ಹೊಸಕೆರೆಗೆ ಜೀವಕಳೆ ತಂದ ಮಳೆ

7

ಹೊಸಕೆರೆಗೆ ಜೀವಕಳೆ ತಂದ ಮಳೆ

Published:
Updated:
ಹೊಸಕೆರೆಗೆ ಜೀವಕಳೆ ತಂದ ಮಳೆ

-ಕೆ.ಸಿ. ರಂಗಸ್ವಾಮಿ

**

ಬೆಂಗಳೂರು: ಕಿರು ಜಲಾಶಯವನ್ನು ನೆನಪಿಸುವ ಅಪಾರ ಜಲರಾಶಿ, ಗೂಡು ಸೇರಿದ ಖುಷಿಯಲ್ಲಿ ಚಿಲಿಪಿಲಿಗುಟ್ಟುತ್ತಿರುವ ಹಕ್ಕಿಗಳ ನಿನಾದ, ಪ್ರವಾಸಕ್ಕೆಂದು ಬಂದ ಯುವ ಜೋಡಿಗಳ ಪಿಸುಮಾತು, ಕೆರೆ ಸುತ್ತುವರಿದಿರುವ ಹಸಿರ ರಾಶಿಯು  ಕೆಂಗೇರಿ ಉಪನಗರ ಸಮೀಪದ ಹೊಸಕೆರೆಯ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ.

ವರ್ಷದ ಹಿಂದೆ ಬರಿದಾಗಿದ್ದ ಕೆರೆಯು ಈಗ ಜೀವಕಳೆ ಪಡೆದು ನಳನಳಿಸುತ್ತಿದೆ.

ಮುಂಗಾರು ರಾಜ್ಯವನ್ನು ಪ್ರವೇಶಿಸುವ ಮುನ್ನವೇ ಈ ಜಲಮೂಲ ಮೈದುಂಬಿ ಕಂಗೊಳಿಸುತ್ತಿದೆ. ಮಾಯವಾಗಿದ್ದ ಪಕ್ಷಿ ಸಂಕುಲ ಜಲಮೂಲದ ಅಂಗಳಕ್ಕೆ ಮತ್ತೆ ದಾಂಗುಡಿ ಇಟ್ಟು ನೋಡುಗರ ಮನಸೂರೆಗೊಳ್ಳುತ್ತಿದೆ.

15 ದಿನಗಳಿಂದ ಸುರಿದ ಭಾರಿ ಮಳೆಯ ಪರಿಣಾಮ ನಗರದ ಹಲವು ಕೆರೆಗಳು ಮರುಜೀವ ಪಡೆದುಕೊಂಡಿವೆ. ಅದೇ ರೀತಿ ಸೂಳಿಕೆರೆ ಅರಣ್ಯ ವಲಯದ ವ್ಯಾಪ್ತಿಗೆ ಬರುವ ಈ ಕೆರೆಗೆ ಅಪಾರ ಪ್ರಮಾಣದ ನೀರು ಹರಿದು ಬಂದಿತ್ತು.

‘40 ವರ್ಷಗಳ ಹಿಂದೆ ಕಾಮಾಕ್ಷಿಪಾಳ್ಯದ ವೀರಣ್ಣ ಎಂಬುವರ ನೇತೃತ್ವದಲ್ಲಿ ಕೆರೆ ನಿರ್ಮಾಣವಾಗಿತ್ತು. ಅದು ಪ್ರತಿವರ್ಷ ತುಂಬಿ ಹರಿಯುತ್ತಿತ್ತು. ಆದರೆ, ಕಳೆದ ವರ್ಷ ತೀವ್ರ ಬರಗಾಲಕ್ಕೆ ತುತ್ತಾಗಿದ್ದರಿಂದ ಕೆರೆಯ ಒಡಲು ಬರಿದಾಗಿತ್ತು’ ಎಂದು ಗ್ರಾಮದ ಮುನಿರಾಮಕ್ಕ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸುತ್ತಮುತ್ತಲಿನ ಗ್ರಾಮಸ್ಥರು ಕೃಷಿ ಚಟುವಟಿಕೆಗಳಿಗೆ ಕೆರೆಯ ನೀರನ್ನೇ ಆಶ್ರಯಿಸಿದ್ದರು. ದನಕರುಗಳ ದಾಹವನ್ನೂ ತಣಿಸುತ್ತಿತ್ತು. ಬರಿದಾಗಿದ್ದ ಕೆರೆಗೆ ಈಗ ಮರುಜೀವ ಬಂದಿರುವುದು ಖುಷಿ ನೀಡಿದೆ’ ಎಂದು ಅವರು ಸಂತಸ ಹಂಚಿಕೊಂಡರು.

ಕೆರೆಯಲ್ಲಿ ಮೀನುಗಾರಿಕೆ: ‘ಕೆರೆಗೆ ನೀರು ಬಂದಿರುವುದರಿಂದ ಮೀನುಗಾರಿಕೆ ನಡೆಸಲು ಅನುಕೂಲವಾಗಿದೆ. ಇಲ್ಲಿ ಸಣ್ಣ ಮೀನುಗಳನ್ನು ಬಿಡುವಂತೆ ಒಳನಾಡು ಮತ್ತು ಬಂದರು ಇಲಾಖೆಗೆ ಪತ್ರ ಬರೆಯುತ್ತೇನೆ. ಮೀನುಗಾರಿಕೆಯಿಂದ ಸರ್ಕಾರಕ್ಕೂ ಆದಾಯ ಬರಲಿದೆ’ ಎಂದು  ರಾಮೋಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವೇಣುಗೋಪಾಲ್‌ ತಿಳಿಸಿದರು.

**

ಪ್ರವಾಸಿಗರ ನೆಚ್ಚಿನ ತಾಣ

ನಗರ ಪ್ರದೇಶದಿಂದ ತುಸು ದೂರದಲ್ಲಿರುವ ಹೊಸಕೆರೆ ಪ್ರವಾಸಿಗರ ಪಾಲಿಗೆ ನೆಚ್ಚಿನ ತಾಣವಾಗಿದೆ. ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ನೂರಾರು ಮಂದಿ ಕೆರೆ ಅಂಗಳಕ್ಕೆ ಭೇಟಿ ನೀಡುತ್ತಿದ್ದಾರೆ. ಇಲ್ಲಿನ ಹಿತಕರ ವಾತಾವರಣವು ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

**

ಕೆರೆ ತುಂಬಿರುವುದರಿಂದ ಅಂತರ್ಜಲ ಮಟ್ಟ ವೃದ್ಧಿಸಲಿದೆ. ಕೊಳವೆಬಾವಿಗಳು ಮರುಜೀವ ಪಡೆದುಕೊಳ್ಳಲಿವೆ. ಇದರಿಂದ ಕೃಷಿ ಚಟುವಟಿಕೆಗಳಿಗೆ ಅನುಕೂಲ ಆಗಲಿದೆ

-ಲಕ್ಷ್ಮಿನಾರಾಯಣ, ಗ್ರಾಮಸ್ಥ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry