ಜಾನುವಾರು ವಧೆ ನಿಯಂತ್ರಣದ ಉದ್ದೇಶ ಅಲ್ಲ

7

ಜಾನುವಾರು ವಧೆ ನಿಯಂತ್ರಣದ ಉದ್ದೇಶ ಅಲ್ಲ

Published:
Updated:
ಜಾನುವಾರು ವಧೆ ನಿಯಂತ್ರಣದ ಉದ್ದೇಶ ಅಲ್ಲ

ನವದೆಹಲಿ/ತಾರಕೇಶ್ವರ: ಮಾಂಸಕ್ಕಾಗಿ ಜಾನುವಾರು ವಧೆ ಸಂಬಂಧ ರಾಜ್ಯಗಳಲ್ಲಿರುವ ಕಾನೂನಿನಲ್ಲಿ ಕೇಂದ್ರ ಹೊರಡಿಸಿರುವ ಅಧಿಸೂಚನೆ ಮಧ್ಯಪ್ರವೇಶಿಸುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಹೇಳಿದರು.

ಜನರು ಜಾನುವಾರುಗಳ ಮಾಂಸ ತಿನ್ನುವುದನ್ನು ನಿಯಂತ್ರಿಸುವ ಉದ್ದೇಶ ದಿಂದ ಕೇಂದ್ರವು ಜಾನುವಾರು ಮಾರಾಟ ಮತ್ತು ಖರೀದಿ ನಿರ್ಬಂಧಿಸಿ  ಅಧಿಸೂಚನೆ ಹೊರಡಿಸಿಲ್ಲ ಎಂದು ಈ ಮೂಲಕ ಅವರು ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

ದನದ ಮಾಂಸ ತಿನ್ನುವುದು ಮತ್ತು ಜಾನುವಾರು ವ್ಯಾಪಾರದ ವಿಚಾರದಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ವಿವಾದವನ್ನು ತಣ್ಣಗಾಗಿಸಲು ಅವರು ಈ ಮೂಲಕ  ಪ್ರಯತ್ನ ಮಾಡಿದರು.

ಜಾನುವಾರು ಮಾರುಕಟ್ಟೆ ಇರುವುದು ರೈತರಿಗೋಸ್ಕರವೇ ಹೊರತು ವ್ಯಾಪಾರಿಗಳಿಗಾಗಿ ಅಲ್ಲ ಎಂಬುದನ್ನು ಸ್ಪಷ್ಟಪಡಿಸಸಲು ಕೇಂದ್ರ ಈ ಅಧಿ ಸೂಚನೆ ಹೊರಡಿಸಿದೆ ಎಂದು ಸಮರ್ಥಿಸಿಕೊಂಡರು.

ಜಾನುವಾರು ವಧೆ ಸಂಬಂಧ ಪ್ರತಿ ರಾಜ್ಯವೂ ತನ್ನದೇ ಆದ ಕಾನೂನನ್ನು ಹೊಂದಿದೆ. ಸಂವಿಧಾನದ 48ನೇ ಪರಿಚ್ಛೇದದ ನಿರ್ದೇಶನಾತ್ಮಕ ಸೂತ್ರಗಳ ಪ್ರಕಾರ ಕೆಲವು ವರ್ಗದ ಪ್ರಾಣಿಗಳನ್ನು ರಕ್ಷಿಸಬೇಕಿದೆ ಎಂದು ಅವರು ತಿಳಿಸಿದರು.

ಅಧಿಸೂಚನೆಯಿಂದ ವ್ಯಗ್ರರಾಗಿರುವವರನ್ನು ಸಮಾಧಾನಪಡಿಸಲು ಜೇಟ್ಲಿ ಯತ್ನಿಸಿದರೆ ಆರ್‌ಎಸ್‌ಎಸ್‌ ತನ್ನ ನಿಲುವನ್ನು ಇನ್ನಷ್ಟು ಗಟ್ಟಿಗೊಳಿಸಿದೆ.

ಸರ್ಕಾರದ ನಿರ್ಧಾರದ ವಿರುದ್ಧ ನಡೆಸಿರುವ ದ ನದ ಮಾಂಸದ ಉತ್ಸವಗಳು ಮಾನವೀಯತೆಗೆ ವಿರುದ್ಧವಾಗಿವೆ ಎಂದು ಆರ್‌ಎಸ್‌ಎಸ್‌ ಹಿರಿಯ ಮುಖಂಡ ಇಂದ್ರೇಶ್‌ ಕುಮಾರ್‌ ಹೇಳಿದರು.

ದೇಶದ 121 ಕೋಟಿ ಜನರ ಪೈಕಿ ಕೆಲವೇ ಮಂದಿ ಇಂತಹ ಕೃತ್ಯಗಳಲ್ಲಿ ತೊಡಗಿದ್ದಾರೆ ಎಂದು ಹೇಳಿದರು.

ಮಮತಾ ವಿರೋಧಕ್ಕೆ ಹೊಸ ಆಯಾಮ: ಕೇಂದ್ರದ ಅಧಿಸೂಚನೆಯನ್ನು ತೀವ್ರವಾಗಿ ಖಂಡಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ  ತಮ್ಮ ವಿರೋಧಕ್ಕೆ ಮತ್ತೊಂದು ಆಯಾಮವನ್ನು ಸೇರಿಸಿದ್ದಾರೆ.

ಅಧಿಸೂಚನೆಯ ವ್ಯಾಪ್ತಿಯಿಂದ ಎಮ್ಮೆ ಮತ್ತು ಕೋಣವನ್ನು ಹೊರಗೆ ಇರಿಸಲು ಕೇಂದ್ರ ಯತ್ನಿಸುತ್ತಿದೆ. ಬಿಜೆಪಿಗೆ ನಿಕಟವಾಗಿರುವ ಕೆಲವರು ಎಮ್ಮೆ ಮತ್ತು ಕೋಣದ ಮಾಂಸದ ವ್ಯಾಪಾರ ಮಾಡುತ್ತಿರುವುದೇ ಇದಕ್ಕೆ ಕಾರಣ ಎಂದು ಅವರು ಹೇಳಿದ್ದಾರೆ.

ಬಿಜೆಪಿ ಮುಖಂಡ ರಾಜೀನಾಮೆ: ದನದ ಮಾಂಸದ ಸಂಬಂಧ  ಕೇಂದ್ರದ ನಿಲುವು ವಿರೋಧಿಸಿ ಮೇಘಾಲಯದ ಗಾರೊ ಹಿಲ್ಸ್‌ ಜಿಲ್ಲೆಯ ಬಿಜೆಪಿ ಘಟಕದ ಅಧ್ಯಕ್ಷ ಬರ್ನಾಡ್‌ ರಿಂಪು ಮರಕ್‌ ಅವರು ರಾಜೀನಾಮೆ ನೀಡಿದ್ದಾರೆ.

ಕೇಂದ್ರ ಸರ್ಕಾರಕ್ಕೆ ಮೂರು ವರ್ಷ ತುಂಬಿದ ಸಂದರ್ಭದಲ್ಲಿ ಅವರು ತಮ್ಮ ಹುಟ್ಟೂರಲ್ಲಿ ದನದ ಮಾಂಸದ ಉತ್ಸವ ನಡೆಸುವುದಾಗಿ ಘೋಷಿಸಿದ್ದರು. ಹುದ್ದೆಗೆ ರಾಜೀನಾಮೆ ನೀಡುವಂತೆ ಅವರಿಗೆ ಪಕ್ಷ ಸೂಚಿಸಿತ್ತು ಎಂಬ ವರದಿಗಳೂ ಇವೆ.

‘ಸೌಹಾರ್ದ ಕೆಡಿಸಿದ ಪಾಕ್‌’

ನವದೆಹಲಿ:
ನೆರೆಯ ಎರಡು ದೇಶಗಳ ನಡುವೆ ಮಾತುಕತೆಗೆ ಬೇಕಾದ ವಾತಾವರಣವನ್ನು ಪಾಕಿಸ್ತಾನ ಕೆಡಿಸಿದೆ ಎಂದು ಜೇಟ್ಲಿ ಹೇಳಿದ್ದಾರೆ. ಕಾಶ್ಮೀರದಲ್ಲಿ ಪರಿಸ್ಥಿತಿ ಅಂದುಕೊಂಡದ್ದಕ್ಕಿಂತ ಉತ್ತಮವಾಗಿದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ಎರಡೂ ದೇಶಗಳ ನಡುವಣ ಉದ್ವಿಗ್ನ ಸ್ಥಿತಿ ಶಮನ ಮಾಡಲು ಭಾರತ ಹಲವು ಕ್ರಮಗಳನ್ನು ಕೈಗೊಂಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನದ ಪ್ರಧಾನಿ ನವಾಜ್‌ ಷರೀಫ್‌ ಅವರ ಕುಟುಂಬದ ಕಾರ್ಯಕ್ರಮದಲ್ಲಿಯೂ ಭಾಗವಹಿಸಿದ್ದರು. ಆದರೆ ಪಠಾಣ್‌ಕೋಟ್‌ ಮತ್ತು ಉರಿ ದಾಳಿ ಹಾಗೂ ಭಾರತದ ಯೋಧರ ಶಿರಚ್ಛೇದದ ಮೂಲಕ ಪಾಕಿಸ್ತಾನ ಅದಕ್ಕೆ ಪ್ರತಿಕ್ರಿಯೆ ನೀಡಿತು ಎಂದು ಅವರು ಹೇಳಿದ್ದಾರೆ.

ವಿದೇಶದ ನುಸುಳುಕೋರರು ಮತ್ತು ದೇಶದೊಳಗಿನ ಉಗ್ರರು ಎಷ್ಟೇ ಉಪಟಳ ನೀಡುತ್ತಿದ್ದರೂ ಈ ಪ್ರದೇಶದಲ್ಲಿ ಭಾರತದ ಯೋಧರ ಕೈ ಮೇಲಾಗಿದೆ. ಅವರ ಮೇಲೆ ಭಾರಿ ಒತ್ತಡ ಹೇರುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿವೆ. ಭದ್ರತಾ ಪಡೆಗಳು ಕೈಗೊಂಡ ಕೆಲವು ಕ್ರಮಗಳ ಫಲಿತಾಂಶ ನಿತ್ಯವೂ ಕಾಣಿಸುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry