ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಧರ ಬಾಳಿಗೆ ಅಕ್ಷರದ ಬೆಳಕು

Last Updated 2 ಜೂನ್ 2017, 19:30 IST
ಅಕ್ಷರ ಗಾತ್ರ

‘ಅಂದು ನನ್ನ ಗೆಳತಿಗೆ ಪರೀಕ್ಷೆ ಇತ್ತು. ಆಕೆಗೆ ಎಲ್ಲರಂತೆ ಕಣ್ಣು ಕಾಣುತ್ತಿರಲಿಲ್ಲ. ಪರೀಕ್ಷೆ ಬರೆಯಲು ಮತ್ತೊಬ್ಬರ ಸಹಾಯ ಬೇಕಿತ್ತು. ನಾನೇ ಸಹಾಯ ಮಾಡಿದರಾಯಿತು ಎಂದುಕೊಂಡು, ಅವಳು ಹೇಳಿದಂತೆ ಪರೀಕ್ಷೆಯಲ್ಲಿ ಬರೆದೆ. ಅಂದು ಗೆಳತಿ ಮುಖದಲ್ಲಿ ಕಂಡ ಸಂತಸ ಅಷ್ಟಿಷ್ಟಲ್ಲ...’
ಹಾಗೆಂದು ಕೋಣನಕುಂಟೆಯ ‘ಯೂತ್ ಫಾರ್ ಸೇವಾ’ ಸಂಘಟನೆಯ ‘ಸ್ಕ್ರೈಬ್’ ಸಂಚಾಲಕಿ ಪಲ್ಲವಿ ಆಚಾರ್ಯ  ಹೇಳುತ್ತಿದ್ದಾಗ ಅವರ ದನಿಯ ಏರಿಳಿತದಲ್ಲಿ ಹೆಮ್ಮೆ, ಸಂತೃಪ್ತಿಯೂ ಇಣುಕುತ್ತಿತ್ತು.

‘ಅಂಧರು ಯಾವ ಕೆಲಸವನ್ನೂ ಸರಿಯಾಗಿ ಮಾಡಲಾರರು ಎಂದುಕೊಂಡಿದ್ದೆ. ಆದರೆ, ಪೇಯಿಂಗ್ ಗೆಸ್ಟ್‌ನಲ್ಲಿದ್ದ ಅಂಧ ಗೆಳತಿ ಈ ವಿಷಯದಲ್ಲಿ ನನ್ನ ಕಣ್ಣು ತೆರೆಸಿದಳು. ಎಲ್ಲರಂತೆ ಸ್ವಾವಲಂಬಿಯಾಗಿ ಅಂಧರೂ ಬದುಕಬಲ್ಲರು ಎಂಬುದನ್ನು ತೋರಿಸಿಕೊಟ್ಟಳು. ಅವಳ ಕಾರಣದಿಂದಾಗಿಯೇ ಸ್ಕ್ರೈಬಿಂಗ್ ಮಾಡಲು ಶುರುಮಾಡಿದೆ’ ಎಂದು ತಮ್ಮ ನೆರವಿನ ಯಾನ ಬಿಚ್ಚಿಡುತ್ತಾರೆ ಅವರು.

ಇದುವರೆಗೆ 600ಕ್ಕೂ ಹೆಚ್ಚು ಪರೀಕ್ಷೆಗಳಿಗೆ ಅವರು ಲಿಪಿಕಾರರ ನೆರವು ಒದಗಿಸಿದ್ದಾರೆ. ಪರೀಕ್ಷಾಕಾಂಕ್ಷಿ ಅಂಧರ ನೆರವಿಗಾಗಿಯೇ ವಾಟ್ಸ್‌ಆ್ಯಪ್ ಗುಂಪು ರೂಪಿಸಿಕೊಂಡಿದ್ದಾರೆ. ಈ ಸೇವೆ ರಾಜ್ಯವ್ಯಾಪಿ ಲಭ್ಯವಿದೆ.

‘ಅಂಧರ ಮಾತು ಆಲಿಸಿ, ಇಂಗ್ಲಿಷ್‌ನಲ್ಲಿ ಪರೀಕ್ಷೆ ಬರೆದುಕೊಡುವವರ ಸಂಖ್ಯೆ ಸಾಕಷ್ಟು ಇದೆ. ಆದರೆ ಕನ್ನಡದಲ್ಲಿ ಪರೀಕ್ಷೆ ಬರೆಯುವವರ ಸಂಖ್ಯೆ ಕಡಿಮೆ ಇದೆ. ಕನ್ನಡದಲ್ಲಿ ಬರೆಯುವವರು ಸಿಕ್ಕರೆ ಅನುಕೂಲವಾಗುತ್ತದೆ’ ಎನ್ನುತ್ತಾರೆ ಪಲ್ಲವಿ. ಪಲ್ಲವಿ ಅವರ ಸೇವಾ ಚಟುವಟಿಕೆಗಳಲಿ ಯೂತ್ ಫಾರ್ ಸೇವಾ ಸಂಸ್ಥೆ ಬೆನ್ನೆಲುಬಾಗಿ ನಿಂತಿದೆ. ಆಸಕ್ತರು ಮೊ– 96119 11335 ಸಂಪರ್ಕಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT