ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂಟ್ ಶತಕಕ್ಕೆ ಒಲಿದ ಜಯ

Last Updated 1 ಜೂನ್ 2017, 19:53 IST
ಅಕ್ಷರ ಗಾತ್ರ

ಲಂಡನ್: ಜೋ ರೂಟ್ ಅಜೇಯ ಶತಕದ ಬಲದಿಂದ ಅತಿಥೇಯ ಇಂಗ್ಲೆಂಡ್ ತಂಡವು ಬಾಂಗ್ಲಾದೇಶದ ಎದುರು 8 ವಿಕೆಟ್‌ಗಳಿಂದ ಜಯಿಸಿತು.

ಗುರುವಾರ ರಾತ್ರಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡವು ತಮೀಮ್ ಇಕ್ಬಾಲ್ ಅವರ ಅಮೋಘ ಶತಕದ ನೆರವಿನಿಂದ 50 ಓವರ್‌ಗಳಲ್ಲಿ 6 ವಿಕೆಟ್‌ಗೆ 305 ರನ್‌ ಗಳಿಸಿತ್ತು.  ಆದರೆ, ಜೋ ರೂಟ್ (ಔಟಾಗದೆ 133; 129ಎ, 11ಬೌಂ, 1ಸಿ) ಅವರ ಬ್ಯಾಟಿಂಗ್‌ನಿಂದ  ಇಂಗ್ಲೆಂಡ್ ತಂಡವು 47.2 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 308 ರನ್‌ ಗಳಿಸಿ ಜಯ ದಾಖಲಿಸಿತು.

ತಮೀಮ್ ಮಿಂಚು
ಹೋದ ವಾರ ಭಾರತದ ಎದುರಿನ ಅಭ್ಯಾಸ ಪಂದ್ಯದಲ್ಲಿ ಕೇವಲ 84 ರನ್‌ ಗಳಿಗೆ ಆಲೌಟ್ ಆಗಿತ್ತು. ಆದ್ದರಿಂದ ಇಲ್ಲಿಯೂ ಅಲ್ಪಮೊತ್ತಕ್ಕೆ ಕಟ್ಟಿಹಾಕುವ ಇರಾದೆಯಿಂದ ಇಂಗ್ಲೆಂಡ್ ತಂಡವು ಟಾಸ್ ಗೆದ್ದರೂ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು.

ಮಧ್ಯಾಹ್ನದ ಎಳೆಬಿಸಿಲಿನಲ್ಲಿ ಬೌಲರ್‌ಗಳಿಗೆ ತುಸು ನೆರವು ನೀಡುವಂತಿದ್ದ  ಪಿಚ್‌ನಲ್ಲಿ ಆತಿಥೇಯರು ನಿರಾಸೆ ಅನುಭವಿಸಿದರು. ತಮೀಮ್ ಇಕ್ಬಾಲ್ (128; 142ಎ, 12ಬೌಂ 3ಸಿ)  ಇಂಗ್ಲೆಂಡ್ ಬೌಲರ್‌ಗಳ ಬೆವರಿಳಿಸಿದರು.

ಅವರು ಮೊದಲ ವಿಕೆಟ್ ಜೊತೆಯಾಟದಲ್ಲಿ  ಸೌಮ್ಯ ಸರ್ಕಾರ ಜೊತೆಗೆ 56 ರನ್‌ ಸೇರಿಸಿದರು.  ಕೈನೋವಿನಲ್ಲಿಯೂ ಬೌಲಿಂಗ್ ಮಾಡಿದ ಬೆನ್ ಸ್ಟೋಕ್ಸ್‌ ಅವರು 12ನೇ ಓವರ್‌ನಲ್ಲಿ  ಸೌಮ್ಯ ಸರ್ಕಾರ್ ಅವರ ವಿಕೆಟ್ ಪಡೆದರು.

ನಂತರ ಬಂದ ಇಮ್ರುಲ್ ಕೈಸ್  ಅವರು ಹೆಚ್ಚು ಹೊತ್ತು ನಿಲ್ಲಲಿಲ್ಲ.  ಲಿಯಾಮ್ ಪ್ಲಂಕೆಟ್ ಬೌಲಿಂಗ್‌ನಲ್ಲಿ ಅವರು ಔಟಾದರು.

ಅವರ ನಂತರ ಕ್ರೀಸ್‌ಗೆ ಬಂದ ಮುಷ್ಫೀಕರ್ ರಹೀಮ್ (79; 72ಎ, 8ಬೌಂ) ತಮೀಮ್ ಅವರೊಂದಿಗೆ ಸೇರಿ ಇನಿಂಗ್ಸ್‌ ಚಿತ್ರಣವನ್ನೇ ಬದಲಿಸಿಬಿಟ್ಟರು.

ಕಳೆದ ಎರಡು ವರ್ಷಗಳಲ್ಲಿ ನಿಗದಿಯ ಓವರ್‌ಗಳ ಕ್ರಿಕೆಟ್‌ನಲ್ಲಿ ಉತ್ತಮ ಸಾಧನೆ ಮಾಡುತ್ತಿರುವ ಬಾಂಗ್ಲಾ ತಂಡವು ಇಲ್ಲಿಯೂ ಶ್ರೇಷ್ಠ ಮೊತ್ತ ಕಲೆಹಾಕಲು ಕಾರಣರಾದರು.

ಇವರಿಬ್ಬರ ಅಬ್ಬರಕ್ಕೆ ಮೂರನೇ ವಿಕೆಟ್ ಜೊತೆಯಾಟದಲ್ಲಿ 166 ರನ್‌ಗಳು ಹರಿದುಬಂದವು. ತಮೀಮ್ 105 ಎಸೆತಗಳಲ್ಲಿ ಶತಕ ಪೂರೈಸಿದರು. ಮುಷ್ಫೀಕರ್ 48 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿದರು.

ತಂಡದ ಮೊತ್ತವು 261 ರನ್‌ಗಳಿಗೆ ಮುಟ್ಟಿತ್ತು. 45ನೇ ಓವರ್‌ನಲ್ಲಿ ಇಕ್ಬಾಲ್  ಅವರು ಪ್ಲಂಕೆಟ್ ಎಸೆತದಲ್ಲಿ ವಿಕೆಟ್‌ಕೀಪರ್ ಜಾಸ್ ಬಟ್ಲರ್‌ಗೆ ಕ್ಯಾಚಿತ್ತರು. 
ನಂತರದ ಎಸೆತದಲ್ಲಿ ರಹೀಮ್ ಕೂಡ ನಿರ್ಗಮಿಸಿದರು.

ಆದರೆ, ಶಬ್ಬೀರ್ ರೆಹಮಾನ್ (24ರನ್) ಮತ್ತು ಶಕೀಬ್ ಅಲ್ ಹಸನ್ (10ರನ್ ) ಅವರು ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು.

ಹೇಲ್ಸ್‌, ರೂಟ್ ಮಿಂಚು
ದೊಡ್ಡ ಗುರಿಯನ್ನು ಬೆನ್ನತ್ತಿದ ಆತಿಥೇಯ ತಂಡವು ಆರಂಭದಲ್ಲಿಯೇ ಆಘಾತ ಅನುಭವಿಸಿತು.

ಮೂರನೇ ಓವರ್‌ನಲ್ಲಿ ಮಷ್ರಫೆ ಮೊರ್ತಜಾ ಅವರ ಎಸೆತದಲ್ಲಿ ಜೇಸನ್ ರಾಯ್ ಔಟಾದರು. ಆಗ ಸಂಭ್ರಮಿಸಿದ ಬಾಂಗ್ಲಾ ಆಟಗಾರರಿಗೆ ಮತ್ತೆ ಖುಷಿಪಡುವ ಅವಕಾಶವನ್ನು ಅಲೆಕ್ಸ್ ಹೇಲ್ಸ್‌ (95; 86ಎ, 11ಬೌಂ, 2ಸಿ) ಮತ್ತು ಜೂ ರೂಟ್ ಕೊಡಲಿಲ್ಲ.

ಇಬ್ಬರೂ ಎರಡೆನೇ ವಿಕೆಟ್‌ ಜೊತೆಯಾಟದಲ್ಲಿ 164 ರನ್‌ಗಳನ್ನು ಗಳಿಸಿದರು. ಹೇಲ್ಸ್‌ ಶತಕ ಗಳಿಸಲು ಐದು ರನ್‌ಗಳ ಅಗತ್ಯವಿದ್ದಾಗ ಶಬ್ಬೀರ್ ರೆಹಮಾನ್ ಬೌಲಿಂಗ್‌ನಲ್ಲಿ ಔಟಾದರು.
ನಂತರ ರೂಟ್ ಜೊತೆಗೂಡಿದ ನಾಯಕ ಏಯಾನ್ ಮಾರ್ಗನ್ ಇನಿಂಗ್ಸ್‌  ಬೆಳೆಸಿದರು. ತಾಳ್ಮೆಯಿಂದ ಆಡಿದ್ದ ಇಬ್ಬರೂ ತಂಡವನ್ನು ಗೆಲುವಿನತ್ತ ನಡೆಸಿದರು.

ಸಂಕ್ಷಿಪ್ತ ಸ್ಕೋರು
ಬಾಂಗ್ಲಾದೇಶ:
50 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 305 (ತಮೀಮ್ ಇಕ್ಬಾಲ್ 128, ಸೌಮ್ಯ ಸರ್ಕಾರ್ 28, ಇಮ್ರುಲ್ ಕೈಸ್ 19, ಮುಷ್ಫಿಕರ್ ರಹೀಮ್ 79, ಶಕೀಬ್ ಅಲ್ ಹಸನ್ 10, ಶಬ್ಬೀರ್ ರೆಹಮಾನ್ 24, ಲಿಯಾಮ್ ಪ್ಲಂಕೆಟ್ 59ಕ್ಕೆ4, ಜೇಕ್ ಬಾಲ್ 82ಕ್ಕೆ1, ಬೆನ್ ಸ್ಟೋಕ್ಸ್‌ 42ಕ್ಕೆ1), ಇಂಗ್ಲೆಂಡ್: 41 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 244 (ಅಲೆಕ್ಸ್‌ ಹೇಲ್ಸ್‌ 95, ಜೋ ರೂಟ್ ಔಟಾಗದೆ 133, ಏಯಾನ್ ಮಾರ್ಗನ್ ಔಟಾಗದೆ 75, ಮಷ್ರಫೆ ಮೊರ್ತಜಾ 44ಕ್ಕೆ1, ಶಬ್ಬೀರ್ ರೆಹಮಾನ್ 13ಕ್ಕೆ1).

ಫಲಿತಾಂಶ: ಇಂಗ್ಲೆಂಡ್ ತಂಡಕ್ಕೆ 8 ವಿಕೆಟ್‌ಗಳ ಜಯ
ಪಂದ್ಯಶ್ರೇಷ್ಠ: ಜೋ ರೂಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT