ಬಾಣಗಳಂತೆ ಎದುರಾದ ಪ್ರಶ್ನೆಗಳಿಗೆ ಕಕ್ಕಾಬಿಕ್ಕಿ!

7

ಬಾಣಗಳಂತೆ ಎದುರಾದ ಪ್ರಶ್ನೆಗಳಿಗೆ ಕಕ್ಕಾಬಿಕ್ಕಿ!

Published:
Updated:
ಬಾಣಗಳಂತೆ ಎದುರಾದ ಪ್ರಶ್ನೆಗಳಿಗೆ ಕಕ್ಕಾಬಿಕ್ಕಿ!

ಬೆಂಗಳೂರು: ರಾಜ್ಯದ ವಿವಿಧೆಡೆಗಳಿಂದ ಬಂದಿದ್ದ ಮಕ್ಕಳಿಂದ ಬಾಣಗಳಂತೆ ಪ್ರಶ್ನೆಗಳು ತೂರಿ ಬರುತ್ತಿದ್ದವು. ಕೆಲವು ಪ್ರಶ್ನೆಗಳಿಗೆ ಮುಖ್ಯಮಂತ್ರಿ ನೇರವಾಗಿ ಉತ್ತರಿಸಿದರು. ಹಲವು ಪ್ರಶ್ನೆಗಳಿಗೆ ಹಾಸ್ಯ ಚಟಾಕಿ ಹಾರಿಸಿದರು, ಕೆಲವೊಮ್ಮೆ ಕಕ್ಕಾಬಿಕ್ಕಿಯಾದರು!

ಕೆಲವು ಮಕ್ಕಳು ತಮಾಷೆಯಾಗಿ ಪ್ರಶ್ನೆ ಕೇಳಿದರು. ಅನೇಕರು ಗಂಭೀರ ಪ್ರಶ್ನೆಗಳನ್ನು ಹಾಕಿದರು. ಮೌಢ್ಯದಿಂದ ಬರಗಾಲದವರೆಗೆ, ಆರ್‌ಟಿಇ ಕಾಯ್ದೆಯಿಂದ ಮಾದಕ ವಸ್ತು ಮಾರಾಟದವರೆಗೆ ವ್ಯಾಪಿಸಿದ್ದ ಸಂವಾದ ಕಾರ್ಯಕ್ರಮ ಅನೇಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿತ್ತು.

‘ಏನಮ್ಮಾ ಅಸೆಂಬ್ಲಿಗೆ ಬಂದಂತೆ ಬಂದಿದ್ದೀಯಾ. ಶಾಲೆಗೆ ಹೋಗೋದು ಬಿಟ್ಟು ಸರ್ವೆ ಮಾಡಿದ್ದೀಯಾ ಎಂದು ಚಿತ್ರದುರ್ಗದ ವಿದ್ಯಾರ್ಥಿ ನಯನಾ ಒ. ಜೋಗಿಗೆ ಮುಖ್ಯಮಂತ್ರಿ ಮರು ಪ್ರಶ್ನೆ ಕೇಳಿದಾಗ ಸಭಾಂಗಣದಲ್ಲಿ ನಗೆಗಡಲು.

‘ಕಾರಿನ ಮೇಲೆ ಕಾಗೆ ಕೂತ್ರೆ ನನ್ನ ಸೀಟು ಹೋಗುತ್ತೆ ಅಂದ್ರು. ಚಾಮರಾಜ ನಗರಕ್ಕೆ ಹೋದ್ರೆ ಅಧಿಕಾರ ಹೋಗುತ್ತೆ ಅಂದ್ರು. ನಾನು 11 ಬಾರಿ ಚಾಮರಾಜನಗರಕ್ಕೆ ಹೋಗಿ ಬಂದಿದ್ದೇನೆ. ನಾಲ್ಕು ವರ್ಷ ಆಗಿದೆ. ನನ್ನ ಕುರ್ಚಿ ಇನ್ನೂ ಹೋಗಿಲ್ಲ. ಮುಂದೆ ಕೂಡ ನಾನೇ ಸಿಎಂ ಆಗ್ತೇನೆ’ ಎಂದು ಮುಖ್ಯಮಂತ್ರಿ ಹೇಳಿದಾಗ ಜೋರಾದ ಚಪ್ಪಾಳೆ.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಹಾಗೂ ಯುನಿಸೆಫ್ ಜಂಟಿಯಾಗಿ ವಿಕಾಸ ಸೌಧದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮುಖ್ಯಮಂತ್ರಿ ಜೊತೆ ಮಕ್ಕಳ ಸಂವಾದ ಕಾರ್ಯಕ್ರಮವದು. ಎರಡೂವರೆ ತಾಸಿಗೂ ಹೆಚ್ಚು ಸಮಯ ನಡೆದ ಸಂವಾದದಲ್ಲಿ 30 ಜಿಲ್ಲೆಗಳಿಂದ ಬಂದಿದ್ದ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

‘ಗುಳೇ ಹೋಗೋದನ್ನ ತಡೆಯಲು ಸರ್ಕಾರ ಏನು ಕ್ರಮ ತೆಗೆದುಕೊಂಡಿದೆ’ ಎಂದು ಗದಗದ ವಿದ್ಯಾರ್ಥಿಯೊಬ್ಬ ಕೇಳಿದಾಗ, ‘ಬರಗಾಲವಿದ್ದರೂ ಗುಳೇ ಹೋಗುವ ಪ್ರಮಾಣ ಕಡಿಮೆಯಾಗಿದೆ. ಅನ್ನಭಾಗ್ಯ ಯೋಜನೆ ಇದಕ್ಕೆ ಸಹಕಾರಿಯಾಗಿದೆ. ಶಾಲಾ ಮಕ್ಕಳಿಗೆ ಐದು ದಿನ ಹಾಲು ನೀಡುತ್ತಿದ್ದೇವೆ. ಎರಡು ಹೊತ್ತು ಊಟ ಸಿಗುತ್ತಿದೆ. ಪೋಷಕರಿಗೆ ಹಲವು ಕಾರ್ಯಕ್ರಮ ಹಾಕಿಕೊಂಡಿದ್ದೇವೆ. ಕೌಶಲ ತರಬೇತಿ ಕಾರ್ಯಕ್ರಮ ಹಾಕಿಕೊಂಡಿದ್ದೇವೆ’ ಎಂದು ಮುಖ್ಯಮಂತ್ರಿ ವಿವರಿಸಿದರು.

‘ಸ್ಕಾಲರ್ ಶಿಪ್ ನೀಡುವಲ್ಲಿ ತಾರತಮ್ಯ ಆಗುತ್ತಿದೆ. 85 ಅಂಕ ಪಡೆದ ಎಲ್ಲ ಮಕ್ಕಳಿಗೆ ಸ್ಕಾಲರ್‌ಶಿಪ್‌ ನೀಡಬೇಕು’ ಎಂದು ಯಾದಗಿರಿಯ ಜ್ಯೋತಿ ಆಗ್ರಹಿಸಿದಳು. ‘ಪರಿಶಿಷ್ಟರಿಗೆ ಮತ್ತು ಅಲ್ಪಸಂಖ್ಯಾತರಿಗೆ ಸ್ಕಾಲರ್‌ಶಿಪ್‌ ನೀಡುತ್ತಿದ್ದೇವೆ. ಎಲ್ಲರಿಗೂ ಸ್ಕಾಲರ್ ನೀಡಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರ ಶೇಕಡಾ 50ರಷ್ಟು ಕೊಡುತ್ತೆ. ಒಂದು ವೇಳೆ ಎಲ್ಲ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ಸ್ಕಾಲರ್ ಶಿಪ್ ನೀಡಿದ್ರೆ, ನಾವೂ ನೀಡುತ್ತೇವೆ’ ಎಂದು ಸಿದ್ದರಾಮಯ್ಯ ಮಾರುತ್ತರ ನೀಡಿದರು.

‘ಹಾಸ್ಟೆಲ್ ಸಿಬ್ಬಂದಿ ಕಿರುಕುಳ ಕೊಡ್ತಾರೆ. ಊಟ ಸರಿಯಾಗಿ ಕೊಡಲ್ಲ. ಹಾಸ್ಟೆಲ್‌ನಲ್ಲಿ 15 ದಿನ ಇದ್ದು  ಕೆಟ್ಟ ಅನುಭವ ಆಗಿದೆ. ಋತುಸ್ರಾವವಾದಾಗ ಅಗತ್ಯ ವಸ್ತುಗಳನ್ನು ಕೇಳಿದ್ರೆ  ಕೊಡಲ್ಲ’ ಎಂದು ಬೆಂಗಳೂರಿನ ನಿಮ್ಹಾನ್ಸ್ ಬಳಿಯ ಹಾಸ್ಟೆಲ್ ಬಗ್ಗೆ ವಿದ್ಯಾರ್ಥಿನಿಯೊಬ್ಬಳು ಅಳಲು ತೋಡಿಕೊಂಡಳು.

ಸ್ಥಳದಲ್ಲೇ ಇದ್ದ ಅಧಿಕಾರಿಗೆ, ಹಾಸ್ಟೆಲ್‌ಗೆ ಭೇಟಿ ನೀಡಿ ಪರಿಶೀಲಿಸುವಂತೆ ಮುಖ್ಯಮಂತ್ರಿ ಆದೇಶ ನೀಡಿದರು. ‘ಹಾಸ್ಟೆಲ್ ಸಿಬ್ಬಂದಿಯ ತಪ್ಪಿದ್ದರೆ ಕ್ರಮ ಕೈಗೊಳ್ಳಿ’ ಎಂದೂ ಮುಖ್ಯಮಂತ್ರಿ ಸೂಚಿಸಿದರು.

‘ಸಣ್ಣ ಜ್ವರ ಬಂತು ಎಂದು ಮಗುವೊಂದನ್ನು ಕೆ.ಸಿ. ಜನರಲ್ ಆಸ್ಪತ್ರೆಗೆ ಸೇರಿಸಿದ್ರು. ಬಳಿಕ ತಪ್ಪು ಚಿಕಿತ್ಸೆಯಿಂದ ಮಗುವಿನ ಆರೋಗ್ಯ ಹದಗೆಟ್ಟಿದೆ. ಎಲ್ಲ ಸರ್ಕಾರಿ ಆಸ್ಪತ್ರೆಗಳು ಹೀಗೆಯೇ ಇದ್ಯಾ’ ಎಂದು ವಿದ್ಯಾರ್ಥಿನಿಯೊಬ್ಬಳು ಕೇಳಿದಳು ‘ಎಲ್ಲಾ ಸರ್ಕಾರಿ ಆಸ್ಪತ್ರೆಗಳ ವೈದ್ಯರು ನಿರ್ಲಕ್ಷ್ಯ ಮಾಡಲ್ಲ. ಆದರೆ ಇಂಥ ಘಟನೆ ನಡೆದರೆ ಸಂಬಂಧಪಟ್ಟ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ’ ಎಂದರು ಮುಖ್ಯಮಂತ್ರಿ.

ಮುಜುಗರಕ್ಕೆ ಈಡಾದ ಆಯುಕ್ತೆ!: ಸಾಕ್ಷರತೆ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ವಿದ್ಯಾರ್ಥಿಯೊಬ್ಬ ಹೇಳುತ್ತಿದ್ದಂತೆ, ಮಧ್ಯಪ್ರವೇಶ ಮಾಡಿದ ಮುಖ್ಯಮಂತ್ರಿ, ‘ರಾಜ್ಯದಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚಾಗಿದೆ. ಸುಮಾರು ಶೇಕಡ 76 ರಷ್ಟು ಇದೆ. ಏನಮ್ಮ.. ರಾಜ್ಯದಲ್ಲಿ ಸರಿಯಾಗಿ ಸಾಕ್ಷರತೆ ಪ್ರಮಾಣ ಎಷ್ಟಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತೆ ಸೌರ್ಜನ್ಯಾ ಅವರನ್ನು ಪ್ರಶ್ನಿಸಿದರು.

ಈ ಪ್ರಶ್ನೆಗೆ ಮೌನ ವಹಿಸಿದಾಗ, ‘ನೀನು ಆಯುಕ್ತೆ ಅಲ್ವಾಮ್ಮ ನಿನ್ಗೆ ಗೊತ್ತಿಲ್ವಾ... ಎಷ್ಟಿದೆ ಸಾಕ್ಷರತೆ ಪ್ರಮಾಣ’ ಎಂದು ಗದರಿದರು.

**

‘ನಾನೂ ಸಿಗರೇಟು ಸೇದುತ್ತಿದ್ದೆ!’

‘ನಾನೂ ಸಿಗರೇಟು ಸೇದುತ್ತಿದ್ದೆ. ಈಗ ಸಿಗರೇಟು ಸೇದೋದನ್ನ ಬಿಟ್ಟಿದ್ದೇನೆ. ವೈಯಕ್ತಿಕವಾಗಿ ಸಮಸ್ಯೆ ಆದ್ರೆ ಸಿಗರೇಟು ಸೇದೋದನ್ನ ಬಿಟ್ಟು ಬಿಡುತ್ತಾರೆ’

–ಕೆ.ಆರ್. ಪುರಂ ವಿದ್ಯಾರ್ಥಿನಿ ದೀಪಿಕಾ ಮಾದಕ ವಸ್ತು ಮಾರಾಟದ ಬಗ್ಗೆ ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿ ಉತ್ತರಿಸಿದ್ದು ಹೀಗೆ.

‘ಎ. ನಾರಾಯಣಪುರದಲ್ಲಿ ಮಾದಕ ವಸ್ತು ಮಾರಾಟ ಹೆಚ್ಚಾಗಿದೆ. ಚಿಕ್ಕ ಮಕ್ಕಳೂ ಮಾದಕ ವಸ್ತುಗಳನ್ನು ಮಾರಾಟ ಮಾಡ್ತಿದ್ದಾರೆ. ಮಾದಕ ವಸ್ತುಗಳ ಮಾರಾಟದ ವಿರುದ್ದ ಯಾವ ಕ್ರಮ ಕೈಗೊಳ್ತೀರಿ’ ಎಂದಾಗ, ‘ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ಸಿಗರೇಟ್ ಮೇಲೆ ಬರೆದಿರುತ್ತೆ. ಆದರೆ ಸಿಗರೇಟ್ ಸೇದೋರು ಅದನ್ನ ಓದೇ ಸೇದುತ್ತಾರೆ. ನಾನೂ ಸಿಗರೇಟ್ ಸೇದುತ್ತಿದ್ದೆ. ತೊಂದರೆ ಆದ ಮೇಲೆ ಬಿಟ್ಟೆ. ಗುಟ್ಕಾ, ಸಿಗರೇಟು ಕೆಟ್ಟ ಅಭ್ಯಾಸಗಳು. ಇದನ್ನ ತಡೆಗಟ್ಟಲು ಕಾನೂನಿದೆ. ಎ. ನಾರಾಯಣ ಪುರ ವ್ಯಾಪ್ತಿಯ ಡಿಸಿಪಿಗೆ ಹೇಳ್ತೀನಿ’ ಎಂದೂ ಧ್ವನಿಗೂಡಿಸಿದರು.

ಅಷ್ಟೇ ಅಲ್ಲ, ಡಿಸಿಪಿಗೆ ಕರೆ ಮಾಡಿದ ಮುಖ್ಯಮಂತ್ರಿ, ‘ಕೆ.ಆರ್.ಪುರಂನಲ್ಲಿ ಡ್ರಗ್ಸ್ ಮಾರಾಟ ಮಾಡ್ತಿದ್ದಾರೆ ಎಂದು ಇಲ್ಲೊಂದು ಮಗು ಹೇಳುತ್ತಿದೆ. ತಕ್ಷಣ ಈ ಬಗ್ಗೆ ತನಿಖೆ ಮಾಡಿ ವರದಿ ಕೊಡಿ. ಡ್ರಗ್ಸ್ ಮಾರಾಟ  ಮಾಡ್ತಿರೋರ ಮೇಲೆ ಕ್ರಿಮಿನಲ್ ಕೇಸ್ ಹಾಕಿ. ಕಾನೂನು ರೀತಿ ಕಠಿಣ ಕ್ರಮ ಕೈಗೊಳ್ಳಿ’ ಎಂದು ಸೂಚಿಸಿದರು.

‘ಸಿ.ಎಂ. ಸರ್... ಎರಡು ವರ್ಷದಿಂದ ನಮ್ಮ ಶಾಲೆಯಲ್ಲಿ ಹಾಲೇ ಕೊಡ್ತಿಲ್ಲ ಯಾಕೆ’ ಎಂದು ಇಂಡಿ ತಾಲ್ಲೂಕಿನ ವಿದ್ಯಾರ್ಥಿಯೊಬ್ಬ ದೂರಿದ.

‘ಆ ರೀತಿ ಆಗಲು ಸಾಧ್ಯವೇ ಇಲ್ಲ. ಯಾಕಮ್ಮ ಅಲ್ಲಿ ಹಾಲು ಕೊಡ್ತಿಲ್ವಂತೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತೆಗೆ ಮುಖ್ಯಮಂತ್ರಿ ಕೇಳಿದರು.

ಕಕ್ಕಾಬಿಕ್ಕಿಯಾದ ಆಯುಕ್ತೆ, ‘ಆ ರೀತಿ ಆಗಲು ಸಾಧ್ಯ ಇಲ್ಲ. ಎಲ್ಲ ಶಾಲೆಗಳಲ್ಲೂ ಹಾಲು ಕೊಡುತ್ತಿದ್ದೇವೆ. ಇಂಡಿ ಶಾಲೆಯ ಮಾಹಿತಿ ಪಡೆಯುತ್ತೇನೆ’ ಎಂದರು.

‘ಖಾಸಗಿ ಶಾಲೆ ಬಿಟ್ಟು ಸರ್ಕಾರಿ ಶಾಲೆಗೆ ಹೋಗೋದು ಒಳ್ಳೆಯದು’ ಎಂದು ಮುಖ್ಯಮಂತ್ರಿ ಹೇಳಿದಾಗ, ‘ಸರ್ಕಾರಿ ಶಾಲೆಯಲ್ಲಿ ಮೂಲ ಸೌಕರ್ಯ ಇಲ್ಲ. ಹಾಗಾಗಿ ಆಂಗ್ಲ ಶಾಲೆಗೆ ಸೇರಿದೆ’ ಎಂದು ವಿದ್ಯಾರ್ಥಿನಿಯೊಬ್ಬಳು ಮಾರುತ್ತರ ನೀಡಿದಳು.

‘ಖಾಸಗಿ ಶಾಲೆ ಸೇರೋದು ತಪ್ಪು. ನೀನು ನಿನ್ನ ಪೋಷಕರ ಒತ್ತಾಯದಿಂದ ಇಂಗ್ಲಿಷ್ ಶಾಲೆ ಸೇರಿದ್ದೀಯಾ. ನಮ್ಮ ಹೆಸರಾಂತ ವಿಜ್ಞಾನಿ ಸಿ.ಎನ್. ರಾವ್ ಕನ್ನಡ ಮಾಧ್ಯಮದಲ್ಲಿ ಓದಿದ್ದರು. ಅವ್ರು ದೊಡ್ಡ ವಿಜ್ಞಾನಿ ಆಗಿಲ್ಲವೇ? ಎಂದೂ ಸಿದ್ದರಾಮಯ್ಯ ಕೇಳಿದರು.

ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಅಡಿ ಸೀಟು ಪಡೆದ ವಿದ್ಯಾರ್ಥಿಗಳಿಗೆ ಖಾಸಗಿ ಶಾಲೆಗಳಲ್ಲಿ ಕಿರುಕುಳ ಕೊಡುತ್ತಿದ್ದಾರೆ ಎಂದು ಮಂಡ್ಯ ಜಿಲ್ಲೆಯ ವಿದ್ಯಾರ್ಥಿನಿಯೊಬ್ಬಳು ಆರೋಪಿಸಿದಳು.

**

‘ಮುಂದೆಯೂ ನಾನೇ ಸಿಎಂ ಆಗ್ತೀನಿ’

‘ಮುಂದೆಯೂ ನಾನೇ ಸಿ.ಎಂ. ಆಗ್ತೀನಿ’ ಎಂದು ಮಕ್ಕಳಿಗೆ ಸಿದ್ದರಾಮಯ್ಯ ಭರವಸೆ ನೀಡಿದರು.

‘ವಾಮಾಚಾರ, ಮೂಢನಂಬಿಕೆ ಹೆಸರಲ್ಲಿ ಮಕ್ಕಳ ಬಲಿ ನೀಡಲಾಗುತ್ತಿದೆ. ಇದರ ಬಗ್ಗೆ ಸರ್ಕಾರ ಯಾವ ಕ್ರಮ ಕೈಗೊಂಡಿದೆ’ ಎಂದು ರಾಮನಗರದ ಅಮೂಲ್ಯ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, ‘ಸಮಾಜದಲ್ಲಿರುವ  ಮೌಢ್ಯ ತಡೆಯಲು ಕಾಯ್ದೆ ತರುತ್ತಿದ್ದೇವೆ. ಮನುಷ್ಯನ ಮೇಲೆ ದೆವ್ವ ಬರುವುದು, ದೇವರು ಬರುವುದು, ಶನಿ ಮಹಾತ್ಮ ಬರುತ್ತಾನೆ ಎಂದು ಹೇಳೋದು ಮೂಢನಂಬಿಕೆ’ ಎಂದು ವಿವರಿಸಿದರು.

**

ಶಿಕ್ಷಣ ಜ್ಞಾನದ ತಳಹದಿ. ಎಲ್ಲರೂ ಎಂಜಿನಿಯರ್‌, ವೈದ್ಯರಾದರೆ, ವಿಜ್ಞಾನಿಗಳು, ಉಪನ್ಯಾಸಕರು ಆಗುವವರು ಯಾರು?

-ಸಿದ್ದರಾಮಯ್ಯ, ಮುಖ್ಯಮಂತ್ರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry