ತಾತನ ಆಸೆ ಈಡೇರಿಸಿದ ಮೊಮ್ಮಗ!

7
ಬಳ್ಳಾರಿ ಜಿಲ್ಲೆಗೆ ಕೀರ್ತಿ ತಂದ ಯುವಕ ಪ್ರವೀಣ್‌ಕುಮಾರ್‌

ತಾತನ ಆಸೆ ಈಡೇರಿಸಿದ ಮೊಮ್ಮಗ!

Published:
Updated:
ತಾತನ ಆಸೆ ಈಡೇರಿಸಿದ ಮೊಮ್ಮಗ!

ಬಳ್ಳಾರಿ: ‘ನನ್ನ ತಾತ ಡಾ. ಸೂರ್ಯನಾಯಕ್‌ ಅವರಿಗೆ ಕುಟುಂಬ­ದಲ್ಲಿ ಒಬ್ಬರಾದರೂ ಐಎಎಸ್‌ ಅಥವಾ ಐಪಿಎಸ್‌ ಅಧಿಕಾರಿಯಾಗಲಿ ಎಂಬ ಆಸೆ ಇತ್ತು. ಮಕ್ಕಳಿಂದ ಆಗದಿದ್ದರೂ, ಮೊಮ್ಮಕ್ಕಳಿಂದಲಾದರೂ ಅದನ್ನು ಆಗಿಸುವೆ ಎಂದಿದ್ದರು. ಆಸೆ ಈಡೇರಿರುವ ಈ ಹೊತ್ತಿನಲ್ಲಿ ಅವರೇ ಇಲ್ಲ...’–2016ರ ಯುಪಿಎಸ್‌ಸಿ ಪರೀಕ್ಷೆ­ಯಲ್ಲಿ 173ನೇ ರ‍್ಯಾಂಕ್‌ ಗಳಿಸಿ ಐಎಎಸ್‌ ನಿರೀಕ್ಷೆಯಲ್ಲಿರುವ ಕೆ.ಜೆ. ಪ್ರವೀಣ್‌­ಕುಮಾರ್‌ ಸಂಭ್ರಮದ ನಡುವೆಯೇ ‘ಪ್ರಜಾವಾಣಿ’ಯೊಂದಿಗೆ ತಮ್ಮ ತಾತನ ಅಗಲಿಕೆಯನ್ನು ಸ್ಮರಿಸಿದರು,2015ರಲ್ಲಿ ಅವರು ಮೊದಲ ಬಾರಿಗೆ ಹೆಚ್ಚು ಅಂಕ ಪಡೆದು ಸಂದರ್ಶನವನ್ನು ಎದುರಿಸಿ ಬಂದ ಮಾರನೇ ದಿನವೇ ತಾತ ನಿಧನರಾಗಿದ್ದರು.

ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಚಿಕ್ಕಜೋಗಿಹಳ್ಳಿ ತಾಂಡಾದ ಪರಿಶಿಷ್ಟ ಜಾತಿಯ ಕುಟುಂಬವೊಂದರ ಈ ಯುವಕ ತನ್ನ ತಾತನ ಆಸೆ ಈಡೇರಿಸಿ­ದ್ದಾರೆ. ಎರಡನೇ ಬಾರಿಗೆ ಪರೀಕ್ಷೆ ಎದುರಿಸಿ ಯಶಸ್ಸು ಸಾಧಿಸಿದ್ದಾರೆ.2014ರ ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಉಪ­ವಿಭಾಗಾ­ಧಿಕಾರಿ ಹುದ್ದೆ ನೀರೀಕ್ಷೆಯಲ್ಲಿ­ರುವಾಗಲೇ  ಅದಕ್ಕಿಂತಲೂ ಉನ್ನತ ಹುದ್ದೆ ಹತ್ತಿರ ಬಂದಿದೆ. ಮುಖ್ಯ ಪರೀಕ್ಷೆಯಲ್ಲಿ ಅವರು ಕನ್ನಡವನ್ನು ಪ್ರಮುಖ ಅಧ್ಯಯನ ವಿಷಯ­ವನ್ನಾಗಿ ಆಯ್ಕೆ ಮಾಡಿಕೊಂಡಿದ್ದರು.ಸೇವೆಯೇ ಗುರಿ: ಸಂಪಾದನೆಗಿಂತಲೂ ಸೇವೆಯೇ ಮುಖ್ಯ ಎಂದು ಅವರ ಕುಟುಂಬ ಭಾವಿಸಿರುವುದೂ, ಅದರಂತೆ ಬದುಕುತ್ತಿರುವುದೂ ಕೂಡ ಪ್ರವೀಣ್‌ಗೆ ಪ್ರೇರಣೆಯಾಗಿರುವುದು ವಿಶೇಷ.ಬಿ.ಇ.ಎಲೆಕ್ಟ್ರಿಕಲ್‌ ಅಂಡ್‌ ಕಮ್ಯುನಿ­ಕೇಷನ್‌ಲ್ಲಿ ಪದವೀಧರರಾಗಿರುವ ಅವರು ಎಲ್‌.ಅಂಡ್‌ ಡಿ ಕಂಪೆನಿಯಲ್ಲಿ ಉದ್ಯೋಗ ಮಾಡುತ್ತಿದ್ದಾಗ ಅವರಿಗೆ ಭರ್ತಿ ₹60,000 ವೇತನ ದೊರಕು­ತ್ತಿತ್ತು. ಅಮೆರಿಕಾ ಪ್ರವಾಸದ ಅವಕಾಶವೂ ಇತ್ತು. ಆದರೆ ಅವರು ಅದನ್ನು 2014ರಲ್ಲಿ ಬಿಟ್ಟು ಬರಲು ಅವರ ದೊಡ್ಡಣ್ಣ ಡಾ.ಹೇಮಂತ್‌ ಪ್ರೇರಣೆಯಾಗಿ ನಿಂತರು.‘ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಎ.ಐ.ಎಂ.ಎಸ್‌) ಸೇವೆ ಸಲ್ಲಿಸಬೇಕು ಎಂಬ ಸದುದ್ದೇಶ­ದಿಂದ ಅವರು ಖಾಸಗಿ ಆಸ್ಪತ್ರೆಗಳಿಂದ ಬಂದ ಹಲವಾರು ಉತ್ತಮ ವೇತನದ ಅವಕಾಶಗಳನ್ನು ದೂರ ತಳ್ಳಿದರು. ಹೀಗಾಗಿ ನನ್ನ ಕೆಲಸಕ್ಕೆ ರಾಜೀನಾಮೆ ನೀಡುವ  ಮಹತ್ವದ ನಿರ್ಧಾರ ಕೈಗೊಂಡೆ. ಅವರಿರುವ ಚಂಢೀಗಡಕ್ಕೆ ತೆರಳಿ ಅಲ್ಲಿ ಎರಡು ವರ್ಷ ಪರೀಕ್ಷೆಗೆ ಅಧ್ಯಯನ ನಡೆಸಿದೆ’ ಎಂದು ಪ್ರವೀಣ್‌ ಸ್ಮರಿಸಿದರು. ‘ಈ ಯಶಸ್ಸು ನನ್ನ ಅಪ್ಪ, ಅಮ್ಮ ಮತ್ತು ಅಣ್ಣಂದಿರಿಗೇ ಸೇರಬೇಕು’ ಎಂದು ಕೃತಜ್ಞತೆ ವ್ಯಕ್ತಪಡಿಸಿದರು.‘ಶಿಕ್ಷಕ ದಂಪತಿಯಾದ ತಂದೆ ಜಗನ್ನಾಥ್‌ ಮತ್ತು ತಾಯಿ ರೇಣುಕಾ­ಬಾಯಿ ಅವರಿಗೆ ಹರಪನಹಳ್ಳಿ ಕರ್ಮ­ಭೂಮಿಯಷ್ಟೇ. ಚಿಕ್ಕಜೋಗಿಹಳ್ಳಿಯೇ ನಮಗೆ ಎಲ್ಲವೂ’ ಎಂದು ಹೇಳುವುದನ್ನು ಮರೆಯಲಿಲ್ಲ.

ಪ್ರಜಾವಾಣಿ ‘ಸಹಪಾಠಿ’ ನೆರವಾಯಿತು!

ಯಾವುದೇ ತರಬೇತಿ ಸಂಸ್ಥೆಗೆ ಸೇರದೇ ಪ್ರವೀಣ್‌ ಯುಪಿಎಸ್‌ಸಿ ಪರೀಕ್ಷೆ ಎದುರಿಸಿದ್ದರು. ಕೆಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸುವ ವೇಳೆ ‘ಪ್ರಜಾವಾಣಿ’ಯ ‘ಸಹಪಾಠಿ’ ಪುರವಣಿ ನೆರವಿಗೆ ಬಂತು ಎಂದು ಸ್ಮರಿಸಿದರು.‘ಪ್ರಾಥಮಿಕ ಹಂತದಿಂದಲೂ ಓದಿನಲ್ಲಿ ಚುರುಕಿದ್ದ ನಾನು ದೊಡ್ಡ ಟಿಪ್ಪಣಿಗಳನ್ನು ಮಾಡಿಕೊಳ್ಳುತ್ತಿರಲಿಲ್ಲ. ಚಿಕ್ಕ ಚೀಟಿಗಳಲ್ಲಿ ಟಿಪ್ಪಣಿ ಮಾಡಿಟ್ಟುಕೊಳ್ಳುತ್ತಿದ್ದೆ. ಅದೇ ನನಗೆ ಪುನರಾವರ್ತನೆ ಮಾಡಲು ಅನುಕೂಲವಾಯಿತು’ ಎಂದು ವಿವರಿಸಿದರು.‘ಆರೇಳು ತಾಸು ಪುಸ್ತಕಗಳನ್ನು ಓದಿ ಸುಸ್ತಾದ ಬಳಿಕ ಮೊಬೈಲ್‌ ಫೋನ್‌ನಲ್ಲಿ ಪಿಡಿಎಫ್‌ ಪುಸ್ತಕಗಳನ್ನು ಓದುತ್ತಿದ್ದೆ. ರಾಜ್ಯಸಭಾ, ಅಲ್‌ಜಜೀರ್‌ ಟಿ.ವಿ.ಗಳಲ್ಲಿ ಪ್ರಸಾರವಾಗುವ ಚರ್ಚೆಗಳನ್ನು ದಿನವೂ ವೀಕ್ಷಿಸುತ್ತಿದೆ. ಅಂತರರಾಷ್ಟ್ರೀಯ ಸಂಬಂಧಗಳ ಅರಿವಿಗಾಗಿ ಚೈನಾದ ‘ಗ್ಲೋಬಲ್‌ ಟೈಮ್ಸ್‌’, ಪಾಕಿಸ್ತಾನದ ‘ಡಾನ್‌’ ಪತ್ರಿಕೆಗಳನ್ನು ಓದುತ್ತಿದ್ದೆ’ ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry