ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಟ ಬಿಟ್ಟವರ ಪಥ್ಯ

Last Updated 2 ಜೂನ್ 2017, 19:30 IST
ಅಕ್ಷರ ಗಾತ್ರ

‘ಧೂಮಪಾನ ನಿಲ್ಲಿಸಿದ ನಂತರ ತಮಗೆ ಮೈಗ್ರೇನ್‌ (ಅರೆ ತಲೆನೋವು) ನಿಂತುಹೋಯಿತು’ ಎಂದು ನಟ ಕಿಚ್ಚ ಸುದೀಪ್‌ ಹಿಂದೊಮ್ಮೆ ಹೇಳಿಕೊಂಡಿದ್ದರು.

‘ಸಿಗರೇಟ್ ಸೇದಿದ ನಂತರದ ಅರ್ಧ ಗಂಟೆ ಎದೆಯಲ್ಲಿ ಏನೋ ಸಿಕ್ಕಿಹಾಕಿಕೊಂಡ ಹಾಗೆ ಅನಿಸುತ್ತಿತ್ತು. ಏನೇ ತಿಂದರೂ ರುಚಿಸುತ್ತಿರಲಿಲ್ಲ. ಆರು ತಿಂಗಳ ಹಿಂದೆ ಟೈಫಾಯ್ಡ್‌ ಜ್ವರ ಬಂದಾಗ ಸಿಗರೇಟ್‌ ಸೇದುವ ಅವಕಾಶ ಸಿಗುತ್ತಿರಲಿಲ್ಲ. ಹಾಗೆಯೇ ಆ ಚಟ ಬಿಟ್ಟು ಹೋಯಿತು. ಈಗ ನಾಲಿಗೆ ದಪ್ಪವಾಗಿದೆ ಅನಿಸುತ್ತಿಲ್ಲ. ಎಲ್ಲ ಬಗೆಯ ರುಚಿಗಳೂ ಹಿತವೆನಿಸುತ್ತವೆ. ಇನ್ನು ಮುಂದೆ ಸೇದಲಾರೆ’ ಎಂದರು ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಶಮಿಕಾ.

ಸಿಗರೇಟ್‌ನಲ್ಲಿರುವ ವಿಷಯುಕ್ತ ಅಂಶಗಳು ದೇಹದ ಮೇಲೆ ನಾನಾ ರೀತಿಯಲ್ಲಿ ದುಷ್ಪರಿಣಾಮ ಬೀರುತ್ತವೆ. ಉತ್ತಮ ಆಹಾರ ಕ್ರಮದಿಂದ ಆರೋಗ್ಯವನ್ನು ಮತ್ತೆ ಸುಸ್ಥಿತಿಗೆ ತರಬಹುದು.

ವಿಟಮಿನ್‌ ಮತ್ತು ಫೋಲಿಕ್‌ ಆಮ್ಲ ಹೆಚ್ಚಾಗಿರುವ ಕಾರಣ ಸೊಪ್ಪುಗಳನ್ನು ವಿವಿಧ ರೂಪದಲ್ಲಿ ಸೇವಿಸುವುದು ಸೂಕ್ತ.   ಧೂಮಪಾನದಿಂದಾಗಿ ಮಲಬದ್ಧತೆ ಉಂಟಾಗಿದ್ದರೆ ಸೊಪ್ಪಿನಲ್ಲಿರುವ ನಾರಿನಂಶ ಪರಿಹಾರ ಒದಗಿಸುತ್ತದೆ.

*
ದ್ರವಾಹಾರ: ಧೂಮಪಾನದ ಪರಿಣಾಮ ದೇಹದಲ್ಲಿ ನೀರಿನಂಶ ಮತ್ತು ರಕ್ತದಲ್ಲಿ ಆಮ್ಲಜನಕದಂಶ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿರುತ್ತದೆ. ಇದನ್ನು ಮರುಪೂರಣ ಮಾಡಬೇಕಾದುದು ಅತ್ಯವಶ್ಯ. ಹಾಗಾಗಿ ಯಥೇಚ್ಛವಾಗಿ ನೀರು, ಎಳನೀರು, ಕೊತ್ತಂಬರಿ ಮತ್ತು ಜೀರಿಗೆ ಕಷಾಯ ಸೇವಿಸಿದರೆ ಜೀರ್ಣಾಂಗ ವ್ಯವಸ್ಥೆ ಮತ್ತು ರಕ್ತ ಸಂಚಲನಕ್ಕೆ ಸಹಕಾರಿ. ಹೃದಯ ಆರೋಗ್ಯಕರವಾಗಿ ಕೆಲಸ ಮಾಡಬಲ್ಲದು.

*


ಬ್ರೊಕೋಲಿ: ಕೊತ್ತಂಬರಿ ಸೊಪ್ಪಿನ ಗಂಟಿನಂತೆ ಕಾಣುವ ಬ್ರೊಕೋಲಿಯನ್ನು ಹಸಿ ಸಲಾಡ್‌ ಮತ್ತು ಜ್ಯೂಸ್‌ ರೂಪದಲ್ಲಿ ಸೇವಿಸಬಹುದು. ಕಲ್ಮಶಗಳನ್ನು ನಿವಾರಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ.

*


ಹಣ್ಣುಗಳು: ಹುಳಿ ಮಿಶ್ರಿತ ಸಿಹಿ ಅಥವಾ ಒಗರು ಅಂಶವಿರುವ ಬೆರ್ರಿಗಳನ್ನು (ಸ್ಟ್ರಾಬೆರ್ರಿ, ಬ್ಲ್ಯೂಬೆರ್ರಿ, ಬ್ಲ್ಯಾಕ್‌ಬೆರ್ರಿ) ಜಗಿದು ತಿನ್ನುವುದು ಸಹಕಾರಿ. ಕಿತ್ತಳೆ ಹಣ್ಣನ್ನು ತಿನ್ನುವುದು ಇಲ್ಲವೇ ರಸ ಸೇವಿಸುವುದರಿಂದ ತಕ್ಷಣದ ಪರಿಹಾರ ಕಂಡುಕೊಳ್ಳಬಹುದು. ದಾಳಿಂಬೆ ಹಣ್ಣು ಸಹ ಅತ್ಯುತ್ತಮ ಆಯ್ಕೆ.

*


ಮೊಳಕೆಕಾಳು: ಹೆಸರು, ಮೆಂತೆ, ಕಡಲೆ, ಅಲಸಂದೆ ಕಾಳುಗಳನ್ನು ಆರು ಗಂಟೆ ನೀರಿನಲ್ಲಿ ನೆನೆಹಾಕಿ ಮೊಳಕೆ ಕಟ್ಟಿ ಹಸಿಯಾಗಿ ತಿನ್ನುವುದರಿಂದ ಧೂಮಪಾನದಿಂದ ಉಂಟಾದ ಮಲಬದ್ಧತೆ ಎರಡೇ ದಿನದೊಳಗೆ ನಿವಾರಣೆಯಾಗಬಲ್ಲದು.

*


ಪಾಲಕ್‌ ಸೊಪ್ಪು: ಇದರಲ್ಲಿ ಫೋಲಿಕ್ ಆಮ್ಲ ಮತ್ತು ಬಹುವಿಧ ವಿಟಮಿನ್‌ಗಳು ಸಮೃದ್ಧವಾಗಿವೆ. ಪಾಲಕ್‌ ಸೊಪ್ಪನ್ನು ಸಾರು, ಪಲ್ಯ, ಬಾತ್‌, ದೋಸೆ, ಚಪಾತಿ, ಮಸೊಪ್ಪು ಹೀಗೆ ಹಲವು ರೀತಿಯಲ್ಲಿ ಬಳಸಬಹುದು. ಧೂಮಪಾನದಿಂದಾಗಿ ಶ್ವಾಸಕೋಶದಲ್ಲಿ ತುಂಬಿಕೊಂಡಿರುವ ವಿಷಕಾರಿ ಅಂಶಗಳ ಪ್ರಭಾವವನ್ನೂ ಪಾಲಕ್‌ ಸೊಪ್ಪು ತಗ್ಗಿಸಬಲ್ಲದು.

*


ಮೆಂತ್ಯೆ ಸೊಪ್ಪು: ಹೆಚ್ಚಿನ ನಾರಿನಂಶ, ನೀರಿನಂಶ, ಕಬ್ಬಿಣದ ಅಂಶವಿರುವ ಮೆಂತೆ ಸೊಪ್ಪನ್ನು ಉಪಾಹಾರ ಮತ್ತು ಇತರ ಆಹಾರದ ರೂಪದಲ್ಲಿ ಸೇವಿಸುವುದು ಪರಿಣಾಮಕಾರಿ.

*


ಕ್ಯಾರೆಟ್‌, ಸೌತೆಕಾಯಿ: ನಾರಿನಂಶ ಹೆಚ್ಚಾಗಿರುವ ಕ್ಯಾರೆಟ್‌, ಎಳೆ ಸೌತೆಕಾಯಿಯನ್ನು ಸಲಾಡ್‌ ರೂಪದಲ್ಲಿ ಅಥವಾ ಹಸಿಯಾಗಿ ಕಚ್ಚಿ ತಿನ್ನುವುದು ಹಸಿವು, ಗ್ಯಾಸ್‌ ಟ್ರಬಲ್‌, ಮಲಬದ್ಧತೆ, ತಲೆನೋವಿನಂಥ ಸಮಸ್ಯೆಗೆ ಪರಿಹಾರ. ಕ್ಯಾರೆಟ್‌ನಲ್ಲಿರುವ ವಿಟಮಿನ್‌ಗಳು ರಕ್ತವನ್ನು ಶುದ್ಧೀಕರಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT