ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತೆಯಲ್ಲಿನ ಒಂಟಿ ಬದುಕು...

Last Updated 2 ಜೂನ್ 2017, 19:30 IST
ಅಕ್ಷರ ಗಾತ್ರ

ಕೂಡುಕುಟುಂಬಗಳನ್ನು ಹತ್ತಿರದಿಂದ ನೋಡಿಯೂ ಗೊತ್ತಿರದ ನಮ್ಮಂತಹ ಇಂದಿನ ಪೀಳಿಗೆಯ ಯುವಕ/ಯುವತಿಯರಿಗೆ ಇದರಿಂದಾಗಿ ಆಗುತ್ತಿರುವ ಅತಿ ದೊಡ್ಡ ನಷ್ಟವೊಂದಿದೆ. ಒಂದು ಸಮಾಜದಲ್ಲಿ, ಸಮುದಾಯದಲ್ಲಿ ಬದುಕಲು ಅವಶ್ಯಕವಾದ ಹಲವಾರು ಸಮಷ್ಟಿ ಚಿಂತನೆಯ ಕಲೆಗಳು, ಅದನ್ನು ಕಲಿಸುವ ತಲೆಗಳು – ಎರಡೂ ಇಂದು ಮರೆಯಾಗಿವೆ.

ಕೂಡುಕುಟುಂಬಗಳು ಹೇಳಿಕೊಡುತ್ತಿದ್ದ ಕೊಡು-ಕೊಳ್ಳುವಿಕೆಯ ಪಾಠ, ಹಂಚಿ ಬದುಕುವ ಪರಿ, ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ನಮ್ಮೊಬ್ಬರ ಹಿತಮಾತ್ರವಲ್ಲದೆ ಜೊತೆಗಿರುವವರೆಲ್ಲರ ಹಿತ-ಅಹಿತಗಳನ್ನೂ ಗಣನೆಗೆ ತೆಗೆದುಕೊಂಡು ಮುನ್ನಡೆಯುವ ರೀತಿ – ಹೀಗೆ ಪ್ರತ್ಯೇಕತಾ ವಾದವನ್ನು ದೂರವಾಗಿಸಿ ಒಟ್ಟು ಸಮೂಹದ ಬಗ್ಗೆ ಚಿಂತಿಸುವುದನ್ನೇ ನಾವು ಇಂದು ಮರೆತಿದ್ದೇವೆ.

ಯಾವುದೇ ಕೆಲಸಕ್ಕೆ ಮುನ್ನವೂ ‘ನಾನಿದನ್ನು ಮಾಡಿದರೆ ಅದರಿಂದಾಗಿ ನನ್ನ ಸುತ್ತಲಿರುವವರ ಮೇಲೆ, ಸಮಾಜದ ಮೇಲೆ ಆಗುವ ಪರಿಣಾಮವೇನು’ ಎಂಬುದರ ಕಲ್ಪನೆಯೂ ನಮ್ಮ ತಲೆಯನ್ನು ಹೊಕ್ಕದ ಮಟ್ಟಕ್ಕೆ ನಮ್ಮ ಚಿಂತನೆ ಇಳಿದುಬಿಟ್ಟಿದೆ.

ಬಿಡಿಕುಟುಂಬಗಳ ಹೆಸರಿನಲ್ಲಿ ಮಕ್ಕಳು ಪೋಷಕರನ್ನು, ಪೋಷಕರು ಮಕ್ಕಳನ್ನು ದಿನದಲ್ಲೊಂದು ಬಾರಿ ಭೇಟಿಯಾಗುವುದೇ ಕಷ್ಟವಾಗಿರುವ ಇಂದಿನ ಪರಿಸ್ಥಿತಿಯಲ್ಲಿ ಸಹಜವಾಗಿಯೇ ಮನುಷ್ಯ ಸಂಬಂಧಗಳ ನಡುವಿನ ಕೊಂಡಿ ಕಳಚಿ, ಅದರ ಪ್ರಾಮುಖ್ಯ ಅಟ್ಟ ಸೇರಿರುವುದು ಆಶ್ಚರ್ಯವೇನಲ್ಲ.

ಒಂದೇ ಸೂರಿನ ಅಡಿಯಲ್ಲಿರುವವರ ಇಷ್ಟ-ಕಷ್ಟಗಳನ್ನು ಅರಿತಿರದ ನಮಗೆ ದೂರದ ದೇಶದ ಯಾವುದೋ ಆಟಗಾರ ತೊಟ್ಟ ಉಡುಗೆಯ ಬೆಲೆ ಗೊತ್ತು, ಮತ್ತಾವುದೋ ನಟಿಯ ವೈಯಕ್ತಿಕ ಜೀವನದ ಆಗು-ಹೋಗುಗಳ ಪೂರ್ಣ ಮಾಹಿತಿಯೂ ಗೊತ್ತು; ಮುಖಪರಿಚಯವೂ ಇಲ್ಲದ ಫೇಸ್ಬುಕ್ ಗೆಳೆಯರ ಹುಟ್ಟುಹಬ್ಬ, ಮದುವೆ, ಊಟ-ತಿಂಡಿಗಳ ಅರಿವೂ ಉಂಟು.

ಇವೆಲ್ಲದರ ಪರಿಣಾಮವೆಂಬಂತೆ ಸಹಜವಾಗಿಯೇ ನಾವು ಇಂದಿನ ನಮ್ಮ ಸಮಸ್ಯೆಗಳನ್ನು ಕುಟುಂಬದವರೊಂದಿಗೆ ಹಂಚಿಕೊಂಡು ಬಗೆಹರಿಸಿಕೊಳ್ಳುವ ಗೋಜಿಗೆ ಹೋಗದೆ ಅನಾಯಾಸವಾಗಿ ಸಾಮಾಜಿಕ ಜಾಲತಾಣಗಳ ಸ್ಟೇಟಸ್–ಪೆಟ್ಟಿಗೆಗಳಲ್ಲಿ ಅವುಗಳನ್ನು ಪ್ರದರ್ಶನಕ್ಕಿಡುತ್ತಿದ್ದೇವೆ. ಉತ್ತರ ಸಿಗದ ಈ ಸಮಸ್ಯೆಗಳಿಗೆ ಲೈಕ್‌ಗಳ ಕೊರತೆಯೇನೂ ಇಲ್ಲ, ಆದರೆ ಮೊದಲಿನಂತೆ  – ಕಣ್ತುಂಬಿ ಬಂದಾಗ ಹೋಗಿ ಮಲಗಿ ಬಿಕ್ಕಳಿಸಲು ಇಂದು ಅಜ್ಜಿ-ತಾಯಿಯರ ಮಡಿಲು ಇಲ್ಲ.

ಮನೆಯ ವಾತಾವರಣ ಹಿತಕರವಾಗಿದ್ದರೆ, ನಮ್ಮ ಎಲ್ಲ ಕೆಲಸ-ಕಾರ್ಯಗಳಿಗೆ ಮನೆಯವರ ಬೆಂಬಲವಿದ್ದರೆ, ಕುಟುಂಬ ನಮ್ಮ ಬೆನ್ನಿಗೆ ನಿಂತರೆ ಜಗತ್ತನ್ನು ಗೆದ್ದು ಬರುವ ಸಾಮರ್ಥ್ಯ ನಮ್ಮ ತೋಳುಗಳಿಗೆ ತಾನಾಗಿಯೇ ಬರುತ್ತದೆ. ಹೊರಗಿನ ಪ್ರಪಂಚದ ಸವಾಲುಗಳೇನೇ ಇರಲಿ, ಮನೆಗೆ ಹಿಂದಿರುಗಿದ ಘಳಿಗೆ ‘ನನ್ನವರು ಅನ್ನಿಸಿಕೊಂಡ ಜನರು ನನ್ನೊಂದಿಗಿದ್ದಾರೆ, ನನಗಾಗಿ ಕಾಯುತ್ತಿದ್ದಾರೆ’ ಎಂಬ ಭಾವನೆಯೊಂದೇ ನಮ್ಮ ಎಷ್ಟೋ ತಲ್ಲಣಗಳನ್ನು ದೂರ ಮಾಡಿಬಿಡುತ್ತದೆ. ಆದರೆ ಇಂದು ನಾವು ನಮ್ಮ ಕೈಯ್ಯಾರೆ ಈ ಬೆಚ್ಚನೆಯ ಗೂಡಿಗೆ ಕಿಚ್ಚು ಹಚ್ಚಿ ಸುಡುವ ಕೆಲಸ ಮಾಡುತಿದ್ದೇವೆ ಎಂಬುದರ ಅರಿವು ನಮಗಾಗುತ್ತಿಲ್ಲ.

ನಡುಮಧ್ಯಾಹ್ನದ ದುಡಿತದ ಬಳಿಕ ಇಳಿಸಂಜೆಯಲ್ಲಿ ಬಂದು ಸೇರಲು ಭಾವನೆಗಳ ಬೆಚ್ಚಗಿನ ಗೂಡೊಂದು ಇಲ್ಲದಂತಾಗಿಸಿಕೊಂಡಿದ್ದೇವೆ. ದಶಕಗಳ ಹಿಂದಿನಂತೆ 20-30 ಜನರ ಕೂಡುಕುಟುಂಬಗಳಲ್ಲಿ ಬದುಕುವ ಕನಸು ಕಾಣುವುದು ಇಂದಿಗೆ ಅತಿರೇಕವೇ ಸರಿ, ಆದರೆ ಇರುವ 4-5 ಜನರನ್ನಾದರೂ ನಮ್ಮವರು ಎಂದು ನೋಡುವ, ಹಾಗೆ ನಡೆದುಕೊಳ್ಳುವ, ನಮ್ಮ ಜೀವನದ ಕೆಲಸ-ಕಾರ್ಯ–ನಿರ್ಧಾರಗಳಲ್ಲಿ ಅವರನ್ನು ಭಾಗಿಯಾಗಿಸಿಕೊಳ್ಳುವಷ್ಟರ ಮಟ್ಟಿಗಿನ ಸ್ವಭಾವವನ್ನು ನಮಗೆ ನಾವೇ ಕಲಿತುಕೊಂಡರೆ, ಕಲಿಸಿಕೊಂಡರೆ ಕನಿಷ್ಠ ಪಕ್ಷ ನಾಳೆ ಹಿಂದಿರುಗಿ ನೋಡಲಿಕ್ಕೆ ಮನೆಯೊಂದು, ಕುಟುಂಬವೊಂದು ನಮ್ಮ ಜೀವನಚಿತ್ರದ ಭಾಗವಾಗಿರುತ್ತದೆ.

ಕೋಟ್ಯಂತರ ಜನಸಂಖ್ಯೆಯ ಈ ಜಗತ್ತನ್ನು ಜಾಗತಿಕ ಹಳ್ಳಿಯನ್ನಾಗಿಸಿ ಕಡೆಗೆ ನಾವು ಮಾತ್ರ ಸಂತೆಯಲ್ಲಿ ಒಂಟಿಯಾಗಿ ಬದುಕುವಂಥ ದುಃಸ್ಥಿತಿ ಉಂಟಾಗದಿರಲಿ ಎಂಬುದೊಂದೇ ಹಂಬಲ.
ಅನನ್ಯ ಕೆ. ಎಸ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT