ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರ ಭಾಗ್ಯದಲಿ ಉಂಬೆ?

Last Updated 1 ಜೂನ್ 2017, 19:30 IST
ಅಕ್ಷರ ಗಾತ್ರ

ಜಾನಪದ  ಆಶಯಗಳು, ಜಾನಪದ ಕಥಾಮಾದರಿಗಳು ಜೈನಕಥೆಗಾರರ ಲೇಖನಿಗೆ ಸಿಲುಕಿ ಸೊಗಸಾದ ದಾರ್ಶನಿಕ ಕಥಾಕಾವ್ಯಗಳಾಗಿವೆ.  ಪ್ರೀತಿಯ ಅಥವಾ ಭಾಗ್ಯದ ಪರೀಕ್ಷೆಯ ಆಶಯ ಜಾನಪದ ಕಥೆಗಳಲ್ಲೂ, ವಿಶ್ವದ ಕಾವ್ಯ­ನಾಟಕ­ಗಳಲ್ಲೂ ದೊರೆಯುತ್ತದೆ.  ಅಂಥ­ದೊಂದು ಆಶಯ ಶ್ರೀಪಾಲಚರಿತೆ ಕಾವ್ಯದಲ್ಲಿ ಹೀಗೆ ಬಂದಿದೆ-

ವಸುಪಾಲ ರಾಜನಿಗೆ ಮದನ­ಮಂಜರಿ ಹಾಗೂ ಮದನಾವಳಿ ಎಂಬ ಇಬ್ಬರು ರಾಜಕುಮಾರಿಯರು.  ದೊಡ್ಡ­ವಳು ಜೈನೇತರ ಪಂಡಿತನಲ್ಲೂ, ಚಿಕ್ಕವಳು ಜೈನಯತಿಯಲ್ಲೂ ವಿದ್ಯೆ ಕಲಿಯುತ್ತಾರೆ.  ಒಂದುಸಲ ಮಹಾರಾಜ ಹಿರಿಯ ಮಗಳನ್ನು ಕರೆದು, ‘ನೀನು ಯಾರ ಭಾಗ್ಯದಿಂದ   ಸುಖವನ್ನು ಅನುಭವಿಸುವೆ? ಹೇಳು’ -ಎಂದು ಕೇಳಿದಾಗ, ‘ ಪ್ರಭು, ನಿನ್ನ ಭಾಗ್ಯದಲಿ’-ಎಂದಳು.  ಸಂತಸಗೊಂಡ ದೊರೆ, ‘ನಿನಗೆ ಯಾರು  ವರನಾಗಬೇಕು?’ -ಎಂದಾಗ, ‘ಕ್ಷತ್ರಿಯ ಸುತನಾಗಬೇಕು’ -ಎನ್ನುತ್ತಾಳೆ.  ಅರಸ ಅವಳ ಆಸೆಯಂತೆ ಒಬ್ಬ ರಾಜಕುಮಾರನೊಂದಿಗೆ ವಿವಾಹ ಮಾಡುತ್ತಾನೆ.

ಮತ್ತೊಂದು ದಿನ ಕಿರಿಯಮಗಳು ಮದನಾವಳಿಯನ್ನು ಕರೆದು, ‘ನೀನು ಯಾರ ಭಾಗ್ಯದಲಿ ಉಂಬೆ?  ನಿನಗಾರು ವರನಾಗಬೇಕು?’-ಎಂದು ಪ್ರೀತಿಯಿಂದ ಕೇಳುತ್ತಾನೆ.   ಆಗ ಆಕೆ, ‘ನಾನು ಮಾಡಿದ ಪುಣ್ಯ ಪಾಪಂಗಳ ಮುನ್ನ ನಾನು ಅನುಭವಿಸದೆ,  ನೀನು ಮಾಡಿದ ಭಾಗ್ಯವನು ನಾನು ಉಂಬೆನೆ?’ -ಎಂದು ಹೇಳಿದಳು.  ಅಲ್ಲಿಯೆ ಇದ್ದ ಅವಳಕ್ಕ ‘ಮದದಿಂದ ನಿನ್ನ ನೀನರಿಯದೆ ನುಡಿದೆ’ -ಎಂದುದಲ್ಲದೆ, ‘ಪುಣ್ಯ ಪಾಪದ ಮಾತನಾಡಿದೆ, ಪುಣ್ಯ ಪಾಪದ ಬಣ್ಣವೇನು?  ಪುಣ್ಯಪಾಪಗಳ ಕಂಡು ಬಂದವರು ಯಾರು? ಜೀವನು ಏನುಂಬನು ಪೇಳೆ? ಜೀವನು ಹೇಗಿರುವನು ಪೇಳೆ? ಜೀವನ ಹುಟ್ಟಿಸಿದವರು ಯಾರು ಎಲೆ ತಂಗೆ?’ -ಎಂದು ಮೊದಲಾಗಿ ಪ್ರಶ್ನಿಸಿದಳು.

 ಆಗ ಮದನಾವಳಿ ತಾನು ಕಲಿತ ಜೈನವಿದ್ಯೆಯ ಹಿನ್ನಲೆಯಲ್ಲಿ, ‘ಜೀವ ಹುಟ್ಟಿಸಿದವರಿಲ್ಲ.  ಜೀವ ಕರ್ಮಂಗಳು ಅನಾದಿ ಸಂಸಿದ್ಧವು. ಜೀವ ತಾನು ಸ್ವಯಂಭು.  ಜೀವನು ಬಾಧನು.  ಜೀವನು ಬೋಧನು.  ಜೀವನು ಉಪಮಾ ರಹಿತನು.  ಜೀವನು ಜ್ಞಾನನು.  ಜೀವ ನಿರ್ಮಾಯನು.  ಜೀವ ಸುಸಿದ್ಧ ಸ್ವರೂಪನು’ -ಎಂದು ಹಲವು ರೀತಿಯಲ್ಲಿ ವಾಗ್ದೇವಿಯಂತೆ ಬಣ್ಣಿಸಿದಳು.  ಅಕ್ಕ ತೆಪ್ಪಗಾದರೆ, ಬುಧಜನರು ಕೊಂಡಾಡಿದರು.  ಆದರೆ ಕುಪಿತನಾದ ರಾಜ, ಹಿರಿಯಮಗಳಂತೆ ತನ್ನನ್ನು ಹೊಗಳದ ಈ ಜಂಬಗಾತಿಗೆ ತಕ್ಕ ಗಂಡನನ್ನು ಹುಡುಕುತ್ತೇನೆಂದು ನಿಶ್ಚಯಿಸಿದನು.  ದೇಗುಲದ ಬಾಗಿಲಲ್ಲಿ ಬಿಕ್ಕೆ ಬೇಡುತ್ತಿದ್ದ ಕುಷ್ಠನನ್ನು ತೋರಿಸಿ, ‘ಈತನೊಡನೆ ನಿನ್ನ ಲಗ್ನ ಮಾಡುವೆನು, ಅನಂತರ ನಿನ್ನ ಭಾಗ್ಯವನ್ನು ನೋಡುವೆನು’ -ಎಂದನು.  ಆಕೆ ತಟ್ಟನೆ, ‘ಈತನಲ್ಲದೆ ಲೋಕದ ಜನರೆಲ್ಲ ತಂದೆ, ನಿನಗೆ ಸಮಾನರು’ -ಎಂದು ನುಡಿದಳು. ಆ ಕುಷ್ಠನನ್ನೇ ಪತಿಯಾಗಿ ಸ್ವೀಕರಿಸಿ, ಉಪಚರಿಸಿದಳು.  ಸಿದ್ಧಚಕ್ರ ನೋಂಪಿಯನ್ನು ಆಚರಿಸಿ ಆತನ ರೋಗವನ್ನು ನಿವಾರಿಸಿದಳು.  ಆಗ ರಾಜ, ‘ಇಂದು ಮಗಳ ಭಾಗ್ಯವ ಕಂಡೆ’ -ಎಂದು ಹರ್ಷಗೊಂಡನು.

ನಮ್ಮ ಇಂದಿನ ಒಳಿತು ಕೆಡಕುಗಳೇ ಮುಂದಿನ ಒಳಿತು ಕೆಡಕುಗಳಿಗೆ ಕಾರಣ, ನಮ್ಮ ಸುಖ ದುಃಖಕ್ಕೆ ನಾವೇ ಜವಾಬ್ದಾರರು ಎಂಬ  ಜೈನ ಆಶಯವು ಇಲ್ಲಿ ಜಾನಪದ ಆಶಯವೊಂದರಲ್ಲಿ ಅಭಿವ್ಯಕ್ತಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT