ಸಿಒಎಗೆ ಗುಹಾ ರಾಜೀನಾಮೆ

7

ಸಿಒಎಗೆ ಗುಹಾ ರಾಜೀನಾಮೆ

Published:
Updated:
ಸಿಒಎಗೆ ಗುಹಾ ರಾಜೀನಾಮೆ

ನವದೆಹಲಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯಲ್ಲಿ (ಬಿಸಿಸಿಐ) ನಿವೃತ್ತ ನ್ಯಾಯಮೂರ್ತಿ ಆರ್‌.ಎಂ.  ಲೋಧಾ ಸಮಿತಿಯ ಶಿಫಾರಸುಗಳ ಜಾರಿಗೆ ಸುಪ್ರೀಂ ಕೋರ್ಟ್‌ ನೇಮಕ ಮಾಡಿದ್ದ ಆಡಳಿತಾಧಿಕಾರಿಗಳ ಸಮಿ ತಿಗೆ(ಸಿಒಎ) ಇತಿಹಾಸಕಾರ ಮತ್ತು ‘ಪ್ರಜಾವಾಣಿ’ಯ ಅಂಕಣಕಾರ ರಾಮ ಚಂದ್ರ ಗುಹಾ ಅವರು ರಾಜೀನಾಮೆ ನೀಡಿದ್ದಾರೆ.

ವೈಯಕ್ತಿಕ ಕಾರಣಗಳಿಗಾಗಿ  ರಾಜೀ ನಾಮೆ ಕೊಡುತ್ತಿರುವುದಾಗಿ ಗುಹಾ ಅವರು ಸುಪ್ರೀಂ ಕೋರ್ಟ್‌ಗೆ  ರಾಜೀ­ನಾಮೆ ಪತ್ರ ಸಲ್ಲಿಸಿದ್ದಾರೆ. ಅವರ ಈ ನಡೆಯಿಂದ ವಿನೋದ್ ರಾಯ್ ನೇತೃ ತ್ವದ ಸಿಒಎಗೂ ಅಚ್ಚರಿ ಮೂಡಿಸಿದೆ. 

‘ಈ ವಿಷಯದ ಕುರಿತು ನನಗೆ ಯಾವುದೇ ಸುಳಿವು ಕೂಡ ಇರಲಿಲ್ಲ’ ಎಂದು ಸಿಒಎ ಸದಸ್ಯರೊಬ್ಬರು ಹೇಳಿದ್ದಾರೆ.

ಹೋದ ಜನವರಿಯಲ್ಲಿ ಸಿಒಎ ನೇಮಕವಾಗಿತ್ತು. ವಿನೋದ್ ರಾಯ್ ನೇತೃತ್ವದ ಸಮಿತಿಯಲ್ಲಿ ಇತಿಹಾಸಕಾರ ಗುಹಾ, ವಿಕ್ರಮ್ ಲಿಮಯೆ ಮತ್ತು ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಡಯಾನಾ ಎಡುಲ್ಜಿ ಅವರನ್ನು ನೇಮಕ ಮಾಡಲಾಗಿತ್ತು.

ಸಂಭಾವನೆ ಹೆಚ್ಚಳ ಸಲಹೆಯೇ ಮುಳುವಾಯಿತೇ?

ಭಾರತ ತಂಡದ ಮುಖ್ಯ ಕೋಚ್ ಸ್ಥಾನದಲ್ಲಿ ಅನಿಲ್ ಕುಂಬ್ಳೆ ಅವರನ್ನು ಮುಂದುವರಿಸಬೇಕೇ ಅಥವಾ ಬೇಡವೇ ಎಂಬುದಕ್ಕೆ ಸಂಬಂಧಿಸಿದ ವಿವಾದ ಮತ್ತು ಗುಹಾ ಅವರ ರಾಜೀನಾಮೆಗೂ ಸಂಬಂಧವಿದೆ ಎಂದು ಬಿಸಿಸಿಐನ ಕೆಲವು ಅಧಿಕಾರಿಗಳು ಹೇಳಿದ್ದಾರೆ.

‘ತಂಡದ ಆಟಗಾರರು ಮತ್ತು ನೆರವು ಸಿಬ್ಬಂದಿಯ ಸಂಭಾವನೆಯನ್ನು ಹೆಚ್ಚಳ ಮಾಡುವ ವಿಚಾರವು ಗುಹಾ ಅವರದ್ದಾಗಿತ್ತು. ಅವರು ತಮ್ಮ ಇತರ ಸಹೋದ್ಯೋಗಿಗಳಿಗೂ ಈ ಕುರಿತು ಹೇಳಿದ್ದರೆನ್ನಲಾಗುತ್ತಿದೆ. ಬೆಂಗಳೂರಿನಲ್ಲಿ ನಡೆದಿದ್ದ ಬಿಸಿಸಿಐ ಪ್ರಶಸ್ತಿ ಪ್ರದಾನ ಸಮಾರಂಭದ ಸಂದರ್ಭದಲ್ಲಿ ಅನಿಲ್ ಕುಂಬ್ಳೆ ಅವರೊಂದಿಗೆ ಚರ್ಚಿಸಿ ಪ್ರಸ್ತಾವ ನೀಡುವಂತೆ ಸಿಒಎ ಸದಸ್ಯರು ಹೇಳಿ­ದ್ದರು.  ಕುಂಬ್ಳೆಯವರು ಸ್ವಯಂ­ಪ್ರೇರಿ­ತ­ವಾಗಿ ಪ್ರಸ್ತಾವ ಸಲ್ಲಿಸಿರಲಿಲ್ಲ. ಸಿಒಎ ಸೂಚನೆಯಂತೆ ನಡೆದು­ಕೊಂಡಿ ದ್ದರು’ ಎಂದು ಬಿಸಿಸಿಐ ಉನ್ನತ ಅಧಿಕಾರಿ­ಯೊಬ್ಬರು ಹೇಳಿದ್ದಾರೆ.

ಕುಂಬ್ಳೆ ಅವರು ನೀಡಿದ್ದ ಪ್ರಸ್ತಾವವನ್ನು ಪರಿಶೀಲಿಸಿದ್ದ ಬಿಸಿಸಿಐ ಎಲ್ಲ ಆಟಗಾರರ ಸಂಭಾವನೆಯನ್ನು ದುಪ್ಟಟ್ಟುಗೊಳಿಸಿತ್ತು.

ಆದರೆ, ಎ ದರ್ಜೆಯ ಆಟಗಾರರು, ನೆರವು ಸಿಬ್ಬಂದಿ ಮತ್ತು ತಮ್ಮ ಸಂಭಾ­ವನೆಯನ್ನು ಮತ್ತಷ್ಟು ಹೆಚ್ಚಳ ಮಾಡ­ಬೇಕು ಎಂದು ಕುಂಬ್ಳೆ ಅವರು ಹೋದ ತಿಂಗಳು ಹೈದರಾಬಾದಿನಲ್ಲಿ ನಡೆದಿದ್ದ ಸಭೆಯಲ್ಲಿ ಪ್ರಸ್ತಾವ ಮಂಡಿಸಿದ್ದರು. ಅದು ಬಿಸಿಸಿಐ ಪದಾಧಿಕಾರಿಗಳ ಬೇಸರಕ್ಕೆ ಕಾರಣವಾಗಿತ್ತು.

‘ಸಂಭಾವನೆ ಹೆಚ್ಚಳದ ಪರವಾಗಿದ್ದ ಗುಹಾ ಅವರಿಗೆ ಶೇಕಡಾವಾರು ಲೆಕ್ಕಾ­ಚಾ­ರಗಳ ಅರಿವು ಇರಲಿಲ್ಲ.  ಅವರು ವಿದ್ವಾಂಸ­ರಾಗಿದ್ದಾರೆ. ಒಳ್ಳೆಯ ಇತಿಹಾಸ ಕಾರರೂ ಹೌದು. ಆದರೆ, ಕ್ರಿಕೆಟ್‌ ಆಡಳಿತವೇ ವಿಭಿನ್ನವಾದದ್ದು’ ಎಂದು ಹೇಳಿದ್ದಾರೆ. ಕ್ರಿಕೆಟ್ ಇತಿಹಾಸದ ಕುರಿತು ಅಪಾರ ಜ್ಞಾನ ಹೊಂದಿರುವ ಗುಹಾ ಅವರು  ಐಪಿಎಲ್ ಕ್ರಿಕೆಟ್ ಮಾದರಿಯ ಟೀಕಾ­ಕಾರರಾಗಿದ್ದರು. ಆದರೆ ಸಿಒಎ ಸದಸ್ಯ­ರಾಗಿದ್ದ ಕಾರಣ ಈ ಬಾರಿ ಐಪಿಎಲ್ ಟೂರ್ನಿಯ ಕೆಲವು ಸಭೆಗಳಿಗೆ ಅವರು ಹಾಜರಾಗಿದ್ದರು.

ಒಂದು ಪೈಸೆಯನ್ನೂ ಪಡೆದಿಲ್ಲ

ಸಿಒಎ ಸದಸ್ಯರಿಗೆ ಒಂದು ಕರ್ತವ್ಯದ ದಿನದ ಶುಲ್ಕವಾಗಿ ತಲಾ ₹ 1 ಲಕ್ಷ ನಿಗದಿ ಮಾಡಲಾಗಿದೆ. ಆದರೆ ಗುಹಾ, ವಿನೋದ್ ರಾಯ್ ಅಥವಾ ವಿಕ್ರಮ್ ಲಿಮಯೆ ಅವರಲ್ಲಿ ಯಾರೂ ಇದು­ವರೆಗೂ ಒಂದೇ ಒಂದು ಪೈಸೆಯನ್ನೂ ಬಿಸಿಸಿಐನಿಂದ ಪಡೆದಿಲ್ಲ.

'ಕುಂಬ್ಳೆ–ಕೊಹ್ಲಿ  ಭಿನ್ನಾಭಿಪ್ರಾಯ ಇಲ್ಲ’

ಅನಿಲ್ ಕುಂಬ್ಳೆ ಮತ್ತು ವಿರಾಟ್ ಕೊಹ್ಲಿ ಅವರ ನಡುವೆ ಭಿನ್ನಾಭಿಪ್ರಾಯ  ಇಲ್ಲ ಎಂದು ಬಿಸಿಸಿಐ ಜಂಟಿ ಕಾರ್ಯದರ್ಶಿ ಅಮಿತಾಭ್ ಚೌಧರಿ ಸ್ಪಷ್ಟಪಡಿಸಿದ್ದಾರೆ.

‘ಕೋಚ್ ಮತ್ತು ತಂಡದ ನಾಯಕನ ನಡುವೆ ಭಿನ್ನಾಭಿಪ್ರಾಯಗಳು ಇವೆ ಎಂಬ ವರದಿಗಳು ಕಪೋಲ ಕಲ್ಪಿತವಾಗಿವೆ. ಮಂಡಳಿಗೆ ಈ ವಿಷಯದ ಕುರಿತು ಯಾವುದೆ ಮಾಹಿತಿಗಳು ಇಲ್ಲ’ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry