ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾ ಹಲಸು; ಊಟದ ಸೊಗಸು

ರಸಾಸ್ವಾದ
Last Updated 2 ಜೂನ್ 2017, 19:30 IST
ಅಕ್ಷರ ಗಾತ್ರ

ಊಟಕ್ಕೆಂದು ರೆಸ್ಟೊರೆಂಟ್‌ಗೆ ಬಂದ ನಾಲ್ಕು ಮಂದಿ ಗಾಜಿನ ಗೋಡೆಯ ಪಕ್ಕ ಕುಳಿತರು. ಕೋಣೆಯೊಳಗೆ ಬಾಣಸಿಗರು ಮಾಡುತ್ತಿದ್ದ ಅಡುಗೆ ಅವರಿಗೆ ಕಾಣುತ್ತಿತ್ತು.

ರೆಸ್ಟೊರೆಂಟ್‌ ಹಾಲ್‌ನಲ್ಲಿ ಕಾಂಟಿನೆಂಟಲ್‌ ಸಲಾಡ್‌ಗಳಿರುವ ಪುಟಾಣಿ ತಟ್ಟೆಗಳನ್ನು ಟೇಬಲ್‌ ಮೇಲೆ ಜೋಡಿಸಿಟ್ಟಿದ್ದರು. ವಿದೇಶಿ ಗ್ರಾಹಕರು ಬ್ರೆಡ್ಡಿಗೆ ಬೆಣ್ಣೆ ಸವರಿಕೊಂಡು ತಿನ್ನುತ್ತಿದ್ದರು. ಊಟಕ್ಕೆ ಕಾದುಕುಳಿತ್ತಿದ್ದ ನಾಲ್ಕು ಮಂದಿಗೆ ವೇಟರ್‌ ಸೂಪ್‌ ತಂದು ಕೊಟ್ಟರು.

ಹಲಸಿನ ಬೀಜಗಳನ್ನು ಸುಟ್ಟು ಪುಡಿ ಮಾಡಿ ಸೂಪ್‌ಗೆ ಹಾಕಿದ್ದರು. ಸೂಪ್‌ ನಂತರ ಬಂದದ್ದು  ತಂದೂರಿ ಹಲಸಿನ ಟಿಕ್ಕ. ಚಂದ್ರ ಹಲಸಿನ ಕಾಯಿಯ ಟಿಕ್ಕ ರುಚಿ ನೋಡಿದ ಎಲ್ಲರೂ ಮತ್ತೊಮ್ಮೆ ಅದೇ ಟಿಕ್ಕ ಆರ್ಡರ್‌ ಮಾಡಿದರು. ಹೆಬ್ಬಾಳ ಸಮೀಪದ ಹಾವರ್ಡ್‌ ಜಾನ್ಸನ್‌ ರೆಸ್ಟೊರೆಂಟ್‌ನಲ್ಲಿ ಆರಂಭವಾಗಿರುವ ಹಲಸಿನ ಆಹಾರೋತ್ಸವದಲ್ಲಿ ಕಂಡ ದೃಶ್ಯವಿದು.

‘ಎಲ್ಲಾ ಕಡೆ ಮಾವಿನ ಆಹಾರೋತ್ಸವ ಮಾಡುತ್ತಾರೆ. ನಾವು ಸ್ವಲ್ಪ ಭಿನ್ನವಾಗಿ ಯೋಚಿಸಿ, ಹಲಸಿನ ಆಹಾರೋತ್ಸವ ಆಯೋಜಿಸಿದ್ದೇವೆ. ವಿವಿಧ ರಾಜ್ಯಗಳಲ್ಲಿ ಹಲಸಿನಿಂದ ಮಾಡುವ ತಿನಿಸುಗಳ ಬಗ್ಗೆ ಚರ್ಚಿಸಿ, ಕೆಲವೊಂದು ಹೊಸ ಅಡುಗೆಗಳನ್ನು ಪರಿಚಯಿಸಿದ್ದೇವೆ’ ಎನ್ನುತ್ತಾರೆ ರೆಸ್ಟೊರೆಂಟ್‌ ಕಾರ್ಯನಿರ್ವಾಹಕ ಸಹಾಯಕ ವ್ಯವಸ್ಥಾಪಕ ಮಧುಸೂದನ್‌ ಬಿ.

ಹಲಸಿನ ಕಾಯಿ ಹಾಗೂ ಕುರಿ ಮಾಂಸದಿಂದ ಮಾಡಿದ ಖೀಮ ರೋಟಿಯೊಂದಿಗೆ ತಿನ್ನಲು ರುಚಿಕರವಾಗಿರುತ್ತದೆ. ಹಲಸಿನ ಪಕೋಡ, ಒಡಿಶಾದಲ್ಲಿ ಮಾಡುವ ಹಲಸಿನ ಕರಿ, ಕೋಲ್ಕತ್ತದಲ್ಲಿ ಹಲಸು ಬಳಸಿ ಮಾಡುವ ಸಿಗಡಿ ಸಾರು, ಮಂಗಳೂರು ಶೈಲಿಯ ಹಲಸು ಗಸ್ಸಿ, ಆಲೂಗಡ್ಡೆ ಹಾಗೂ ಹಲಸಿನಿಂದ ಮಾಡುವ ‘ಆಲು ಪೋಸ್ತೊ’ ಹಲಸಿನ ಆಹಾರೋತ್ಸವದ ಕೆಲವು ಮುಖ್ಯ ಖಾದ್ಯಗಳಾಗಿವೆ. ಸಿಹಿತಿನಿಸಿನಲ್ಲೂ  ಹಲಸಿನ ಖಾದ್ಯಗಳನ್ನು ಮಾಡಿದ್ದಾರೆ. ‘ಕೇರಳ ಜಾಕ್‌ಫ್ರೂಟ್‌ ವರಟ್ಟಿ’ ಪಾಯಸದಂತೆ ಇರುತ್ತದೆ.

‘ಭಾನುವಾರ ಮಧ್ಯಾಹ್ನ 12ರಿಂದ ಸಂಜೆ 5ರವರೆಗೆ ಸಂಡೆ ಬ್ರಂಚ್‌ ಇರುತ್ತದೆ. ಅಂದು ಎಲ್ಲಾ ಖಾದ್ಯಗಳು ಹಲಸಿನಿಂದ ಮಾಡಿರುತ್ತೇವೆ. ಲೈವ್‌ ಕೌಂಟರ್‌ ಇರುತ್ತದೆ. ಹಲಸಿನ ಸ್ವಾದದ ಆಪ್ಪಂ, ಮೆಕ್ಸಿಕನ್‌ ನಾಚೊಸ್‌, ಬರಿಟೊಸ್‌ಗಳಿಗೆ ಹಲಸು ಬಳಸಿ ಮಾಡಿದ ಸಾಸ್‌ಗಳನ್ನು ಕೊಡುತ್ತೇವೆ. ಶೇ 100ರಷ್ಟು ಹಲಸಿನ ಖಾದ್ಯಗಳೇ’ ಎಂದು ಮಾಹಿತಿ ನೀಡುತ್ತಾರೆ ಬಾಣಸಿಗ ಚಕ್ರಧರ್‌ ಡಿ.

ಮುಖ್ಯಮೆನುವಿನಲ್ಲಿ ಕೊಡುವ ಹಲಸಿನ ಬಿರಿಯಾನಿ ಹೈದರಾಬಾದ್‌ ದಮ್‌ ಬಿರಿಯಾನಿ ಶೈಲಿಯಲ್ಲಿರುತ್ತದೆ. ಬಾಸುಮತಿ ಅನ್ನದೊಂದಿಗೆ ಸಿಗುವ ಹಲಸಿನ ತುಂಡುಗಳು ಮಟನ್‌ ತಿಂದಷ್ಟೇ ರುಚಿ ನೀಡುತ್ತವೆ. ಖಾರವೆನಿಸದ, ಸಿಹಿಯೂ ಇರದ ಹಲಸಿನ ಬಿರಿಯಾನಿ ಎಲ್ಲರಿಗೂ ಇಷ್ಟವಾಗುವ ತಿನಿಸಾಗಿದೆ. ಅನ್ನದೊಂದಿಗೆ ಹಲಸು ಹಾಗೂ ಸಿಗಡಿ ಹಾಕಿ ಮಾಡಿದ ಬೆಂಗಾಳಿ ಜಿಂಗ್ರಿ ಈಚೋರ್‌, ಖಾರವೆನಿಸುವ ಗೋವಾ ಜಾಕ್‌ಫ್ರೂಟ್‌ ವಿಂಡಾಲು ಮಾಂಸಾಹಾರಿಗಳ ಜಿಹ್ವಾ ರುಚಿ ತಣಿಸುತ್ತವೆ.

ಕಾಂಟಿನೆಂಟಲ್, ಇಂಡಿಯನ್‌, ಏಷ್ಯಾ ಆಹಾರ ಈ ರೆಸ್ಟೊರೆಂಟ್‌ನ ವಿಶೇಷವಾಗಿದೆ.  ಅಂದಹಾಗೆ ಈ ಹಲಸಿನ ಆಹಾರೋತ್ಸವ ಮಧ್ಯಾಹ್ನದ ಊಟಕ್ಕೆ ಮಾತ್ರ. ಇಲ್ಲಿ ಬಫೆ ವ್ಯವಸ್ಥೆಯಿದೆ. 

ರೆಸ್ಟೊರೆಂಟ್‌: ಹಾವರ್ಡ್‌ ಜಾನ್ಸನ್‌
ವಿಶೇಷತೆ: ಹಲಸಿನ ತಿನಿಸುಗಳು
ಸಮಯ: ಮಧ್ಯಾಹ್ನ12 ರಿಂದ 3
ಒಬ್ಬರಿಗೆ: ₹666 ಮತ್ತು ತೆರಿಗೆ
ಕೊನೆಯ ದಿನ: ಜೂನ್‌ 10
ಸ್ಥಳ: ನಂ132, ತಣಿಸಂದ್ರ ಮುಖ್ಯರಸ್ತೆ, ಮಾನ್ಯತಾ ಟೆಕ್‌ ಪಾರ್ಕ್‌ ಸಮೀಪ, ನಾಗವಾರ ಜಂಕ್ಷನ್‌, ಹೆಬ್ಬಾಳ.
ಸ್ಥಳ ಕಾಯ್ದಿರಿಸಲು: 080- 46467008

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT