ಉತ್ತಮ ಮುಂಗಾರಿಗೆ ಪರ್ಜನ್ಯ ಹೋಮ

7

ಉತ್ತಮ ಮುಂಗಾರಿಗೆ ಪರ್ಜನ್ಯ ಹೋಮ

Published:
Updated:
ಉತ್ತಮ ಮುಂಗಾರಿಗೆ ಪರ್ಜನ್ಯ ಹೋಮ

ಮಡಿಕೇರಿ: ರಾಜ್ಯ ಸರ್ಕಾರವೇ ಉತ್ತಮ ಮುಂಗಾರು ಮಳೆಗೆ ಪ್ರಾರ್ಥಿಸಿ ಪರ್ಜನ್ಯ ಹೋಮ ನಡೆಸಲು ಮುಂದಾಗಿದ್ದು, ಸಿದ್ಧತೆ ಮಾಡಿಕೊಳ್ಳಲು ಕಾವೇರಿ ನೀರಾವರಿ ನಿಗಮದ ಎಂಜಿನಿಯರುಗಳಿಗೆ ಸೂಚನೆ ನೀಡಿದೆ.

ಕಾವೇರಿ ಉಗಮ ಸ್ಥಾನ ತಲಕಾವೇರಿ ಅಥವಾ ಪವಿತ್ರ ಕ್ಷೇತ್ರ ಭಾಗಮಂಡಲದ ಭಗಂಡೇಶ್ವರ ದೇಗುಲದ ಬಳಿ ಜೂನ್‌ 4ರಂದು ಈ ಹೋಮ ನಡೆಯಲಿದೆ. ₹ 10 ಲಕ್ಷ ವೆಚ್ಚದಲ್ಲಿ ಹೋಮ ನಡೆಯಲಿದ್ದು, ಕೇರಳದ ಅರ್ಚಕರು ಪಾಲ್ಗೊಳ್ಳಲಿದ್ದಾರೆ.  ಸಚಿವರಾದ ಎಂ.ಬಿ.ಪಾಟೀಲ, ಎಂ.ಆರ್‌.ಸೀತಾರಾಂ ಅಂದು ತಲಕಾವೇರಿ ಕುಂಡಿಕೆಯ ಬಳಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಮೈಸೂರು ಮಹಾರಾಜರ ಕಾಲದಿಂದಲೂ ಮುಂಗಾರು ಮಳೆಗೂ ಮೊದಲು ತಲಕಾವೇರಿಯಲ್ಲಿ ಪೂಜೆ ಸಲ್ಲಿಸುವುದು ಸಂಪ್ರದಾಯ. ಅದರಂತೆ ಈ ಬಾರಿಯೂ ಪೂಜೆ ನಡೆಯಲಿದೆ. ಕೊಡಗಿನಲ್ಲಿ ಸ್ವಲ್ಪ ಮಳೆ ಬಿದ್ದರೂ ಹಾರಂಗಿ ಭರ್ತಿಯಾಗಲಿದೆ. ಆದರೆ, ಕೆಆರ್ಎಸ್‌ ಜಲಾಶಯ ತುಂಬಲು ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಬೇಕು. ಅದಕ್ಕಾಗಿ ಮಂಡ್ಯ ಜಿಲ್ಲೆಯ ಅಚ್ಚುಕಟ್ಟು ಪ್ರದೇಶದ ರೈತರು ಪ್ರತಿವರ್ಷವೂ ಪೂಜೆ ಸಲ್ಲಿಸುತ್ತಾರೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ’ ಎಂದು ಹಾರಂಗಿ ಜಲಾಶಯದ ಕಾರ್ಯನಿರ್ವಾಹಕ ಎಂಜಿನಿಯರ್‌ ರಂಗಸ್ವಾಮಿ ಪ್ರತಿಕ್ರಿಯಿಸಿದರು.

‘ಭಾಗಮಂಡಲದಲ್ಲಿ ಹೋಮಕ್ಕೆ ಯಾವುದೇ ಸಿದ್ಧತೆ ಕೈಗೊಂಡಿಲ್ಲ. ನಮಗೆ ಸೂಚನೆಯೂ ಬಂದಿಲ್ಲ’ ಎಂದು ಭಗಂಡೇಶ್ವರ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್‌ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಯಾಗಕ್ಕೆ ವಿರೋಧ ವ್ಯಕ್ತವಾಗಿತ್ತು: ಕಳೆದ ಸೆಪ್ಟೆಂಬರ್‌ನಲ್ಲಿ ಪ್ರಕೃತಿ ಫೌಂಡೇಷನ್‌ನಿಂದ ಭಾಗಮಂಡಲದಲ್ಲಿ ಪರ್ಜನ್ಯ ವರುಣ ಯಾಗ ಆಯೋಜಿಸಲಾಗಿತ್ತು. ಮಹಾರಾಷ್ಟ್ರದ 15 ಅರ್ಚಕರು ಮೂರು ದಿನ 100 ಕೆ.ಜಿ ತುಪ್ಪ ಹಾಗೂ ಹಲಸು, ಶ್ರೀಗಂಧ, ಆಲದ ಕಟ್ಟಿಗೆ ಬಳಸಿ ಯಾಗ ನಡೆಸಿದ್ದರು. ಕೊನೆ ದಿನ ಪೂರ್ಣಾಹುತಿ ನಡೆಯುವ ಸಂದರ್ಭದಲ್ಲಿ ಸ್ಥಳೀಯರು ವಿರೋಧ ವ್ಯಕ್ತಪಡಿಸಿ ಯಾಗ ಸ್ಥಗಿತಗೊಳಿಸಿದ್ದರು.

‘ಕೊಡಗು ಜಿಲ್ಲೆಯಲ್ಲಿ ಈ ವರ್ಷ ಮುಂಗಾರು ಪೂರ್ವ ಮಳೆ ವಾಡಿಕೆಗೂ ಮೀರಿ ಬಿದ್ದಿದೆ. ರಾಜ್ಯಕ್ಕೆ ಮುಂಗಾರು ಇನ್ನೂ ಪ್ರವೇಶಿಸಿಲ್ಲ. ಆಗಲೇ ಸರ್ಕಾರ ಆತುರದ ನಿರ್ಧಾರ ಕೈಗೊಂಡು ಹಣ ವ್ಯಯಿಸುವ ಅಗತ್ಯವಿಲ್ಲ’ ಎಂದು ಭಾಗಮಂಡಲ ನಿವಾಸಿ ಮೋಹನ್‌ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry