ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಎಸ್‌ ಮಾಡಲು ದೆಹಲಿಗೆ ಹೋಗಬೇಕೆಂದೇನಿಲ್ಲ

Last Updated 1 ಜೂನ್ 2017, 19:16 IST
ಅಕ್ಷರ ಗಾತ್ರ

–ಎಸ್‌. ಸಂಪತ್‌

**

ಬೆಂಗಳೂರು: ‘ಶ್ರಮ, ಶ್ರದ್ಧೆ ಮತ್ತು ಛಲ ಇದ್ದರೆ ಬೆಂಗಳೂರು ಅಥವಾ ಕೋಲಾರದಲ್ಲಿ ಇದ್ದುಕೊಂಡೇ ಕೇಂದ್ರ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಯಶಸ್ಸು ಕಾಣಬಹುದು ಎಂಬುದಕ್ಕೆ ನಾನೇ ನಿದರ್ಶನ’

ಇದು, ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸಿದ 2016ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯಲ್ಲಿ ಮೊದಲ ರ‍್ಯಾಂಕ್‌ ಗಳಿಸಿರುವ ಕೋಲಾರದ ಕೆ.ಆರ್‌.ನಂದಿನಿ ಅವರ ಸ್ಪಷ್ಟ ನುಡಿ.

‘ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪಾಸಾಗಲು ದೆಹಲಿಯಲ್ಲೇ ಇದ್ದು ವಿಶೇಷ ತರಬೇತಿ ಪಡೆಯಬೇಕು ಎಂದೇನಿಲ್ಲ. ಏಕಾಗ್ರತೆಯಿಂದ ಅಭ್ಯಾಸ ಮಾಡಿದರೆ ನಾವಿರುವ ಊರಿನಿಂದಲೇ ಈ ಸಾಧನೆ ಮಾಡಬಹುದು. ನಾನು ಸತತ 10 ತಿಂಗಳು ಬೆಂಗಳೂರಿನಲ್ಲಿಯೇ ಇದ್ದು ಅಧ್ಯಯನ ನಡೆಸಿ ಈ ಯಶಸ್ಸು ಪಡೆದಿದ್ದೇನೆ’ ಎನ್ನುತ್ತಾರೆ ಅವರು.

ಹರಿಯಾಣದ ಫರೀದಾಬಾದ್‌ನ ನ್ಯಾಷನಲ್‌ ಅಕಾಡೆಮಿ ಆಫ್‌ ಕಸ್ಟಮ್ಸ್‌, ಎಕ್ಸೈಸ್‌ ಅಂಡ್‌ ನಾರ್ಕೊಟಿಕ್ಸ್‌ನಲ್ಲಿ ತರಬೇತಿ ನಿರತರಾಗಿರುವ ಅವರು ದೂರವಾಣಿ ಮೂಲಕ ‘ಪ್ರಜಾವಾಣಿ’ಗೆ ಸಂದರ್ಶನ ನೀಡಿದರು.

* ಮೊದಲರ‍್ಯಾಂಕ್ಬಂದಿರುವುದಕ್ಕೆ ಹೇಗೆನ್ನಿಸುತ್ತಿದೆ?
ನಾನು ನಿರೀಕ್ಷಿಸದೇ ಇದ್ದ ಮೊದಲ ರ‍್ಯಾಂಕ್ಬಂದಿರುವುದರಿಂದ ತುಂಬಾ ಖುಷಿಯಾಗಿದೆ. ಇದರಿಂದ ಜವಾಬ್ದಾರಿಯೂ ಹೆಚ್ಚಾಗಿದೆ.

* ನಿಮ್ಮ ಸಾಧನೆಗೆ ಮನೆ ಮತ್ತು ಕೋಲಾರದ ವಾತಾವರಣ ಹೇಗೆ ಸಹಕಾರಿ ಆಯಿತು?
ಮೊದಲಿನಿಂದಲೂ ಮನೆಯಲ್ಲಿ ನನಗೆ ಪೂರಕ ವಾತಾವರಣ ಇತ್ತು. ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಎಂಬಂತೆ ನನ್ನ ಈ ಸಾಧನೆಗೆ ಅಮ್ಮನ (ವಿಮಲಾ) ಪ್ರೋತ್ಸಾಹವೇ ಕಾರಣ. ಶಿಕ್ಷಕರಾದ ಅಪ್ಪ (ಕೆ.ಆರ್‌.ರಮೇಶ್‌) ಅಂತೂ ನನ್ನ ಈ ಸಾಧನೆಯ ಬೆನ್ನೆಲುಬು.

ಕೋಲಾರ ಜಿಲ್ಲೆಯ ವಾತಾವರಣವೂ ನನ್ನ ಈ ಸಾಧನೆಗೆ ಪ್ರೇರಣೆ ನೀಡಿದೆ. ಎಲ್ಲರಿಗೂ ಗೊತ್ತಿರುವಂತೆ ಕೋಲಾರದಲ್ಲಿ ನೀರಿನ ಸಮಸ್ಯೆ ಹೆಚ್ಚು. ಕಷ್ಟಪಟ್ಟು ದುಡಿದರೆ ಮಾತ್ರ ಜೀವನ ನಡೆಸಲು ಸಾಧ್ಯ. ಓದಿನಿಂದಲೇ ಏನಾದರೂ ಸಾಧಿಸಬಹುದು ಎಂಬುದನ್ನು ಅರಿತು ವ್ಯಾಸಂಗ ಮಾಡಿದೆ.

* ಐಎಎಸ್‌ ಅಧಿಕಾರಿ ಆಗಬೇಕು ಎಂಬ ಗುರಿ ಯಾವಾಗಿನಿಂದ ಇತ್ತು?
ಇದು ನನ್ನ ಬಾಲ್ಯದ ಕನಸು. ಐದನೇ ತರಗತಿಯಲ್ಲಿ ಇದ್ದಾಗಲೇ ಐಎಎಸ್‌ ಅಧಿಕಾರಿ ಆಗಬೇಕು ಎನಿಸಿತ್ತು. ಜಿಲ್ಲೆಯ ವಿವಿಧೆಡೆ ಸಾಕ್ಷರತಾ ಕಾರ್ಯಕ್ರಮಗಳು ನಡೆಯುತ್ತಿದ್ದಾಗ ಅಪ್ಪ ನನ್ನನ್ನು ಕರೆದುಕೊಂಡು ಹೋಗುತ್ತಿದ್ದರು. ಕೆಲ ಗ್ರಾಮಗಳಲ್ಲಿ ವಾಸ್ತವ್ಯವನ್ನೂ ಮಾಡಬೇಕಾಗುತ್ತಿತ್ತು. ಈ ಕಾರ್ಯಕ್ರಮಗಳಲ್ಲಿ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ಇತರ ಹಿರಿಯ ಅಧಿಕಾರಿಗಳು ಭಾಗವಹಿಸುತ್ತಿದ್ದರು.  ಅವರಂತೆಯೇ ಅಧಿಕಾರಿ ಆಗಬೇಕು ಎಂಬ ಆಸೆ ಆಗಲೇ ಚಿಗುರೊಡೆದಿತ್ತು. ಅದಕ್ಕೆ ಅಪ್ಪ, ಅಮ್ಮ ನೀರೆರೆದು ಪ್ರೋತ್ಸಾಹಿಸಿದರು.

* ನಿಮ್ಮ ಯುಪಿಎಸ್‌ಸಿ ಪರೀಕ್ಷಾ ಪಯಣ ಹೇಗಿತ್ತು?
ಬೆಂಗಳೂರಿನ ಎಂ.ಎಸ್‌. ರಾಮಯ್ಯ ಕಾಲೇಜಿನಲ್ಲಿ ಸಿವಿಲ್‌ ಎಂಜಿನಿಯರಿಂಗ್‌ ಓದುವಾಗಲೇ ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸಿದ್ದೆ. ನನಗೆ ಕನ್ನಡ ಅಚ್ಚುಮೆಚ್ಚಿನ ವಿಷಯ. ಹಾಗಾಗಿ ಕನ್ನಡಕ್ಕೆ ಒತ್ತು ನೀಡಿ, ಪ್ರೊ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ಬಳಿ ಕನ್ನಡ ವಿಷಯದ ತರಬೇತಿ ಪಡೆದೆ. ನಂತರ ಪಿಡಬ್ಲ್ಯುಡಿಯಲ್ಲಿ ಕೆಲಕಾಲ ಸೇವೆ ಸಲ್ಲಿಸಿದ್ದೆ. ಈ ಅವಧಿಯಲ್ಲಿ ದೆಹಲಿಯ ಕರ್ನಾಟಕ ಭವನದಲ್ಲಿ (ಸಹಾಯಕ ಎಂಜಿನಿಯರ್‌ ಆಗಿ) ಕಾರ್ಯ ನಿರ್ವಹಿಸಿದ್ದೆ. ಆಗ ದೆಹಲಿಯ ತರಬೇತಿ ಕೇಂದ್ರವೊಂದರಲ್ಲಿ ಕೆಲ ತಿಂಗಳು ತರಬೇತಿಯನ್ನೂ ಪಡೆದೆ. ಬಳಿಕ ಯುಪಿಎಸ್‌ಸಿ ಪರೀಕ್ಷೆಗಳನ್ನು ಬರೆಯಲು ಆರಂಭಿಸಿದೆ.

2013, 2014ರಲ್ಲಿ ಆಯ್ಕೆ ಆಗಲಿಲ್ಲ. 2015ರಲ್ಲಿ 849ನೇ ರ್‍ಯಾಂಕ್‌ ಬಂತು. ಐಆರ್‌ಎಸ್‌ಗೆ (ಭಾರತೀಯ ಕಂದಾಯ ಸೇವೆ) ಆಯ್ಕೆಯಾದೆ.  ಆದರೂ ಐಎಎಸ್‌ ಆಗಬೇಕು ಎನ್ನುವ ಪ್ರಯತ್ನ ಬಿಡಲಿಲ್ಲ. ಬೆಂಗಳೂರಿನ ವಿಜಯನಗರದ ‘ಇನ್‌ಸೈಟ್‌ ಐಎಎಸ್‌’ ಸಂಸ್ಥೆಯಲ್ಲಿ 10 ತಿಂಗಳು ಅಧ್ಯಯನ ನಡೆಸಿದೆ. ಇಲ್ಲಿ ಯಾವುದೇ ಕೋಚಿಂಗ್‌ ಕೊಡುವುದಿಲ್ಲ. ಬದಲಿಗೆ ಅಗತ್ಯ ಅಧ್ಯಯನ ಸಾಮಗ್ರಿಯಷ್ಟೇ ದೊರೆಯುತ್ತದೆ. ಏಕಾಂತದಿಂದ ಅಧ್ಯಯನ ನಡೆಸಲು ಅನುಕೂಲಕರ ವಾತಾವರಣವೂ ಇಲ್ಲಿದೆ. ಅದರ ಮುಖ್ಯಸ್ಥ ವಿನಯ್‌ ಕುಮಾರ್‌ ಅವರು ಅಗತ್ಯ ಪ್ರೋತ್ಸಾಹ ಮತ್ತು ಮಾರ್ಗದರ್ಶನ ನೀಡಿದರು.

* ಕೆಲ ವರ್ಷದಿಂದ ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಗಳಲ್ಲಿ  ಆಯ್ಕೆಯಾಗುತ್ತಿರುವವರಲ್ಲಿ ರಾಜ್ಯದವರ ಸಂಖ್ಯೆ ಹೆಚ್ಚುತ್ತಿದೆ. ಇದಕ್ಕೆ ಕಾರಣವೇನು?
ಸಹಜವಾಗಿಯೇ, ಉನ್ನತ ಶಿಕ್ಷಣ ಪಡೆಯುತ್ತಿರುವವರ ಪ್ರಮಾಣ ಹೆಚ್ಚುತ್ತಿದೆ.  ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಹೆಚ್ಚಿನ ಜಾಗೃತಿಯೂ ಮೂಡುತ್ತಿದೆ. ಅಲ್ಲದೆ ಪ್ರತಿ ಬಾರಿ ರಾಜ್ಯದಿಂದ ಆಯ್ಕೆಯಾದವರ ಬಗ್ಗೆ ತಿಳಿದು, ಅವರಿಂದ ಪ್ರೇರಿತರಾಗಿ  ಹಲವರು ಪರೀಕ್ಷೆ ಬರೆಯುತ್ತಿದ್ದಾರೆ. ಅಲ್ಲದೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಗಳು ತೆರೆದಿವೆ. ಇದರಿಂದ ಸ್ಪರ್ಧಿಸುವವರು, ಯಶಸ್ಸು ಸಾಧಿಸುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.

* ಇತ್ತೀಚಿನ ಪರೀಕ್ಷೆಗಳಲ್ಲಿ ಎಂಜಿನಿಯರಿಂಗ್‌, ವೈದ್ಯಕೀಯ ಹಿನ್ನೆಲೆಯ ಅಭ್ಯರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ  ಆಯ್ಕೆಯಾಗಲು  ಕಾರಣವೇನು?
ಯುಪಿಎಸ್‌ಸಿ ಪಠ್ಯಕ್ರಮ ಮತ್ತು ಪರೀಕ್ಷಾ ವಿಧಾನದಲ್ಲಿ ಕೆಲ ಬದಲಾವಣೆ ಆಗಿರುವುದೂ ಇದಕ್ಕೆ ಒಂದು ಕಾರಣ ಇರಬಹುದು. ಎಂಜಿನಿಯರಿಂಗ್‌ ಮತ್ತು ವೈದ್ಯಕೀಯ  ಹಿನ್ನೆಲೆ ಇರುವವರಿಗೆ ಗಣಿತ, ವಿಜ್ಞಾನ, ಇಂಗ್ಲಿಷ್‌ ಭಾಷೆ ಮತ್ತು ಸಂವಹನದ ಮೇಲೆ ಹಿಡಿತ ಇರುತ್ತದೆ. ಇವು ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಹಾಗೂ ಕಲಾ ವಿಭಾಗದವರಿಗೆ ಸ್ವಲ್ಪ ಕಷ್ಟವಾಗಬಹುದು. ಆದರೆ ಛಲದಿಂದ ಓದಿದರೆ ಯಾವುದೂ ಅಸಾಧ್ಯವಲ್ಲ ಎಂಬುದನ್ನು ಹಲವು ಕನ್ನಡಿಗರು ತೋರಿಸಿದ್ದಾರೆ.

* ಯುಪಿಎಸ್‌ಸಿ ಪರೀಕ್ಷೆಗಳಲ್ಲಿ  ಪುರುಷರೇ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಲು ಕಾರಣವೇನು?
ಈ ಪರೀಕ್ಷೆಗಳಲ್ಲಿ ಆಯ್ಕೆಯಾಗುವವರಲ್ಲಿ ಮಹಿಳೆಯರ ಸಂಖ್ಯೆ ಕ್ರಮೇಣ ಹೆಚ್ಚುತ್ತಿದೆ. ಇದು ಒಳ್ಳೆಯ ಬೆಳವಣಿಗೆ. ಆದರೆ ಪುರುಷರಷ್ಟು ಅಲ್ಲ ಎಂಬುದನ್ನು ಒಪ್ಪುತ್ತೇನೆ. ಇದಕ್ಕೆ ಸಮಾಜದಲ್ಲಿ ಮಹಿಳೆಯರಿಗಿರುವ ಕಟ್ಟುಪಾಡುಗಳು ಪ್ರಮುಖ ಕಾರಣ.

* ಯುಪಿಎಸ್‌ಸಿ ಪರೀಕ್ಷೆ ಬರೆಯುವ ರಾಜ್ಯದ ಅಭ್ಯರ್ಥಿಗಳಿಗೆ ನಿಮ್ಮ ಕಿವಿಮಾತು?
ಗ್ರಾಮೀಣ ಪ್ರದೇಶದ ರೈತಾಪಿ ಕುಟುಂಬದಿಂದ ಬಂದ ಮಧ್ಯಮ ವರ್ಗದ ಅಭ್ಯರ್ಥಿಗಳಿಗೆ ಆರಂಭದಲ್ಲಿ ಈ ಪರೀಕ್ಷೆಗಳ ಬಗ್ಗೆ ಮಾಹಿತಿ ಗೊತ್ತಿರದ ಕಾರಣಕ್ಕೆ ಕಠಿಣ ಎನಿಸುತ್ತವೆ. ಅದಕ್ಕೆ ಕೆಲ ಕಾಲ ಸೂಕ್ತ ಮಾರ್ಗದರ್ಶನ ಪಡೆಯುವುದು ಒಳಿತು. ತರಬೇತಿ ಕೇಂದ್ರಗಳಿಗೆ ಹೋಗಿ ಪರೀಕ್ಷಾ ತಯಾರಿ ಬಗ್ಗೆ ಮಾಹಿತಿ ಪಡೆದುಕೊಳ್ಳುವುದು ಒಳ್ಳೆಯದು.  ಜತೆಗೆ ಅಧ್ಯಯನ ಸಾಮಗ್ರಿಗಳನ್ನು ಸಂಗ್ರಹಿಸುವುದನ್ನು ಕಲಿಯಬೇಕು. ಎಲ್ಲವನ್ನು ಸಿದ್ಧವಾಗಿಟ್ಟುಕೊಂಡು ಓದುವುದನ್ನೇ ಕಾಯಕ ಮಾಡಿಕೊಳ್ಳಬೇಕು. ಅದಕ್ಕೆ ಪ್ರತಿಫಲ ಸಿಕ್ಕೇಸಿಗುತ್ತದೆ ಎಂಬುದಕ್ಕೆ ನಾನೇ ಉದಾಹರಣೆ.

**

ಪ್ರಜಾವಾಣಿಗೆ ಸಂದರ್ಶನ ನೀಡ್ತಿದ್ದೇನೆ...

‘‘ನನ್ನ ತಾಯ್ನಾಡಿನ ‘ಪ್ರಜಾವಾಣಿ’ ಪತ್ರಿಕೆಗೆ ಸಂದರ್ಶನ ನೀಡುತ್ತಿದ್ದೇನೆ. ಅದನ್ನು ಮುಗಿಸಿದ ನಂತರವೇ ನಿಮ್ಮೊಂದಿಗೆ ಮಾತನಾಡುವೆ. ದಯವಿಟ್ಟು ಕಾಯುತ್ತಿರಿ” ಎನ್ನುತ್ತಲೇ ನಂದಿನಿ ತಮ್ಮ ಮಾತನ್ನು ಮುಂದುವರಿಸಿದರು.

ಗುರುವಾರ ಬೆಳಗ್ಗೆ ದೂರವಾಣಿಯ ಮೂಲಕ ಪ್ರಜಾವಾಣಿಗೆ ಫರೀದಾಬಾದ್‌ನಿಂದ ಸಂದರ್ಶನ ನೀಡುತ್ತಿದ್ದಾಗ ಈ ಪ್ರಸಂಗ ನಡೆಯಿತು. ನಂದಿನಿ ಅವರ  ಸಂದರ್ಶನಕ್ಕಾಗಿ ಕಾಯುತ್ತಿದ್ದ ರಾಷ್ಟ್ರೀಯ ಮಾಧ್ಯಮ ಪ್ರತಿನಿಧಿಗಳು ಆಗಾಗ ಮಾತಿನ ನಡುವೆ ತಮ್ಮತ್ತ ಸೆಳೆಯಲು ಪ್ರಯತ್ನಿಸುತ್ತಿದ್ದರು. ಅವರಿಗೆ ಕಾಯುವಂತೆ ಹೇಳಿದ ನಂದಿನಿ ಪ್ರಜಾವಾಣಿಯೊಂದಿಗೆ ಮಾತು ಮುಂದುವರಿಸಿದರು.

ತಾಯ್ನಾಡಿನ ಸೆಳೆತ ಮತ್ತು ಪ್ರಜಾವಾಣಿಯ ಕುರಿತ ಅಭಿಮಾನ ಅವರ ಮಾತಿನಲ್ಲಿ ಗಟ್ಟಿಯಾಗಿ ಧ್ವನಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT