ಬಾಲ್ಕನಿಯಲ್ಲಿ ಸೊಪ್ಪು, ತರಕಾರಿ

7

ಬಾಲ್ಕನಿಯಲ್ಲಿ ಸೊಪ್ಪು, ತರಕಾರಿ

Published:
Updated:
ಬಾಲ್ಕನಿಯಲ್ಲಿ ಸೊಪ್ಪು, ತರಕಾರಿ

ಮನೆಯಲ್ಲಿಯೇ ತರಕಾರಿ ಬೆಳೆಯುವ ಇಚ್ಛೆಯಿದ್ದರೂ ಅಪಾರ್ಟ್‌ಮೆಂಟ್‌ಗಳಲ್ಲಿ ಜಾಗದ ಸಮಸ್ಯೆ ಎದುರಾಗುವುದು ಸಹಜ. ಆದರೆ ಫ್ಲ್ಯಾಟ್‌ನ ವಿಸ್ತೀರ್ಣ ಅಥವಾ ಎಷ್ಟು ಬೆಡ್‌ರೂಂಗಳದ್ದು ಎಂಬುದರ ಆಧಾರದಲ್ಲಿ ಬಾಲ್ಕನಿಗಳನ್ನು ನೀಡಲಾಗಿರುತ್ತದೆ.

ಈ ಬಾಲ್ಕನಿಗಳನ್ನು ಕ್ರಿಯಾಶೀಲತೆಗೆ ಮತ್ತು ಸ್ವಾವಲಂಬನೆಗೆ ಬಳಸಿಕೊಳ್ಳಬಹುದು. ನಾಲ್ಕಾರು ಕುಂಡಗಳಲ್ಲಿ ಹೂ, ಹಣ್ಣು, ಸೊಪ್ಪು, ತರಕಾರಿ ಗಿಡಗಳನ್ನು ಬೆಳೆಸಲು ಬಾಲ್ಕನಿಗಳು ಸೂಕ್ತ.

‘ಬೆಂಗಳೂರಿನಲ್ಲಿ ಒಂದು ಕುಟುಂಬದಲ್ಲಿ ಮೂರು ಇಲ್ಲವೇ ನಾಲ್ಕು ಜನರಿರುತ್ತಾರೆ. ನಾಲ್ಕೈದು ಜನರಿಗೆ ಆಗುವಷ್ಟು ತರಕಾರಿ ಬೆಳೆಯಲು 2x10 ಅಗಲದ ಒಂದು ಪುಟ್ಟ ಬಾಲ್ಕನಿ ಇದ್ದರೂ ಸಾಕು’ ಎನ್ನುತ್ತಾರೆ ಗ್ರೀನ್‌ ಕಾರ್ಪೆಟ್‌ ವ್ಯವಸ್ಥಾಪಕಿ ಮೈನಾ ಬಟಾವಿಯಾ.

ಮೆಟ್ರೊ ನಗರಗಳಿಗೆ 14 ವರ್ಷಗಳಿಂದ ಗಾರ್ಡನಿಂಗ್‌ ಸೇವೆ ಹಾಗೂ ಸಾಮಗ್ರಿ ಪೂರೈಕೆ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಮೈನಾ, ತರಕಾರಿ ಬೆಳೆಯಬೇಕೆನ್ನುವವರಿಗೆ ಬಾಲ್ಕನಿ ಸಾಕಷ್ಟಾಯಿತು’ ಎನ್ನುತ್ತಾರೆ.

‘ಆರಂಭದಲ್ಲಿ ಕೇವಲ ಐದು ಪಾಟ್‌, ಒಂದೆರಡು ಟ್ರೇ ಇದ್ದರೂ ಸಾಕು. ತರಕಾರಿ ಬೆಳೆಯಲು ಅಗತ್ಯ ಸಾಮಗ್ರಿಗಳನ್ನು ಕೊಳ್ಳಲು ಮತ್ತು ತಯಾರಿಗೆ  ಸ್ವಲ್ಪ ಸಮಯ ಬೇಕು. ಆದರೆ ಎಲ್ಲಾ ಸಿದ್ಧವಾದ ಮೇಲೆ ದಿನಕ್ಕೆ ಹತ್ತು ನಿಮಿಷ, ವಾರಕ್ಕೆ ಒಂದು ಗಂಟೆ ಮೀಸಲಿಟ್ಟರೆ ಸಾಕು’ ಎನ್ನುವುದು ಅವರ ವಿವರಣೆ.

ಮೈನಾ ನೀಡುವ ಕೆಲವು ಟಿಪ್ಸ್‌ ಇಲ್ಲಿವೆ:

* ಸುಲಭ ತರಕಾರಿಗಳನ್ನು ಮೊದಲು ಬೆಳೆಯಿರಿ. ನಿಮ್ಮ ಜಾಗದಲ್ಲಿ ನೀವು ಏನು ಬೆಳೆಯಬಹುದು ಎಂಬುದನ್ನು ಮೊದಲೇ ಆಲೋಚಿಸಿ. ನಿತ್ಯದ ಬಳಕೆಗೆ ಬೇಕಾದ ಹಾಗೂ ಸುಲಭವಾಗಿ ಬೆಳೆಯಬಲ್ಲ ತರಕಾರಿಗಳನ್ನು ಮೊದಲು ಬೆಳೆಯುವುದು ಒಳ್ಳೆಯದು. ಅದಕ್ಕೆ ನಾಲ್ಕೈದು ಪಾಟ್‌ ಹಾಗೂ ಒಂದೆರಡು ಟ್ರೇ ಆದರೆ ಸಾಕು. ನಿಮ್ಮ ಜಾಗಕ್ಕೆ ಯಾವುದು ಸೂಕ್ತವೊ ಅದನ್ನು ಆರಿಸಿಕೊಳ್ಳಿ.

* ಹಸಿಮೆಣಸಿನಕಾಯಿ, ಕೊತ್ತಂಬರಿ,  ಟೊಮೆಟೊ, ಮೆಂತ್ಯೆ, ಪಾಲಕ್‌ನಂತಹ ಸೊಪ್ಪುಗಳನ್ನು ಟ್ರೇಗಳಲ್ಲಿ ಬೆಳೆಯಬಹುದು. ಆ ಟ್ರೇಗಳನ್ನು ಸ್ಟ್ಯಾಂಡ್‌ ಮೇಲೆ ಜೋಡಿಸಿಡಬಹುದು. ಬದನೆ, ಬೆಂಡೆ, ಬೀನ್ಸ್‌ಗಳನ್ನು ಪಾಟ್‌ಗಳಲ್ಲಿ ಬೆಳೆಯಬಹುದು. ಹಾಗಲಕಾಯಿ, ತಿಪ್ಪರೆಕಾಯಿ ಅಥವಾ ಹೀರೆಕಾಯಿಯ ಯಾವುದಾದರೂ ಒಂದು ಬಳ್ಳಿಯನ್ನು ಎರಡು ಪಾಟ್‌ಗಳಲ್ಲಿ ಬಿತ್ತಿ, ಅದನ್ನು ಗ್ರಿಲ್‌ಗೆ ಅಲಂಕಾರಿಕವಾಗಿ ಹಬ್ಬಿಸಬಹುದು.

* ಒಂದು ಪಾಟ್‌ ಅಥವಾ ಒಂದು ಟ್ರೇಯಲ್ಲಿ ಒಂದೇ ರೀತಿಯ ತರಕಾರಿಯನ್ನು ಹಾಕಿ. ಅನೇಕ ತರಕಾರಿಗಳನ್ನು ಒಂದೇ ಟ್ರೇಯಲ್ಲಿ ಪ್ರಯತ್ನಿಸಬೇಡಿ.

* ನೀರು ನಿಲ್ಲುವುದನ್ನು ತಪ್ಪಿಸಲು ಕೆಳಭಾಗದಲ್ಲಿ ಹರಳುಕಲ್ಲುಗಳನ್ನು ಅಥವಾ ಟೆರಾಕೋಟಾದ ತುಣುಕುಗಳನ್ನು ಹಾಕಿ.

* ಬೀಜ ಹಾಕುವ ಮೊದಲು ಟ್ರೇ ಅಥವಾ ಪಾಟ್‌ನಲ್ಲಿ ಒಂದು ಭಾಗ ಕೊಕೊಪೀಟ್‌ ಒಂದು ಭಾಗ ಗೊಬ್ಬರ ಹಾಗೂ ಎರಡು ಭಾಗ ಮಣ್ಣು ಸೇರಿಸಿ, ಹದಗೊಳಿಸಿ. ಬೀಜ ಹಾಕಿದ ಮೇಲೆ ಮತ್ತೆ ಒಂದು ಲೇಯರ್‌ನಷ್ಟು ಮಿಶ್ರಣವನ್ನು ಹಾಕಿ. ನಂತರ ವಾರಕ್ಕೊಮ್ಮೆ ಗೊಬ್ಬರ ಹಾಕುತ್ತಾ ಬನ್ನಿ.

* ಮನೆಯಲ್ಲೇ ಗೊಬ್ಬರ ತಯಾರಿ ಅತ್ಯುತ್ತಮ. ಮೊದಲು ಕೆಲ ವಾರ ಗೊಬ್ಬರವನ್ನು ಅಂಗಡಿಯಿಂದ ತಂದು ಹಾಕಿದರೂ ಮನೆಯಲ್ಲಿಯೇ ಸಾವಯವ ಗೊಬ್ಬರವನ್ನು ತಯಾರಿಸಿಕೊಳ್ಳುವುದು ಒಳ್ಳೆಯದು. ಜೊತೆಗೆ ಅಡುಗೆ ಮನೆಯ ಹಸಿ ಕಸ ನಿರ್ವಹಣೆಗೂ ಒಂದು ಪರ್ಯಾಯ ಸಿಕ್ಕಂತಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry