ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮನೆ ಮನೆಗೆ ಕುಮಾರಣ್ಣ’ ಪಾದಯಾತ್ರೆಗೆ ಚಾಲನೆ

Last Updated 1 ಜೂನ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಜನತಾದಳ (ಜಾತ್ಯತೀತ) ನಗರ ಘಟಕ ವತಿಯಿಂದ ಆಯೋಜಿಸಿದ್ದ ‘ಮನೆ ಮನೆಗೆ ಕುಮಾರಣ್ಣ’ ಪಾದಯಾತ್ರೆಗೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ನಗರದ ಅಣ್ಣಮ್ಮ ದೇವಸ್ಥಾನದ ಬಳಿ ಗುರುವಾರ ಚಾಲನೆ ನೀಡಿದರು.

‘ನನ್ನ ಅಧಿಕಾರಾವಧಿಯಲ್ಲಿ ನಗರಕ್ಕೆ ಬಹಳಷ್ಟು ಕೊಡುಗೆ ನೀಡಲಾಗಿದೆ. ಪಕ್ಷವನ್ನು ಅಧಿಕಾರಕ್ಕೆ ತಂದರೆ ನಗರದ ಜ್ವಲಂತ ಸಮಸ್ಯೆಗಳಿಗೆ ಆದ್ಯತೆ ನೀಡುವೆ. ಜತೆಗೆ ಎ.ಟಿ.ರಾಮಸ್ವಾಮಿ ವರದಿಯನ್ನು ಇನ್ನೂ ಅನುಷ್ಠಾನಗೊಳಿಸಿಲ್ಲ. ಅಧಿಕಾರಕ್ಕೆ ಬಂದ ಮರುದಿನವೇ ವರದಿಯನ್ನು ಅನುಷ್ಠಾನಗೊಳಿಸುತ್ತೇವೆ’ ಎಂದು ಅವರು ಭರವಸೆ ನೀಡಿದರು.

‘ನಗರದ ಅಭಿವೃದ್ಧಿ ಹೆಸರಿನಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಸರ್ಕಾರದ ಬೊಕ್ಕಸವನ್ನು ಲೂಟಿ ಮಾಡಿವೆ. ಬಿಜೆಪಿ ಕಾಲದಲ್ಲಿ ಬಿಬಿಎಂಪಿಯಲ್ಲಿ ಕಡತಗಳಿಗೆ ಬೆಂಕಿ ಹಾಕಿಸಿರುವ ಉದಾಹರಣೆಗಳಿವೆ. ಈ ಬಗ್ಗೆ ಜನರಿಗೆ ತಿಳಿಸುತ್ತೇವೆ’ ಎಂದರು.

ಚರ್ಚೆ ನಡೆಸಿ ನಿರ್ಧಾರ: ‘ವಿಧಾನ ಪರಿಷತ್ ಸಭಾಪತಿ ಡಿಎಚ್ ಶಂಕರಮೂರ್ತಿ ಅವರ ವಿರುದ್ಧ ಅವಿಶ್ವಾಸ ನಿರ್ಣಯ ವಿಚಾರವಾಗಿ ಎರಡೂ ಪಕ್ಷದವರು ನಮ್ಮನ್ನು ಸಂಪರ್ಕಿಸಿಲ್ಲ. ಉಪಸಭಾಪತಿ ಆಯ್ಕೆ ಸಂದರ್ಭದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಈಗ ಅದನ್ನು ಮುಂದುವರಿಸಬೇಕೆ ಅಥವಾ ಬೇಡವೇ ಎಂದು ಸದಸ್ಯರ ಜತೆ ಚರ್ಚಿಸಿ, ತೀರ್ಮಾನಿಸುತ್ತೇವೆ’ ಎಂದರು.

‘ಜನರು ಇದ್ದಲ್ಲಿಗೆ ತೆರಳಿ ಅವರ ಸಮಸ್ಯೆಗಳಿಗೆ ಸ್ಪಂದಿಸುವುದು, ಪಕ್ಷವನ್ನು ಸಂಘಟಿಸುವುದು ನಮ್ಮ ಮುಖ್ಯ ಉದ್ದೇಶ. ಕುಮಾರಸ್ವಾಮಿ ಹಾಗೂ ಎಚ್.ಡಿ.ದೇವೇಗೌಡರು ಅಧಿಕಾರದಲ್ಲಿದ್ದಾಗ ಬೆಂಗಳೂರಿಗೆ ಅವರು ಕೊಟ್ಟ ಕೊಡುಗೆ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವೈಫಲ್ಯಗಳ ಬಗ್ಗೆ ತಿಳಿಸಲಾಗುತ್ತದೆ’ ಎಂದು ನಗರ ಘಟಕದ ಅಧ್ಯಕ್ಷ ಆರ್.ಪ್ರಕಾಶ್ ತಿಳಿಸಿದರು.

‘ಮೊದಲ ಹಂತವಾಗಿ, ಪ್ರತಿದಿನ ಎರಡು ವಿಧಾನಸಭಾ ಕ್ಷೇತ್ರದಂತೆ ನಗರದ 28 ವಿಧಾನಸಭಾ ಕ್ಷೇತ್ರಗಳ 198 ಬಿಬಿಎಂಪಿ ವಾರ್ಡ್‌ಗಳಲ್ಲಿ ಪಾದಯಾತ್ರೆ ನಡೆಯಲಿದೆ.  ಜೂನ್ 15ರಂದು ರಾಜರಾಜೇಶ್ವರಿ ನಗರದಲ್ಲಿ ಅಂತ್ಯಗೊಳ್ಳಲಿದೆ’ ಎಂದರು.

ವಾಹನ ಸವಾರರ ಪರದಾಟ: ಬೆಳಿಗ್ಗೆ 9 ಗಂಟೆಗೆ ಕಾರ್ಯಕ್ರಮ ನಿಗದಿಯಾಗಿದ್ದರಿಂದ ಸ್ಥಳಕ್ಕೆ ಬಂದ ಜೆಡಿಎಸ್‌ ಕಾರ್ಯಕರ್ತರು ಎಸ್‌.ಸಿ.ರಸ್ತೆ ಬದಿಯಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿದ್ದರು. ಇದರಿಂದ ಮಂದಗತಿಯ ಸಂಚಾರ ಉಂಟಾಗಿ, ಎಸ್‌.ಸಿ.ರಸ್ತೆ, ಆನಂದರಾವ್ ವೃತ್ತದ ಬಳಿ ವಾಹನ ದಟ್ಟಣೆ ಕಂಡುಬಂತು.

ಕುಮಾರಸ್ವಾಮಿ ಅವರು ನಿಗದಿತ ಸಮಯಕ್ಕಿಂತ ಎರಡು ಗಂಟೆ ತಡವಾಗಿ ಬಂದರು.

**

ಯಲಹಂಕದಲ್ಲಿ ನಾಳೆ ಪಾದಯಾತ್ರೆ
ಯಲಹಂಕದ ನಾಲ್ಕು ವಾರ್ಡ್‌ಗಳಲ್ಲಿ ಜೂನ್‌ 3ರಂದು ‘ಮನೆಮನೆಗೆ ಕುಮಾರಣ್ಣ’ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಗರ ವಕ್ತಾರ ಎಂ.ನಾಗರಾಜು, ‘ಬೆಳಿಗ್ಗೆ 9 ಗಂಟೆಗೆ ಯಲಹಂಕದ ಸಂತೆ ವೃತ್ತದಲ್ಲಿರುವ ನಾಡಪ್ರಭು ಕೆಂಪೇಗೌಡರ ಪ್ರತಿಮೆಗೆ ಎಚ್‌.ಡಿ.ಕುಮಾರಸ್ವಾಮಿ ಅವರು ಮಾಲಾರ್ಪಣೆ ಮಾಡಲಿದ್ದಾರೆ. ಬಳಿಕ ಪಾದಯಾತ್ರೆ ನಡೆಯಲಿದೆ. ಹಳೇನಗರ ಮತ್ತು ಉಪನಗರದಲ್ಲಿ ಮನೆಮನೆಗೆ ತೆರಳಲಿದ್ದೇವೆ’ ಎಂದರು.

**

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಉತ್ತರ ಕರ್ನಾಟಕದಿಂದ ಸ್ಪರ್ಧಿಸುವಂತೆ ಒತ್ತಡವಿದೆ. ಈ ಬಗ್ಗೆ ಚುನಾವಣೆ ವೇಳೆ ನಿರ್ಧರಿಸುತ್ತೇನೆ
-ಎಚ್.ಡಿ.ಕುಮಾರಸ್ವಾಮಿ,
ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT