ಮಾತೇ–ಕತೆ, ಸಿನಿಮೀಯತೆ ನಾಪತ್ತೆ!

7

ಮಾತೇ–ಕತೆ, ಸಿನಿಮೀಯತೆ ನಾಪತ್ತೆ!

Published:
Updated:
ಮಾತೇ–ಕತೆ, ಸಿನಿಮೀಯತೆ ನಾಪತ್ತೆ!

ಚಿತ್ರ: ಸರ್ಕಾರಿ ಕೆಲಸ ದೇವರ ಕೆಲಸ

ನಿರ್ಮಾಪಕ: ಅಶ್ವಿನಿ ರಾಮ್‌ಪ್ರಸಾದ್

ನಿರ್ದೇಶಕ: ಆರ್. ರವೀಂದ್ರ

ತಾರಾಗಣ: ರವಿಶಂಕರ್ ಗೌಡ, ಸಂಯುಕ್ತಾ ಹೊರನಾಡು, ರಂಗಾಯಣ ರಘು

ನ್ಯಾಯಯುತವಾಗಿ ಬರಬೇಕಾದ ಪಿಂಚಣಿ ಹಣ ಪಡೆಯಲು, ಯಾವುದೋ ಕಾಮಗಾರಿಗೆ ಅನುಮತಿ ಪಡೆಯಲು ಜನರು ಸರ್ಕಾರಿ ಕಚೇರಿಗಳಿಗೆ ಅಲೆದಾಡಿ ಹೈರಾಣಾಗುವುದು ಹರಳುಗಟ್ಟಿದ ಭ್ರಷ್ಟ ವ್ಯವಸ್ಥೆಯಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಜನರೂ ಅದಕ್ಕೆ ಒಗ್ಗಿಕೊಂಡಿದ್ದಾರೆ. ಆದರೆ ಲಂಚಾವತಾರವನ್ನು ವಿರೋಧಿಸುವ ದೇಶಭಕ್ತನೊಬ್ಬ ಭ್ರಷ್ಟ ಅಧಿಕಾರಿಗಳಿಗೆ ಅವರದೇ ಮಾರ್ಗದಲ್ಲೇ ಹೋಗಿ ಬುದ್ಧಿ ಕಲಿಸುವ ಕಥೆ ‘ಸರ್ಕಾರಿ ಕೆಲಸ ದೇವರ ಕೆಲಸ’.

ಸುಮಿತ್ರಾ ಹಲವಾಯಿ ಅವರ, ‘ಬಾವಿ ಕಳೆದಿದೆ’ ಕಥೆಯು ನಾಟಕವಾಗಿ ಪ್ರದರ್ಶನಗೊಂಡಿತ್ತು. ಅದೇ ಕಥೆಯನ್ನು ಸಿನಿಮಾ ಚೌಕಟ್ಟಿಗೆ ಒಗ್ಗಿಸುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ರವೀಂದ್ರ. ಆದರೆ ಅವರ ಯತ್ನ ಸಂಪೂರ್ಣವಾಗಿ ಫಲಿಸಲಿಲ್ಲ. ಅಧಿಕಾರಿಗಳು ಜನಸಾಮಾನ್ಯರನ್ನು ಎಷ್ಟೆಲ್ಲ ಬಗೆಯಲ್ಲಿ ಸುಲಿಗೆ ಮಾಡುತ್ತಾರೆ ಎಂದು ತೋರಿಸುವ ಈ ಚಿತ್ರಕ್ಕೆ ನಾಟಕದ ಲಕ್ಷಣಗಳೇ ಹೆಚ್ಚಾಗಿ ದಕ್ಕಿವೆ.

ರವಿ ಎಂಬ ನಿರುದ್ಯೋಗಿ ಯುವಕನೊಬ್ಬ ತನ್ನ ತಾಯಿಗೆ ಪಿಂಚಣಿ ಹಣ ನೀಡುವಂತೆ ಅಧಿಕಾರಿಯ ಹತ್ತಿರ ಗೋಗರೆಯುತ್ತಾನೆ. ಆದರೆ ದುಡ್ಡು ಬಿಚ್ಚದೇ ಹೋದರೆ ಸರ್ಕಾರಿ ಕಚೇರಿಗಳಲ್ಲಿ ಕಡತಗಳು ಹೆಣದಂತೆ ಕೊಳೆಯುತ್ತ ಬಿದ್ದಿರುತ್ತವೆ ಎಂಬ ವಾಸ್ತವ ಆತನನ್ನು ಅಸಹಾಯಕನನ್ನಾಗಿ ಮಾಡುತ್ತದೆ. ಲಂಚಾವತಾರದ ರೂವಾರಿಗಳಾದ ಅಧಿಕಾರಿಗಳು, ಪೊಲೀಸರು, ರಾಜಕಾರಣಿಗಳಿಗೆ ಉಪಾಯವಾಗಿ ಬುದ್ಧಿ ಕಲಿಸಲು ಮುಂದಾಗುತ್ತಾನೆ.

‘ಕಾನೂನು ಮನುಷ್ಯರನ್ನು ನಂಬುವುದಿಲ್ಲ. ಕಾಗದಪತ್ರಗಳನ್ನು ನಂಬುತ್ತದೆ’ ಎಂಬ ಮಾತನ್ನೇ ಅನುಸರಿಸುವ ರವಿ ತನ್ನ ತೋಟದಲ್ಲಿ ಬಾವಿ ತೆಗೆಸಿ, ಅದನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವ ಯೋಜನೆ ರೂಪಿಸುತ್ತಾನೆ. ಸಂಬಂಧಪಟ್ಟ ಅಧಿಕಾರಿಗಳಿಗೆಲ್ಲ ಕೈತುಂಬಾ ಲಂಚ ನೀಡಿ, ಇಲ್ಲದ ಬಾವಿಯನ್ನು ಇದೆ ಎಂದು ಸಾಬೀತುಪಡಿಸಲು ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಸೃಷ್ಟಿಸುತ್ತಾನೆ. ಕೊನೆಗೆ ಅದಕ್ಕೆ ವಿಮೆಯನ್ನೂ ಮಾಡಿಸಿ, ‘ಬಾವಿ ಕಳೆದಿದೆ’ ಎಂದು ದೂರು ದಾಖಲಿಸಿ, ಅಧಿಕಾರಿಗಳ ಬುಡಕ್ಕೆ ಬಿಸಿ ಮುಟ್ಟಿಸುತ್ತಾನೆ.

ಶೀರ್ಷಿಕೆ ಮಾತ್ರ ‘ಸರ್ಕಾರಿ ಕೆಲಸ ದೇವರ ಕೆಲಸ’. ಆದರೆ ಚಿತ್ರದಲ್ಲಿ ಆ ರೀತಿ ನಂಬಿಕೊಂಡ ಒಬ್ಬನೇ ಒಬ್ಬ ಅಧಿಕಾರಿಯೂ ಇಲ್ಲ. ಎಲ್ಲರೂ ಭ್ರಷ್ಟ ವ್ಯವಸ್ಥೆಯನ್ನು ಪ್ರತಿನಿಧಿಸುವವರೇ. ಆ ನಿಟ್ಟಿನಲ್ಲಿ ಇಡೀ ಸಿನಿಮಾವನ್ನು ಕಪ್ಪು–ಬಿಳುಪು ಕೋನದಲ್ಲಿ ತೋರಿಸಲಾಗಿದೆ. ‘ಮಠ’ ಗುರುಪ್ರಸಾದ್ ಬರೆದ ಸಂಭಾಷಣೆಗಳಲ್ಲಿ ಒಂದಷ್ಟು ಚುರುಕು ಮುಟ್ಟಿಸುವಂತಿದೆ. ಆದರೆ ಚಿತ್ರಕಥೆಯಲ್ಲಿ ಗಟ್ಟಿತನ ಇಲ್ಲದೇ ಇರುವುದರಿಂದ ತೆರೆಯ ಮೇಲೆ ಬರುವ ಪಾತ್ರಗಳ ಬಾಯಿಗೆ ಮಾತುಗಳನ್ನು ಇಡುವ ಅನಿವಾರ್ಯದಲ್ಲಿ ಗುರುಪ್ರಸಾದ್ ಅವರೂ ಸೋತಿದ್ದಾರೆ.

ಬೋಧನೆ ಮಾಡುವ ಚಿತ್ರದಲ್ಲೂ ನಾಲ್ಕು ಹಾಡುಗಳನ್ನು ಸೇರಿಸಿರುವ ನಿರ್ದೇಶಕರು, ರೋಚಕವಾಗಿ ಕಥೆ ಕಟ್ಟುವ ಅವಕಾಶವನ್ನು ಕೈ ಚೆಲ್ಲಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಹನೀಯ. ರವಿಶಂಕರ್ ‘ಸಿಲ್ಲಿ ಲಲ್ಲಿ’ ಪಾತ್ರದ ಮೂಡ್‌ನಿಂದ ಹೊರಬಂದಂತಿಲ್ಲ. ಆರಂಭದ ಥೀಮ್‌ ಸಾಂಗ್‌ನಲ್ಲಿ ಕಾನಿಸಿಕೊಂಡಿದ್ದು ಬಿಟ್ಟರೆ ಮತ್ತೆ ಆಶೀಷ್ ವಿದ್ಯಾರ್ಥಿ ಸುಳಿವೇ ಇಲ್ಲ. ಮಂಜುನಾಥ ನಾಯಕ್ ಛಾಯಾಗ್ರಹಣದಲ್ಲಿ ವಿಶೇಷವೇನೂ ಇಲ್ಲ. ಎಲ್ಲದರ ಒಟ್ಟು ಪರಿಣಾಮವಾಗಿ ಚಿತ್ರದ ಸಿನಿಮೀಯ ಗುಣವೇ ‘ಕಳೆದಿದೆ’.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry