ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಫೋಟಗೊಂಡ ರೈತರ ಒಡಲಾಳದ ಆಕ್ರೋಶ

ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಹವಣಿಸಿದ ಪ್ರತಿಭಟನಾಕಾರರು, ದಾರಿ ಮಧ್ಯ ತಡೆದ ಪೊಲೀಸರು
Last Updated 2 ಜೂನ್ 2017, 12:00 IST
ಅಕ್ಷರ ಗಾತ್ರ

ದೇವನಹಳ್ಳಿ: ಶಾಶ್ವತ ನೀರಾವರಿಗಾಗಿ ಆಗ್ರಹಿಸಿ ವಿಧಾನಸೌಧ ಮುತ್ತಿಗೆ ಹಾಕಲು ಬೈಕ್‌ ರ‍್ಯಾಲಿ ನಡೆಸಿದ ಬಯಲು ಸೀಮೆಯ ಆರು ಜಿಲ್ಲೆಗಳ ರೈತಸಂಘದ ಕಾರ್ಯಕರ್ತರನ್ನು ಗುರುವಾರ ಪೊಲೀಸರು ಬೆಂಗಳೂರು ಪ್ರವೇಶಿಸ ದಂತೆ ನಗರದಲ್ಲಿಯೇ ತಡೆಹಿಡಿದರು. ಹೀಗಾಗಿ ರೈತರು ರಾಣಿ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿ  ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ರಾಮನಗರ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗ ಳೂರು ಗ್ರಾಮಾಂತರ ಜಿಲ್ಲೆ ರೈತರು ಬೈಕ್‌ ರ‍್ಯಾಲಿಯಲ್ಲಿ ಬಂದು ನಗರದ ರಾಣಿ ವೃತ್ತದಲ್ಲಿ ಜಮಾಯಿಸಿದರು. ಮುಂಜಾಗ್ರತಾ ಕ್ರಮವಾಗಿ ನಗರದಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಪ್ರತಿಭಟನಾಕಾರರನ್ನು ಮತ್ತು ಸಂಚಾರ ದಟ್ಟಣೆ ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. 

ವೃತ್ತದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ರೈತಸಂಘದ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ‘ನೀರಾವರಿ ಹೋರಾಟ ಗಾರರಿಗೆ ವರ್ಷದ ಹಿಂದೆ ಕೊಟ್ಟ ಭರವಸೆಗಳನ್ನು ಈಡೇರಿಸದ ಈ ಮಾನಗೆಟ್ಟ ಸರ್ಕಾರ ನಿತ್ಯ ನಾವು ನುಡಿದಂತೆ ನಡೆದಿದ್ದೇವೆ ಎಂದು ಪುಟಗಟ್ಟಲೇ ಪತ್ರಿಕೆಗಳಿಗೆ ಜಾಹೀರಾತು ನೀಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈವರೆಗೆ ಏನು ಮಾಡಿದ್ದಾರೆ ಎಂಬುದು ರೈತರಿಗೆ ಗೊತ್ತಿದೆ’ ಎಂದು ಕಿಡಿಕಾರಿದರು .

‘ರೈತರ  ಬೆವರಿನ ಹಣದಲ್ಲಿ ವಿಧಾನಸೌಧ ನಿರ್ಮಾಣವಾಗಿದೆ. ರೈತರಿಲ್ಲದಿದ್ದರೆ ಸರ್ಕಾರ ಎಲ್ಲಿರುತ್ತದೆ? ರೈತರು ಕೊಳ್ಳೆ ಹೊಡೆಯಲು ವಿಧಾನ ಸೌಧ ಚಲೋ ನಡೆಸುತ್ತಿಲ್ಲ. ರೈತರನ್ನು ದಿಕ್ಕು ತಪ್ಪಿಸುವ ಭರವಸೆಗಳಿಂದ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ. ರೈತರ ಮೇಲೆ ಹಲ್ಲೆ, ಲಾಠಿ ಪ್ರಹಾರ ನಡೆಸಿದ ಸರ್ಕಾರ ಗಳಿಗಾದ ಪ್ರತಿಫಲ ಮುಖ್ಯಮಂತ್ರಿ ಅವರು ಅರ್ಥ ಮಾಡಿ ಕೊಳ್ಳಬೇಕು. ರೈತರ ಚಳವಳಿಗಳನ್ನು ಪೊಲೀಸರ ಮೂಲಕ ಹತ್ತಿಕ್ಕುವ ಪ್ರಯತ್ನ ಪ್ರಜಾತಂತ್ರ ವಿರೋಧಿ ಕ್ರಮ. ಈ ಸರ್ಕಾರ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗ ತೂರಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರ ಬಂಧನ: ಬೆಳಿಗ್ಗೆಯಿಂದಲೇ ನಗರದಲ್ಲಿ ಸೇರಿದ ಸಾವಿರಾರು ರೈತರು ಸರ್ಕಾರದ ಕಾರ್ಯವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಜತೆಗೆ ನಮ್ಮ ಮನವಿ ಪಡೆಯಲು ಸರ್ಕಾರದಿಂದ ಸಚಿವರೊಬ್ಬರು ಬರಬೇಕು ಇಲ್ಲವೇ ನಮಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಅನುಮತಿ ನೀಡಬೇಕು ಎಂದು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸುತ್ತಲೇ ಇದ್ದರು.

ಕೋಡಿಹಳ್ಳಿ ಚಂದ್ರಶೇಖರ್ ಅವರು ತಮ್ಮ ಭಾಷಣದಲ್ಲಿ ‘ಒಂದು ಗಂಟೆ ಕಾಲಾವಕಾಶ ನೀಡುತ್ತೇವೆ. ಅಷ್ಟರೊಳಗೆ ಸಚಿವರು ಬಂದು ಮನವಿ ಸ್ವೀಕರಿಸಬೇಕು. ಇಲ್ಲದಿದ್ದರೆ ನಮಗೆ ಮುಖ್ಯಮಂತ್ರಿ ಬಳಿ ತೆರಳಲು ಪೊಲೀ ಸರು ಅವಕಾಶ ಮಾಡಿಕೊಡಬೇಕು’ ಎಂದು ಹೇಳಿದರು.

ಪ್ರತಿಭಟನಾ ಸ್ಥಳಕ್ಕೆ ತಡವಾಗಿ ಆಗಮಿಸಿದ ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರು ಪ್ರತಿಭಟನಾಕಾರರ ಆಹವಾಲು ಆಲಿಸಲು ಮುಂದಾದರು. ಈ ವೇಳೆ ಅವರು ರೈತರನ್ನು ಉದ್ದೇಶಿಸಿ, ‘ಎತ್ತಿನಹೊಳೆ ಯೋಜನೆ ಕಾಮಗಾರಿ ಭರದಿಂದ ಸಾಗಿದೆ. ಜತೆಗೆ ಹೆಬ್ಬಾಳ ದಿಂದ ತ್ಯಾಜ್ಯ ನೀರನ್ನು ಸಂಸ್ಕರಿಸಿ ಬಯಲುಸೀಮೆಯ ಕೆರೆಗಳಿಗೆ ನೀರು ಪೂರೈಸಲು ₹1400 ಕೋಟಿ ವೆಚ್ಚದ ಯೋಜನೆ ಕೂಡ ಸಿದ್ಧಪಡಿಸಲಾಗಿದೆ. ನಿಮ್ಮೆಲ್ಲ ಸಮಸ್ಯೆಗಳ ಕುರಿತು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಅವರ ಭೇಟಿಗೆ ಅವಕಾಶ ಮಾಡಿಕೊಡಲಾಗುತ್ತದೆ’ ಎಂದು ಭರವಸೆ ನೀಡಿದರು.

ಸಚಿವರ ಉತ್ತರದಿಂದ ತೃಪ್ತರಾಗದ ಪ್ರತಿಭಟನಾಕಾರರು ಆಕ್ರೋಶಗೊಂಡು ಪೊಲೀಸರು ರಸ್ತೆಯಲ್ಲಿ ಅಳವಡಿಸಿದ್ದ ಬ್ಯಾರಿಕೆಡ್‌ಗಳನ್ನು ತಳ್ಳಿ
ಹಾಕಿ ಬೆಂಗಳೂರಿನತ್ತ ಸಾಗಲು ಮುಂದಾದರು. ಈ ವೇಳೆ ಎಚ್ಚೆತ್ತುಕೊಂಡ ಪೊಲೀಸರು ಮುಂಜಾಗ್ರತೆ ಕ್ರಮವಾಗಿ ಕೋಡಿಹಳ್ಳಿ ಚಂದ್ರಶೇಖರ್‌ ಸೇರಿದಂತೆ ರೈತಸಂಘದ ಅನೇಕ ಕಾರ್ಯಕರ್ತರನ್ನು ಬಂಧಿಸಿ ಬಸ್‌ಗಳ ಮೂಲಕ ವಿವಿಧ ಸ್ಥಳಗಳಿಗೆ ಕರೆದುಕೊಂಡು ಹೋದರು.

ಭಾರಿ ಬಂದೋಬಸ್ತ್
ಬೈಕ್ ರ‍್ಯಾಲಿಯಿಂದ ಅಹಿತಕರ ಘಟನೆಗಳು ಉಂಟಾಗದಂತೆ ಮುನ್ನೆಚ್ಚರಿಕೆ ಕ್ರಮಗೊಂಡಿದ್ದ ಪೊಲೀಸ್‌ ಇಲಾಖೆ, ಕಳೆದ ಮೂರು ದಿನಗಳಿಂದ ಕಾರ್ಯತಂತ್ರ ರೂಪಿಸಿ ಆಯಕಟ್ಟಿ ಸ್ಥಳಗಳಲ್ಲಿ ಪೊಲೀಸರ ಸರ್ಪಗಾವಲು ಹಾಕಿತ್ತು. ರಾಣಿ ವೃತ್ತ, ದೇವನಹಳ್ಳಿ ಬೈಪಾಸ್, ಟೋಲ್1, ಟೋಲ್2 ಮತ್ತು ಚಿಕ್ಕಜಾಲ ಒಟ್ಟು ಐದು ಕಡೆಗಳಲ್ಲಿ ನಿಗಾ ಇಟ್ಟಿದ್ದರು.

ಪ್ರತಿಭಟನಾಕಾರರು ಜಮಾವಣೆಗೊಂಡಿದ್ದ ರಾಣಿ ವೃತ್ತದಿಂದ ಒಂದು ಕಿ.ಮೀ ದೂರದಲ್ಲಿ ರೈತರ ಬೈಕ್‌ಗಳನ್ನು ತಡೆಯುವ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ರೈತರು ಮಾತ್ರ ವೃತ್ತದ ಕಡೆಗೆ ಸಾಗಬೇಕು ಎಂದು ಪೊಲೀಸ್ ಸಿಬ್ಬಂದಿ ಧ್ವನಿವರ್ಧಕಗಳ ಮೂಲಕ ಪ್ರಚಾರ ಮಾಡುತ್ತಿದ್ದದ್ದು ಕಂಡುಬಂತು.

ಮುಂಜಾಗ್ರತಾ ಕ್ರಮವಾಗಿ ಪ್ರತಿಭಟನಾ ಸ್ಥಳದಲ್ಲಿ ತಲಾ ಇಬ್ಬರು ಡಿಸಿಪಿ, ಎಸಿಪಿಗಳು ಸೇರಿದಂತೆ 1,564 ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಿದರು.

ದೇವನಹಳ್ಳಿ ಮತ್ತು ಸುತ್ತಮುತ್ತಲಿನ ಸಂಚಾರ ವ್ಯವಸ್ಥೆ ನಿರ್ವಹಣೆಗಾಗಿ  286 ಸಂಚಾರ ಪೊಲೀಸರು ಶ್ರಮಿಸಿದರು. ಜತೆಗೆ ಅಶ್ರವಾಯು ವಾಹನ, ಜಲಫಿರಂಗಿ ಮತ್ತು ಅಗ್ನಿಶಾಮಕ ವಾಹನಗಳನ್ನು ಮತ್ತು ಕೆಎಸ್‌ಆರ್‌ಟಿಸಿಯ 40 ಬಸ್‌ಗಳನ್ನು ಕಾಯ್ದಿರಿಸಲಾಗಿತ್ತು. ಪ್ರತಿಭಟನಾಕಾರರು ಬೆಂಗಳೂರಿಗೆ ನುಗ್ಗುವುದನ್ನು ತಡೆಯಲ್ಲಿ ರಸ್ತೆಯಲ್ಲಿ 250ಕ್ಕೂ ಹೆಚ್ಚು ಬ್ಯಾರಿಕೇಡ್ ಅಳವಡಿಸಲಾಗಿತ್ತು.

ರಾಜ್ಯ ಸರ್ಕಾರದಿಂದ ರೈತರಿಗೆ ಮೋಸ
ಶಿಡ್ಲಘಟ್ಟ:
‘ಶಾಶ್ವತ ನೀರಾವರಿ ಯೋಜನೆ ಜಾರಿಯಾಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ’ ಎಂದು ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ತಾದೂರು ಮಂಜುನಾಥ್ ತಿಳಿಸಿದರು.

ನಗರದ ಬಸ್ ನಿಲ್ದಾಣದಿಂದ ಶಾಶ್ವತ ನೀರಾವರಿ ಯೋಜನೆ ಜಾರಿಗೆ ಆಗ್ರಹಿಸಿ  ಗುರುವಾರ ಬೆಂಗಳೂರಿಗೆ ತೆರಳಿದ ಬೈಕ್ ರ್‍ಯಾಲಿಗೆ ಚಾಲನೆ ನೀಡಿ ಮಾತನಾಡಿದರು. ‘ರೈತ ದೇಶದ ಬೆನ್ನೆಲುಬು ಎಂದು ಹೇಳುತ್ತಿರುವ ಸರ್ಕಾರ ರೈತರಿಗೆ ಮೋಸ ಮಾಡಲು ಹೊರಟಿದೆ’ ಎಂದು ಆರೋಪಿಸಿದರು.

‘ಸಾವಿರಾರು ಕೆರೆಗಳನ್ನು ಹೊಂದಿರುವ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಇಂದು ಅಂತರ್ಜಲ ಮಟ್ಟ ಕುಸಿದಿದೆ. ಕೆರೆ, ಕುಂಟೆ, ಬಾವಿಗಳು ಬತ್ತಿವೆ.ರಾಜಕಾಲುವೆಗಳು ಮಾಯವಾಗಿ, ಕೃಷಿ, ತೋಟಗಾರಿಕೆ ಮತ್ತು ಹೈನೊದ್ಯಮವು ಸಂಕಷ್ಟಕ್ಕೆ ಸಿಲುಕುತ್ತಿದೆ’ ಎಂದರು.

‘ಶುದ್ಧ ಕುಡಿಯುವ ನೀರು ದೊರೆಯುತ್ತಿಲ್ಲ. ಸಾವಿರಾರು ಅಡಿಯಿಂದ ಮೇಲಕ್ಕೆ ತರುವ ನೀರು ಫ್ಲೋರೈಡ್‌ಯುಕ್ತವಾಗಿದೆ. ಮಾರಣಾಂತಿಕ ಕಾಯಿಲೆಗಳಿಗೆ ಜನರು ತುತ್ತಾಗುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಮುಂದಿನ ಪೀಳಿಗೆಯ ಉಳಿವಿಗಾಗಿ ಮತ್ತು ನೀರಿನ ಸಮಸ್ಯೆ ನಿವಾರಣೆಗೆ ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸಬೇಕು. ಅಂತರ್ಜಲ ಅಬಿವೃದ್ಧಿಗೆ ರಾಜಕಾಲುವೆ, ಕೆರೆ, ಕುಂಟೆಗಳ ಪುನಶ್ಚೇತನಕ್ಕೆ ಒತ್ತು ನೀಡಿ ಜಲ ಮರುಪೂರಣ ಮಾಡಬೇಕು’ ಎಂದು  ಆಗ್ರಹಿಸಿದರು.

ರ‍್ಯಾಲಿಯಲ್ಲಿ ನೂರಾರು ರೈತರು ಪಾಲ್ಗೊಂಡಿದ್ದರು. ರೈತ ಮುಖಂಡ ರಾದ ಎಸ್.ಎಂ.ನಾರಾಯಣಸ್ವಾಮಿ, ವೇಣುಗೋಪಾಲ್, ರಾಮಕೃಷ್ಣಪ್ಪ, ಮುನಿನಂಜಪ್ಪ, ನಾರಾಯಣಸ್ವಾಮಿ, ಅನಂತು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT