಾರಾಟ ಮಾಡಿ ದುಡ್ಡು ಸಂಪಾದಿಸಬಹುದು. ಸೋಲಾರ್‌ ಆಳವಡಿಕೆಗೆ ಸಹಾಯಧನ ನೀಡುತ್ತಿರುವುದರಿಂದ ಹೆಚ್ಚು ಜನರು ಸೋಲಾರ್ ಆಳವಡಿಸುತ್ತಾರೆ’ ಎಂದು ಹೇಳುತ್ತಾರೆ.

ಮನೆಗಳಲ್ಲಿ ಬಾತ್ ಟಬ್, ಗೀಸರ್, ಶವರ್‌ಗಳನ್ನು ಆಳವಡಿಸುವುದಿಲ್ಲ. ಫ್ಯಾನ್, ಏ.ಸಿ, ಲೈಟ್‌ಗಳನ್ನು ಆದಷ್ಟು ಕಡಿಮೆ ಬಳಸುವಂತೆ ಮನೆಗಳನ್ನು ವಿನ್ಯಾಸ ಮಾಡುತ್ತಾರೆ.  ವಿಶಾಲವಾದ  ಅಡುಗೆಮನೆ ಹಾಗೂ ಲಿವಿಂಗ್ ರೂಮ್ ವಿನ್ಯಾಸಕ್ಕೆ ಇವರು ಆದ್ಯತೆ ನೀಡುತ್ತಾರೆ. ಮನೆ ಸದಸ್ಯರ ಜೊತೆ ಕುಳಿತುಕೊಂಡು ಸಮಾಲೋಚಿಸಿ, ಅವರ ಅಗತ್ಯಕ್ಕೆ ತಕ್ಕಂತೆ ಮನೆಗಳನ್ನು ನಿರ್ಮಿಸಿ ಕೊಡುತ್ತಾರೆ.

ವಿಳಾಸ: 673, 39ನೇ ಅಡ್ಡರಸ್ತೆ, 5ಟಿ ಬ್ಲಾಕ್‌, 4ನೇ ಟಿ ಬ್ಲಾಕ್‌ ಪೂರ್ವ, ಪಟ್ಟಾಭಿರಾಮನಗರ, ಜಯನಗರ. ಸಂಪರ್ಕಕ್ಕೆ: 9945133301

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry