ಶ್ರವಣಬೆಳಗೊಳ: ನಾಳೆ ಬೃಹತ್‌ ಸಮಾವೇಶ

7

ಶ್ರವಣಬೆಳಗೊಳ: ನಾಳೆ ಬೃಹತ್‌ ಸಮಾವೇಶ

Published:
Updated:
ಶ್ರವಣಬೆಳಗೊಳ: ನಾಳೆ ಬೃಹತ್‌ ಸಮಾವೇಶ

ಬೆಂಗಳೂರು: 2018ರಲ್ಲಿ  ನಡೆಯುವ 88ನೇ ಮಹಾಮಸ್ತಕಾಭಿಷೇಕದ ನೇತೃತ್ವ ವಹಿಸುವ ವರ್ಧಮಾನ ಸಾಗರ ಮಹಾರಾಜರ ಪಾದಯಾತ್ರೆ ಇದೇ 4ರಂದು ಶ್ರವಣಬೆಳಗೊಳ ತಲುಪಲಿದ್ದು, ಆ ಪ್ರಯುಕ್ತ ಅಲ್ಲಿ ಬೃಹತ್‌ ಸಮಾವೇಶ ಹಮ್ಮಿಕೊಳ್ಳಲಾಗಿದೆ.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾಮಸ್ತಕಾಭಿಷೇಕ ಸಮಿತಿಯ ಕಾರ್ಯಾಧ್ಯಕ್ಷ ಎಸ್‌. ಜಿತೇಂದ್ರ ಕುಮಾರ್‌, ‘2016ರ ಏಪ್ರಿಲ್‌ನಲ್ಲಿ ಮಧ್ಯಪ್ರದೇಶದ ಇಂದೋರ್‌ ಸಮೀಪದ ಸಿದ್ಧವರಕೂಟದಿಂದ ಪ್ರಾರಂಭವಾದ ಈ ಯಾತ್ರೆ ಸುಮಾರು 1,500 ಕಿ.ಮೀ ಕ್ರಮಿಸಿ ಈಗ ಅರಸೀಕೆರೆ ತಲುಪಿದೆ’ ಎಂದು ತಿಳಿಸಿದರು.

‘44 ತ್ಯಾಗಿಗಳು ಪ್ರತಿದಿನ ಕನಿಷ್ಠ 25 ಕಿ.ಮೀ. ಯಾತ್ರೆ ಮಾಡುತ್ತಿದ್ದರು. ಪಾದಯಾತ್ರೆಯ ಮೂಲಕವೇ ತ್ಯಾಗಿಗಳು ಬರುವುದರಿಂದ ಎರಡು ವರ್ಷದ ಹಿಂದೆಯೇ ಅವರಿಗೆ ಆಹ್ವಾನ ನೀಡಿದ್ದೆವು. ಶ್ರವಣಬೆಳಗೊಳದ ಗೊಮ್ಮಟನಗರ ಸಭಾಮಂಟಪದಲ್ಲಿ ಪುರಪ್ರವೇಶ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ, ಸಚಿವ ಎ.ಮಂಜು, ಶಾಸಕ ಸಿ.ಎನ್.ಬಾಲಕೃಷ್ಣ   ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದರು.

‘ಚನ್ನರಾಯಪಟ್ಟಣ ರಸ್ತೆಯ ರೈಲು ನಿಲ್ದಾಣ ಗೇಟ್‌ ಬಳಿ ನಿರ್ಮಿಸುವ  ತಾತ್ಕಾಲಿಕ ಪ್ರವೇಶದ್ವಾರದಲ್ಲಿ ಪುಷ್ಪವೃಷ್ಟಿಯೊಂದಿಗೆ ಪಾದಪೂಜೆ ನಡೆಸಿ, ಪೂರ್ಣಕುಂಭ ಸ್ವಾಗತ ಕೋರುತ್ತೇವೆ. 108 ಕಳಶಗಳು, 108 ಧ್ವಜಗಳು, 24 ಲಾಂಛನಗಳು, 3 ಬೆಳ್ಳಿ ಪಲ್ಲಕ್ಕಿಗಳು, ಮಂಗಳವಾದ್ಯ, ಚಿಟ್ಟಿ ಮೇಳ, ಡೊಳ್ಳು ಕುಣಿತ, ಕೋಲಾಟ ಹಾಗೂ ವಿವಿಧ

ಕಲಾ ತಂಡಗಳೊಂದಿಗೆ ಬೃಹತ್‌ ಮೆರವಣಿಗೆ ನಡೆಯುತ್ತದೆ’ ಎಂದು ಮಾಹಿತಿ ನೀಡಿದರು.

‘ವರ್ಧಮಾನ ಸಾಗರ ಮಹಾರಾಜರು ಸತತ ಮೂರನೇ ಬಾರಿ ಮಸ್ತಕಾಭಿಷೇಕದ ನೇತೃತ್ವ ವಹಿಸಿಕೊಳ್ಳುತ್ತಿದ್ದಾರೆ. ಈ ಸಮಾವೇಶದಲ್ಲಿ 5,000 ದಿಗಂಬರ ಜೈನರು ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ. ಸಮಾವೇಶಕ್ಕೆ ಬರುವ ಎಲ್ಲರಿಗೂ

ಮಠದಲ್ಲಿಯೇ ಉಚಿತ ಊಟದ ವ್ಯವಸ್ಥೆಯನ್ನು ಕಲ್ಪಿಸುತ್ತೇವೆ’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry