ವಿಟಿಯು ಪರೀಕ್ಷೆ ಮುಂದೂಡಿಕೆ

7

ವಿಟಿಯು ಪರೀಕ್ಷೆ ಮುಂದೂಡಿಕೆ

Published:
Updated:
ವಿಟಿಯು ಪರೀಕ್ಷೆ ಮುಂದೂಡಿಕೆ

ಬೆಂಗಳೂರು: ಮರು ಮೌಲ್ಯಮಾಪನ ಫಲಿತಾಂಶ ವಿಳಂಬವಾದ್ದರಿಂದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ಅಂತಿಮ ವರ್ಷದ ಎಂಜಿನಿಯರಿಂಗ್‌ ಪರೀಕ್ಷೆಯನ್ನು ಜೂನ್ 5ರ ಬದಲು  12ರಿಂದ ನಡೆಸಲಾಗುತ್ತಿದೆ.

ಜೂ.16ರಿಂದ ಆರಂಭವಾಗಬೇಕಿದ್ದ ಒಂದರಿಂದ ಆರನೇ ಸೆಮಿಸ್ಟರ್‌ವರೆಗಿನ ಎಂಜಿನಿಯರಿಂಗ್‌ ಪರೀಕ್ಷೆಗಳನ್ನು ಜೂನ್ 23ರಿಂದ ಆರಂಭಿಸಲಾಗುವುದು. ಪದವಿ, ಸ್ನಾತಕೋತ್ತರ ಪದವಿ ಹಾಗೂ ಪ್ರಾಯೋಗಿಕ ಪರೀಕ್ಷೆಗಳನ್ನು ಜೂನ್ 31ರೊಳಗೆ ಪೂರ್ಣಗೊಳಿಸಲಾಗುತ್ತದೆ. ಇದೇ 3ರಂದು ಅಧಿಕೃತ ವೇಳಾಪಟ್ಟಿ ಪ್ರಕಟಿಸಲಾಗುವುದು ಎಂದು ರಿಜಿಸ್ಟ್ರಾರ್ (ಮೌಲ್ಯಮಾಪನ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂಘಟನೆಗಳ ಒತ್ತಾಯದಿಂದ ಮುಂದೂಡಿಕೆ: ‘ಡೀಮ್ಡ್‌ ವಿಶ್ವವಿದ್ಯಾಲಯಗಳ ಪರೀಕ್ಷೆಗೆ ಸರಿಹೊಂದುವಂತೆ ಪರೀಕ್ಷಾ ವೇಳಾಪಟ್ಟಿ ಸಿದ್ಧಪಡಿಸಲಾಗಿತ್ತು. ಆದರೆ, ಮರು ಮೌಲ್ಯಮಾಪನ ಫಲಿತಾಂಶ ಪ್ರಕಟಿಸದೆ ಪರೀಕ್ಷೆ ನಡೆಸಬಾರದು ಎಂದು ವಿದ್ಯಾರ್ಥಿ ಸಂಘಟನೆಗಳು ಒತ್ತಾಯ ಮಾಡಿದ್ದರಿಂದ ಪರೀಕ್ಷೆ ಮುಂದೂಡಲಾಗಿದೆ’ ಎಂದು ವಿಟಿಯು ಕುಲಪತಿ ಡಾ.ಕರಿಸಿದ್ದಪ್ಪ ಗುರುವಾರ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು.

ಇಂದು ಫಲಿತಾಂಶ: ಬೆಂಗಳೂರು ಪ್ರಾಂತ್ಯದ ಅಂತಿಮ ವರ್ಷದ ಮರುಮೌಲ್ಯಮಾಪನ ಫಲಿತಾಂಶವನ್ನು ಶುಕ್ರವಾರದೊಳಗೆ ನೀಡಲಾಗುವುದು. ಇದರಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಈಗಾಗಲೇ ಮರುಪರೀಕ್ಷೆಗೆ ಶುಲ್ಕ ಪಾವತಿ ಮಾಡಿದ್ದರೆ ಅದನ್ನು ವಾಪಸ್‌ ಮಾಡಲಾಗುವುದು. ಮೊದಲ ಮೂರು ವರ್ಷದ ಮರುಮೌಲ್ಯಮಾಪನ ಫಲಿತಾಂಶವನ್ನು ವಾರದೊಳಗೆ ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದರು.

ಮರುಮೌಲ್ಯಮಾಪನ ವಿಳಂಬದಿಂದ ಒಂದರಿಂದ ಆರನೇ ಸೆಮಿಸ್ಟರ್‌ವರೆಗಿನ ವಿದ್ಯಾರ್ಥಿಗಳಿಗೆ ತೊಂದರೆ ಇಲ್ಲ. ಆದರೆ, ವಿದೇಶದಲ್ಲಿ ಉನ್ನತ ಶಿಕ್ಷಣ ಮುಂದುವರಿಸುವ ಅಥವಾ ಉದ್ಯೋಗಕ್ಕೆ ಸೇರಬಯಸಿರುವ ಅಂತಿಮ ವರ್ಷದ 20 ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸಲಾಗಿದೆ ಎಂದರು.

ಪರೀಕ್ಷಾ ಪ್ರಕ್ರಿಯೆ ಮತ್ತು ಮೌಲ್ಯಮಾಪನಕ್ಕಾಗಿ ಈ ಬಾರಿ ವಿಶ್ವವಿದ್ಯಾಲಯ ಪ್ರತ್ಯೇಕ ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸಿದೆ. ಈ ಹಿಂದೆ ಪರೀಕ್ಷಾ ಕಾರ್ಯಕ್ಕಾಗಿ ₹14ಕೋಟಿ  ಖರ್ಚಾಗುತ್ತಿತ್ತು. ಸಾಫ್ಟ್‌ವೇರ್‌ ಅಭಿವೃದ್ಧಿ ಬಳಿಕ ಕೇವಲ ₹4.5 ಕೋಟಿ ಖರ್ಚಾಗಿದೆ ಎಂದು ಕರಿಸಿದ್ದಪ್ಪ ವಿವರಿಸಿದರು.

ಶುಲ್ಕ ಹೆಚ್ಚಳ ಅನಿವಾರ್ಯ; ಕರಿಸಿದ್ದಪ್ಪ

ವಿಟಿಯು ಪರೀಕ್ಷಾ ಶುಲ್ಕ ಹೆಚ್ಚಿಸುವುದು ಅನಿವಾರ್ಯವಾಗಿತ್ತು. ಅದಕ್ಕಾಗಿ ₹560ರಿಂದ ₹1,300ಕ್ಕೆ ಹೆಚ್ಚಳ ಮಾಡಲಾಗಿದೆ ಎಂದು ಕರಿಸಿದ್ದಪ್ಪ ಹೇಳಿದರು.

1998ರಿಂದ ಇದುವರೆಗೆ ಶುಲ್ಕ ಹೆಚ್ಚಿಸಿಲ್ಲ. ಆದರೂ ಇತರೆಲ್ಲಾ ವಿ.ವಿಗೆ ಹೋಲಿಸಿದರೆ ವಿಟಿಯು ಶುಲ್ಕ ಕಡಿಮೆ ಇದೆ. ಪರೀಕ್ಷಾ ವೆಚ್ಚ ನಿಭಾಯಿಸಲು ಮಾತ್ರ ಶುಲ್ಕ ಏರಿಸಲಾಗಿದೆ. ಇದರಿಂದ ವಿವಿಗೆ ಆದಾಯ ಬರುವುದಿಲ್ಲ  ಎಂದರು.

ಪಾರದರ್ಶಕ ಆಡಳಿತ ತರಲಾಗಿದೆ: ‘ವಿಟಿಯುನಲ್ಲಿ ಹಿಂದೆ ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿತ್ತು. ಆದರೆ, ನಾನು ಅಧಿಕಾರ ವಹಿಸಿಕೊಂಡ ನಂತರ ಪಾರದರ್ಶಕ ವ್ಯವಸ್ಥೆ ಜಾರಿಗೆ ತಂದಿದ್ದೇನೆ’ ಎಂದು ಕುಲಪತಿ ಹೇಳಿದರು.

ವಿಶ್ವವಿದ್ಯಾಲಯದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ಯಾವ ಅರ್ಥದಲ್ಲಿ ಆರೋಪಿಸುತ್ತಿದ್ದಾರೆ ಗೊತ್ತಿಲ್ಲ. ಆದರೀಗ ಉತ್ತಮ ಆಡಳಿತ ನಡೆಯುತ್ತಿದೆ. ಮೇ ಅಂತ್ಯಕ್ಕೆ ವಿಶ್ವವಿದ್ಯಾಲಯ ಖಾತೆಯಲ್ಲಿ ₹ 30 ಕೋಟಿ ಹಣ ಉಳಿಸಲಾಗಿದೆ ಎಂದು ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry