ಕೋಚ್ ಹುದ್ದೆಗೆ ‘ವೀರೂ’ ಕಣ್ಣು: ಅನಿಲ್ ಕುಂಬ್ಳೆಗೂ ಸಂದರ್ಶನಕ್ಕೆ ಅವಕಾಶ

7

ಕೋಚ್ ಹುದ್ದೆಗೆ ‘ವೀರೂ’ ಕಣ್ಣು: ಅನಿಲ್ ಕುಂಬ್ಳೆಗೂ ಸಂದರ್ಶನಕ್ಕೆ ಅವಕಾಶ

Published:
Updated:
ಕೋಚ್ ಹುದ್ದೆಗೆ ‘ವೀರೂ’ ಕಣ್ಣು: ಅನಿಲ್ ಕುಂಬ್ಳೆಗೂ ಸಂದರ್ಶನಕ್ಕೆ ಅವಕಾಶ

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ನೇಮಕ ಪ್ರಕ್ರಿಯೆಯು  ಗುರುವಾರ ರೋಚಕ ತಿರುವು ಪಡೆದುಕೊಂಡಿದೆ.

ಭಾರತ ಕ್ರಿಕೆಟ್ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಆಗಿದ್ದ ವೀರೇಂದ್ರ ಸೆಹ್ವಾಗ್ ಅವರು ಅರ್ಜಿ ಸಲ್ಲಿಸಿದ್ದಾರೆ. ಹೋದ ವರ್ಷ ಕೋಚ್ ಸ್ಥಾನಕ್ಕೆ ನೇಮಕವಾಗಿದ್ದ ಅನಿಲ್ ಕುಂಬ್ಳೆ ಅವರ ಒಪ್ಪಂದದ ಅವಧಿಯು ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ನಂತರ ಮುಗಿಯಲಿದೆ. 46 ವರ್ಷದ ಕುಂಬ್ಳೆ ಕೂಡ ಪುನರಾಯ್ಕೆ ಬಯಸಿ ನೇರ ಸಂದರ್ಶನಕ್ಕೆ ಹಾಜರಾಗಲಿದ್ದಾರೆ.  ಇದರಿಂದಾಗಿ ಕುಂಬ್ಳೆ ಮತ್ತು ಸೆಹ್ವಾಗ್ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ.

ಸೆಹ್ವಾಗ್ ಅವರಿಗೆ ತರಬೇತಿ ನೀಡಿದ ಅನುಭವ ಇಲ್ಲ. ಅವರು 104 ಟೆಸ್ಟ್‌ಗಳಲ್ಲಿ  8586 ರನ್ ಮತ್ತು 251 ಏಕದಿನ  ಪಂದ್ಯಗಳಲ್ಲಿ 8293 ರನ್‌ಗಳನ್ನು ಗಳಿಸಿದ್ದಾರೆ. 2015ರಲ್ಲಿ  ಅವರು ಪ್ರಥಮ ದರ್ಜೆ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರು.  ಅನಿಲ್ ಕುಂಬ್ಳೆ ನಾಯಕತ್ವದ ತಂಡದಲ್ಲಿಯೂ ಸೆಹ್ವಾಗ್ ಆಡಿದ್ದರು.

ಬಿಸಿಸಿಐನ ಹಿರಿಯ ಪದಾಧಿಕಾರಿಗಳ ಸೂಚನೆಯ ಮೇರೆಗೆ ‘ವೀರೂ’ ಅರ್ಜಿ ಸಲ್ಲಿಸಿದ್ದಾರೆಂದು ಮೂಲಗಳು ಸ್ಪಷ್ಟಪಡಿಸಿವೆ.

ಇವರಲ್ಲದೇ ಭಾರತ ತಂಡದ ಮಾಜಿ ಆಟಗಾರ, ಕರ್ನಾಟಕದ  ದೊಡ್ಡಗಣೇಶ್,  ಭಾರತ ‘ಎ’ ತಂಡದ ಮಾಜಿ ಕೋಚ್ ಲಾಲ್‌ಚಂದ್ ರಜಪೂತ್, ಆಸ್ಟ್ರೇಲಿಯಾದ ಮಾಜಿ ಆಟಗಾರ ಟಾಮ್ ಮೂಡಿ, ಇಂಗ್ಲೆಂಡ್‌ನ  ರಿಚರ್ಡ್‌ ಪೈಬಸ್ ಕೂಡ  ಅರ್ಜಿ ಸಲ್ಲಿಸಿದ್ದಾರೆ. 

ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಮತ್ತು ವಿ.ವಿ.ಎಸ್. ಲಕ್ಷ್ಮಣ್ ಅವರು ಇರುವ ಬಿಸಿಸಿಐ ಸಲಹಾ ಸಮಿತಿಯು ಈ ಅರ್ಜಿಗಳನ್ನು ಪರಿಶೀಲಿಸಿ  ಬಿಸಿಸಿಐಗೆ ಪ್ರಸ್ತಾವ ಸಲ್ಲಿಸಲಿದೆ. ನಂತರ ಸಂದರ್ಶನ ನಡೆಯಲಿದೆ.

ಕುಂಬ್ಳೆ ಮುಂದುವರಿಕೆಗೇನು ಅಡ್ಡಿ?

ಭಾರತ ಕ್ರಿಕೆಟ್ ಕೋಚ್ ಹುದ್ದೆಯ ನೇಮಕವು ಯಾವಾಗಲೂ ವಿವಾದಾಸ್ಪದ ವಿಷಯ ಎನ್ನುವುದು ಈ ಬಾರಿಯೂ ಸಾಬೀತಾಗಿದೆ.  ಈ ಹಿಂದೆ ಕೋಚ್ ನಿರ್ಗಮನಕ್ಕೆ ತಂಡದ ವೈಫಲ್ಯ ಕಾರಣವಾಗಿದ್ದ ಉದಾಹರಣೆಗಳು ಇದ್ದವು. ಆದರೆ, ಈ ಬಾರಿ ಕುಂಬ್ಳೆ ಅವರ ಮಾರ್ಗದರ್ಶನದಲ್ಲಿ ತಂಡವು ಉತ್ತಮ ಸಾಧನೆ ಮಾಡಿದೆ. ಆದ್ದರಿಂದ ಅವರನ್ನು ಮತ್ತೊಂದು ವರ್ಷಕ್ಕೆ ಮುಂದುವರಿಸುವ ನಿರೀಕ್ಷೆ ಇತ್ತು. ಆದರೆ, ಇತ್ತೀಚೆಗೆ ನಡೆದ ಕೆಲವು ಬೆಳವಣಿಗೆಗಳಲ್ಲಿ ಕುಂಬ್ಳೆ ಅವರು ಬಿಸಿಸಿಐ ಪದಾಧಿಕಾರಿಗಳ ಅಸಮಾಧಾನಕ್ಕೆ ಗುರಿಯಾಗಿದ್ದರು. ಆದ್ದರಿಂದ ಅವರನ್ನು ಮುಂದುವರೆಸುವ ವಿಚಾರವನ್ನು ಕೈಬಿಟ್ಟಿದ್ದ ಮಂಡಳಿಯು ಕೋಚ್ ನೇಮಕಕ್ಕೆ ಅರ್ಜಿ ಆಹ್ವಾನಿಸಿತ್ತು ಎನ್ನಲಾಗುತ್ತಿದೆ.

ಐಸಿಸಿ ಆದಾಯ ಹಂಚಿಕೆಯ ನೂತನ  ನೀತಿಯನ್ನು ಬಿಸಿಸಿಐ ವಿರೋಧಿಸಿತ್ತು. ಅದಕ್ಕಾಗಿ ಚಾಂಪಿಯನ್ಸ್‌ ಟ್ರೋಫಿಗೆ ತಂಡವನ್ನು ಕಳಿಸದಿರಲು ಬಿಸಿಸಿಐ ನಿರ್ಧರಿಸಿತ್ತು. ಆದರೆ, ತಂಡವು ಟೂರ್ನಿಯಲ್ಲಿ ಆಡಬೇಕು ಎಂದು ಕುಂಬ್ಳೆ ಪ್ರತಿಪಾದಿಸಿದ್ದರು.  ಇತ್ತೀಚೆಗೆ ತಮ್ಮದೂ ಸೇರಿದಂತೆ ತಂಡದ ಆಟಗಾರರು, ನೆರವು ಸಿಬ್ಬಂದಿಯ ಸಂಭಾವನೆಯನ್ನು ಹೆಚ್ಚಳ ಮಾಡಬೇಕು ಎಂದು ಕುಂಬ್ಳೆ ಅವರು ಪ್ರಸ್ತಾವ ಸಲ್ಲಿಸಿದ್ದರು. ಈ ಎರಡು ಕಾರಣಗಳಿಂದಲೇ ಅವರು  ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದ್ದಾರೆಂದು  ವಿಶ್ಲೇಷಿಸಲಾಗುತ್ತಿದೆ.

ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಕೂಡ ಕುಂಬ್ಳೆ ತರಬೇತಿ ವಿಧಾನದ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದು ಮಾಧ್ಯಮಗಳಲ್ಲಿ ದೊಡ್ಡ ಸುದ್ದಿ ಮಾಡಿದ್ದು ಕೂಡ ಇಲ್ಲಿ ಸ್ಮರಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry