ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಂಗಾರಿ’ಗೆ ಸಿನಿಮಾದಲ್ಲಿ ನಟಿಸುವಾಸೆ

ಕಿರುತೆರೆ
Last Updated 2 ಜೂನ್ 2017, 19:30 IST
ಅಕ್ಷರ ಗಾತ್ರ

*ನಿಮ್ಮ ಬಗ್ಗೆ ಹೇಳಿ?
ಶಿರಸಿಯ ವಾನಳ್ಳಿ ನನ್ನ ಹುಟ್ಟೂರು. ತಂದೆ ಶ್ರೀಧರ್‌. ತಾಯಿ ಮುಕ್ತಾ. ನಮ್ಮದು ರೈತಾಪಿ ಕುಟುಂಬ. ಪತ್ರಿಕೋದ್ಯಮದಲ್ಲಿ ಪದವಿ ಮತ್ತು ರಂಗಾಯಣದಲ್ಲಿ ಒಂದು ವರ್ಷದ ಡಿಪ್ಲೊಮಾ ಕೋರ್ಸ್ ಮಾಡಿದ್ದೇನೆ.

*ರಂಗಭೂಮಿಯಿಂದ ಧಾರಾವಾಹಿಗೆ ಬಂದಿದ್ದು?
ಶಾಲಾ–ಕಾಲೇಜು ದಿನಗಳಿಂದಲೂ ನಾಟಕಗಳಲ್ಲಿ ಅಭಿನಯಿಸುತ್ತಿದ್ದೆ. ಹವ್ಯಾಸಿ ತಂಡಗಳಲ್ಲೂ ಸಾಕಷ್ಟು ನಾಟಕಗಳನ್ನು ಮಾಡಿದ್ದೇನೆ. ರಂಗಾಯಣದಲ್ಲಿ ಕೋರ್ಸ್‌ ಮುಗಿಸಿದ ನಂತರ ಹೊಟ್ಟೆಪಾಡಿಗಾಗಿ ಬೆಂಗಳೂರಿಗೆ ಬಂದೆ. ‘ಮಹಾದೇವಿ’ ಧಾರಾವಾಹಿಗೆ ಆಡಿಷನ್‌ ನಡೆಯುವ ವಿಚಾರ ಸ್ನೇಹಿತರೊಬ್ಬರಿಂದ ತಿಳಿಯಿತು. ನೋಡೋಣವೆಂದು ಹೋಗಿದ್ದ ನನಗೆ ಅವಕಾಶ ಸಿಕ್ಕಿತು.

*‘ಬಂಗಾರಿ’ ಹೆಸರು ಮುದ್ದಾಗಿದೆಯಲ್ಲ?
ಹೌದು. ಧಾರಾವಾಹಿಯ ಪಾತ್ರಕ್ಕೆ ಹೇಳಿಮಾಡಿಸಿದ ಹೆಸರು. ನಾನು ಎಲ್ಲಿಯೇ ಹೋದರೂ ಜನ ನನ್ನನ್ನು ‘ಬಂಗಾರಿ’ ಎಂದೇ ಗುರುತಿಸುತ್ತಾರೆ.  ಹತ್ತಿರದವರೂ ‘ಬಂಗಾರಿ’ ಎಂದೇ ಕರೆಯುತ್ತಾರೆ.

* ಧಾರಾವಾಹಿಯಂತೆ ನಿಜಜೀವನದಲ್ಲೂ ನೀವು ಪೆದ್ದುನಾ?
ಹಾಗೇನಿಲ್ಲ. ಧಾರಾವಾಹಿ ಪಾತ್ರದ ಬಂಗಾರಿಗೂ ನಿಜಜೀವನದ ದತ್ತನಿಗೂ ಅಜಗಜಾಂತರ ವ್ಯತ್ಯಾಸಗಳಿವೆ.

* ಪೆದ್ದನಂತೆ ನಟಿಸಲು ಕಷ್ಟವಾ?
ಆರಂಭದಲ್ಲಿ ಕಷ್ಟವಾಗುತ್ತಿತ್ತು. ನಿರ್ದೇಶಕರ ಸಹಕಾರವಿದ್ದಿದ್ದರಿಂದ ಬರುಬರುತ್ತಾ ಸುಲಭವಾಯಿತು. ಇದು ಬಹಳ ಸವಾಲಿನ ಪಾತ್ರವಾಗಿತ್ತು.  ಜನ ಕೂಡ ನನ್ನನ್ನು ಒಪ್ಪಿಕೊಂಡಿದ್ದಾರೆ.

*ಜಾಜಿನಾ ಪ್ರೀತಿಸುವಾಗ ಪೆದ್ದುತನ ಇರಲ್ವಾ?
ನಕ್ಕು... ಧಾರಾವಾಹಿಯಲ್ಲಿ ಪೆದ್ದನಾದರೂ ನನಗೇ ಗೊತ್ತಿಲ್ಲದಂತೆ ಜಾಜಿ ಬಗ್ಗೆ ಅತಿಯಾದ ಪ್ರೀತಿ, ಕಾಳಜಿ. ಮನೆಯವರು ನಮ್ಮ ಮದುವೆಗೆ ಒಪ್ಪದಿದ್ದರೂ, ದೇವತೆಗಳ ಸಹಾಯದಿಂದ ನಮ್ಮ ಮದುವೆ ನೆರವೇರಿದೆ. ಜಾಜಿ ನನ್ನ ಜತೆಗೆ ಇದ್ದರೆ ಧೈರ್ಯ.

* ಇತರೆ ಹವ್ಯಾಸಗಳು?
ಬೈಕ್‌ರೈಡ್‌ ತುಂಬಾ ಇಷ್ಟ. ಗೊತ್ತಿರದ ಊರಿಗೆ ಹೋಗುವುದು, ಅದರ ಇತಿಹಾಸದ ಬಗ್ಗೆ ತಿಳಿಯುವುದು ಇಷ್ಟ. ರಂಗಶಿಕ್ಷಣದ ಸಂದರ್ಭದಲ್ಲಿ ಸಾಕಷ್ಟು ಕಿನ್ನರ ಮೇಳಗಳಲ್ಲಿ ಭಾಗವಹಿಸಿದ್ದೇನೆ. ದೊಡ್ಡವರಿಗಿಂತ ಮಕ್ಕಳು ಹಿಂಜರಿಕೆಯಿಲ್ಲದೆ ಸಹಜವಾಗಿ ಅಭಿನಯಿಸುತ್ತಾರೆ. ಅವರೊಂದಿಗೆ ಕಾಲ ಕಳೆಯುವುದೆಂದರೆ ಇಷ್ಟ. ಹಾಗಾಗಿ ಕೆಲ ಸಂಘ–ಸಂಸ್ಥೆಗಳು ಆಯೋಜಿಸುವ ಬೇಸಿಗೆ ಶಿಬಿರಗಳಿಗೆ ನಿರ್ದೇಶಕನಾಗಿಯೂ ಹೋಗುತ್ತೇನೆ. ಎಂಟಕ್ಕೂ ಹೆಚ್ಚು ಬೇಸಿಗೆ ಶಿಬಿರಗಳನ್ನು ನಿರ್ವಹಿಸಿದ್ದು ಮನಸ್ಸಿಗೆ ಸಂತಸ ನೀಡಿದೆ.

*ಧಾರಾವಾಹಿಯಂತೆ ದೇವಲೋಕದಲ್ಲಿ ಮದುವೆಯಾಗುವ ಯೋಜನೆ ಇದೆಯಾ?
ಧಾರಾವಾಹಿಯೇ ಬೇರೆ. ಜೀವನವೇ ಬೇರೆ. ಮನೆಯವರ ಇಚ್ಛೆಯಂತೆ ಮದುವೆಯಾಗುತ್ತೇನೆ. ಹೇಗೆ ಮದುವೆಯಾಗುತ್ತೇವೆ ಎನ್ನುವುದಕ್ಕಿಂತ ಬಾಳಸಂಗಾತಿಯಾಗಿ ಬರುವವಳ ಗುಣ ಹೇಗೆ ಎನ್ನುವುದು ಮುಖ್ಯ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT