ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾರಿಸ್‌ ಒಪ್ಪಂದದಿಂದ ಅಮೆರಿಕ ಹಿಂದಕ್ಕೆ?

Last Updated 1 ಜೂನ್ 2017, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಪ್ಯಾರಿಸ್‌ ಹವಾಮಾನ ಒಪ್ಪಂದದಿಂದ ಅಮೆರಿಕ ಹಿಂದೆ ಸರಿಯುವುದು ಬಹುತೇಕ ಖಚಿತವಾಗಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಶುಕ್ರವಾರ ಮಧ್ಯಾಹ್ನ 12.30ಕ್ಕೆ ಈ ಬಗ್ಗೆ ಅಧಿಕೃತವಾಗಿ ಪ್ರಕಟಿಸಲಿದ್ದಾರೆ.

ಇದರಿಂದ ಜಾಗತಿಕ ತಾಪಮಾನದ ವಿರುದ್ಧ ನಡೆಯುತ್ತಿರುವ ಅಂತರರಾಷ್ಟ್ರೀಯ ಮಟ್ಟದ ಹೋರಾಟದಲ್ಲಿ ಅಮೆರಿಕ ಏಕಾಂಗಿಯಾಗಬಹುದು ಎಂದು ವಿಶ್ಲೇಷಿಸಲಾಗಿದೆ.

‘ಪ್ಯಾರಿಸ್‌ ಹವಾಮಾನ ಒಪ್ಪಂದದಿಂದ  ಹಿಂದೆ ಸರಿಯಲು ಟ್ರಂಪ್‌ ನಿರ್ಧರಿಸಿದ್ದಾರೆ. ಈ ಬಗ್ಗೆ ಟ್ರಂಪ್‌ ಆಡಳಿತ ವಿಶ್ವದ ನಾಯಕರಿಗೆ ಮಾಹಿತಿ ನೀಡುತ್ತಿದೆ’ ಎಂದು ಆ್ಯಕ್ಸಿಸ್‌ ಮತ್ತು ಸಿಬಿಎಸ್ ನ್ಯೂಸ್‌ ವರದಿ ಮಾಡಿವೆ.

ಪ್ಯಾರಿಸ್‌ ಹವಾಮಾನ ಒಪ್ಪಂದದಿಂದ ಹಿಂದೆ ಸರಿಯುವುದಾಗಿ ಚುನಾವಣಾ ಪ್ರಚಾರದ ಸಂದರ್ಭದಲ್ಲೇ ಟ್ರಂಪ್‌ ಹೇಳಿದ್ದರು. ಜತೆಗೆ ಹವಾಮಾನ ಬದಲಾವಣೆ ಎನ್ನುವುದೇ ‘ಹುಸಿ’ ಎಂದು ಟೀಕಿಸಿದ್ದರು.

ಕಳೆದ ವಾರ ಸಿಸಿಲಿಯಲ್ಲಿ ನಡೆದ ಜಿ–7 ಶೃಂಗಸಭೆಯಲ್ಲೂ ಮಿತ್ರ ರಾಷ್ಟ್ರಗಳ ಒತ್ತಡಕ್ಕೂ ಟ್ರಂಪ್ ಮಣಿಯದೇ ತಮ್ಮದೇ ಆದ ಅಭಿಪ್ರಾಯಗಳನ್ನು ಮಂಡಿಸಿದ್ದರು.

ಐತಿಹಾಸಿಕ ಪ್ಯಾರಿಸ್‌ ಹವಾಮಾನ ಒಪ್ಪಂದಕ್ಕೆ 195 ರಾಷ್ಟ್ರಗಳು 2015ರಲ್ಲಿ ಸಹಿ ಹಾಕಿವೆ. ಸಿರಿಯಾ ಮತ್ತು ನಿಕರಗುವಾ ರಾಷ್ಟ್ರಗಳು ಮಾತ್ರ ಸಹಿ ಹಾಕಿಲ್ಲ. ಈ ಒಪ್ಪಂದದಿಂದ ಹವಾಮಾನ ಬದಲಾವಣೆ ತಡೆಯಲು ಸಾಧ್ಯವಿಲ್ಲ ಮತ್ತು ಒಪ್ಪಂದವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸದ ರಾಷ್ಟ್ರಗಳ ವಿರುದ್ಧ ಕ್ರಮಕೈಗೊಳ್ಳುವ ಕುರಿತು ಯಾವುದೇ ಅಂಶಗಳನ್ನು ಸೇರಿಸಿಲ್ಲ ಎಂದು ನಿಕರಗುವಾ ಅಭಿಪ್ರಾಯಪಟ್ಟಿತ್ತು.

ಕಾರ್ಬನ್‌ ಹೊರಸೂಸುವಿಕೆಯನ್ನು ನಿಯಂತ್ರಿಸುವ ಮೂಲಕ 1.5 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಹೆಚ್ಚುವುದನ್ನು ತಡೆಯಬೇಕು. ಇದರಿಂದ ಕೈಗಾರಿಕಾ ಕ್ರಾಂತಿ ನಡೆಯುವ ಮುನ್ನ ಇದ್ದ ವಾತಾವರಣ ಮರಳಬೇಕು ಎನ್ನುವ ಆಶಯವನ್ನು ಪ್ಯಾರಿಸ್‌ ಹವಾಮಾನ ಒಪ್ಪಂದದಲ್ಲಿ ತಿಳಿಸಲಾಗಿತ್ತು.

ಟ್ರಂಪ್‌  ನಿರ್ಧಾರವನ್ನು ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್‌ ಟೀಕಿಸಿದ್ದಾರೆ.

‘ರಾಜಕಾರಣಿಗಳು ಬರುತ್ತಾರೆ, ಹೋಗುತ್ತಾರೆ. ಆದರೆ, ಮೌಲ್ಯಗಳು ಮತ್ತು ವಿಶ್ವದ ಸ್ಥಿರತೆಗೆ  ಅವರು ನೀಡುವ ಕೊಡುಗೆ ಮಹತ್ವದ್ದಾಗಿರುತ್ತದೆ. ಪ್ಯಾರಿಸ್‌ ಹವಾಮಾನ ಒಪ್ಪಂದದಿಂದ ದೊರೆಯುವ ಆರ್ಥಿಕ ಅವಕಾಶಗಳನ್ನು ಸಹ ಟ್ರಂಪ್‌ ಆಡಳಿತ ಕಡೆಗಣಿಸುತ್ತಿರುವುದು ಮೂರ್ಖತನವಾಗಿದೆ. ನಾವು ಎಲ್ಲರೂ ಪ್ಯಾರಿಸ್‌ ಒಪ್ಪಂದಕ್ಕೆ ಸಹಮತ ವ್ಯಕ್ತಪಡಿಸಿದರೆ, ಟ್ರಂಪ್‌ ಈ ಒಪ್ಪಂದದ ಒಂದು ಚೂರು ಭಾಗವನ್ನು ಸಹ ಅರ್ಥ ಮಾಡಿಕೊಳ್ಳದೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ’ ಎಂದು ಲೇವಡಿ ಮಾಡಿದ್ದಾರೆ.

ಹವಾಮಾನ ಒಪ್ಪಂದಕ್ಕೆ ಬದ್ಧ: ಚೀನಾ
ಬರ್ಲಿನ್‌:
ಪ್ಯಾರಿಸ್‌ ಹವಾಮಾನ ಒಪ್ಪಂದವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುವುದು ಎಂದು ಚೀನಾ ಪ್ರಧಾನಿ ಲೀ ಕೆ–ಖಿಯಾಂಗ್‌ ಹೇಳಿದ್ದಾರೆ.

‘ಇತರ ರಾಷ್ಟ್ರಗಳ ಸಹಕಾರದೊಂದಿಗೆ ಪ್ಯಾರಿಸ್‌ ಒಪ್ಪಂದದಲ್ಲಿನ ನಿರ್ಣಯಗಳನ್ನು ಚೀನಾ ಜಾರಿಗೊಳಿಸಲಿದೆ’ ಎಂದು  ಜರ್ಮನಿಯ ಚಾನ್ಸಲರ್‌ ಏಂಜೆಲಾ ಮರ್ಕೆಲ್‌ ಜತೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಲೀ ತಿಳಿಸಿದರು.

‘ಒಂದು ಹಂತಕ್ಕೆ ಚೀನಾ ಅಭಿವೃದ್ಧಿ ಸಾಧಿಸಿದ ನಂತರ ಸುಸ್ಥಿರವಾದ ಮಾದರಿಗಳು ಅಗತ್ಯವಾಗುತ್ತವೆ. ಅಂದರೆ  ಪರಿಸರ ಸಂರಕ್ಷಿಸುವ ಮೂಲಕವೇ ಅಭಿವೃದ್ಧಿಗೆ ಆದ್ಯತೆ ನೀಡಬೇಕಾಗುತ್ತದೆ’ ಎಂದು ತಿಳಿಸಿದರು.

ಪರಿಣಾಮ ಏನು?
* ಅಮೆರಿಕದ ವಿಶ್ವಾಸರ್ಹತೆಗೆ ಧಕ್ಕೆ
* ರಾಜಕೀಯವಾಗಿ ಅಮೆರಿಕ ಏಕಾಂಗಿಯಾಗುವ ಸಾಧ್ಯತೆ
* ಜಾಗತಿಕ ನಾಯಕತ್ವದ ಪಟ್ಟವನ್ನು ಚೀನಾಗೆ ಬಿಟ್ಟುಕೊಡುವ ಸಾಧ್ಯತೆ
* ಐರೋಪ್ಯ ಒಕ್ಕೂಟ ಮತ್ತು ಚೀನಾ  ಸಂಬಂಧಗಳಲ್ಲಿ ಸುಧಾರಣೆ
* ಅಮೆರಿಕದ ಆರ್ಥಿಕತೆ ಮೇಲೆಯೂ ಪರಿಣಾಮ
* ಒಪ್ಪಂದದಿಂದ ಹಿಂದೆ ಸರಿದ ಬಳಿಕ ತಾಪಮಾನ ನಿಯಂತ್ರಣಕ್ಕೆ ಅಮೆರಿಕ ಯಾವುದೇ ಕ್ರಮಕೈಗೊಳ್ಳದಿದ್ದರೆ ಜಾಗತಿಕ ತಾಪಮಾನ 0.3 ಡಿಗ್ರಿ ಸೆಲ್ಸಿಯಸ್‌ ಹೆಚ್ಚಳವಾಗುವ ಸಾಧ್ಯತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT