ವಸತಿ ಬೇಡಿಕೆ ತಗ್ಗಿಸುವುದೇ ಐ.ಟಿ. ಉದ್ಯೋಗ ಕಡಿತ

7

ವಸತಿ ಬೇಡಿಕೆ ತಗ್ಗಿಸುವುದೇ ಐ.ಟಿ. ಉದ್ಯೋಗ ಕಡಿತ

Published:
Updated:
ವಸತಿ ಬೇಡಿಕೆ ತಗ್ಗಿಸುವುದೇ ಐ.ಟಿ. ಉದ್ಯೋಗ ಕಡಿತ

ಐ.ಟಿ. ವಲಯದಲ್ಲಿ ಭಾರಿ ಪ್ರಮಾಣದಲ್ಲಿ ಉದ್ಯೋಗ ಕಡಿತ ಆಗುವ ಸುದ್ದಿ ಮಹಾನಗರಗಳ ನಿದ್ದೆ ಕೆಡಿಸಿದೆ. ಇದರಿಂದ ಒಂದೆಡೆ ಉದ್ಯೋಗಿಗಳಿಗೆ ಕೆಲಸ ಕಳೆದುಕೊಳ್ಳುವ ಆತಂಕವಿದ್ದರೆ, ಇನ್ನೊಂದೆಡೆ ಈಗಾಗಲೇ ಮಂದಗತಿಯ ಬೆಳವಣಿಗೆಯಿಂದ ಬಳಲುತ್ತಿರುವ ವಸತಿ ಮಾರುಕಟ್ಟೆ ಇನ್ನಷ್ಟು ನಷ್ಟ ಅನುಭವಿಸುವ ಸ್ಥಿತಿ ನಿರ್ಮಾಣವಾಗುತ್ತಿದೆ.

ಇನ್ಫೊಸಿಸ್‌, ವಿಪ್ರೊ, ಕಾಗ್ನಿಜೆಂಟ್‌ ಸೇರಿದಂತೆ ಪ್ರಮುಖ ಮಾಹಿತಿ ತಂತ್ರಜ್ಞಾನ ಕಂಪೆನಿಗಳಲ್ಲಿ (ಐ.ಟಿ) ಭಾರಿ ಪ್ರಮಾಣದಲ್ಲಿ ಉದ್ಯೋಗ ಕಡಿತದ ಸುದ್ದಿ ಹರಿದಾಡುತ್ತಿದೆ. ಇದರಿಂದ ಮಹಾನಗರಗಳಲ್ಲಿ ವಸತಿ ಮಾರುಕಟ್ಟೆ ಬೇಡಿಕೆ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ ಎನ್ನುತ್ತದೆ ಆಸ್ತಿ ಸಲಹಾ ಸಂಸ್ಥೆಯಾದ ಜೆಎಲ್‌ಎಲ್‌ ವರದಿ.

ಉದ್ಯೋಗ ಕಡಿತ ಇಲ್ಲ. ಯಾರನ್ನೂ ಒತ್ತಾಯಪೂರ್ವಕವಾಗಿ ಕಂಪೆನಿ ಬಿಡಿಸುತ್ತಿಲ್ಲ ಎಂದು ಕಂಪೆನಿಗಳು ಎಷ್ಟೇ ಭರವಸೆ ನೀಡುತ್ತಿದ್ದರೂ, ಭವಿಷ್ಯದ ಭದ್ರತೆಯ ಆತಂಕ ಎದುರಾಗಿದೆ. ಇದು ವಸತಿ ಮಾರುಕಟ್ಟೆ ಮೇಲೆ ಋಣಾತ್ಮಕ ಪ್ರಭಾವ ಬೀರಲಿದೆ ಎಂದು ವಿಶ್ಲೇಷಣೆ ಮಾಡಿದೆ.

ಬೆಂಗಳೂರು, ಹೈದರಾಬಾದ್, ಪುಣೆ, ಮುಂಬೈ, ನೋಯಿಡಾ ಮತ್ತು ದೆಹಲಿ ಎನ್‌ಸಿಆರ್‌ ಪ್ರದೇಶಗಳಲ್ಲಿ ವಸತಿ ಮಾರುಕಟ್ಟೆ ಮೇಲೆ ಹೆಚ್ಚು ಪರಿಣಾಮ ಬೀರುವ ನಿರೀಕ್ಷೆ ಮೂಡಿದೆ.

ಮುಖ್ಯವಾಗಿ ಬೆಂಗಳೂರು ಮತ್ತು ಪುಣೆಯಲ್ಲಿ ಹೆಚ್ಚು ಐ.ಟಿ ಕಂಪೆನಿಗಳಿವೆ. ಇವು ಉದ್ಯೋಗ ಸೃಷ್ಟಿಯಷ್ಟೇ ಅಲ್ಲದೆ, ವಸತಿ ರಿಯಲ್‌ ಎಸ್ಟೇಟ್‌ ಉದ್ಯಮದ ಬೆಳವಣಿಗೆಗೂ ಕೊಡುಗೆ ನೀಡುತ್ತಿವೆ. ಹೀಗಾಗಿ ಈ ಪ್ರದೇಶಗಳಲ್ಲಿ ಮಾರುಕಟ್ಟೆ ಹೆಚ್ಚು ಸಮಸ್ಯೆ ಎದುರಿಸಲಿದೆ ಎನ್ನುವುದು ಸಂಸ್ಥೆಯ ಅಭಿಮತ.

30 ರಿಂದ 40 ವರ್ಷ ಮತ್ತು ಅದಕ್ಕೂ ಹೆಚ್ಚಿನ ವಯೋಮಾನದ ಐ.ಟಿ. ವೃತ್ತಿಪರರು ಒಂದು ವರ್ಷಕ್ಕೆ 20 ಲಕ್ಷದಿಂದ 60 ಲಕ್ಷ ಗಳಿಸುತ್ತಾರೆ. ಇವರನ್ನು ಮೇಲ್ಮಧ್ಯಮ ವರ್ಗ ಎನ್ನಬಹುದು. ಇಂತಹವರು ಬೆಂಗಳೂರು, ಮುಂಬೈ, ದೆಹಲಿ, ಹೈದರಾಬಾದ್, ಪುಣೆ ಮತ್ತು ಚೆನ್ನೈನಂತಹ ನಗರಗಳಲ್ಲಿ ಒಟ್ಟು ಜನಸಂಖ್ಯೆಯಲ್ಲಿ ಶೇ 17ರಷ್ಟಿದ್ದಾರೆ.

ಬೆಂಗಳೂರಿನ ಬಗ್ಗೆಯೇ ಹೇಳುವುದಾದರೆ 2 ಲಕ್ಷಕ್ಕೂ ಅಧಿಕ ವೃತ್ತಿಪರರಿದ್ದಾರೆ. ಇಲ್ಲಿನ ರಿಯಲ್ ಎಸ್ಟೇಟ್ ಡೆವಲಪರ್‌ಗಳಿಗೆ ಈ ವರ್ಗ ಬಹಳ ಮುಖ್ಯವಾಗಿದೆ. ಈ ವರ್ಗವು ಮನೆ ಖರೀದಿಗಾಗಿ ಕಳೆದ ಕೆಲವು ವರ್ಷಗಳಿಂದ ಕೇವಲ ತಮ್ಮ ಗಳಿಕೆಯಲ್ಲಿ ಹೆಚ್ಚು ಪಾಲನ್ನು ಉಳಿತಾಯ ಮಾಡಿದೆ.

ಚದರ ಅಡಿಗೆ 4 ಸಾವಿರದಿಂದ 5 ಸಾವಿರದವರೆಗಿನ ಬೆಲೆಯಲ್ಲಿರುವ ಅಪಾರ್ಟ್‌ಮೆಂಟ್‌ಗಳ ಖರೀದಿಗೆ ಹೆಚ್ಚು ಆಸಕ್ತಿ ತೋರುತ್ತಿದೆ ಎನ್ನುವುದು ವಲಯದ ಪಾಲಿಗೆ ಸಕಾರಾತ್ಮಕ ಅಂಶವಾಗಿದೆ.  2017ರ ಮೊದಲ ತ್ರೈಮಾಸಿಕದೊಳಗೆ ಬಿಡುಗಡೆ ಆಗಿರುವ ಒಟ್ಟು ಪ್ರಾಜೆಕ್ಟ್‌ಗಳಲ್ಲಿ ಈ ಬೆಲೆಯಲ್ಲಿರುವ ಯೋಜನೆಗಳ ಪಾಲು ಶೇ 45ರಷ್ಟಿದೆ ಎಂದು ಜೆಎಲ್ಎಲ್ ಇಂಡಿಯಾದ ಆರ್ಇಐಎಸ್ ಮಾಹಿತಿ ತಿಳಿಸಿದೆ.

ಇದೀಗ ಇಂತಹ ವರ್ಗ ಉದ್ಯೋಗ ಕಳೆದುಕೊಳ್ಳುವ ಸಂಕಷ್ಟಕ್ಕೆ ಎದುರಾದರೆ ಇದರಿಂದ ಮಿಡ್ ಪ್ರೀಮಿಯಂ ವಲಯದ ಪ್ರಗತಿ ಇನ್ನಷ್ಟು ವಿಳಂಬವಾಗಲಿದೆ ಎನ್ನುತ್ತಾರೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶುಭ್ರಾಂಶು ಪಾಣಿ.

ವಸತಿ ಮಾರುಕಟ್ಟೆ ಕಳೆದ ಐದು ವರ್ಷಗಳಿಂದಲೂ ಇಳಿಮುಖವಾಗಿದೆ. ಐಷಾರಾಮಿ ವಸತಿ ಮಾರುಕಟ್ಟೆ ಸ್ಥಿತಿ ಚಿಂತಾಜನಕವಾಗಿದೆ ಎನ್ನುತ್ತದೆ ಸಂಸ್ಥೆಯ ವರದಿ. ಮಧ್ಯಮ ಪ್ರಮಾಣದ ಮನೆಗಳು ತಕ್ಕ ಮಟ್ಟಿನ ಬೇಡಿಕೆ ಉಳಿಸಿಕೊಂಡಿವೆ. ಭರವಸೆ ನೀಡಿದ ಅವಧಿಗೆ ಯೋಜನೆ ಪೂರ್ಣಗೊಳಿಸುವ ಜವಾಬ್ದಾರಿಯುತ ಡೆವಲಪರ್‌ಗಳಿಂದ ಬೇಡಿಕೆ  ಉಳಿಸಿಕೊಳ್ಳುವಂತಾಗಿದೆ ಎಂದು ಹೇಳಿದೆ.

ಐ.ಟಿ ಉದ್ಯಮಲ್ಲಿ ಉದ್ಯೋಗ ಕಡಿತ ಮುಂದುವರಿದರೆ, ವಸತಿ ಬೇಡಿಕೆ ಗಣನೀಯವಾಗಿ ತಗ್ಗಲಿದೆ. ಮಧ್ಯಮ, ಮೇಲ್ಮಧ್ಯಮ ವರ್ಗದ ವಸತಿ ಯೋಜನೆಗಳಿಗೆ ಹೆಚ್ಚು ಹಿನ್ನಡೆಯಾಗಲಿದೆ.

ಸಕಾರಾತ್ಮಕ ಅಂಶಗಳು: ಕೇಂದ್ರ ಸರ್ಕಾರದ ‘ಎಲ್ಲರಿಗೂ ಸೂರು’ ಯೋಜನೆ ವಸತಿ ಮಾರುಕಟ್ಟೆಗೆ ತುಸು ನೆಮ್ಮದಿ ನೀಡಿದೆ. ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಲ್ಲಿ (ಪಿಎಂಎವೈ)  ಸಬ್ಸಿಡಿ ವಿನಾಯಿತಿಯೂ ಸಿಗುವುದರಿಂದ ಕೈಗೆಟುಕುವ ಮನೆಗಳ ನಿರ್ಮಾಣಕ್ಕೆ ಬೇಡಿಕೆ ಹೆಚ್ಚುತ್ತಿದೆ. ಖಾಸಗಿ ಡೆವಲಪರ್‌ಗಳೂ ಸಹ ಕೈಗೆಟುಕುವ ಮನೆ ನಿರ್ಮಾಣಕ್ಕೆ ಆಸ್ತಿ ತೋರುತ್ತಿದ್ದಾರೆ. ಇದು ಒಟ್ಟಾರೆ ರಿಯಲ್‌ ಎಸ್ಟೇಟ್‌ ವಲಯದ ದೃಷ್ಟಿಯಿಂದ ಉತ್ತಮ ಬೆಳವಣಿಗೆಯಾಗಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry