ಕನ್ನಡ ಹುಡುಗನ ಬಾಲಿವುಡ್ ಪ್ರೀತಿ

7
ನಗರದ ಅತಿಥಿ

ಕನ್ನಡ ಹುಡುಗನ ಬಾಲಿವುಡ್ ಪ್ರೀತಿ

Published:
Updated:
ಕನ್ನಡ ಹುಡುಗನ ಬಾಲಿವುಡ್ ಪ್ರೀತಿ

*ನಿಮ್ಮ ಬೆಂಗಳೂರಿನ ದಿನಗಳ ಬಗ್ಗೆ ಹೇಳಿ...

ನಾನು ಹುಟ್ಟಿ ಬೆಳೆದಿದ್ದು, ಓದಿದ್ದು ಕೆಲಸ ಮಾಡಿದ್ದು ಬೆಂಗಳೂರಿನಲ್ಲೇ. ಬಾಲ್ಯದಲ್ಲೇ ಹಿಂದಿ ಸಿನಿಮಾಗಳ ಬಗ್ಗೆ ಮೋಹವಿತ್ತು.  ಅಪ್ಪ ಅಮ್ಮನಿಗೂ ಹಿಂದಿ ಹಾಡುಗಳೆಂದರೆ ಬಲು ಇಷ್ಟ. ಅವರಿಬ್ಬರೂ ಕನ್ನಡ, ಕೊಡವ ಮತ್ತು ಹಿಂದಿ ಭಾಷೆಗಳಲ್ಲಿ ನಾಟಕ ಮಾಡುತ್ತಿದ್ದರು.  ಸಿನಿಮಾ ಹುಚ್ಚಿನಿಂದ ಶಾಲೆಯಲ್ಲಿ ನಾಟಕ ಮಾಡುತ್ತಿದ್ದೆ. 1987ರಲ್ಲಿ ಅತ್ಯುತ್ತಮ ಬಾಲ ನಟ ಪ್ರಶಸ್ತಿಯೂ ಬಂದಿತ್ತು.

*ಮೂಲತಃ ಫ್ಯಾಷನ್ ಡಿಸೈನರ್ ನೀವು. ಬಾಲಿವುಡ್‌ಗೆ ಪ್ರವೇಶ ಹೇಗಾಯಿತು?

ನಿಫ್ಟ್‌ನಲ್ಲಿ ಫ್ಯಾಷನ್ ವಿಷಯದ ಪದವಿ ಗಳಿಸಿ, ಫ್ಯಾಷನ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದೆ. ಅದರ ಜತೆಗೇ ಇಂಗ್ಲಿಷ್ ರಂಗಭೂಮಿಯಲ್ಲೂ ತೊಡಗಿಸಿಕೊಂಡೆ. ರಂಗದ ನಂಟಿನಿಂದ ಮುಂಬೈಗೆ ಹೋದೆ. ಅಲ್ಲಿಯೂ ನಾಟಕ ಪ್ರದರ್ಶನ ಮಾಡುತ್ತಾ  ಬಾಲಿವುಡ್ ನಂಟು ಬೆಳೆಯಿತು.

*ಬಾಲಿವುಡ್‌ನಲ್ಲಿ ಆರಂಭದ ದಿನಗಳು ಹೇಗಿದ್ದವು?

ನನಗೆ ಅಲ್ಲಿ ಯಾರೂ ಗಾಡ್‌ಫಾದರ್ ಇರಲಿಲ್ಲ. ಮೊದಲ ಬಾರಿಗೆ ನನ್ನ ಪ್ರತಿಭೆ ಗುರುತಿಸಿದ್ದು ನಿರ್ದೇಶಕ ಅನುರಾಗ್ ಕಶ್ಯಪ್. ತಮ್ಮ ಕಿರುಚಿತ್ರ ‘ದಟ್ ಗರ್ಲ್ ಇನ್ ಎಲ್ಲೋ ಬೂಟ್ಸ್‌’ನಲ್ಲಿ ಅವಕಾಶ ಕೊಟ್ಟರು. ಅಲ್ಲಿಂದ ಅನೇಕರು ನನ್ನನ್ನು ಗುರುತಿಸಿ ಅವಕಾಶ ಕೊಡತೊಡಗಿದರು.*‘ದಟ್ ಗರ್ಲ್ ಇನ್ ಎಲ್ಲೋ ಬೂಟ್ಸ್‌’ ಸಿನಿಮಾದಲ್ಲಿ ಕನ್ನಡ ಡೈಲಾಗ್ ಹೇಳಿದ್ದೀರಿ...

ಹೌದು. ಆ ಸಿನಿಮಾದಲ್ಲಿ ನಾನು ಕನ್ನಡದ ಗ್ಯಾಂಗ್‌ಸ್ಟರ್ ಪಾತ್ರ ಮಾಡಿದ್ದೆ. ಒಂದು ದೃಶ್ಯಕ್ಕೆ ಡೈಲಾಗ್ ಅಂತೇನೂ ಇರಲಿಲ್ಲ. ಆದರೆ, ನಿರ್ದೇಶಕ ಅನುರಾಗ್ ಕಶ್ಯಪ್ ನೀವು ಬೆಂಗಳೂರಿನವರಲ್ವಾ ಅಲ್ಲಿಯ ಫ್ಲೇವರ್‌ ಇರೋ  ಡೈಲಾಗ್ ಹೇಳಿ ಅಂದರು. ಜಾಲಹಳ್ಳಿಯಲ್ಲಿ ವಾಸವಿದ್ದ ನನಗೆ ರೌಡಿಗಳ ಬಗ್ಗೆ ಸ್ವಲ್ಪ ಕೇಳಿ ಗೊತ್ತಿತ್ತು. ಅದನ್ನೇ ಕನ್ನಡದ ಡೈಲಾಗ್‌ನಲ್ಲಿ ಹೇಳಿದೆ. ನಿರ್ದೇಶಕರೂ ಖುಷಿಯಾದರು.*ನಿಮ್ಮ ಅಭಿನಯದ ಎರಡು ಚಿತ್ರಗಳು ಟೊರೊಂಟೊ ಅಂತರರಾಷ್ಟ್ರೀಯ ಚಿತ್ರೋತ್ಸವ, ಮತ್ತೊಂದು ಕಾನ್ ಚಿತ್ರೋತ್ಸವದಲ್ಲಿ ಪ್ರದರ್ಶನವಾಗಿವೆ. ಇದರ ಬಗ್ಗೆ ಹೇಳಿ...

ಆದರೆ, ಏನ್ಮಾಡೋದು ನನ್ನನ್ನು ಕರೆದುಕೊಂಡು ಹೋಗಿಲ್ವೆ (ಹಹ್ಹಹ್ಹ...) ‘ಫೆಡ್ಲರ್ಸ್’ ಕಾನ್‌ ಚಿತ್ರೋತ್ಸವ, ‘ದಟ್ ಗರ್ಲ್ ಇನ್ ಎಲ್ಲೋ ಬೂಟ್ಸ್‌’ ಹಾಗೂ  ನಾಳೆ ಬಿಡುಗಡೆಯಾಗಲಿರುವ ‘ಎ ಡೆತ್ ಇನ್ ದಿ ಗಂಜ್’ ಟೊರೊಂಟೊ ಚಿತ್ರೋತ್ಸದಲ್ಲಿ ಪ್ರದರ್ಶನವಾಗಿವೆ. ಬೇರೆ ದೇಶಗಳಲ್ಲಿ ನಮ್ಮ ಸಿನಿಮಾ ನೋಡಿ ಚಪ್ಪಾಳೆ ಹೊಡೆದು ಪ್ರಶಂಸೆ ಮಾಡಿದಾಗ ತುಂಬಾ ಸಂತೋಷವಾಗುತ್ತದೆ.*ನಿರ್ದೇಶಕಿ ಕೊಂಕಣಾ ಸೇನ್ ಶರ್ಮಾ ಜತೆ ಕೆಲಸ ಮಾಡಿದ ಅನುಭವ ಹೇಗಿತ್ತು?

ಬಹಳ ಚೆನ್ನಾಗಿತ್ತು. ಮೊದಲನೆಯದಾಗಿ ಕೊಂಕಣಾ ಅದ್ಭುತ ನಟಿ. ಇಷ್ಟೊಂದು ಚೆನ್ನಾಗಿ ನಿರ್ದೇಶನ ಮಾಡುತ್ತಾರೆ ಅಂತ ಅಂದುಕೊಂಡಿರಲಿಲ್ಲ. ನನ್ನ ನಿರೀಕ್ಷೆಗೂ ಮೀರಿ ಸಿನಿಮಾ ನಿರ್ದೇಶಿಸಿದ್ದಾರೆ. ಸಹ ನಟರು, ನಿರ್ಮಾಪಕರು ಎಲ್ಲರೂ ಪರಿಚಯದವರೇ. ಒಳ್ಳೆಯ ತಂಡದೊಂದಿಗೆ ಕೆಲಸ ಮಾಡುವುದು ಅದ್ಭುತ ಅನುಭವ ನೀಡಿತು.* ‘ಎ ಡೆತ್ ಇನ್ ಗಂಜ್’  ನೈಜ ಘಟನೆಯಾಧಾರಿತ ಸಿನಿಮಾವೇ?

ನನಗೂ ಅದರ ಬಗ್ಗೆ ಗೊತ್ತಿಲ್ಲ. ಆದರೆ, ಕೊಂಕಣಾ ಚಿಕ್ಕವರಿದ್ದಾಗ ಅವರ ತಂದೆ ಈ ಕಥೆಯನ್ನು ಆಗಾಗ ಹೇಳುತ್ತಿದ್ದರಂತೆ. ಕೊಂಕಣಾ ಅವರ ಕಲ್ಪನೆಯೂ ಸಿನಿಮಾದಲ್ಲಿ  ಮಿಳಿತವಾಗಿದೆ.*ಕನ್ನಡ ಸಿನಿಮಾದಲ್ಲಿ ನಟಿಸೋದಿಲ್ಲವೇ?

ಕನ್ನಡದಲ್ಲಿ ತುಂಬಾ ಅವಕಾಶಗಳು ಸಿಕ್ಕಿವೆ. ನಾನು ಕನ್ನಡದ ಹುಡುಗ ಎಂದು ನಿರ್ದೇಶಕ ಪವನ್ ಕುಮಾರ್ ಕರೆದಿದ್ದರು. 2011ರಲ್ಲಿ ‘ಲೂಸಿಯಾ’ದ ನಾಯಕನಾಗಿ ನಟಿಸಬೇಕಿತ್ತು. ಕೆಲ ಪ್ರಾಜೆಕ್ಟ್‌ಗಳು ಇಷ್ಟವಾಗಲಿಲ್ಲ. ಮತ್ತೆ ಕೆಲ ಪ್ರಾಜೆಕ್ಟ್‌ಗಳು ಇಷ್ಟವಾದರೂ ಸಮಯದ ಅಭಾವದಿಂದ ನಟಿಸಲಾಗಲಿಲ್ಲ. ಹಿಂದಿ ಸಿನಿಮಾದ ಮೇಲೆ ಪ್ರೇಮ ಜಾಸ್ತಿ. ಅದೊಂಥರಾ ಲವ್ವರ್ ಇದ್ದಂಗೆ.  ಮರಾಠಿಯಲ್ಲೂ ಈಚೆಗೆ ‘ಹಾತ್ಸಾ’ ಎನ್ನುವ ದ್ವಿಭಾಷಾ ಸಿನಿಮಾ ಮಾಡಿದ್ದೇನೆ.*ನಿಮ್ಮ ಸ್ಟೈಲ್ ಸ್ಟೇಟ್‌ಮೆಂಟ್ ಏನು?

ಈಗ ನೋಡಿ ಟೋಪಿ ಹಾಕಿಕೊಂಡಿದ್ದೇನೆ. ಈಗಲೂ ಫ್ಯಾಷನ್ ಡಿಸೈನಿಂಗ್‌ ಬಗ್ಗೆ ಇಷ್ಟವಿದೆ. ಆದರೆ ಮಾಡಲಾಗುತ್ತಿಲ್ಲ ಅಷ್ಟೇ.

ಆಗಾಗ ಹೆಂಡತಿ ಮತ್ತು ಸ್ನೇಹಿತರ ಜತೆ ಶಾಪಿಂಗ್‌ಗೆ ಹೋಗುತ್ತೇನೆ. ಬೆಳಿಗ್ಗೆಯಿಂದ ಸಂಜೆ ತನಕ ಶಾಪಿಂಗ್ ಮಾಡಿದರೂ ನನಗೆ ಸುಸ್ತಾಗೋಲ್ಲ ಗೊತ್ತಾ? ನನ್ನ ಆಯ್ಕೆಯನ್ನು ಹೆಂಡತಿ, ಸ್ನೇಹಿತರು ಇಷ್ಟಪಡುತ್ತಾರೆ.* ಬಾಡಿ ಫಿಟ್‌ನೆಸ್‌ಗೆ ಏನು ಮಾಡ್ತೀರಿ?

ಬಾಲ್ಯದಲ್ಲಿ ಕ್ರೀಡಾಪಟುವಾಗಿದ್ದೆ. ವಾಲಿಬಾಲ್, ಕ್ರಿಕೆಟ್‌ ಆಡುತ್ತಿದ್ದೆ. ಜಾವೆಲಿನ್ ಥ್ರೋನಲ್ಲಿ  ರಾಜ್ಯಮಟ್ಟಕ್ಕೆ ಆಡಿದ್ದೇನೆ. ಸಿನಿಮಾ ಸೇರಿದ ಮೇಲೆ ಈಜುವಿಕೆ, ಜಿಮ್ ಕಡೆಗೆ ಗಮನ ಹರಿಸಿದೆ. ಬೇರೆ ನಟರಂತೆ ಸಿಕ್ಸ್ ಪ್ಯಾಕ್‌ನಲ್ಲಿ ನಂಬಿಕೆ ಇಲ್ಲ. ಆದರೆ, ಪಾತ್ರಕ್ಕೆ ಬೇಕೆಂದರೆ ಮಾಡಿಕೊಳ್ಳುವೆ. * ನಿಮ್ಮ ಡಯೆಟ್ ?

ನನಗೆ ಊಟ, ತಿಂಡಿ ಅಂದರೆ ತುಂಬಾ ಇಷ್ಟ. ಹಾಗಾಗಿ ಬಾಯಿ ಕಟ್ಟುವುದಿಲ್ಲ.

ಗುಲ್ಶನ್ ಬಗ್ಗೆ ಒಂದಿಷ್ಟು

*ಹುಟ್ಟಿದ್ದು, ಬೆಳೆದಿದ್ದು:
1978 ಮೇ 2, ಬೆಂಗಳೂರು

*ಓದಿದ್ದು: ಸೇಂಟ್ ಜೋಸೆಫ್ ಕಾಲೇಜು, ನಿಫ್ಟ್‌, ಫ್ಯಾಷನ್ ಡಿಸೈನಿಂಗ್  ಪದವೀಧರ

*ಚಿತ್ರಗಳು: ದಟ್ ಗರ್ಲ್ ಇನ್ ಯೆಲ್ಲೋ ಬೂಟ್ಸ್, ಹೇಟ್ ಸ್ಟೋರಿ, ಹಂಟರ್, ಶೈತಾನ್, ಹಾತ್ಸಾ, ಎ ಡೆತ್ ಇನ್ ದಿ ಗಂಜ್

*ಆಹಾರ: ಎಲ್ಲಾ ರೀತಿಯ ಆಹಾರ ಇಷ್ಟ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry