‘ಅಧಿವೇಶನ ಬಳಿಕ ಸಂಪುಟ ವಿಸ್ತರಣೆ’

7

‘ಅಧಿವೇಶನ ಬಳಿಕ ಸಂಪುಟ ವಿಸ್ತರಣೆ’

Published:
Updated:
‘ಅಧಿವೇಶನ ಬಳಿಕ ಸಂಪುಟ ವಿಸ್ತರಣೆ’

ಮೈಸೂರು/ ಬೆಂಗಳೂರು: ಪ್ರದೇಶ ಕಾಂಗ್ರೆಸ್‌ (ಕೆಪಿಸಿಸಿ) ಅಧ್ಯಕ್ಷರಾಗಿ ಮುಂದುವರಿದಿರುವ ಜಿ. ಪರಮೇಶ್ವರ್‌ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದರೊಂದಿಗೆ ಸಂಪುಟದಲ್ಲಿ ಖಾಲಿ ಆಗಿರುವ ಮೂರು ಸ್ಥಾನಗಳಿಗೆ ಶಾಸಕರ ಪೈಪೋಟಿ ಆರಂಭವಾಗಿದೆ.

ಇದಕ್ಕೂ ಮೊದಲು, ಲೈಂಗಿಕ ಹಗರಣಕ್ಕೆ ಸಿಕ್ಕಿದ್ದ ಎಚ್‌.ವೈ. ಮೇಟಿ ರಾಜೀನಾಮೆ ಹಾಗೂ ಮಹದೇವ ಪ್ರಸಾದ್‌ ನಿಧನದಿಂದಾಗಿ ಎರಡು ಸ್ಥಾನಗಳು ಖಾಲಿ ಆಗಿದ್ದವು. ಮೊದಲಿದ್ದ ಸಮುದಾಯಗಳಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ದೊರೆಯುವ ಸಾಧ್ಯತೆಯಿದೆ.

ಜೂನ್‌ ಐದರಿಂದ ಆರಂಭವಾಗಿ 16ರಂದು ಕೊನೆಗೊಳ್ಳಲಿರುವ ವಿಧಾನಮಂಡಲ ಅಧಿವೇಶನದ ಬಳಿಕ ಸಂಪುಟ ವಿಸ್ತರಣೆ ಮಾಡಲಾಗುವುದು. ಯಾರನ್ನು ಮಂತ್ರಿ ಮಾಡಬೇಕು ಎಂಬುದನ್ನು ಆಗಲೇ ತೀರ್ಮಾನಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಪರಮೇಶ್ವರ್‌ ರಾಜೀನಾಮೆಯಿಂದ ಖಾಲಿ ಆಗಿರುವ ‘ಗೃಹ ಖಾತೆಯನ್ನು ಯಾರಿಗೆ ನೀಡಬೇಕು ಎಂಬ ಬಗ್ಗೆಯೂ ಸಂಪುಟ ವಿಸ್ತರಣೆ ವೇಳೆ ತೀರ್ಮಾನಿಸಲಾಗುವುದು’ ಎಂದರು.

‘ಹೈಕಮಾಂಡ್‌ ತೀರ್ಮಾನದಂತೆ, ವಿಧಾನಸಭಾ ಚುನಾವಣೆ ನನ್ನ ನಾಯಕತ್ವದಲ್ಲೇ ನಡೆಯಲಿದೆ. ಆದರೆ, ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಶಾಸಕಾಂಗ ಸಭೆ ನಿರ್ಧರಿಸಲಿದೆ’ ಎಂದು ಅವರು ಹೇಳಿದರು.

ಕೆಪಿಸಿಸಿ ಅಧ್ಯಕ್ಷ, ಕಾರ್ಯಾಧ್ಯಕ್ಷರ ನೇಮಕ ವಿಚಾರದಲ್ಲಿ ಯಾರಿಗೂ ಅಸಮಾಧಾನ ಆಗಿಲ್ಲ. ಡಿ.ಕೆ. ಶಿವಕುಮಾರ್‌ ಅವರಿಗೆ ಲಭಿಸಿರುವ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನವೂ ಪ್ರಮುಖವಾದ ಹುದ್ದೆ. ಎಲ್ಲಾ ಕಡೆ ಒಬ್ಬ ಕಾರ್ಯಾಧ್ಯಕ್ಷ ಓಡಾಡಲು ಸಾಧ್ಯವಿಲ್ಲ. ಹೀಗಾಗಿ, ಇಬ್ಬರನ್ನು ನೇಮಿಸಲಾಗಿದೆ ಎಂದು ಹೈಕಮಾಂಡ್‌ ನಿರ್ಧಾರವನ್ನು ಮುಖ್ಯಮಂತ್ರಿ ಸಮರ್ಥಿಸಿಕೊಂಡರು.

ಪರಮೇಶ್ವರ್ ರಾಜೀನಾಮೆ: ಹೈಕಮಾಂಡ್‌ ಸೂಚನೆಯಂತೆ ಗೃಹ ಸಚಿವ ಜಿ. ಪರಮೇಶ್ವರ್ ಗುರುವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಆದರೆ, ಅವರು ಪಕ್ಷದ ಪೂರ್ಣಾವಧಿ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.

ಮೈಸೂರಿನಿಂದ ಹಿಂತಿರುಗಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು  ಗೃಹ ಕಚೇರಿ ಕೃಷ್ಣಾದಲ್ಲಿ ಪರಮೇಶ್ವರ್‌ ಭೇಟಿಯಾದರು. ಜೂನ್‌ ಐದರವರೆಗೂ ಸಚಿವರಾಗಿ ಮುಂದುವರಿಯುವಂತೆ ಪರಮೇಶ್ವರ್‌ ಅವರಿಗೆ ಮುಖ್ಯಮಂತ್ರಿ ಸಲಹೆ ನೀಡಿದರು.

ಇದಕ್ಕೂ ಮುನ್ನ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಪರಮೇಶ್ವರ್‌, ‘ಚುನಾವಣೆ ಸಮೀಪಿಸುತ್ತಿರುವುದರಿಂದ ಪಕ್ಷದ ಸಂಘಟನೆ ಬಲಪಡಿಸಲು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ವರಿಷ್ಠರು ಸೂಚಿಸಿದ್ದರು ಎಂದರು.

‘ನನ್ನನ್ನು ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸಿರುವುದರಿಂದ ಜವಾಬ್ದಾರಿ ಹೆಚ್ಚಿದೆ. ಮತ್ತೊಮ್ಮೆ ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮ ಮುಂದಿರುವ ಸವಾಲು’ ಎಂದು ಹೇಳಿದರು.

‘ಡಿ.ಕೆ. ಶಿವಕುಮಾರ್, ಎಸ್‌.ಆರ್. ಪಾಟೀಲ ಅವರಿಗೂ ಜವಾಬ್ದಾರಿ ಕೊಡಲಾಗಿದೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂಬುದು ಇದರ ಹಿಂದಿನ ಉದ್ದೇಶ. ಇದು ಯಾರಿಗೂ ಬಡ್ತಿಯೂ ಅಲ್ಲ, ಹಿಂಬಡ್ತಿಯೂ ಅಲ್ಲ’ ಎಂದರು.

ಪ್ರತ್ಯೇಕ ಚರ್ಚೆ: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ರಾಜ್ಯ ಕಾಂಗ್ರೆಸ್‌ನ 18 ಪ್ರಮುಖರನ್ನು ಕರೆದು ಪ್ರತ್ಯೇಕವಾಗಿ ಚರ್ಚೆ ಮಾಡಿದ್ದಾರೆ. ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕೆಲವು ಸಲಹೆಗಳನ್ನು ನೀಡಿದ್ದಾರೆ ಎಂದು ಅವರು ವಿವರಿಸಿದರು.

‘ರಾಜ್ಯದಲ್ಲಿ ಯಾವಾಗ ಚುನಾವಣೆ ಬಂದರೂ ಎದುರಿಸಲು ಕಾಂಗ್ರೆಸ್ ಸಿದ್ಧವಾಗಿದೆ. ಅವಧಿಗೆ ಮುನ್ನ ಚುನಾವಣೆ ನಡೆಯುತ್ತದೆ ಎಂದು ಬಿಜೆಪಿಯವರು ಹೇಳುತ್ತಿರಬಹುದು. ಆದರೆ, ರಾಜ್ಯ ಸರ್ಕಾರದ ಅಭಿಪ್ರಾಯ ಪಡೆಯದೆ ಕೇಂದ್ರ ಚುನಾವಣಾ ಆಯೋಗ ಚುನಾವಣೆ ಘೋಷಿಸಲು ಸಾಧ್ಯವಿಲ್ಲ’ ಎಂದು ಅಭಿಪ್ರಾಯಪಟ್ಟರು.

ತೃಪ್ತಿ ತಂದಿದೆ: ‘ಗೃಹ ಸಚಿವನಾಗಿ ಹೆಚ್ಚುಕಡಿಮೆ ಒಂದೂವರೆ ವರ್ಷ ಮಾಡಿರುವ ಕೆಲಸ ತೃಪ್ತಿ ತಂದಿದೆ. ನನ್ನ ಅವಧಿಯಲ್ಲಿ ಸಾವಿರಾರು ನೇಮಕಾತಿ ಆಗಿವೆ, ಪೊಲೀಸರಿಗೆ 2 ಸಾವಿರ ವಿಶೇಷ ಭತ್ಯೆ ನೀಡಲಾಗಿದೆ. 11 ಸಾವಿರ ಮನೆಗಳ ನಿರ್ಮಾಣ ಕಾರ್ಯ ಆರಂಭವಾಗಿದೆ. ವೇತನ ಆಯೋಗದಲ್ಲಿಯೇ ಪೊಲೀಸರ ವೇತನ ಹೆಚ್ಚಳ ಮಾಡುವುದಾಗಿ ಸಿ.ಎಂ ಭರವಸೆ ನೀಡಿದ್ದಾರೆ’ ಎಂದರು.

**

ಹೈಕಮಾಂಡ್ ಹೇಳಿದರೆ ಸ್ಪರ್ಧೆ

‘ಮುಂದಿನ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ವಿಚಾರದಲ್ಲಿ ಹೈಕಮಾಂಡ್ ಹೇಳಿದಂತೆ ಕೇಳುತ್ತೇನೆ’ ಎಂದು ಪರಮೇಶ್ವರ್ ಹೇಳಿದರು.

‘ಚುನಾವಣೆಗೆ ಸ್ಪರ್ಧಿಸಿ ಎಂದು ವರಿಷ್ಠರು ಹೇಳಿದರೆ ಸ್ಪರ್ಧೆ ಮಾಡುತ್ತೇನೆ. ವಿಧಾನ ಪರಿಷತ್ ಸದಸ್ಯರಾಗಿ ಮುಂದುವರೆದು ಪಕ್ಷದ ಸಂಘಟನೆಗೆ ಗಮನ ನೀಡಿ ಎಂದರೂ ಸಿದ್ಧ’ ಎಂದರು.

ಕಲಬುರ್ಗಿ ಹತ್ಯೆ ತನಿಖೆ ನಡೆಯುತ್ತಿದೆ: ‘ಸಂಶೋಧಕ ಎಂ.ಎಂ. ಕಲಬುರ್ಗಿ ಹತ್ಯೆ ತನಿಖೆ ನಡೆಯುತ್ತಿದೆ. ವಿಳಂಬ ಆಗಿರಬಹದು. ಆದರೆ, ತನಿಖೆ ಕೈಬಿಟ್ಟಿಲ್ಲ’ ಎಂದೂ ಪರಮೇಶ್ವರ್‌  ಸ್ಪಷ್ಟಪಡಿಸಿದರು.

**

ಜಾರ್ಜ್‌ಗೆ ಗೃಹ ಖಾತೆ  ಬಿಎಸ್‌ವೈ ವಿರೋಧ

ಕಲಬುರ್ಗಿ:
‘ಸಚಿವ ಕೆ.ಜೆ. ಜಾರ್ಜ್‌ ಅವರಿಗೆ ಮತ್ತೆ ಗೃಹ ಖಾತೆ ನೀಡುವ ಸಂಭವವಿದ್ದು, ಇದು ಸರಿಯಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

‘ನಾವು ಹೋರಾಟ ಮಾಡಿ ಅವರನ್ನು ಗೃಹ ಖಾತೆಯಿಂದ ಇಳಿಸಿದ್ದೇವೆ. ಜಾರ್ಜ್‌ ಅವರು ಮುಖ್ಯಮಂತ್ರಿಗೆ ಪ್ರಿಯವಾದ ವ್ಯಕ್ತಿ. ಹಟವಾದಿಯಾಗಿರುವ ಸಿದ್ದರಾಮಯ್ಯ ಅವರು ಯಾವುದು ಬೇಡವೋ ಅದನ್ನೇ ಮಾಡುತ್ತಿದ್ದಾರೆ’ ಎಂದರು.

**

ದಲಿತ ಮುಖ್ಯಮಂತ್ರಿ ಅಥವಾ ಮುಂದಿನ ಮುಖ್ಯಮಂತ್ರಿ ಬಗ್ಗೆ ನನಗೇನೂ ಗೊತ್ತಿಲ್ಲ. ಸುಮ್ಮನೆ ಗೊಂದಲ ಸೃಷ್ಟಿಸಬೇಡಿ.

–ಜಿ. ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry