ಶಿರಡಿಯಲ್ಲಿ ಅಧ್ಯಾತ್ಮ, ವಿಜ್ಞಾನದ ಸಮ್ಮಿಲನ!

7

ಶಿರಡಿಯಲ್ಲಿ ಅಧ್ಯಾತ್ಮ, ವಿಜ್ಞಾನದ ಸಮ್ಮಿಲನ!

Published:
Updated:
ಶಿರಡಿಯಲ್ಲಿ ಅಧ್ಯಾತ್ಮ, ವಿಜ್ಞಾನದ ಸಮ್ಮಿಲನ!

ಮುಂಬೈ: ಶಿರಡಿ ಸಾಯಿಬಾಬಾ ಅವರು ದೇಹತ್ಯಾಗ ಮಾಡಿ ಮುಂದಿನ ವರ್ಷದ ಅಕ್ಟೋಬರ್‌ಗೆ 100 ವರ್ಷಗಳಾಗುತ್ತವೆ.

ಇದರ ಅಂಗವಾಗಿ ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್‌ (ಎಸ್‌ಎಸ್‌ಎಸ್‌ಟಿ), ಇದೇ ಅಕ್ಟೋಬರ್‌ 1ರಿಂದ 2018ರ ಅಕ್ಟೋಬರ್‌ 18ರವರೆಗೆ  ಶತಮಾನೋತ್ಸವ ವರ್ಷ  ಆಚರಿಸಲು ನಿರ್ಧರಿಸಿದೆ.

ಈ ವರ್ಷಾಚರಣೆಯ ಅಡಿಯಲ್ಲಿ ವಿವಿಧ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಟ್ರಸ್ಟ್‌ ನಿರ್ಧರಿಸಿದೆ. ವರ್ಷದ ಅವಧಿಯಲ್ಲಿ ಮಹಾರಾಷ್ಟ್ರದ ಅಹಮದ್‌ನಗರದಲ್ಲಿರುವ ಶಿರಡಿ ಪಟ್ಟಣವು ಸಂಪೂರ್ಣವಾಗಿ ರೂಪಾಂತರಗೊಳ್ಳಲಿದೆ.

ಅಧ್ಯಾತ್ಮ ಮತ್ತು ಶ್ರದ್ಧಾ ಕೇಂದ್ರವಾಗಿರುವ ಶಿರಡಿಯಲ್ಲಿ ವಿಜ್ಞಾನ ಆಧರಿತವಾಗಿರುವ  ವಿನೂತನ ಯೋಜನೆಗಳನ್ನು ಟ್ರಸ್ಟ್‌ ಕೈಗೆತ್ತಿಕೊಳ್ಳಲು ಮುಂದಾಗಿರುವುದು ವಿಶೇಷ.

ಹೆಜ್ಜೆಯಿಂದ ವಿದ್ಯುತ್‌: ಮಂದಿರದ ಆವರಣದಲ್ಲಿ ಯಾತ್ರಿಕರು ನಡೆದಾಡುವುದರಿಂದ (ಹೆಜ್ಜೆ ಹಾಕುವುದು) ಉಂಟಾಗುವ ಶಕ್ತಿಯಿಂದ ವಿದ್ಯುತ್‌ ಉತ್ಪಾದಿಸುವುದು ವಿನೂತನ ಯೋಜನೆಗಳಲ್ಲಿ ಪ್ರಮುಖವಾದುದು.

‘ಸಾಯಿಬಾಬಾ ದರ್ಶನಕ್ಕಾಗಿ ಪ್ರತಿ ದಿನ 50 ಸಾವಿರ ಜನ ಶಿರಡಿಗೆ ಬರುತ್ತಾರೆ. ಅವರು ನಡೆಯುವಾಗ ಉಂಟಾಗುವ ಚಲನಾ ಶಕ್ತಿ ಬಳಸಿ ವಿದ್ಯುತ್‌ ಉತ್ಪಾದಿಸಲು ಯೋಜನೆ ರೂಪಿಸಲಾಗಿದೆ. ಈ ಸಂಬಂಧ ಕಂಪೆನಿಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದೇವೆ’ ಎಂದು ಎಸ್‌ಎಸ್‌ಎಸ್‌ಟಿ ಅಧ್ಯಕ್ಷ ಡಾ. ಸುರೇಶ್‌ ಹವಾರೆ ಹೇಳಿದ್ದಾರೆ.

ಉತ್ಪಾದನೆ ಹೇಗೆ?:  ನೆಲಕ್ಕೆ ಶಕ್ತಿ ಪೆಡಲ್‌ಗಳನ್ನು ಅಳವಡಿಸಲಾಗುತ್ತದೆ. ಇದರ ಮೇಲೆ ನಡೆದಾಗ, ಅದು ಕೆಳಕ್ಕೆ ಒತ್ತುತ್ತದೆ; ನಂತರ ಮೊದಲಿದ್ದ ಸ್ಥಿತಿಗೆ ಬರುತ್ತದೆ. ಈ ಪ್ರಕ್ರಿಯೆಯು ವಿದ್ಯುತ್‌ ಅನ್ನು ಉತ್ಪಾದಿಸುತ್ತದೆ.

‘ಮೊದಲಿಗೆ ಪ್ರಾಯೋಗಿಕವಾಗಿ 200 ಪೆಡಲ್‌ಗಳನ್ನು ನಾವು ಅಳವಡಿಸಲಿದ್ದೇವೆ’ ಎಂದು ಹವಾರೆ ಹೇಳಿದ್ದಾರೆ.

ಸಾಯಿ ಸೃಷ್ಟ

ನಿಮಗಾಂವ್‌ ಕೊರ್‌ಹಾಲೆ ಎಂಬಲ್ಲಿ 21 ಎಕರೆ ಪ್ರದೇಶದಲ್ಲಿ ‘ಸಾಯಿ ಸೃಷ್ಟಿ’ ಮೈದಳೆಯಲಿದೆ. ₹100 ಕೋಟಿ ವೆಚ್ಚದ ಈ ಯೋಜನೆ ಭಾಗವಾಗಿ ಅಲ್ಲಿ ಸಾಯಿಬಾಬಾ ಅವರ ಬೃಹತ್‌ ಪ್ರತಿಮೆ ಸ್ಥಾಪನೆಯಾಗಲಿದೆ.

ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಧ್ವನಿಬೆಳಕಿನ ಮೂಲಕ ಸಾಯಿಬಾಬಾ ಅವರ ಜೀವಿತಾವಧಿಯಲ್ಲಿ ನಡೆದ ಕೆಲವು ಪ್ರಮುಖ ಘಟನೆಗಳನ್ನು ಅಲ್ಲಿ ಬಿಂಬಿಸಲಾಗುತ್ತದೆ.

ಈ ಯೋಜನೆ ಅಡಿಯಲ್ಲೇ ಸಾಯಿತಾರಾಂಗಣ (ತಾರಾಲಯ), 50 ಶ್ರೇಷ್ಠ ಸಂತರು, 50 ರಾಷ್ಟ್ರೀಯ ಮುಖಂಡರ ಮೇಣದ ಪ್ರತಿಮೆಗಳನ್ನು ಹೊಂದಿರುವ ಮ್ಯೂಸಿಯಂ ಸ್ಥಾಪನೆಯಾಗಲಿದೆ.  25 ಅತ್ಯಾಧುನಿಕ ದೂರದರ್ಶಕಗಳನ್ನು ಒಳಗೊಂಡ ನಕ್ಷತ್ರ ವೀಕ್ಷಣಾ ಗ್ಯಾಲರಿ ಮತ್ತು ವಿಜ್ಞಾನ ಪಾರ್ಕ್‌  ಕೂಡ ನಿರ್ಮಾಣವಾಗಲಿದೆ.

ಸಾಯಿ ನೈಜ ದರ್ಶನಕ್ಕೆ ಅವಕಾಶ!

ಹಾಲೊಗ್ರಾಫಿಕ್‌ ತಂತ್ರಜ್ಞಾನದಲ್ಲಿ ಸಾಯಿ ಚರಿತದ ಕೆಲವು ಘಟನೆಗಳನ್ನು ಮತ್ತು ಸಾಯಿಬಾಬಾ ಅವರ ನೈಜ ದರ್ಶನವನ್ನು ಭಕ್ತರಿಗೆ ಮಾಡಿಸುವಂತಹ  25 ನಿಮಿಷಗಳ ಸಾಯಿ ವರ್ಚ್ಯುವಲ್‌  (ವಾಸ್ತವವನ್ನೇ ಹೋಲುವ) ರಿಯಾಲಿಟಿ ಷೋ ಹಮ್ಮಿಕೊಳ್ಳುವ ಯೋಜನೆಯನ್ನೂ ಟ್ರಸ್ಟ್‌ ಹಾಕಿಕೊಂಡಿದೆ.

ಇತರೆ ಯೋಜನೆಗಳು

* ಆಗಸ್ಟ್‌ 1ರಿಂದ ಉಚಿತ ವೈ–ಫೈ ಸೌಲಭ್ಯ

* ಶಿರಡಿ–ನಾಸಿಕ್‌  ಮತ್ತು ಶಿರಡಿ–ಮನ್‌ಮಾದ್‌ ರಸ್ತೆಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಸಸಿ ನೆಡುವ ಕಾರ್ಯಕ್ರಮ

* ಕಲಾ ಸಭಾಂಗಣ ಮತ್ತು ಗ್ರಂಥಾಲಯ ನಿರ್ಮಾಣ

* ಸಾಯಿಬಾಬಾ ಅವರ ಜೀವನವನ್ನು ಬಿಂಬಿಸುವ ಚಿತ್ರಗಳನ್ನು ಪಟ್ಟಣದ ವಿವಿಧ ಕಡೆಗಳಲ್ಲಿ ಅಳವಡಿಸುವುದು

* ರಕ್ತದಾನ ಶಿಬಿರ

**

ಒಂದು ವರ್ಷದ ಅವಧಿಯಲ್ಲಿ 4.5 ಕೋಟಿಯಿಂದ 5 ಕೋಟಿಗಳಷ್ಟು ಭಕ್ತರು ಸಾಯಿ ಬಾಬಾರ ದರ್ಶನಕ್ಕಾಗಿ ಮಂದಿರಕ್ಕೆ ಭೇಟಿ ನೀಡುವ ನಿರೀಕ್ಷೆ ಇದೆ

-ಡಾ. ಸುರೇಶ್‌ ಹವಾರೆ, ಎಸ್‌ಎಸ್‌ಎಸ್‌ಟಿ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry