ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೀ–ಕಪ್‌ ಆ ದಿನಗಳಿಗೆ ಸುಖದ ಬಟ್ಟಲು

Last Updated 2 ಜೂನ್ 2017, 19:30 IST
ಅಕ್ಷರ ಗಾತ್ರ

ಸೌರಭಾ ರಾವ್‌
ಸ್ತ್ರೀವಾದದ ಬಗ್ಗೆ ಸಿಗುವ ಪುಸ್ತಕಗಳ ಆಗಿಂದಾಗ್ಗೆ ಕೊಂಡು ಅಥವಾ ಗೆಳೆಯರ ಬಳಿ ಕಾಡಿ ಬೇಡಿ ಎರವಲು ಪಡೆದು ಓದುವ ಮನಸ್ಸಿಗೆ ತಿಂಗಳ ‘ಆ’ ದಿನಗಳಲ್ಲಿ ಮಾತ್ರ ಹೆಣ್ಣಾಗಿ ಹುಟ್ಟಿರುವುದೇ ಹಿಂಸೆ ಎನ್ನುವಷ್ಟು ಖಿನ್ನತೆ, ನೋವು, ಬಳಲಿಕೆ, ಕಿರಿಕಿರಿ. ಜೀವಶಾಸ್ತ್ರದ ಈ ಕಥೆಯ ಮುಂದೆ ತತ್ತ್ವ, ಆದರ್ಶ, ಆ ವಾದ ಈ ವಾದ ಎಲ್ಲಾ ಆಗ ಪುಸ್ತಕದ ಬದನೆಕಾಯಿ.

ಅಷ್ಟರ ಮಟ್ಟಿಗಿನ ರಗಳೆ ಇದ್ದರೂ ಏನೂ ಇಲ್ಲದಂತೆ ನಟಿಸುತ್ತಲೇ ವೃತ್ತಿ ಹಾಗೂ ಮನೆಗೆಲಸಗಳಿಗೆ ಧಕ್ಕೆ ಬರದಂತೆ ಆ ದಿನಗಳಲ್ಲಿಯೂ  ಎಲ್ಲವನ್ನೂ ಸಮರ್ಥವಾಗಿ ಸಹಜವೆಂಬಂತೆ ನಿಭಾಯಿಸುವ ಪ್ರತಿ ಹೆಣ್ಣಿನ ಮಾನಸಿಕತೆ ನಿಜಕ್ಕೂ ಪ್ರಶಂಸಾರ್ಹ. ಋತುಮತಿಯಾದಾಗಲೂ ಹೆಣ್ಣು ತೋರುವ ಆ ದೃಢತೆಯ ಬಗ್ಗೆ ಅವಳು ಮಾತ್ರವೇ ಅಲ್ಲ, ಎಲ್ಲರೂ ಹೆಮ್ಮೆ, ಅಭಿಮಾನಗಳನ್ನು ಪಡಲೇಬೇಕು.

ಮಂಗಳನ ಅಂಗಳಕ್ಕೆ ಹೋಗಿ ಬದುಕು ಕಟ್ಟಿಕೊಳ್ಳುವ ಕನಸು ಕಾಣುತ್ತಿರುವ ಇದೇ ಜಗತ್ತಿನಲ್ಲಿ ಇಂದಿಗೂ ಋತುಸ್ರಾವದ ಬಗ್ಗೆ ಮುಕ್ತವಾಗಿ ಮಾತನಾಡಲೂ ಹಿಂಜರಿಯುವ ಸ್ಥಿತಿಯಿರುವುದು ವಿಪರ್ಯಾಸ.

ಎಷ್ಟು ಜನ ಪೋಷಕರು ತಮ್ಮ ಮಕ್ಕಳಿಗೆ (ಹೆಣ್ಣಾಗಲಿ, ಗಂಡಾಗಲಿ) ಋತುಸ್ರಾವದ ಬಗ್ಗೆ ವೈಜ್ಞಾನಿಕ ಮಾಹಿತಿ ನೀಡಿ ಅದರ ಬಗ್ಗೆ ಯಾವುದೇ ಮುಜುಗರವಿಲ್ಲದೆ ಯೋಚಿಸಲು, ಮಾತನಾಡಲು, ಪ್ರಶ್ನೆಗಳಿದ್ದರೆ ಬಗೆಹರಿಸಿಕೊಳ್ಳಲು ಮುಕ್ತವಾದ ವಾತಾವರಣವನ್ನು ಮನೆಯಲ್ಲಿ ಕಲ್ಪಿಸಿಕೊಡುತ್ತಾರೆ?

ಹೀಗಿರುವಾಗ ಹೆಣ್ಣು ಮುಟ್ಟಾದಾಗ ಆಕೆ ಅನುಭವಿಸುವ ದೈಹಿಕ, ಮಾನಸಿಕ, ಅಲ್ಲದೇ ಭಾವನಾತ್ಮಕ ಕ್ಲೇಶಗಳ ಬಗ್ಗೆ, ಆ ದಿನಗಳಲ್ಲಿ ಆಕೆ ತೋರಬಹುದಾದ ತುಸು ನಿರುತ್ಸಾಹದ ಬಗ್ಗೆ ಸುತ್ತಮುತ್ತಲಿದ್ದವರಿಂದ ಸ್ವಸ್ಥವಾದ ಆಲೋಚನೆ, ಗ್ರಹಿಕೆ, ತಾದಾತ್ಮ್ಯಗಳ ಅಪೇಕ್ಷಿಸುವುದು ಹೇಗೆ?

ಆದರೆ ಇಂದಿಗೂ ಋತುಸ್ರಾವ ಅಶುದ್ಧ, ಅಪವಿತ್ರವಾದ ದೈಹಿಕ ಪ್ರಕ್ರಿಯೆಯೆಂದೇ ಮೂಗುಮುರಿಯುವವರ ಮುಂದೆ, ಹೆಣ್ಣುಮಕ್ಕಳ ‘ಆ ದಿನ’ಗಳ ಕಥೆಯ ಕೆಲವು ಅಪ್ರಿಯ ವಿವರಗಳಿಗೆ ಈಗ ಸುಖಾಂತ್ಯ ಸಿಕ್ಕಿದೆ. ಇದೇ – SheCup (ಶೀ-ಕಪ್). ಋತುಸ್ರಾವದ ದಿನಗಳಲ್ಲಿ ಈಗ ಸ್ತ್ರೀಯರ ಹೊಸ ಸಾಥಿಯಾಗಿ ಶೀ-ಕಪ್ ಮಾರುಕಟ್ಟೆಯಲ್ಲಿ ಲಭ್ಯ. ‘ಶೀಕಾರ್ಟ್’ನಂತಹ ಸ್ವದೇಶೀ ಅಂತರ್ಜಾಲ ತಾಣಗಳಿಂದ ನೀವಿದನ್ನು ಆನ್‌ಲೈನ್ ಆರ್ಡರ್ ಮಾಡಬಹುದು.

ಯಾವುದೇ ಲಾಭಾಪೇಕ್ಷೆಯಿಲ್ಲದೆ, ಬಳಕೆಗೆ ಸುಲಭವಾದ, ಬಟ್ಟೆ, ಸ್ಯಾನಿಟರಿ ಪ್ಯಾಡ್, ಟ್ಯಾಂಪಾನ್‌ಗಳಿಗಿಂತಲೂ ಎಷ್ಟೋ ಪಾಲು ಹೆಚ್ಚು ನೈರ್ಮಲ್ಯ ಕಾಪಾಡಿಕೊಳ್ಳಲು ಸಹಾಯಕವಾದ, ಎಲ್ಲಕ್ಕಿಂತಲೂ ಪರಿಸರಸ್ನೇಹಿ ಋತುಸ್ರಾವದ ಸಂಗ್ರಹವಸ್ತುವಾಗಿ ಶೀ-ಕಪ್ ಎಂಬ ಪುಟ್ಟ ಪವಾಡವನ್ನು ವಿಭಿನ್ನವಾಗಿ ವಿನ್ಯಾಸ ಮಾಡಲಾಗಿದೆ.

ಮೆಡಿಕಲ್ ಗ್ರೇಡ್ ಸಿಲಿಕೋನ್‌ನಿಂದ ಮಾಡಿದ ಈ ಪುಟ್ಟ ಗುಲಾಬಿ ಅಥವಾ ತಿಳಿನೀಲಿ ಬಣ್ಣದ ಬಟ್ಟಲನ್ನು ಒಮ್ಮೆ ಕೊಂಡರೆ ಹಲವು ವರ್ಷಗಳವರೆಗೆ ಪುನರ್ಬಳಕೆ ಮಾಡಬಹುದು. ಅದು ಸ್ತ್ರೀಜನನಾಂಗ – ಯೋನಿಯ ಒಳಗೆ ಸೇರಿ ಗರ್ಭಕಂಠಕ್ಕೆ (cervix) ತಾಗಿಕೊಂಡು ನಿಶ್ಚಲ ನಿಲ್ಲುತ್ತದೆ. ಹಾಗಾಗಿ ಅದು ‘ಎಲ್ಲೋ’ ಕಳೆದುಹೋಗಬಹುದು ಎಂಬ ಚಿಂತೆ ಬೇಡ.

ಸುಮಾರು 8 ಘಂಟೆಗಳ ಕಾಲ ಶೀ-ಕಪ್ ನಿಮ್ಮೊಳಗೆ, ತನ್ನ ಅಸ್ತಿತ್ವದ ಗುರುತೇ ಸಿಗದಷ್ಟು ಅನಾಯಾಸವಾಗಿ, ನಿಮ್ಮ ಮುಟ್ಟಿನ ರಕ್ತವನ್ನು ಸಂಗ್ರಹಿಸಿಕೊಳ್ಳುತ್ತದೆ. ಅದು ನಿಮ್ಮೊಳಗೆ ಇರುವುದನ್ನು ನೀವು ಮರೆತರೂ ಆಶ್ಚರ್ಯವಿಲ್ಲ (ಆದರೆ ಮರೆಯದಿರಿ. ಬೇಕಾದರೆ ಫೋನಿನಲ್ಲಿ ರಿಮೈಂಡರ್ ಇಟ್ಟುಕೊಳ್ಳಬಹುದು!) ಆ 8 ಘಂಟೆಗಳವರೆಗೆ ನಿಮಗೆ ಪ್ಯಾಡ್‌ಗಳನ್ನು 2-3 ತಾಸಿಗೊಮ್ಮೆ ಬದಲಿಸುವಂತೆ ಯಾವ ಒತ್ತಡವೂ ಇರುವುದಿಲ್ಲ.

ನಿಮ್ಮ ಮೆದುಳಿಗೆ ಅಷ್ಟರ ಮಟ್ಟಿಗಿನ ಕೆಲಸ–ಮಾನಸಿಕ ಒತ್ತಡದ ಹೊರೆ ಕಡಿಮೆ. ಇನ್ನು ನೀವು ವೃತ್ತಿನಿರತ ಮಹಿಳೆಯಾದರೆ ಇದಕ್ಕಿಂತ ದೊಡ್ಡ ಸಮಾಧಾನವಿಲ್ಲ. ಇದಲ್ಲದೇ, ಪ್ರಯಾಣ ಮಾಡುವಾಗ ಶೀ-ಕಪ್ ಒಂದು ವರ ಎಂದರೂ ಅತಿಶಯೋಕ್ತಿಯಲ್ಲ.

ಶೀ-ಕಪ್ ಅನ್ನು ಹೀಗೆ ತೆಗೆದು-ಹಾಕಿ ಮಾಡುವ ಕ್ರಿಯೆ ಪ್ರಯಾಸದ್ದಾಗಿರಬಹುದೆಂದು ನಿಮಗನಿಸಿದರೆ ಅದು ಸಹಜ. ಆದರೆ ಯಾವುದೇ ಹೊಸ ಅಭ್ಯಾಸ ಕ್ರಮೇಣ ಒಗ್ಗಿಬಿಡುವಂತೆ ಎರಡು ದಿನಗಳಲ್ಲಿ ಶೀ-ಕಪ್‌ನ ಬಳಕೆ ಕೂಡ ರೂಢಿಯಾಗಿಬಿಡುತ್ತದೆ. ಇನ್ನೊಂದು ಮಾನವಜೀವವನ್ನೇ ಹೊರಹಾಕಬಲ್ಲ ಯೋನಿಗೆ ಈ ಪುಟ್ಟ ಬಟ್ಟಲ ಬಗ್ಗೆ ಯಾವ ಭಯವೂ ಇಲ್ಲ, ನಿಮ್ಮ ಮನಸ್ಸಿಗಿದು ಮನದಟ್ಟಾದರೆ ಸಾಕು!

ಶೀ-ಕಪ್ ಬಳಸುವ ಮುಖ್ಯ ಪ್ರಯೋಜನಗಳು
1. ಶೀ-ಕಪ್ ಪರಿಸರಸ್ನೇಹಿ: 
ಪ್ರತಿ ತಿಂಗಳು ಬಳಸಿದ ಸ್ಯಾನಿಟರಿ ಪ್ಯಾಡ್‌ಗಳನ್ನು ವಿಲೇವಾರಿ ಮಾಡುವ ಬಗ್ಗೆ ಅನಗತ್ಯವಾಗಿ ಕಳವಳಗೊಳ್ಳುವ ಅಗತ್ಯವಿಲ್ಲ. ಹೆಚ್ಚು ಹೆಚ್ಚು ಹೆಂಗಸರು ಶೀ-ಕಪ್ ಬಳಕೆಗೆ ಮುಂದಾದರೆ ತ್ಯಾಜ್ಯ ನಿರ್ವಹಣೆಯಿರಲಿ, ತ್ಯಾಜ್ಯದ ಸೃಷ್ಟಿಯೇ ಆಗುವುದಿಲ್ಲ. ಹೀಗಾಗಿ ಹಲವು ವರ್ಷಗಳವರೆಗೆ ಪುನರ್ಬಳಕೆಗೆ ಬರುವುದರಿಂದ ಪರಿಸರಕ್ಕೂ ತನ್ನದೇ ವಿಶಿಷ್ಟ ಕೊಡುಗೆ ನೀಡುತ್ತಿದೆ, ಶೀ-ಕಪ್.

2. ಹಣದ ಉಳಿತಾಯ: ಟೀವಿಯಲ್ಲಿ ಸ್ಯಾನಿಟರಿ ಪ್ಯಾಡ್ ಜಾಹೀರಾತುಗಳ ನೋಡಿ ಒಂದಕ್ಕಿಂತ ಮತ್ತೊಂದು ಉತ್ತಮವಾಗಿರಬಹುದೆಂಬ ನಿಮ್ಮ ಪ್ರತಿ ತಿಂಗಳ ಖರ್ಚಿನ ಪ್ರಯೋಗಗಳಿಗೆ ಅಂತ್ಯ ಹಾಡಬಹುದು. ಒಂದು ಸಲ ಶೀ-ಕಪ್ ಕೊಂಡರೆ ಹಲವು ವರ್ಷಗಳವರೆಗೆ ಪ್ಯಾಡ್ ಅಥವಾ ಟ್ಯಾಂಪಾನ್ ಅಥವಾ ಅಂಥ ಇನ್ಯಾವುದೇ ವಸ್ತು ಕೊಂಡುಕೊಳ್ಳುವ ಅಗತ್ಯವೇ ಇರುವುದಿಲ್ಲ.

3. ಟ್ಯಾಂಪಾನ್ ಯೋನಿಯೊಳಗಿನ ಪ್ರಾಕೃತಿಕ ತೇವವನ್ನೂ ಹೀರಿಬಿಡುವ ಸಾಧ್ಯತೆ ಹೆಚ್ಚು, ಆದರೆ ಶೀ-ಕಪ್ ಇಂಥ ತೊಂದರೆಗಳನ್ನು ದೂರವಿಟ್ಟು ಯೋನಿಯ PH Balance ಅನ್ನು ಕಾಪಾಡುತ್ತದೆ.

4. ಇನ್ನುಮುಂದೆ, ಕಲೆ-ಹರಡುವಿಕೆ-ಸೋರಿಕೆಗಳ ಭಯದಿಂದಲೇ ನಡೆಯುವುದು, ಕೂರುವುದು, ಏಳುವುದು, ಮಲಗುವುದು ಬೇಕಿಲ್ಲ. ಶೀ-ಕಪ್ ಬಳಸಿದರೆ ನೀವು ಈಜಲೂಬಹುದು, ನೃತ್ಯಾಭ್ಯಾಸವನ್ನೂ ಮಾಡಬಹುದು, ಒಟ್ಟಿನಲ್ಲಿ ಮುಟ್ಟಾಗದ ದಿನಗಳಲ್ಲಿ ಮಾಡುವ ಎಷ್ಟೋ ಕೆಲಸಗಳನ್ನು ಮಾಡಬಹುದು.

ಪ್ರತಿ ತಿಂಗಳು ಮುಟ್ಟು ನಿಂತ ನಂತರ ಶೀ-ಕಪ್ ಬಿಸಿನೀರಿನಲ್ಲಿ 20 ನಿಮಿಷ ಬಿಟ್ಟರೆ ಸಾಕು, ಅದನ್ನು ಮತ್ತೆ ಮುಂದಿನ ತಿಂಗಳವರೆಗೆ ಅದರ ಚೀಲದಲ್ಲಿ ವಿರಮಿಸಲು ಬಿಡಬಹುದು. ಋತುಮತಿಯಾದಾಗ ಉಂಟಾಗುವ ಎಷ್ಟೋ ಇರುಸುಮುರುಸುಗಳಿಂದ ಈಗ ಮುಕ್ತಿ ಪಡೆಯಬಹುದು.  ಯಾವುದೇ ಸಂಕೋಚವಿಲ್ಲದೆ ಪ್ರಕೃತಿಸಹಜವಾದ ಮುಟ್ಟಿನ ಬಗ್ಗೆ, ಶೀ-ಕಪ್ ಬಳಕೆಯ ಬಗ್ಗೆ ನಿಮಗೆ ಪರಿಚಯವಿರುವವರಿಗೆ, ಮಕ್ಕಳಿಗೆ, ತಾಯಿಯರಿಗೆ, ಅಕ್ಕ-ತಂಗಿಯರಿಗೆ, ಗೆಳತಿಯರಿಗೆಲ್ಲಾ ತಿಳಿಸಿ, ಅದರ ಬಳಕೆಯನ್ನು ಪ್ರೋತ್ಸಾಹಿಸಿ.

ಬರೀ ಕಸಿವಿಸಿ ಕೊಡುವ ಮುಟ್ಟಿನ ದಿನಗಳ ಕಥೆಯಲ್ಲಿ ಶೀ-ಕಪ್ ಒಂದು ಸ್ವಾಗತಾರ್ಹ ವಿವರವಾಗಲಿ. ಇಷ್ಟಾದರೂ ಮುತ್ತಿನ ಬಗ್ಗೆ ಸಲ್ಲದ ಮಡಿವಂತಿಕೆ ಮಾಡುವವರಿಗೆ ಅದರ ಬಗ್ಗೆ ಮತ್ತಷ್ಟು ವಿಚಾರಯುಕ್ತ ಮಾತುಗಳನ್ನಾಡಿ ಮುಕ್ತತೆಯ ಚುರುಕು ಮುಟ್ಟಿಸಿ! ಮುಂದಿನ ತಿಂಗಳಿಂದ ನಿಮಗೆ ನಿರಾಯಾಸ, ನಿರಾತಂಕ ಋತುಸ್ರಾವ ದಿನಗಳ ಶುಭಾಶಯ! Happy Menstruation!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT