ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5 ಲಕ್ಷ ಸಸಿ ನೆಡುವ ಅಭಿಯಾನ

Last Updated 1 ಜೂನ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸಮರ್ಥ ಭಾರತ ಸಂಸ್ಥೆಯು ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ 2017ರ ಜೂನ್‌ 5ರಿಂದ (ವಿಶ್ವ ಪರಿಸರ ದಿನ) ಆಗಸ್ಟ್‌ 15ರವರೆಗೆ ನಗರದಲ್ಲಿ 5 ಲಕ್ಷ ಸಸಿಗಳನ್ನು ನೆಟ್ಟು ಬೆಳೆಸುವ ಅಭಿಯಾನ ಹಮ್ಮಿಕೊಂಡಿದೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಸಮರ್ಥ ಭಾರತ ಬೆಂಗಳೂರು ಸಂಚಾಲಕ ಕೃಷ್ಣ ಗೌಡ, ‘ಕಾರ್ಪೊರೇಟ್ ಕಂಪೆನಿಗಳ ಸಾಮಾಜಿಕ ಹೊಣೆಗಾರಿಕೆಯಡಿ (ಸಿಎಸ್‌ಆರ್)  ಐಟಿ ಕಂಪೆನಿಗಳು, ಕೈಗಾರಿಕೆಗಳು ಈ ಅಭಿಯಾನಕ್ಕೆ ಕೈಜೋಡಿಸಲಿವೆ’ ಎಂದು ಹೇಳಿದರು.

‘ನಗರದ ಹೊರವಲಯ, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಉದ್ಯಾನಗಳು, ಸ್ಮಶಾನ,  ಬಡಾವಣೆಗಳಲ್ಲಿ, ಸರ್ಕಾರಿ ಜಾಗ, ಶಾಲೆ–ಕಾಲೇಜು ಹೀಗೆ 150 ಜಾಗಗಳಲ್ಲಿ ಗಿಡ ನೆಡಲಾಗುವುದು’ ಎಂದು ತಿಳಿಸಿದರು.

‘ಮಹದೇವಪುರ ಕೆರೆ, ಹೊರಮಾವು ಕೆರೆ ಪ್ರದೇಶಗಳಲ್ಲಿ ಸಸಿಗಳನ್ನು ನೆಡುವ ಕೆಲಸ ಈಗಾಗಲೇ ಪ್ರಾರಂಭವಾಗಿದೆ. ಅಲ್ಲಿನ ಸ್ಥಳಿಯರೇ 1 ಲಕ್ಷ ಗಿಡಗಳನ್ನು ನೆಟ್ಟು ಮೂರು ವರ್ಷದವರೆಗೆ ಪೋಷಿಸುವುದಾಗಿ ಹೇಳಿದ್ದಾರೆ. ಅಲ್ಲದೆ, ವಿಕ್ರಂ ರಾಷ್ಟ್ರೀಯ ಪತ್ರಿಕೆಯೂ ತಮ್ಮ ಏಜೆಂಟರು, ಉದ್ಯೋಗಿಗಳ ಸಹಕಾರದಿಂದ 70 ಸಾವಿರ ಸಸಿಗಳನ್ನು ನೆಡಲಿದೆ’ ಎಂದು ಹೇಳಿದರು.

‘ಬಿಎಂಟಿಸಿ ತನ್ನ 36 ಸಾವಿರ ಸಿಬ್ಬಂದಿಯ ಮೂಲಕ ಗಿಡ ನೆಡಲು ಒಪ್ಪಿದ್ದು, ಬಿಎಂಆರ್‌ಸಿಎಲ್‌ ಸಹ ಈ ಅಭಿಯಾನಕ್ಕೆ ಕೈ ಜೋಡಿಸಿದೆ. ಕೆಲವು ಐಟಿ ಕಂಪೆನಿಗಳು ಈ ಅಭಿಯಾನಕ್ಕೆ ಸ್ವಯಂ ಸೇವಕರನ್ನು ನೀಡುವುದಾಗಿ ಹೇಳಿದೆ’ ಎಂದು ಮಾಹಿತಿ ನೀಡಿದರು.

ಬೀಜದ ಉಂಡೆಗಳ (ಸೀಡ್‌ ಬಾಲ್‌) ಪ್ರಯೋಗ: ‘ನಗರದ ಹೊರವಲಯದಲ್ಲಿ ಅನೇಕ ಗುಡ್ಡ ಪ್ರದೇಶಗಳಿವೆ ಅಲ್ಲಿಗೆ ಹೋಗಿ ಸಸಿ ನೆಡುವುದು ಕಷ್ಟವಾಗುವುದರಿಂದ ಅಲ್ಲಿ ಬೀಜದ ಉಂಡೆಗಳನ್ನು ಬಿಸಾಡುವ ಪ್ರಯತ್ನ ಮಾಡುತ್ತಿದ್ದೇವೆ. ನಮ್ಮ ಸ್ವಯಂಸೇವಕರ ಗುಂಪು ಅಲ್ಲಿ ಹೋಗಿ ಬೀಜದ ಉಂಡೆಗಳನ್ನು ಬಿಸಾಡುತ್ತಾರೆ’ ಎಂದು ತಿಳಿಸಿದರು.

ಅಲ್ಲದೆ, ಜೂನ್‌ 5ರಂದು 28 ಜಿಲ್ಲೆಗಳಲ್ಲಿರುವ ನವೋದಯ ಶಾಲೆಗಳಲ್ಲಿ ಒಂದೇ ದಿನದಲ್ಲಿ 28 ಲಕ್ಷ ಬೀಜದ ಉಂಡೆಗಳನ್ನು ತಯಾರಿಸುವ ಯೋಜನೆಯನ್ನು ‘ಉತ್ತಿಷ್ಟ ಭಾರತ ಸಂಘಟನೆ’ ಹಮ್ಮಿಕೊಂಡಿದೆ. ಇದರಲ್ಲಿ 30 ಮಂದಿ ಪ್ರಾಂಶುಪಾಲರು, 12,000 ವಿದ್ಯಾರ್ಥಿಗಳು, 1,500 ಹಳೆಯ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.

ಅಧಿಕ ಸಂಖ್ಯೆಯಲ್ಲಿ ಗಂಧದ ಸಸಿ ನಾಟಿ: ಅಭಿಯಾನದ ಮಾರ್ಗದರ್ಶಕರಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಸೇವಾ ಪ್ರಮುಖ್‌ ಗಣಪತಿ ಹೆಗಡೆ, ‘ಅರಣ್ಯ ಇಲಾಖೆಯವರು ಗಂಧದ ಸಸಿಗಳು ಹಾಗೂ ವಾಣಿಜ್ಯ ಉಪಯೋಗವಿರುವ ಹೊಂಗೆ ಸಸಿಗಳನ್ನು ಅಧಿಕ ಸಂಖ್ಯೆಯಲ್ಲಿ ನೆಡಲು ಸಲಹೆ ನೀಡಿದ್ದಾರೆ. ಅಕೇಶಿಯಾ, ನೀಲಗಿರಿ ಮರಗಳನ್ನು ಹೊರತುಪಡಿಸಿ ಎಲ್ಲಾ ಜಾತಿಯ ಸಸಿಗಳನ್ನು ನೆಡುತ್ತೇವೆ’ ಎಂದು ಹೇಳಿದರು.

‘ಅರಣ್ಯ ಇಲಾಖೆಯವರು 1 ಕೋಟಿ ಸಸಿ ಒದಗಿಸಲಿದ್ದಾರೆ. ಆ ಬಗ್ಗೆ ನರ್ಸರಿಗಳಿಗೆ ಈಗಾಗಲೇ  ಮಾಹಿತಿ ನೀಡಿದ್ದಾರೆ. ಆಯಾ ಪ್ರದೇಶಕ್ಕೆ ಅನುಗುಣವಾಗಿ ಸಸಿ ನೆಡುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT