ಕೆ.ಸಿ. ವ್ಯಾಲಿ: ಸಕಾಲಕ್ಕೆ ನೀರು ತರಲು ಬದ್ಧ

7
ಅಭಿವೃದ್ಧಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್‌ಕುಮಾರ್‌ ಹೇಳಿಕೆ

ಕೆ.ಸಿ. ವ್ಯಾಲಿ: ಸಕಾಲಕ್ಕೆ ನೀರು ತರಲು ಬದ್ಧ

Published:
Updated:
ಕೆ.ಸಿ. ವ್ಯಾಲಿ: ಸಕಾಲಕ್ಕೆ ನೀರು ತರಲು ಬದ್ಧ

ಕೋಲಾರ: ‘ಕೆ.ಸಿ ವ್ಯಾಲಿ ಯೋಜನೆಗೆ ಎದುರಾಗಿರುವ ಅಡ್ಡಿ ಆತಂಕಗಳನ್ನು ನಿವಾರಿಸಿ ಸಕಾಲಕ್ಕೆ ನೀರು ತರಲೇಬೇಕು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಹೆದ್ದಾರಿ ಪಕ್ಕದಲ್ಲಿ ಪೈಪ್‌ಲೈನ್‌ ಕಾಮಗಾರಿಗೆ ಅನುಮತಿ ನೀಡದಿದ್ದರೆ ನಾನೇ ಮುಂದೆ ನಿಂತು ಕೆಲಸ ಮಾಡಿಸುತ್ತೇನೆ. ಪ್ರಾಧಿಕಾರದವರು ದಾವೆ ಹೂಡಿದರೂ ಹೆದರಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್‌. ರಮೇಶ್‌ಕುಮಾರ್‌ ಸವಾಲು ಹಾಕಿದರು.ನಗರದಲ್ಲಿ ಗುರುವಾರ ನಡೆದ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಅಭಿವೃದ್ಧಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಸ್ವಾತಂತ್ರ್ಯ ದಿನಾಚರಣೆ ವೇಳೆಗೆ ಕೆ.ಸಿ ವ್ಯಾಲಿ ಯೋಜನೆ ಪೂರ್ಣಗೊಳಿಸಿ ಜಿಲ್ಲೆಗೆ ನೀರು ತರದಿದ್ದರೆ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವುದಾಗಿ ಹೇಳಿದ್ದೆ. ಕೆಲವರು ಇದನ್ನೇ ನೆಪ ಮಾಡಿಕೊಂಡ ನಾನು ರಾಜೀನಾಮೆ ಕೊಡಲೆಂದು ಕಿತಾಪತಿ ಮಾಡುತ್ತಿದ್ದಾರೆ’ ಎಂದರು.‘ಯೋಜನೆಗೆ ಕೆಲವರು ವಿನಾಕಾರಣ ಅಡ್ಡಿಪಡಿಸುತ್ತಿದ್ದಾರೆ. ಇದನ್ನು ಸಹಿಸುವುದಿಲ್ಲ. ನಾನು ಸಚಿವ ಸ್ಥಾನದಿಂದ ಕೆಳಗಿಳಿಯಲೆಂದು ಹುನ್ನಾರ ಮಾಡುತ್ತಿರುವವರಿಗೆ ಹೆದರುವುದಿಲ್ಲ. ಯಾವುದೇ ಕಾರಣಕ್ಕೂ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವುದಿಲ್ಲ. ಹೇಳಿದ ಸಮಯಕ್ಕೆ ನೀರು ತಂದೇ ತರುತ್ತೇನೆ’ ಎಂದು ತಿಳಿಸಿದರು.ಸರ್ಕಾರ ಬಡವರದು: ಶ್ರೀನಿವಾಸಪುರ ತಾಲ್ಲೂಕಿನ ರೋಣೂರು ಕ್ರಾಸ್‌ನಿಂದ ಲಕ್ಷ್ಮೀಪುರ ಗ್ರಾಮದವರೆಗಿನ ರಸ್ತೆ ಕಾಮಗಾರಿಗೆ ₹ 2 ಕೋಟಿ ಅಂದಾಜು ವೆಚ್ಚದ ಕ್ರಿಯಾಯೋಜನೆ ಸಿದ್ಧಪಡಿಸಿರುವ ಬಗ್ಗೆ ಅಸಮಾಧಾನಗೊಂಡ ಅವರು, ‘ಸರ್ಕಾರದ ದುಡ್ಡು ಎಂದರೆ ಏನೆಂದು ಕೊಂಡಿದ್ದೀರಿ. ಸರ್ಕಾರ ಬಡವರದು. ನಾವು ಮಾನ ಮರ್ಯಾದೆಯಿಂದ ಬದುಕುತ್ತಿದ್ದೇವೆ. ನೀವು ಗೌರವದಿಂದ ನಡೆದುಕೊಳ್ಳಿ’ ಎಂದು ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ ಸತೀಶ್‌ ಅವರನ್ನು  ಸಚಿವರು ತರಾಟೆಗೆ ತೆಗೆದು ಕೊಂಡರು.‘ಬೇಕಾ ಬಿಟ್ಟಿಯಾಗಿ ಕೋಟಿ ಕೋಟಿ ಹಣ ಖರ್ಚು ಮಾಡಿದರೆ ಜಿಲ್ಲಾ ಖಜಾನೆ ಹಣವನ್ನೆಲ್ಲಾ ತಂದಿಟ್ಟರೂ ಸಾಲುವುದಿಲ್ಲ. 2013ರಿಂದ ಈವರೆಗೆ ರಸ್ತೆ ರಿಪೇರಿ ಮತ್ತು ನಿರ್ಮಾಣ ಕಾಮಗಾರಿಗಳಿಗೆ ಎಷ್ಟು ಹಣ ಖರ್ಚು ಮಾಡಿದ್ದೀರಿ’ ಎಂದು ಪ್ರಶ್ನಿಸಿದರು.ಇದಕ್ಕೆ ಸತೀಶ್‌, ‘₹ 127 ಕೋಟಿ ವೆಚ್ಚ ಮಾಡಲಾಗಿದೆ’ ಎಂದು ಉತ್ತರಿಸಿದರು. ಇದರಿಂದ ಮತ್ತಷ್ಟು ಕೋಪಗೊಂಡ ಸಚಿವರು, ‘ನೀವೆಲ್ಲಾ ಜಿಲ್ಲೆಯನ್ನು ಚೆನ್ನಾಗಿ ಉದ್ಧಾರ ಮಾಡುತ್ತೀರಿ. ರಸ್ತೆ ಕಾಮಗಾರಿ ವೆಚ್ಚವನ್ನು ₹ 1 ಕೋಟಿಗೆ ಇಳಿಸಿ ಹೊಸದಾಗಿ ಕ್ರಿಯಾ ಯೋಜನೆ ಸಿದ್ಧಪಡಿಸಿ’ ಎಂದು ಎಚ್ಚರಿಕೆ ನೀಡಿದರು.‘ಸರ್ಕಾರದಲ್ಲಿ ಕಾಡಿ ಬೇಡಿ ಹಣ ಮಂಜೂರು ಮಾಡಿಸಿಕೊಂಡು ಬರುತ್ತೇವೆ. ಅಧಿಕಾರಿಗಳು ಆ ಹಣವನ್ನು ನಿಗದಿತ ಕಾಲಮಿತಿಯೊಳಗೆ ಸಮರ್ಪಕವಾಗಿ ಬಳಸದೆ ಹಾಗೆಯೇ ಉಳಿಸಿದರೆ ಹೇಗೆ. ಇಂತಹ ಬೇಜವಾಬ್ದಾರಿ ಅಧಿಕಾರಿಗಳನ್ನು ಜಿಲ್ಲೆಯಲ್ಲಿ ಯಾಕೆ ಇಟ್ಟುಕೊಳ್ಳಬೇಕು. ಮೊದಲು ಸಸ್ಪೆಂಡ್ ಮಾಡಿ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಬಿ. ಕಾವೇರಿ ಅವರಿಗೆ ಸೂಚನೆ ನೀಡಿದರು.ಸಮುದಾಯ ಭವನ: ‘ಪರಿಶಿಷ್ಟ ಜಾತಿ ಮತ್ತು ವರ್ಗದ ಜನರ ಅಭ್ಯುದಯಕ್ಕಾಗಿ ಸರ್ಕಾರದಿಂದ 168 ಸಮುದಾಯ ಭವನಗಳನ್ನು ಮಂಜೂರು ಮಾಡಿಸಿಕೊಂಡು ಬಂದಿದ್ದೇನೆ. ಆದರೆ, ಅದರಲ್ಲಿ ಕೇವಲ 14 ಭವನಗಳ ಕಾಮಗಾರಿ ಪ್ರಗತಿಯಲ್ಲಿದೆ. ಹೀಗಾದರೆ ಗುರಿ ಸಾಧಿಸುವುದಾದರೂ ಹೇಗೆ’ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.‘ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಇರುವ 20 ಗ್ರಾಮಗಳಲ್ಲಿ ಶೀಘ್ರವೇ ಕೊಳವೆ ಬಾವಿಗಳನ್ನು ಕೊರೆಸಬೇಕು. ಭೂ ವಿಜ್ಞಾನಿಗಳು ನೀರು ಸಿಗುವ ಸ್ಥಳ ಗುರುತಿಸಿ ಕೊಳವೆ ಬಾವಿ ಕೊರೆಯುವ ಕೆಲಸ ಆರಂಭಿಸಬೇಕು. ಈಗಾಗಲೇ ಕೊರೆದಿರುವ ಕೊಳವೆ ಬಾವಿಗಳಿಗೆ ಪಂಪ್‌ ಮತ್ತು ಮೋಟರ್ ಅಳವಡಿಸಿ ವಿದ್ಯುತ್‌ ಸಂಪರ್ಕ ಕಲ್ಪಿಸಬೇಕು’ ಎಂದು ಅಧಿಕಾರಿಗಳಿಗೆ ತಿಳಿಸಿದರು.‘ತಾಲ್ಲೂಕಿನ ಸಾಕಷ್ಟು ಗ್ರಾಮಗಳಲ್ಲಿ ಸ್ಮಶಾನಗಳಿಗೆ ಭೂಮಿ ಇಲ್ಲ. ಸ್ಮಶಾನಗಳಿಗೆ ಭೂಮಿ ಬೇಕೆಂದು ಅರ್ಜಿ ಸಲ್ಲಿಸಿದ ಎಲ್ಲಾ ಗ್ರಾಮಗಳಿಗೂ ಭೂಮಿ ಮಂಜೂರು ಮಾಡುವುದು ಕಂದಾಯ ಇಲಾಖೆ ಜವಾಬ್ದಾರಿ. ಈ ಕಾರ್ಯಕ್ಕೆ ಹೆಚ್ಚು ಒತ್ತು ಕೊಡಿ. ಸ್ಮಶಾನ ಭೂಮಿ ಮತ್ತು ಕೆರೆ ಒತ್ತುವರಿ ಮಾಡಿರುವುದನ್ನು ಗುರುತಿಸಿ ತೆರವುಗೊಳಿಸಿ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಅವರಿಗೆ ಸೂಚಿಸಿದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಯಶೋದಾ, ಉಪ ವಿಭಾಗಾಧಿಕಾರಿ ಸಿ.ಎನ್‌. ಮಂಜುನಾಥ್‌ ಸಭೆಯಲ್ಲಿ ಹಾಜರಿದ್ದರು.

ಸಸಿ ಆಂದೋಲನಕ್ಕೆ ಸೂಚನೆ

‘ಮಳೆಗಾಲದಲ್ಲಿ ಶಾಲಾ ವಿದ್ಯಾರ್ಥಿಗಳು ಮತ್ತು ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಬೆಟ್ಟ ಗುಡ್ಡಗಳು ಹಾಗೂ ಸರ್ಕಾರಿ ಜಾಗದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್‌. ರಮೇಶಕುಮಾರ್‌ ಅಧಿಕಾರಿಗಳಿಗೆ ಸೂಚಿಸಿದರು. ಈ ಕಾರ್ಯವನ್ನು ಆಂದೋಲನದ ರೀತಿಯಲ್ಲಿ ಕೈಗೆತ್ತಿಕೊಂಡು ಸಸಿ ನೆಡುವುದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.‘ನೀಲಗಿರಿ ಸಸಿಗಳ ಮಾರಾಟ ನಿರ್ಬಂಧಿಸಲಾಗಿದೆ. ಆದರೂ ಕೆಲವಡೆ ಅಧಿಕಾರಿಗಳ ಕಣ್ತಪ್ಪಿಸಿ ಸಸಿಗಳನ್ನು ಮಾರಲಾಗುತ್ತಿದೆ. ಅಂತಹ ಸ್ಥಳಗಳನ್ನು ಪತ್ತೆ ಮಾಡಿ ದಾಳಿ ನಡೆಸಿ. ನೀಲಗಿರಿ ಸಸಿಗಳನ್ನು ಮಾರುವವರ ವಿರುದ್ಧ ಪ್ರಕರಣ ದಾಖಲಿಸಿ’ ಎಂದು ಹೇಳಿದರು.

ಕಾಮಗಾರಿ ಮುಂದುವರಿಸಿ

ಮಳೆಯ ಕಾರಣಕ್ಕೆ ಯೋಜನೆಯ ಕೆ.ಸಿ ವ್ಯಾಲಿ ಕಾಮಗಾರಿ ಸ್ವಲ್ಪ ವಿಳಂಬವಾಗಿದೆ. ಅಧಿಕಾರಿಗಳು ಸಬೂಬು ಹೇಳುತ್ತಾ ಕೂರದೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಶೀಘ್ರವೇ ಪೈಪ್‌ಲೈನ್ ಕಾಮಗಾರಿ ಆರಂಭಿಸಬೇಕು. ಮತ್ತೊಮ್ಮೆ ಹೆದ್ದಾರಿ ಪ್ರಾಧಿಕಾರವನ್ನು ಸಂಪರ್ಕಿಸಿ ಕಾಮಗಾರಿಗೆ ಅನುಮತಿ ಕೇಳಿ. ಪ್ರಾಧಿಕಾರ ಅನುಮತಿ ಕೊಡಲಿ ಬಿಡಲಿ ಕಾಮಗಾರಿ ಮುಂದುವರಿಸಿ’ ಎಂದು ಸೂಚಿಸಿದರು.

*

ಕ್ಷೇತ್ರದ ಎಲ್ಲಾ ಸಮುದಾಯ ಸಮುದಾಯ ಭವನಗಳಿಗೆ ಭೂಮಿ ಪೂಜೆ ಆಗಬೇಕು. ಇಲ್ಲವಾದರೆ ಅಧಿಕಾರಿಗಳನ್ನು ಅಮಾನತು ಮಾಡಲು ಶಿಫಾರಸು ಮಾಡುತ್ತೇನೆ.

ಕೆ.ಆರ್‌. ರಮೇಶ್‌ಕುಮಾರ್‌,

ಜಿಲ್ಲಾ ಉಸ್ತುವಾರಿ ಸಚಿವ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry