ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೋಲ್ವೊ ಬಸ್‌ ಸಂಚಾರ ಸ್ಥಗಿತ: ಪರದಾಟ

Last Updated 1 ಜೂನ್ 2017, 19:45 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಎಂಟಿಸಿಯ ಮೆಜೆಸ್ಟಿಕ್‌ ಬಳಿಯ ವೋಲ್ವೊ ಬಸ್‌ ಡಿಪೋದ ವ್ಯವಸ್ಥಾಪಕರು ಕಿರುಕುಳ ನೀಡುತ್ತಿದ್ದು, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿ ಡಿಪೊದ ನೌಕರರು ಸೇವೆಯನ್ನು ಸ್ಥಗಿತಗೊಳಿಸಿ ಗುರುವಾರ ಪ್ರತಿಭಟನೆ ನಡೆಸಿದರು. ಇದರಿಂದಾಗಿ ಮೆಜೆಸ್ಟಿಕ್‌ ನಿಲ್ದಾಣದಲ್ಲಿ ವೋಲ್ವೊ ಬಸ್‌ಗಳು ಓಡಾಡಲಿಲ್ಲ.

ಡಿಪೋದಲ್ಲಿ ಬಸ್‌ಗಳನ್ನು ಸಾಲಾಗಿ ನಿಲ್ಲಿಸಿ ಅದರ ಎದುರು ಸೇರಿದ್ದ ನೌಕರರು, ವ್ಯವಸ್ಥಾಪಕರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

‘ಡಿಪೋದಲ್ಲಿ 120 ವೋಲ್ವೊ ಬಸ್‌ಗಳಿದ್ದು, 500ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದೇವೆ. ನಿಯಮದಂತೆ ಸಿಗಬೇಕಾದ ರಜೆಯನ್ನೂ ವ್ಯವಸ್ಥಾಪಕರು ಮಂಜೂರು ಮಾಡುತ್ತಿಲ್ಲ. ಅದನ್ನು ಪ್ರಶ್ನಿಸಿದರೆ ಅಮಾನತು ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ’ ಎಂದು ಪ್ರತಿಭಟನಾಕಾರರು ದೂರಿದರು.

‘ಬಹುಪಾಲು ಬಸ್‌ಗಳು ಕೆಟ್ಟಿದ್ದು, ಅವುಗಳ ದುರಸ್ತಿಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ನಿತ್ಯವೂ 10ಕ್ಕೂ ಹೆಚ್ಚು ಬಸ್‌ಗಳು ರಸ್ತೆಗೆ ಇಳಿಯುತ್ತಿಲ್ಲ. ಇಂಥ ಸಂದರ್ಭದಲ್ಲಿ ಆ ಬಸ್‌ ಮಾರ್ಗದ ಚಾಲಕರು ಹಾಗೂ ನಿರ್ವಾಹಕರಿಗೆ ಕೆಲಸವಿಲ್ಲದಂತಾಗಿದೆ. ಅದನ್ನೇ ನೆಪ ಮಾಡಿಕೊಂಡ ವ್ಯವಸ್ಥಾಪಕರು, ಗೈರು ಹಾಜರು ಎಂದು ನಮೂದಿಸುತ್ತಿದ್ದಾರೆ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.

‘ಕೆಲ ಬಸ್‌ಗಳು ರಸ್ತೆಯಲ್ಲೇ ಕೆಟ್ಟು ನಿಲ್ಲುತ್ತಿದ್ದು, ಅಂಥ ಸಂದರ್ಭದಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಲು ವ್ಯವಸ್ಥಾಪಕರು ಮುಂದಾಗುತ್ತಿಲ್ಲ. ಅದರಿಂದಾಗಿ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದ್ದು, ಅವರೆಲ್ಲ ಚಾಲಕರು ಹಾಗೂ ನಿರ್ವಾಹಕರನ್ನೇ ನಿಂದಿಸುತ್ತಿದ್ದಾರೆ’ ಎಂದು ಹೇಳಿದರು.

ಕಿರುಕುಳ ಪುನರಾವರ್ತನೆ: ಪ್ರತಿಭಟನೆ ಬಗ್ಗೆ ‘ಪ್ರಜಾವಾಣಿ’ ಜತೆ ಮಾತನಾಡಿದ  ಸಿಐಟಿಯು ಸಂಘಟನೆಯ ಸಾರಿಗೆ ನಿಗಮಗಳ ನೌಕರರ ಒಕ್ಕೂಟದ  ಜಂಟಿ ಕಾರ್ಯದರ್ಶಿ ಆನಂದ್‌, ‘ಸದ್ಯ 7ನೇ ಡಿಪೋದ ವ್ಯವಸ್ಥಾಪಕರಾದ ಎಂ. ಬಸಪ್ಪ, ಈ ಹಿಂದೆ ಪೀಣ್ಯ 9ನೇ ಡಿಪೊದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅಲ್ಲಿಯೂ ನೌಕರರಿಗೆ ಕಿರುಕುಳ ನೀಡುತ್ತಿದ್ದರು’ ಎಂದು ದೂರಿದರು.

‘ನೌಕರರು ಪ್ರತಿಭಟನೆ ನಡೆಸಿದ್ದರಿಂದ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಇಲ್ಲಿಯೂ ಅವರು ಕಿರುಕುಳ ನೀಡಲು ಆರಂಭಿಸಿದ್ದಾರೆ. ಅವರ ವಿರುದ್ಧ ಹಿರಿಯ ಅಧಿಕಾರಿಗಳು ಕ್ರಮ ಕೈಗೊಂಡು ನೌಕರರಿಗೆ ನ್ಯಾಯ ಒದಗಿಸಬೇಕು’ ಎಂದು ಒತ್ತಾಯಿಸಿದರು.

ವಿಭಾಗೀಯ ನಿಯಂತ್ರಣಾಧಿಕಾರಿ ಭರವಸೆ: ಡಿಪೊಗೆ ಭೇಟಿ ನೀಡಿದ್ದ ವೋಲ್ವೊ ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜ ಅವರು ಪ್ರತಿಭಟನಾನಿರತ ನೌಕರರೊಂದಿಗೆ ಮಾತುಕತೆ ನಡೆಸಿದರು.

‘ಸೂಕ್ತ ತನಿಖೆ ನಡೆಸಿ ವ್ಯವಸ್ಥಾಪಕರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ’ ಎಂದು ಬಸವರಾಜ ಭರವಸೆ ನೀಡಿದ್ದರಿಂದ ನೌಕರರು ಪ್ರತಿಭಟನೆ ವಾಪಸ್‌ ಪಡೆದರು.

ಪ್ರಯಾಣಿಕರಿಗೆ ತೊಂದರೆ: ಪ್ರತಿಭಟನೆಯಿಂದಾಗಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಎಂ.ಜಿ. ರಸ್ತೆ, ಕೆಂಗೇರಿ, ಎಲೆಕ್ಟ್ರಾನಿಕ್‌ ಸಿಟಿ, ಆರ್‌.ಟಿ.ನಗರ, ಪೀಣ್ಯ, ಮಾರತ್ತಹಳ್ಳಿ, ವೈಟ್‌ಫೀಲ್ಡ್‌ ಪ್ರದೇಶಗಳಿಗೆ ಸಂಚರಿಸುವ ಪ್ರಯಾಣಿಕರು ತೊಂದರೆ ಅನುಭವಿಸಿದರು. ಮಧ್ಯಾಹ್ನ 3 ಗಂಟೆಗೆ ಬಂದ್‌ ಆಗಿದ್ದ ಬಸ್‌ ಸಂಚಾರ  ಒಂದೂವರೆ ಗಂಟೆಯಲ್ಲೇ ಮರು ಆರಂಭವಾಯಿತು.

***

ನಿಯಮ ಪ್ರಕಾರ ಕೆಲಸ ಮಾಡುತ್ತಿದ್ದೇನೆ. ಯಾವುದೇ ತಪ್ಪು ಮಾಡಿಲ್ಲ. ಪ್ರತಿಭಟನೆ ಮಾಡುತ್ತಿರುವ  ನೌಕರರ ಮನಸ್ಸಿನಲ್ಲಿ ಏನಿದೆ ಎಂಬುದು ಗೊತ್ತಿಲ್ಲ
-ಎಂ.ಬಸಪ್ಪ, ಡಿಪೊ ವ್ಯವಸ್ಥಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT