ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತುಗಾರ ಈ ವೈದ್ಯ

Last Updated 2 ಜೂನ್ 2017, 19:30 IST
ಅಕ್ಷರ ಗಾತ್ರ

ಡಾಕ್ಟರ್‌ಗಳು ಬಹಳ ಗಂಭೀರ ಸ್ವಭಾವದವರು ಎಂಬುದು ಚಾಲ್ತಿಯ ಮಾತು. ಆದರೆ  ಕಿವಿ, ಮೂಗು ಮತ್ತು ಗಂಟಲು ತಜ್ಞ ಜಗದೀಶ್ ಚತುರ್ವೇದಿ ಇತರೆ ವೈದ್ಯರಿಗಿಂತಲೂ ಭಿನ್ನ ಎನಿಸಿಕೊಂಡಿರುವುದು ಅವರ ಮಾತುಗಾರಿಕೆಯಿಂದಲೇ.

ಸ್ಟ್ಯಾಂಡಪ್‌ ಕಾಮಿಡಿಯನ್ ಆಗಿ ಗುರುತಿಸಿಕೊಂಡಿರುವ ಡಾ.ಜಗದೀಶ್‌ ‘ದಿ ಮಗಾ ಆಫ್ ಸ್ಮಾಲ್ ಥಿಂಗ್ಸ್’ ಹೆಸರಿನಲ್ಲಿ ಹಾಸ್ಯ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದಾರೆ. ಯೂಟ್ಯೂಬ್‌ನಲ್ಲಿ ಇವರ ವಿಡಿಯೊಗಳು  ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಮೆಚ್ಚುಗೆ ಪಡೆದಿವೆ. ಎಂಬಿಬಿಎಸ್ ಓದುವಾಗಲೇ ನಾಟಕ, ಗೀತ ರಚನೆಯ ಬಗ್ಗೆ ಒಲವು ಬೆಳೆಸಿಕೊಂಡಿದ್ದ ಜಗದೀಶ್, ಓದು ಮುಗಿದು ಕೆಲಸಕ್ಕೆ ಸೇರಿದರು. ಆದರೆ ವೈದ್ಯಕೀಯ ಬದುಕಿನ ಜಂಜಡದಿಂದ ಹೊರಬರಲು ಸ್ಟ್ಯಾಂಡಪ್‌ ಕಾಮಿಡಿಯತ್ತ ಮನಸ್ಸು ಹೊರಳಿಸಿದರು.

‘ನಾಟಕಕ್ಕೆ ಹೆಚ್ಚು ಸಮಯ ಮೀಸಲಿಡಬೇಕು. ಸ್ಟ್ಯಾಂಡಪ್‌ ಕಾಮಿಡಿ ಹಾಗಲ್ಲ. ಸಮಯವಕಾಶ ದೊರೆತಾಗಲೆಲ್ಲಾ ತರಬೇತಿ ಪಡೆದುಕೊಳ್ಳಬಹುದು. ಷೋ ನೀಡಬಹುದು. ಹಾಗಾಗಿ ಈ ಕ್ಷೇತ್ರ ಆಯ್ಕೆ ಮಾಡಿಕೊಂಡೆ’ ಎನ್ನುತ್ತಾರೆ ಅವರು.

ಜನಪ್ರಿಯ ಸ್ಟ್ಯಾಂಡಪ್ ಕಾಮಿಡಿಯನ್‌ಗಳು ಮಾಡುವಂತೆ  ಸೂಕ್ಷ್ಮ ವಿಷಯಗಳನ್ನು ವಸ್ತುವಾಗಿಟ್ಟುಕೊಂಡು ಇವರು ಹಾಸ್ಯ ಮಾಡುವುದಿಲ್ಲ. ಬದಲಿಗೆ ತಮ್ಮ ಸುತ್ತಲೂ ನಡೆಯುವ ವಿಷಯಗಳನ್ನೇ ಹಾಸ್ಯಕ್ಕೆ ಬಳಸಿಕೊಳ್ಳುತ್ತಾರೆ. ಆಸ್ಪತ್ರೆಯ ಸಿಬ್ಬಂದಿ ತಮಗೆ ಮಾಡುವ ನಮಸ್ಕಾರವೂ ಇವರ ಹಾಸ್ಯಕ್ಕೆ ವಸ್ತುವೇ.

‘ಗಮನಿಸುವುದು, ಗ್ರಹಿಸುವುದು ಸ್ಟ್ಯಾಂಡಪ್‌ ಕಾಮಿಡಿಯನ್‌ಗೆ ಬಹಳ ಅವಶ್ಯಕ. ಗಮನವಿಟ್ಟು ನೋಡಿದರೆ ನಮ್ಮ ಸುತ್ತಮುತ್ತಲೇ ಸಾಕಷ್ಟು ವಿಷಯಗಳು ದೊರಕುತ್ತವೆ. ಅವಕ್ಕೆ ಹಾಸ್ಯ ಬೆರೆಸಿ ಪ್ರೇಕ್ಷಕರೆದರು ಯಾರು ಉತ್ತಮವಾಗಿ ಪ್ರಸ್ತುತಪಡಿಸುತ್ತಾರೋ ಅವರು ಉತ್ತಮ ಹಾಸ್ಯಗಾರ ಎನಿಸಿಕೊಳ್ಳುತ್ತಾರೆ’ ಎಂಬುದು ಜಗದೀಶ್ ಅನುಭವ.

ರಂಗಭೂಮಿ ಬಗ್ಗೆ ವಿಶೇಷ ಒಲವುಳ್ಳ ಇವರು, ಮೆಡಿಕಲ್ ಥಿಯೇಟರ್ ಎಂಬ ಹೊಸ ಮಾದರಿಯ ಶಿಕ್ಷಣ ಪದ್ಧತಿಯ ಪ್ರಯೋಗ ಮಾಡಿದ್ದಾರೆ. ನಾಟಕ, ಗೀತೆಗಳ ಮೂಲಕ ವಿಜ್ಞಾನ ಕಲಿಸುವ ಇವರ ಪ್ರಯತ್ನ ಹಲವರ ಮೆಚ್ಚುಗೆ ಗಳಿಸಿದೆ. ರೋಗಿಗಳ ಚಿಕಿತ್ಸೆಯಲ್ಲೂ ಈ ರೀತಿಯ ಹಲವು ಪ್ರಯೋಗಗಳನ್ನು ಮಾಡಿ ಯಶಸ್ಸು ಕಂಡಿದ್ದಾರೆ ಜಗದೀಶ್‌.

‘ನಗರದ ಜನ ಒತ್ತಡದಲ್ಲಿ ಬದುಕುತ್ತಿದ್ದಾರೆ. ನಗುವುದಕ್ಕೆ ಅವರಿಗೆ ಸಮಯವೇ ಇಲ್ಲ. ಇಂಥವರಿಗೆ ಈ ರೀತಿಯ ಷೋಗಳು ಸಹಾಯ ಮಾಡುತ್ತವೆ. ನಾನು ಮಾಡುವ ಷೋಗಳು ನನಗೂ ವೃತ್ತಿ ಬದುಕಿನ ಒತ್ತಡ ನಿರ್ವಹಿಸಲು ಸಹಾಯವಾಗಿದೆ’ ಎಂದು ನಗುವಿನ ಮಹತ್ವದ ಬಗ್ಗೆ ಹೇಳುತ್ತಾರೆ.

ಜಗದೀಶ್ ವೈದ್ಯಕೀಯ ಸಂಶೋಧಕರೂ ಹೌದು. ಸರಳ ವೈದ್ಯಕೀಯ ಉಪಕರಣಗಳನ್ನು ಸಂಶೋಧಿಸಿ ಕಡಿಮೆ ದರದಲ್ಲಿ ಸಾರ್ವಜನಿಕರಿಗೆ ಒದಗಿಸುವ ಪ್ರಯತ್ನವನ್ನೂ ಮಾಡುತ್ತಿದ್ದಾರೆ. ಇವರು ನಿರ್ದೇಶಕರಾಗಿರುವ ಇನ್‌ಎಕ್ಸೆಲ್ ಸಂಸ್ಥೆ ಈಗಾಗಲೇ 32 ಉಪಕರಣಗಳನ್ನು ತಯಾರಿಸಿದೆ. ಆರು ಉಪಕರಣಗಳು ಮಾರುಕಟ್ಟೆಯಲ್ಲಿ ಲಭ್ಯ.

ಜಗದೀಶ್ ‘ಇನ್‌ವೆಂಟಿಂಗ್ ಮೆಡಿಕಲ್ ಡಿವೈಸಸ್; ಎ ಪರ್ಸ್‌ಪೆಕ್ಟಿವ್‌ ಫ್ರಂ ಇಂಡಿಯಾ’ ಮತ್ತು ‘ಬೆನಿಫಿಟ್ಸ್ ಆಫ್ ಫೇಲಿಂಗ್ ಸಕ್ಸಸ್‌ಫುಲಿ’ ಎಂಬ ಎರಡು ಪುಸ್ತಕಗಳನ್ನು ಬರೆದಿದ್ದಾರೆ.

‘ಹಾಸ್ಯದಂತೆ ಬರಹವೂ ನನ್ನ ನೆಚ್ಚಿನ ಹವ್ಯಾಸ. ಸನ್ನಿವೇಶಗಳನ್ನು ಗಮನಿಸಲು, ಭಿನ್ನವಾಗಿ ಯೋಚಿಸಲು ಓದು ಮತ್ತು ಬರಹ ನೆರವಾಗಿದೆ’ ಎನ್ನುತ್ತಾರೆ ಅವರು.

ನಿಮ್ಹಾನ್ಸ್‌ ಆಯೋಜಿಸಿರುವ ಒತ್ತಡ ನಿರ್ವಹಣೆ ಸಪ್ತಾಹ ಕಾರ್ಯಕ್ರಮಕ್ಕೆ ಆರ್ಥಿಕವಾಗಿ ನೆರವಾಗುವ ದೃಷ್ಟಿಯಿಂದ ಶನಿವಾರ (ಜೂನ್ 3) ಇವರು ಸ್ಟ್ಯಾಂಡಪ್ ಕಾಮಿಡಿ ಷೋ ನಡೆಸಿಕೊಡಲಿದ್ದಾರೆ. ಒಂದು ಗಂಟೆಯ ಈ ಕಾರ್ಯಕ್ರಮದಲ್ಲಿ ಡಾ.ಜಗದೀಶ್  ಸೋಲಿನ ಬಗ್ಗೆ ತಮ್ಮ ಹಾಸ್ಯ ಭಾಷಣ ಪ್ರಸ್ತುತ ಪಡಿಸಲಿದ್ದಾರೆ.

ಎಫ್‌ ಫಾರ್ ಫೇಲ್ಯೂರ್: ಸ್ಥಳ– ನಿಮ್ಹಾನ್ಸ್ ಕನ್‌ವೆನ್ಶನ್ ಸೆಂಟರ್, ‘ಬಿ’ ಹಾಲ್, ಹೊಸೂರು ರಸ್ತೆ, ಲಕ್ಕಸಂದ್ರ. ಶನಿವಾರ ಜೂನ್ 3, ಸಂಜೆ  6. ಪ್ರವೇಶ ದರ ₹400

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT