ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಎಸ್‌ ಅಧಿಕಾರಿ ಹಿರೇಮಠ ನಿರ್ದೋಷಿ

Last Updated 1 ಜೂನ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಆರು ವರ್ಷಗಳಿಂದ ಲಂಚ ಪಡೆದ ಆರೋಪ ಎದುರಿಸುತ್ತಿದ್ದ ಹಿರಿಯ ಕೆಎಎಸ್‌ ಅಧಿಕಾರಿ ಎಂ.ಆರ್‌.ಹಿರೇಮಠ ಅವರನ್ನು ನಿರ್ದೋಷಿ ಎಂದು ಹೈಕೋರ್ಟ್‌ ಸಾರಿದೆ.

‘ಹಿರೇಮಠ ಅವರ ವಿರುದ್ಧ ಸಾಕ್ಷ್ಯಗಳನ್ನು ಹಾಜರುಪಡಿಸುವಲ್ಲಿ ಲೋಕಾಯುಕ್ತ ಸಂಪೂರ್ಣ ವಿಫಲವಾಗಿದೆ’ ಎಂದು ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ ಅವರಿದ್ದ ಏಕಸದಸ್ಯ ಪೀಠವು ತನ್ನ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.

‘ಲಂಚ ಪಡೆಯುವುದಕ್ಕಾಗಿ ನಡೆದ ಸಂಭಾಷಣೆಯ ಮುದ್ರಿತ ಮೊಬೈಲ್‌ ಫೋನಿನ ಸಾಕ್ಷ್ಯ ಹಾಗೂ ಇದರ ಸಿ.ಡಿಯನ್ನು ತನಿಖಾಧಿಕಾರಿಗಳು ಪ್ರಮಾಣೀಕರಿಸಿಲ್ಲ. ಇದರಿಂದಾಗಿ ದೂರನ್ನು ಪುರಸ್ಕರಿಸಲು ಸಾಧ್ಯವಿಲ್ಲ’ ಎಂದು ನ್ಯಾಯಪೀಠವು ಹೇಳಿದೆ.

‘ಪ್ರಾಥಮಿಕ ಸಾಕ್ಷ್ಯ ಇರುವಾಗ ಎರಡನೇ ಸಾಕ್ಷ್ಯವನ್ನು ಪರಿಗಣಿಸಲು ಸಾಧ್ಯವಿಲ್ಲ.  ಅದರಲ್ಲೂ ಮೊಬೈಲ್‌ನಲ್ಲಿ ಮುದ್ರಿಸಿಕೊಂಡ ದೂರುದಾರರು ಮತ್ತು ಆರೋಪಿ ನಡುವಿನ ಸಂಭಾಷಣೆಯನ್ನು ಪರಿಗಣಿಸಿದ್ದೇ ಆದರೆ  ಇದೇ ಸ್ವರೂಪದ ಬಾಕಿ ಪ್ರಕರಣಗಳ ಮೇಲೂ ಇದು ಪರಿಣಾಮ ಬೀರಬಲ್ಲದು’ ಎಂದು ಆದೇಶದಲ್ಲಿ ವಿವರಿಸಲಾಗಿದೆ.

‘ಈ ಪ್ರಕರಣದಲ್ಲಿ ಸಂಭಾಷಣೆಯನ್ನು ಮೊದಲು ಮೊಬೈಲ್‌ನಲ್ಲಿ ದಾಖಲಿಸಿಕೊಳ್ಳಲಾಗಿದೆ. ಅನಂತರ ಸಿ.ಡಿಗೆ ವರ್ಗಾಯಿಸಲಾಗಿದೆ. ಆಮೇಲೆ ಇದನ್ನು ವಿಧಿ ವಿಜ್ಞಾನ ಪ್ರಯೋಗಶಾಲೆಗೆ ಪರೀಕ್ಷೆಗೆ ನೀಡಲಾಗಿದ್ದು, ಸಂಕಲನಕ್ಕೆ ಒಳಗಾಗಿರುವ ಸಾಧ್ಯತೆ ಇರುತ್ತದೆ. ಇದು ಭಾರತೀಯ ಸಾಕ್ಷ್ಯ ಅಧಿನಿಯಮ–1872 ಕಲಂ 65 ಬಿ ಪ್ರಕಾರ ಸ್ವೀಕಾರಾರ್ಹವಾಗಿಲ್ಲ’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರಕರಣವೇನು ? : ‘ಹಿರೇಮಠ ಅವರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ (ಬಿಡಿಎ) ಭೂ ಸ್ವಾಧೀನ ವಿಭಾಗದ ಉಪ ಆಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಈ ಅವಧಿಯಲ್ಲಿ ಅವರು, ಡಿನೋಟಿಫಿಕೇಷನ್‌ ಪ್ರಕರಣವೊಂದರಲ್ಲಿ ನಾಗರಾಜು ಎಂಬುವರಿಗೆ ₹ 20 ಲಕ್ಷ   ಲಂಚದ ಬೇಡಿಕೆ ಇರಿಸಿದ್ದರು. ಈ ಸಂಬಂಧ ₹ 5 ಲಕ್ಷವನ್ನು ಮಧ್ಯವರ್ತಿ ವಕೀಲರೊಬ್ಬರಿಂದ ಪಡೆದಿದ್ದಾರೆ.

 ಲಂಚ ನೀಡಿಕೆಗೆ ಸಂಬಂಧಿಸಿದಂತೆ ನಾಗರಾಜು ಮತ್ತು ಹಿರೇಮಠ ಅವರ ಮಧ್ಯದ ಸಂಭಾಷಣೆಯನ್ನು ಮೊಬೈಲ್‌ನಲ್ಲಿ ದಾಖಲಿಸಿಕೊಳ್ಳಲಾಗಿದೆ. ಇದನ್ನು ಸಾಕ್ಷ್ಯವನ್ನಾಗಿ ಪರಿಗಣಿಸಲಾಗಿದೆ’ ಎಂದು ಲೋಕಾಯುಕ್ತ  ಪೊಲೀಸರು 2012ರ ನವೆಂಬರ್ 16ರಂದು ಪ್ರಕರಣ ದಾಖಲಿಸಿಕೊಂಡಿದ್ದರು.

ಅಪರಾಧ ಪ್ರಕ್ರಿಯಾ ಸಂಹಿತೆ ಹಾಗೂ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿಯಲ್ಲಿ ಹಿರೇಮಠ ಅವರನ್ನು ಬಂಧಿಸಲಾಗಿತ್ತು. ಆಮೇಲೆ ಅವರು ಜಾಮೀನು ಪಡೆದಿದ್ದರು.

ಪ್ರಕರಣ ರದ್ದುಗೊಳಿಸುವಂತೆ ಕೋರಿ ಹಿರೇಮಠ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಹಿರೇಮಠ  ಸದ್ಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ನಿರ್ದೇಶಕರಾಗಿದ್ದಾರೆ. ಹಿರೇಮಠ ಅವರ ವಕೀಲ ಶಂಕರ ಹೆಗಡೆ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT