ಉನ್ನತಾಧಿಕಾರಿಗಳ ವೇತನ ಕಡಿತ ಉದ್ಯೋಗ ಕಡಿತಕ್ಕೆ ಪರಿಹಾರ

7

ಉನ್ನತಾಧಿಕಾರಿಗಳ ವೇತನ ಕಡಿತ ಉದ್ಯೋಗ ಕಡಿತಕ್ಕೆ ಪರಿಹಾರ

Published:
Updated:
ಉನ್ನತಾಧಿಕಾರಿಗಳ ವೇತನ ಕಡಿತ ಉದ್ಯೋಗ ಕಡಿತಕ್ಕೆ ಪರಿಹಾರ

ಬೆಂಗಳೂರು: ‘ಉನ್ನತ ಅಧಿಕಾರಿಗಳು ತಮ್ಮ  ವೇತನದಲ್ಲಿ ಕಡಿತ ಮಾಡಲು ಸಮ್ಮತಿಸಿದರೆ, ಸಾಫ್ಟ್‌ವೇರ್‌ ಉದ್ದಿಮೆಗಳಲ್ಲಿನ ಯುವ ಸಮೂಹದ ಉದ್ಯೋಗ ಕಡಿತ ತಪ್ಪಿಸಬಹುದು’ ಎಂದು ಇನ್ಫೊಸಿಸ್‌ ಸಹ ಸ್ಥಾಪಕ ಎನ್‌.ಆರ್‌.ನಾರಾಯಣ ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

ಐ.ಟಿ ಉದ್ಯಮದಲ್ಲಿ ಚುರುಕಿನ ನಿರ್ಧಾರ ತೆಗೆದುಕೊಳ್ಳುವ ಜಾಣ ನಾಯಕರಿದ್ದಾರೆ. ಉದ್ಯೋಗ ಕಡಿತ ಸಮಸ್ಯೆ ಪರಿಹರಿಸಲು ಅವರಿಗೆ ಕಷ್ಟವೇನೂ ಆಗಲಾರದು. ಹಿರಿಯ ಅಧಿಕಾರಿಗಳು ತಮ್ಮ ವೇತನ ಕಡಿತದಂತಹ ಕೆಲ ಸಣ್ಣ –ಪುಟ್ಟ ಹೊಂದಾಣಿಕೆಗಳಿಗೆ ಮನಸ್ಸು ಮಾಡಿದರೆ ಈ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿದೆ ಎನ್ನುವ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದಾರೆ.

ಮಾಹಿತಿ ತಂತ್ರಜ್ಞಾನ ಉದ್ಯಮದಲ್ಲಿ ಸದ್ಯಕ್ಕೆ ನಡೆಯುತ್ತಿರುವ ಉದ್ಯೋಗ ಕಡಿತ ವಿದ್ಯಮಾನ ಕುರಿತು ಅವರು ಖಾಸಗಿ ಟೆಲಿವಿಷನ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

‘ಸಾಫ್ಟ್‌ವೇರ್‌ ಉದ್ದಿಮೆಯಲ್ಲಿ ಉದ್ಯೋಗ ಕಡಿತ  ವಿದ್ಯಮಾನವು ಹೊಸದೇನಲ್ಲ. ಈ ಹಿಂದೆ 2001 ಮತ್ತು 2008ರಲ್ಲಿಯೂ ಇಂತಹ ಈ ಸಮಸ್ಯೆ ಎದುರಾಗಿತ್ತು. ಆ ದಿನಗಳಲ್ಲೂ  ಈ ಬಿಕ್ಕಟ್ಟಿಗೆ ಸುಲಭವಾಗಿ ಪರಿಹಾರ ಕಂಡುಕೊಳ್ಳಲಾಗಿತ್ತು. ಈಗಲೂ ಹಾಗೆ ಮಾಡಬಹುದಾಗಿದೆ. ಹೀಗಾಗಿ ಯಾರೊಬ್ಬರೂ ಆತಂಕ ಪಡುವ ಅಗತ್ಯವಿಲ್ಲ’ ಎಂದೂ ಅವರು  ಕಿವಿಮಾತು ಕೇಳಿದ್ದಾರೆ.

ಬದ್ಧತೆ: ಇನ್ಫೊಸಿಸ್‌ ಸಂಸ್ಥೆಯು ಉದ್ಯೋಗ ಕಡಿತ ಸಮಸ್ಯೆಯನ್ನು ಹೇಗೆ ನಿಭಾಯಿಸಿತು ಎನ್ನುವುದನ್ನು ಅವರು  ಉದಾಹರಣೆ ಸಹಿತ  ವಿವರಿಸಿದ್ದಾರೆ.

‘2001ರಲ್ಲಿ ಐ.ಟಿ ಮಾರುಕಟ್ಟೆ ಕುಸಿತ ಕಂಡಿದ್ದಾಗ ಇನ್ಪೊಸಿಸ್‌ ಇದೇ ಕ್ರಮ ಅನುಸರಿಸಿತ್ತು. ಯುವ ಸಮೂಹಕ್ಕೆ ಉದ್ಯೋಗ ಭದ್ರತೆ ಒದಗಿಸಲು ಕಂಪೆನಿಯ ಹಿರಿಯ ಅಧಿಕಾರಿಗಳು ವೇತನ ಕಡಿತದ ತ್ಯಾಗಕ್ಕೆ ಒಪ್ಪಿಕೊಂಡಿದ್ದರು.

‘ಅಂತಹ ಪರಿಸ್ಥಿತಿಯಲ್ಲಿ ಬಹಳಷ್ಟು ಕಂಪೆನಿಗಳು ಹೊಸ ನೇಮಕಾತಿಯನ್ನು ಮುಂದೂಡುತ್ತಿದ್ದವು. ಆದರೆ, ಇನ್ಫೊಸಿಸ್‌ 1,500 ಎಂಜಿನಿಯರ್‌ಗಳಿಗೆ ಉದ್ಯೋಗ ಕಲ್ಪಿಸಿತ್ತು. ಆ ಮೂಲಕ ಯುವಸಮೂಹಕ್ಕೆ ಉದ್ಯೋಗ ಒದಗಿಸುವ  ಬದ್ಧತೆಯನ್ನು ಕಂಪೆನಿಯು  ಬಿಕ್ಕಟ್ಟಿನ ದಿನಗಳಲ್ಲೂ ಕಾಯ್ದುಕೊಂಡಿತ್ತು’ ಎಂದು ನೆನಪಿಸಿಕೊಂಡಿದ್ದಾರೆ.

‘ಐ.ಟಿ ವಹಿವಾಟು ವಿಸ್ತರಣೆಗೆ ಇರುವ ಹೊಸ ಅವಕಾಶಗಳನ್ನೂ ಉದ್ದಿಮೆ ಕಂಡುಕೊಳ್ಳಬೇಕು. ತಮ್ಮ ಕಾರ್ಯಕ್ಷಮತೆ ಸಾಬೀತುಪಡಿಸಲು ಒಂದು ವರ್ಷದ ಅವಕಾಶ ನೀಡಬೇಕು. ಒಂದೊಮ್ಮೆ ವಿಫವಾದರೆ ಬೇರೆ ಉದ್ಯೋಗ ನೋಡಿಕೊಳ್ಳುವುದು ಅನಿವಾರ್ಯವಾಗಲಿದೆ ಎನ್ನುವುದನ್ನು ಅವರಿಗೆ ಮುಂಚಿತವಾಗಿಯೇ ಮನದಟ್ಟು ಮಾಡಿಕೊಡಬೇಕು’ ಎಂದು ಅವರು ಹೇಳಿದ್ದಾರೆ.

‘ದುಡಿಯುವ ವ್ಯಕ್ತಿಯೊಬ್ಬನನ್ನು ಹಠಾತ್ತಾಗಿ ಮನೆಗೆ ಕಳುಹಿಸುವುದು ನ್ಯಾಯೋಚಿತವಲ್ಲ. ದುಡಿಯುವ ವ್ಯಕ್ತಿಯ ಮೇಲೆಯೇ  ಕುಟುಂಬದ ಸದಸ್ಯರೆಲ್ಲ ಅವಲಂಬಿತರಾಗಿರುತ್ತಾರೆ. ಈ ಕಾರಣಕ್ಕೆ ಉದ್ಯೋಗ ಭದ್ರತೆಯ ಬಗ್ಗೆ ಆತಂಕ ಮೂಡಿಸುವುದೂ ಸಮಂಜಸವಲ್ಲ. ಉದ್ಯಮದ ಮುಖಂಡರು ಸಮಸ್ಯೆಗೆ ಸಮಂಜಸ ಪರಿಹಾರ ಕಂಡುಕೊಳ್ಳಲು ಮನಸ್ಸು ಮಾಡಬೇಕು’ ಎಂದೂ ಅವರು ಸಲಹೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry