ಕೂಡುಂಕುಳಂ: ಒಪ್ಪಂದಕ್ಕೆ ಸಹಿ

7

ಕೂಡುಂಕುಳಂ: ಒಪ್ಪಂದಕ್ಕೆ ಸಹಿ

Published:
Updated:
ಕೂಡುಂಕುಳಂ: ಒಪ್ಪಂದಕ್ಕೆ ಸಹಿ

ಸೇಂಟ್‌ ಪೀಟರ್ಸ್‌ಬರ್ಗ್‌:  ತಮಿಳುನಾಡಿನ ಕೂಡುಂಕುಳಂದಲ್ಲಿರುವ ಪರಮಾಣು ವಿದ್ಯುತ್‌ ಸ್ಥಾವರದಲ್ಲಿ 5 ಮತ್ತು 6ನೇ ಘಟಕ ಸ್ಥಾಪನೆ ಸಂಬಂಧದ ಒಪ್ಪಂದಕ್ಕೆ ಭಾರತ ಮತ್ತು ರಷ್ಯಾ  ಗುರುವಾರ ಸಹಿ ಹಾಕಿವೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರ ನಡುವೆ ಉಭಯ ರಾಷ್ಟ್ರಗಳ ವಾರ್ಷಿಕ ಸಮ್ಮೇಳನದ ಮಾತುಕತೆಯ ಸಂದರ್ಭದಲ್ಲಿ ಬಹು ನಿರೀಕ್ಷಿತವಾದ ಈ ಒಪ್ಪಂದಕ್ಕೆ ಸಹಿ ಬಿದ್ದಿದೆ.

ಭಾರತೀಯ ಪರಮಾಣು ವಿದ್ಯುತ್‌ ನಿಗಮ ಮತ್ತು ರಷ್ಯಾದ ಆಟಮ್‌ಸ್ಟ್ರೋಯ್‌ಎಕ್ಸ್ಪೋರ್ಟ್ ಕಂಪೆನಿ ಜಂಟಿಯಾಗಿ ನಿರ್ಮಿಸಲಿರುವ ಈ ಘಟಕಗಳು ತಲಾ 1000 ಮೆ.ವಾ ವಿದ್ಯುತ್‌ ಉತ್ಪಾದಿಸಲಿವೆ.

ತ್ಯಾಗ ನೆನೆದ ಪ್ರಧಾನಿ: ಮೋದಿ ಮತ್ತು ಪುಟಿನ್‌ ಅವರ ನಡುವಣ ಭೇಟಿ ಭಾವನಾತ್ಮಕ ಗಳಿಗೆಗಳಿಗೆ ಸಾಕ್ಷಿಯಾಯಿತು.

ಪುಟಿನ್‌ ಸಹೋದರ ಮತ್ತು ಕುಟುಂಬದ ಸದಸ್ಯರು ದೇಶಕ್ಕಾಗಿ ಮಾಡಿದ ತ್ಯಾಗವನ್ನು ಈ ಸಂದರ್ಭದಲ್ಲಿ ಮೋದಿ  ಸ್ಮರಿಸಿದರು.

2ನೇ ವಿಶ್ವ ಮಹಾ ಸಮರದ 5 ಲಕ್ಷ  ಸಂತ್ರಸ್ತರು ಮತ್ತು 900 ದಿನಗಳ ಲೆನಿನ್‌ಗ್ರಾಡ್‌ ಒತ್ತೆ ಪ್ರಕರಣದ ಸಂತ್ರಸ್ತರ ಅಂತ್ಯಸಂಸ್ಕಾರ ನಡೆಸಿದ್ದ ಪಿಸ್ಕರಿಯೊವಿಸ್ಕೊಯ್‌ ಸ್ಮಶಾನಕ್ಕೆ ಭೇಟಿ ನೀಡಿದ್ದನ್ನು ತಮ್ಮ ಭಾಷಣದಲ್ಲಿ  ಮೋದಿ ಪ್ರಸ್ತಾಪಿಸಿದರು.

‘ರಷ್ಯಾದ ಏಳಿಗೆಗಾಗಿ ನಿಮ್ಮ ಕುಟುಂಬ ತ್ಯಾಗ ಮಾಡಿದೆ. ನಿಮ್ಮ  ಅಣ್ಣ ಹುತಾತ್ಮರಾಗಿದ್ದರು’ ಎಂದು ಪುಟಿನ್‌ ಉದ್ದೇಶಿಸಿ ಅವರು ಹೇಳಿದರು.

ಏಳು ದಶಕಗಳಿಗೂ ಹಿಂದೆ ನಡೆದಿದ್ದ ಲೆನಿನ್‌ಗ್ರಾಡ್‌ ಒತ್ತೆ ಪ್ರಕರಣದಲ್ಲಿ ಪುಟಿನ್‌ ಸೋದರ ವಿಕ್ಟರ್‌ ಮೃತಪಟ್ಟಿದ್ದರು.

ಮೋದಿ ಆಹ್ವಾನ:  ಅತ್ಯಾಧುನಿಕ ರಕ್ಷಣಾ ಸಾಧನಗಳನ್ನು ತಯಾರಿಸುವ ಘಟಕ ಸ್ಥಾಪಿಸುವುದಕ್ಕಾಗಿ ಭಾರತೀಯ ಕಂಪೆನಿಗಳೊಂದಿಗೆ ಕೈಜೋಡಿಸಲು ರಷ್ಯಾ ಕಂಪೆನಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಆಹ್ವಾನ ನೀಡಿದರು.

ಸಂಬಂಧ ದುರ್ಬಲವಾಗದು

ರಷ್ಯಾವು ಪಾಕಿಸ್ತಾನ ಮತ್ತು ಇತರ ರಾಷ್ಟ್ರಗಳೊಂದಿಗೆ ಸಂಬಂಧ ವೃದ್ಧಿಸುತ್ತಿರುವುದರಿಂದಾಗಿಭಾರತದೊಂದಿಗೆ ಅದು ಹೊಂದಿರುವ ‘ನಂಬಿಕೆ–ಆಧರಿತ’ ಬಾಂಧವ್ಯ ದುರ್ಬಲವಾಗದು ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಪ್ರತಿಪಾದಿಸಿದರು.

ಸುದ್ದಿಸಂಸ್ಥೆಯೊಂದಿಗೆ ನಡೆಸಿದ ಸಂವಾದದಲ್ಲಿ ಮಾತನಾಡಿದ ಪುಟಿನ್‌, ‘ಕ್ಷಿಪಣಿ ಸೇರಿದಂತೆ ಕೆಲವು ಸಂಕೀರ್ಣ ಕ್ಷೇತ್ರಗಳಲ್ಲಿ ರಷ್ಯಾ, ಭಾರತದೊಂದಿಗೆ ಹೊಂದಿರುವಷ್ಟು ‘ಆಳವಾದ ಸಹಕಾರ’ವನ್ನು ಬೇರೆ ಯಾವ ರಾಷ್ಟ್ರಗಳೊಂದಿಗೂ ಹೊಂದಿಲ್ಲ’ ಎಂದು ಹೇಳಿದರು.

ಕಾಶ್ಮೀರದ ವಿಚಾರವಾಗಿ ಕೇಳಿದ ಪ್ರಶ್ನೆಯಿಂದ ನುಣುಚಿಕೊಳ್ಳಲು ಯತ್ನಿಸಿದ ಅವರು, ‘ಭಾರತದಲ್ಲಿ ಭಯೋತ್ಪಾದನೆಗೆ ಪಾಕಿಸ್ತಾನ ಪ್ರೋತ್ಸಾಹ ನೀಡುತ್ತಿದೆಯೇ ಎಂಬುದನ್ನು ವಿಶ್ಲೇಷಿಸಬೇಕಾದವರು ನೀವು’ ಎಂದಷ್ಟೇ ಉತ್ತರಿಸಿದರು.

‘ಆದರೆ, ಬೆದರಿಕೆ ಎಲ್ಲಿಂದ ಬಂದರೂ ಅದನ್ನು ಒಪ್ಪಲು ಸಾಧ್ಯವಿಲ್ಲ. ಭಯೋತ್ಪಾದನೆಯ ವಿರುದ್ಧ ಭಾರತ ನಡೆಸುತ್ತಿರುವ ಹೋರಾಟಕ್ಕೆ ನಮ್ಮ ಬೆಂಬಲ ಇದೆ’ ಎಂದರು.

‘ಸೇನಾ ಕ್ಷೇತ್ರದಲ್ಲಿ ರಷ್ಯಾವು ಪಾಕ್‌ನೊಂದಿಗೆ ಪ್ರಬಲ ಸಂಬಂಧ ಹೊಂದಿಲ್ಲ’ ಎಂದೂ ಪುಟಿನ್‌ ಸ್ಪಷ್ಟಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry