ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಊಜಿ ನೊಣ ನಿಯಂತ್ರಣಕ್ಕೆ ಮೋಹಕ ಬಲೆ

ಕಡಿಮೆ ಖರ್ಚಿನಲ್ಲಿ ರೈತರಿಗೆ ಲಾಭದಾಯಕ ತಂತ್ರ
Last Updated 2 ಜೂನ್ 2017, 11:29 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ತಾಲ್ಲೂಕಿನ ಮಾವಿನ ತೋಟಗಳಲ್ಲಿ ಕಾಣಿಸಿಕೊಂಡಿರುವ ಊಜಿ ನೊಣ ಮಾವಿನ ಫಸಲಿಗೆ ಮಾರಕವಾಗಿ ಪರಿಣಮಿಸಿದೆ. ಮಾವು ಬೆಳೆಗಾರರು ಈ ಅಪಾಯಕಾರಿ ನೊಣದ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳದಿದ್ದರೆ ಹೆಚ್ಚಿನ ನಷ್ಟ ಅನುಭವಿಸಬೇಕಾಗುತ್ತದೆ.

ಊಜಿ ನೊಣ ಸಾಮಾನ್ಯವಾಗಿ ಮಾವಿನ ಮಿಡಿಯನ್ನು ಕಚ್ಚಿ ಮೊಟ್ಟೆ ಇಡುತ್ತದೆ. ಮೊಟ್ಟೆಯೊಡೆದು ಬರುವ ಹುಳುಗಳು ಮಾವನ್ನು ಪ್ರವೇಶಿಸಿ ಕಾಯಿ ಕೆಡುವಂತೆ ಮಾಡುತ್ತವೆ. ಈ ಬಾರಿ  ಬಿಸಿಲಿನ ಝಳ ಹೆಚ್ಚಾಗಿದ್ದು, ಮಾವಿನ ಕಾಯಿ ಉದುರಿ ನೆಲ ಕಚ್ಚಿದೆ. ಆಯದೆ ಬಿಟ್ಟಿರುವುದರಿಂದ ನೊಣದ ಹಾವಳಿ ಹೆಚ್ಚಿದೆ.

ಊಜಿ ನೊಣ ಹಾವಳಿ ನಿಯಂತ್ರಣಕ್ಕೆ ತೋಟಗಳಲ್ಲಿ ಮೋಹಕ ಬಲೆ ಅಳವಡಿಸಬೇಕು. ಈ ಮೋಹಕ ಬಲೆಗಳು ಬೆಂಗಳೂರಿನ ಹೆಸರುಘಟ್ಟದ ಭಾರತೀಯ ತೋಟಗಾರಿಕಾ ಕೇಂದ್ರದಲ್ಲಿ ಸಿಗುತ್ತವೆ. ಅಗತ್ಯವುಳ್ಳ ರೈತರು ರಿಯಾಯಿತಿ ದರದಲ್ಲಿ ಖರೀದಿಸಬಹುದು.

ಮೋಹಕ ಬಲೆಯ ಒಣಗಿದ ಮರದ ತುಂಡಿಗೆ ಯೂಜಿನಾಲ್‌ ಹಾಗೂ ನಾಲ್ಕು ತೊಟ್ಟು ನುವಾನ್‌ ಔಷಧ ಹಾಕಬೇಕು. ಔಷಧದ ವಾಸನೆ ಗಂಡು ನೊಣಗಳನ್ನು ಆಕರ್ಷಿಸುತ್ತದೆ. ಹೆಣ್ಣು ನೊಣದ ಗುಂಗಿನಲ್ಲಿ ಬರುವ ಗಂಡು ನೊಣಗಳು ಬಲೆ ಪ್ರವೇಶಿಸಿದೊಡನೆ ನುವಾನ್‌ ವಾಸನೆಯಿಂದ ಸಾಯುತ್ತವೆ ಎಂದು ತಾಲ್ಲೂಕು ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಿವಾಸ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಮೋಹಕ ಬಲೆಯನ್ನು ನೆಲದಿಂದ ಐದು ಅಡಿ ಎತ್ತರದಲ್ಲಿ ನೆರಳುಳ್ಳ ಕೊಂಬೆಗೆ ಕಟ್ಟಬೇಕು. ಒಂದು ಎಕರೆ ತೋಟದಲ್ಲಿ 8 ಬಲೆ ಕಟ್ಟಬೇಕು. ಒಬ್ಬಿಬ್ಬರು ಹಾಕಿದರೆ ಪ್ರಯೋಜನವಿಲ್ಲ. ಸಾಂಘಿಕ ಪ್ರಯತ್ನದಿಂದ ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು ಎಂದು ಪನಸಮಾಕನಹಳ್ಳಿ ಗ್ರಾಮದ ಮಾವು ಬೆಳೆಗಾರ ಆರ್‌.ಮಂಜುನಾಥರೆಡ್ಡಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ರೈತರು ಮಾವಿನ ಹೂವಿನ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಆದರೆ ಕಾಯಿ ರಕ್ಷಣೆಗೆ ಅಗತ್ಯವಾದ ಗಮನ ನೀಡುವುದಿಲ್ಲ. ಇದರಿಂದ ಕಾಯಿ ಮರಗಳಲ್ಲಿಯೇ ಕೊಳೆತು ಹಾಳಾಗುತ್ತದೆ. ಬಿಸಿಲಿನ ತಾಪಕ್ಕೆ ಉದುರಿದ ಪಿಂದೆಯನ್ನು ತೋಟಗಳಲ್ಲಿ ಕೊಳೆಯಲು ಬಿಡಬಾರದು. ಅದನ್ನು ಆರಿಸಿ ಹಳ್ಳದಲ್ಲಿ ಹಾಕಿ ಮಣ್ಣು ಮುಚ್ಚಬೇಕು ಎಂದು ಸಲಹೆ ಮಾಡಿದರು.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಲ ಮಾವಿನ ಫಸಲು ಕಡಿಮೆ ಬಂದಿದೆ. ಇರುವ ಫಸಲು ವಾತಾವರಣ ವೈಪರೀತ್ಯದಿಂದ ನೆಲಕಚ್ಚುತ್ತಿದೆ. ನೊಣ ನಿಯಂತ್ರಣಕ್ಕೆ ಬರದಿದ್ದಲ್ಲಿ, ಫಸಲು ಉಳಿಸಿಕೊಳ್ಳುವ ಯಾವುದೇ ಪ್ರಯತ್ನದಿಂದ ಲಾಭವಾಗುವುದಿಲ್ಲ ಎಂದಿದ್ದಾರೆ.

ಮಾವು ಬೆಳೆಗಾರರು ಒಟ್ಟಾಗಿ ತೋಟಗಳಲ್ಲಿ ಮೋಹಕ ಬಲೆ ಅಳವಡಿಸಿದಲ್ಲಿ, ನೊಣದ ನಿಯಂತ್ರಣ ಸಾಧ್ಯವಾಗುತ್ತದೆ. ಮೋಹಕ ಬಲೆ ಖರ್ಚು ಮಾಡಿದರೆ ಸುಗ್ಗಿಯಲ್ಲಿ ಸಿಗುವ ಲಾಭ ಹೆಚ್ಚು ಎಂಬುದನ್ನು ಬೆಳೆಗಾರರು ಅರಿಯಬೇಕು ಎಂಬುದು ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ತಿಳಿಸಿದರು.

*
ಮೋಹಕ ಬಲೆ ತಯಾರಿಸುವ ವಿಧಾನ ತುಂಬಾ ಸರಳ. ಖಾಲಿ ನೀರಿನ ಬಾಟಲ್‌ ಬಳಸಿಯೂ ತಯಾರಿಸಬಹುದು. ಇದು ಊಜಿ ನೊಣ ನಿಯಂತ್ರಣಕ್ಕೆ ಸಹಕಾರಿ.
-ಅಶೋಕ್‌ ಕುಮಾರ್‌,
ಮಾವು ಬೆಳೆಗಾರ, ರಾಮಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT