ಶುಕ್ರವಾರ, ಆಗಸ್ಟ್ 12, 2022
20 °C

ನಿಯಮಗಳ ‘ಭಾರ’ದಿಂದ ಹಳ್ಳಿ ಆರ್ಥಿಕತೆಗೆ ಹೊಡೆತ

ರಾಜೇಶ ರೈ ಚಟ್ಲ Updated:

ಅಕ್ಷರ ಗಾತ್ರ : | |

ನಿಯಮಗಳ ‘ಭಾರ’ದಿಂದ ಹಳ್ಳಿ ಆರ್ಥಿಕತೆಗೆ ಹೊಡೆತ

ಕಸಾಯಿಖಾನೆಗೆ ಜಾನುವಾರು ಮಾರಾಟ ಸಂಬಂಧ ಕೇಂದ್ರ ಸರ್ಕಾರ  ಹೊರಡಿಸಿದ ವಿವಾದಾತ್ಮಕ ಅಧಿಸೂಚನೆ, ಚುನಾವಣೆ ಹೊಸ್ತಿಲಲ್ಲಿರುವ ರಾಜ್ಯದಲ್ಲೂ ಸದ್ದು ಮಾಡುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಹೈನುಗಾರಿಕೆ ಹಾಗೂ ಕೃಷಿ ಚಟುವಟಿಕೆಗೆ ಜಾನುವಾರು ಸಾಕುವವರು ಈ ಅಧಿಸೂಚನೆ ಜಾರಿಗೆ ಬರಬೇಕು ಎಂದು ಹೇಳುತ್ತಾರೆ. ಆದರೆ, ರೈತ ಸಮುದಾಯದ ಒಳಿತಿನ ಬಗ್ಗೆ ಚಿಂತಿಸುವವರು ಈ ನಡೆ ಭವಿಷ್ಯದಲ್ಲಿ ಗ್ರಾಮೀಣ ಭಾಗದ ಆರ್ಥಿಕತೆ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂಬ ಆತಂಕ ವ್ಯಕ್ತಪಡಿಸುತ್ತಾರೆ. ಈ ಭಿನ್ನ ನಿಲುವುಗಳ ಸುತ್ತ ವಿಭಿನ್ನ ವಿಶ್ಲೇಷಣೆಗಳು– ವಿವಾದಗಳು ಹುಟ್ಟಿಕೊಂಡಿವೆ. ಈ ಅಧಿಸೂಚನೆ ರಾಜಕೀಯ, ಸಾಮಾಜಿಕ ಬಿಕ್ಕಟ್ಟು– ಸಾಂಸ್ಕೃತಿಕ ಹಕ್ಕಿನ ಕುರಿತ ಚರ್ಚೆಯ ವಸ್ತುವಾಗಿದೆ. ಮುಂದೆ ಯಾವ ಸ್ವರೂಪ ಪಡೆದುಕೊಳ್ಳಬಹುದು ಎಂದು ಊಹಿಸುವುದು ಕಷ್ಟ.

ಮೇ 23ರಂದು ಹೊರಡಿಸಿರುವ ಈ ಅಧಿಸೂಚನೆಯನ್ನು ಮೂರು ತಿಂಗಳಲ್ಲಿ ರಾಜ್ಯ ಸರ್ಕಾರಗಳು ಅನುಷ್ಠಾನಗೊಳಿಸಬೇಕು. ಆಡಳಿತಾತ್ಮಕವಾಗಿ ಇದು ಕಷ್ಟದ ಕೆಲಸ. ಏಕೆಂದರೆ, ಅನುಷ್ಠಾನ ವಿಧಾನ ಮತ್ತು ಪ್ರಕ್ರಿಯೆ ಬಹಳ ಸಂಕೀರ್ಣ ಎನ್ನುವುದು ರಾಜ್ಯ ಸರ್ಕಾರದ ಅಭಿಪ್ರಾಯ.

ಈ ಅಧಿಸೂಚನೆಯ ನಿಯಮ 2 (ಇ) ಅಡಿಯಲ್ಲಿ ಜಾನುವಾರುಗಳ ಕುರಿತು ವ್ಯಾಖ್ಯಾನಿಸಲಾಗಿದೆ. ಎಲ್ಲ ಪ್ರಾಣಿಗಳನ್ನು ಈ ನಿಯಮದ ಅಡಿಯಲ್ಲಿ ತಂದು ಹತ್ಯೆ ನಿರ್ಬಂಧಿಸಲಾಗಿದೆ. ಜಾನುವಾರುಗಳಿಂದ ಮನುಷ್ಯರಿಗೆ ಮಾರಣಾಂತಿಕ ರೋಗಗಳು ಹರಡುವ ಸಂದರ್ಭದಲ್ಲಿ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಪ್ರಾಣಿಗಳ ವಧೆ ಅನಿವಾರ್ಯ. ರೇಬಿಸ್‌, ಕ್ಷಯ (ಟಿ.ಬಿ), ಬ್ರೂಸೆಲ್ಲೋಸಿಸ್‌, ಆಂಥ್ರಾಕ್ಸ್‌ ಕಾಣಿಸಿಕೊಂಡ ಪ್ರಾಣಿಗಳನ್ನು ಕೊಲ್ಲದೆ ದಾರಿ ಇಲ್ಲ. ಜಾನುವಾರುಗಳಿಗೆ ವಾಸಿಯಾಗದ ಕಾಯಿಲೆ ಮತ್ತು ನೋವಿನ ಸಂದರ್ಭದಲ್ಲಿ ನಿಯಮ 12 (9)ರ ಅಡಿ ಪಶು ನಿರೀಕ್ಷಕರು ದಯಾಮರಣ ನೀಡಬಹುದು ಎಂದು ಹೇಳಲಾಗಿದೆ. ಆದರೆ, ಅವರು ಹೊಂದಿರಬೇಕಾದ ಅರ್ಹತೆಗಳೇನು ಎಂಬ ಪ್ರಶ್ನೆ ಉದ್ಭವಿಸಿದೆ. ರೋಗಪೀಡಿತ ಪ್ರಾಣಿಗಳ ನಿರ್ಮೂಲನೆ ಬಗ್ಗೆಯೂ ಸ್ಪಷ್ಟತೆ ಇಲ್ಲ. 

ಅಂತರರಾಜ್ಯ ಗಡಿ ಪ್ರದೇಶಗಳಲ್ಲಿ ಮತ್ತು ಇತರ ಪ್ರದೇಶಗಳಲ್ಲಿ (ನಿಯಮ– 2ರಲ್ಲಿ) ಜಾನುವಾರು ಮಾರುಕಟ್ಟೆ ಹೊಸತಾಗಿ ಸ್ಥಾಪಿಸುವಾಗ ಹಲವು ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಲಾಗಿದೆ. ರಾಜ್ಯದಲ್ಲಿ ಸದ್ಯ ಇರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಂದ (ಎಪಿಎಂಸಿ) ಅದನ್ನು ಪ್ರತ್ಯೇಕಿಸಬೇಕಿದೆ. ಈಗಾಗಲೇ ಎಪಿಎಂಸಿ ಮಾರುಕಟ್ಟೆಗಳಲ್ಲಿ ಪ್ರಾಣಿ ಮಾರಾಟ ಹಲವು ವರ್ಷಗಳಿಂದ ನಡೆಯುತ್ತಿದೆ. ಹೀಗಾಗಿ, ಇದು ಸಾಮಾಜಿಕ ಮತ್ತು ಆರ್ಥಿಕ ದೃಷ್ಟಿಯಿಂದ ಸಮಂಜಸ ಅನಿಸುವುದಿಲ್ಲ ಎನ್ನುವುದು ರಾಜ್ಯ ಸರ್ಕಾರದ ನಿಲುವು.

ದೇವಸ್ಥಾನಗಳ ಜಾತ್ರೆಗಳ ಸಂದರ್ಭದಲ್ಲಿ ಸಾಂಪ್ರದಾಯಿಕವಾಗಿ ಜಾನುವಾರು ಸಂತೆ ನಡೆಯುತ್ತದೆ.  ಕೆಲವು ಕಡೆ ಧಾರ್ಮಿಕವಾಗಿಯೂ ಈ ಪದ್ಧತಿ ಆಚರಣೆಯಲ್ಲಿದೆ. ಈ ಚಟುವಟಿಕೆ ಮೇಲೆ ದಿಢೀರ್‌ ಆಗಿ ನಿರ್ಬಂಧ ವಿಧಿಸಿದರೆ ರೈತರು ಆಕ್ರೋಶ ವ್ಯಕ್ತಪಡಿಸುವ ಸಾಧ್ಯತೆ ಇದೆ. ಉಳುಮೆಗೆ ಸೂಕ್ತ ಪ್ರಾಣಿಯನ್ನು ಆಯ್ಕೆ ಮಾಡುವ ಹಕ್ಕು ಕಸಿದುಕೊಳ್ಳುವುದು ರೈತ ವರ್ಗದ ಮೇಲೆ ಪರಿಣಾಮ ಉಂಟು ಮಾಡುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

ನಿಯಮ 3ರಿಂದ 12ರವರೆಗಿನ ಅಂಶಗಳು (ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಜಾನುವಾರು ಮಾರುಕಟ್ಟೆ ಉಸ್ತುವಾರಿ ಸಮಿತಿ ಮತ್ತು ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಜಾನುವಾರುಗಳ ಮಾರುಕಟ್ಟೆ ಸಮಿತಿ ರಚನೆ) ರಾಜ್ಯಕ್ಕೆ ಹೊಸತು. ಈ ನಿಯಮಗಳ ಪಾಲನೆಗೆ ಪಶು ಅಧಿಕಾರಿಗಳಿಗೆ ವಿಶೇಷ ತರಬೇತಿ ಅಗತ್ಯ. ಹೊಸತಾಗಿ ಜಾನುವಾರು ಮಾರುಕಟ್ಟೆ ನಿಯಂತ್ರಣ ವಿಷಯಕ್ಕೆ ಹೊಸ ಹುದ್ದೆಗಳನ್ನು ಸೃಷ್ಟಿಸಬೇಕಾದ ಅಗತ್ಯವಿದೆ ಎನ್ನುತ್ತಾರೆ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು.

ಅಧಿಸೂಚನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪಶು ಸಂಗೋಪನೆ ಇಲಾಖೆ, ಅದರ ನಿಯಮಗಳ ಅನುಷ್ಠಾನದ ಕುರಿತು ಎಲ್ಲ ಆಯಾಮಗಳಲ್ಲಿ ವಿಶ್ಲೇಷಣೆ ನಡೆಸುತ್ತಿದೆ. ಸಂಸದೀಯ ವ್ಯವಹಾರಗಳ ಕಾರ್ಯದರ್ಶಿ ಜೊತೆ ಇಲಾಖೆಯ ಹಿರಿಯ ಅಧಿಕಾರಿಗಳು ಈಗಾಗಲೇ ಒಂದು ಸುತ್ತಿನ ಸಮಾಲೋಚನೆ ನಡೆಸಿದ್ದಾರೆ. ಕರ್ನಾಟಕ ಗೋಹತ್ಯೆ ನಿರ್ಬಂಧ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ– 1964 (ರಾಜ್ಯ ಕಾಯ್ದೆ) ಮತ್ತು ಪ್ರಾಣಿ ಹಿಂಸೆ ತಡೆ ಕಾಯ್ದೆ (ಪಿಸಿಎ)– 1960ರ (ಕೇಂದ್ರ ಕಾಯ್ದೆ) ಸೆಕ್ಷನ್‌ 38ರ ಅಧಿಕಾರ ವ್ಯಾಪ್ತಿಯಲ್ಲಿ ಜಾನುವಾರು ಮಾರುಕಟ್ಟೆಗಳ ನಿಯಂತ್ರಣ ನಿಯಮವನ್ನು (Regulation of Livestock markets Rules– 2017) ಹೋಲಿಸಿ ನೋಡಿದ ಬಳಿಕ ಈ ಬಗ್ಗೆ ಕಾನೂನು ಇಲಾಖೆಯ ಅಭಿಪ್ರಾಯ ಪಡೆದು ಮುಂದಿನ ಹೆಜ್ಜೆ ಇಡಲು ಸರ್ಕಾರ ನಿರ್ಧರಿಸಿದೆ.

ಕಾನೂನಾತ್ಮಕ ಸಮಸ್ಯೆಗಳೇನು?: ಹೊಸ ನಿಯಮಗಳನ್ನು ಮೂಲ ಕಾಯ್ದೆ (ಪಿಸಿಎ–1960) ಅಡಿ ರಚಿಸಲಾಗಿದ್ದರೂ ಅವು ಕಾಯ್ದೆಯ ಯಾವುದೇ ಸೆಕ್ಷನ್‌ಗಳ ವ್ಯಾಪ್ತಿಯೊಳಗೆ ಇಲ್ಲ. ಹೀಗಾಗಿ, ಇದು ಮೂಲ ಕಾಯ್ದೆಗೆ ವ್ಯತಿರಿಕ್ತವಾಗಿದೆ ಎನ್ನುವುದು ಹಿರಿಯ ಅಧಿಕಾರಿಗಳ ಅಭಿಪ್ರಾಯ. ಮೂಲ ಕಾಯ್ದೆಯಲ್ಲೂ ಪ್ರಾಣಿ ಹಿಂಸೆ (Cruelty) ಕುರಿತು ನಿರ್ದಿಷ್ಟ  ವ್ಯಾಖ್ಯಾನ ಇಲ್ಲ.  ಹೊಸ ಮಾರುಕಟ್ಟೆ ನಿಯಮ ಪಾಲಿಸದಿದ್ದರೆ ಅಥವಾ ಉಲ್ಲಂಘಿಸಿದರೆ ನೀಡಬಹುದಾದ ಶಿಕ್ಷೆ ಕುರಿತು ಕೂಡಾ ಉಲ್ಲೇಖ ಇಲ್ಲ. ಹೀಗಾಗಿ, ಇದನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸುವುದು ಸುಲಭವಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಅಷ್ಟೇ ಅಲ್ಲ, ಮೂಲ ಕಾಯ್ದೆಯಲ್ಲಿ ಪ್ರಾಣಿ ಹತ್ಯೆ ನಿಷೇಧದ ಕುರಿತು ಉಲ್ಲೇಖ ಇಲ್ಲ. ಪಿಸಿಎ– 1960ರ ಸೆಕ್ಷನ್‌ 38ರ ಅಡಿ ಸಿದ್ಧಪಡಿಸಿರುವ ನಿಯಮಗಳು ರಾಜ್ಯ ಕಾಯ್ದೆಯನ್ನು (ಗೋ ಹತ್ಯೆ ನಿಷೇಧ ಮತ್ತು ಜಾನುವಾರುಗಳ ಸಂರಕ್ಷಣಾ ಕಾಯ್ದೆ– 1964) ನಿಷ್ಕ್ರಿಯಗೊಳಿಸುತ್ತದೆಯೇ ಎಂಬ ಗೊಂದಲವೂ ಮೂಡಿದೆ. ಈ ಕಾರಣಕ್ಕೆ ಕಾನೂನು ತಜ್ಞರ ಅಭಿಪ್ರಾಯ ಪಡೆಯಲು ಸರ್ಕಾರ ತೀರ್ಮಾನಿಸಿದೆ.

ಹೊಸ ನಿಯಮಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಸಾರ್ವಜನಿಕರು ಇದನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ದಾವೆ ಹೂಡಲು ಅವಕಾಶ ಇದೆ. ಪಿಸಿಎ– 1960 ಕಾಯ್ದೆ ರಾಜ್ಯ ಸರ್ಕಾರದ ವ್ಯಾಪ್ತಿಯ ಅಡಿ ಬರುವುದರಿಂದ ತಿದ್ದುಪಡಿಗೂ ಅವಕಾಶ ಇದೆ ಎಂಬ ಬಗ್ಗೆಯೂ ಚರ್ಚೆ ನಡೆದಿದೆ.

ನಿಯಮಗಳ ‘ಭಾರ’ದಿಂದ ಸಂಕಷ್ಟ: ಹೊಸ ಅಧಿಸೂಚನೆ ಮೂಲಕ ಪಶು ಸಾಕಣೆ ಮತ್ತು ಮಾರಾಟ ಭಾರವನ್ನು ಕೇಂದ್ರ ಸರ್ಕಾರ ತಮ್ಮ ಮೇಲೆ ಹಾಕಿದೆ ಎಂಬ ಸಾಮಾನ್ಯ ಆರೋಪ ರೈತ ವರ್ಗದಲ್ಲಿದೆ. ಹೈನುಗಾರಿಕೆ ಮಾಡುವುದೇ ಕಷ್ಟ ಎನ್ನುವ ಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಜಾನುವಾರು ಮಾರಾಟಕ್ಕೆ ನಿಯಮಗಳನ್ನು ತಂದು ‘ಭಾರ’ ಹಾಕಿದರೆ ಮತ್ತಷ್ಟು ಸಂಕಷ್ಟ ಎದುರಿಸಬೇಕಾಗುತ್ತದೆ.

ಸಾಕುವವರಿಗೆ ಹಸುಗಳ ಮೇಲೆ ಎಷ್ಟೇ ಪ್ರೀತಿ ಇದ್ದರೂ ಸಾಕಣೆ ಲಾಭದಾಯಕವಲ್ಲ ಎಂದಾದಾಗ ಅವು ಭಾರ ಎನಿಸುತ್ತದೆ ಎನ್ನುವುದು ರೈತ ವರ್ಗದ ಅಭಿಮತ.

ಅನೇಕರಿಗೆ ಗೋವು ಪೂಜನೀಯ. ಈ ಕಾರಣಕ್ಕೆ ಹತ್ಯೆ ವಿಷಯದಲ್ಲಿ ಸಹಮತ ಇಲ್ಲ. ಅದರ ಜೊತೆಗೆ ಪಶು ಸಂಗೋಪನಾ ಇಲಾಖೆಯ ಹೊಣೆಗಾರಿಕೆಯ ಕಡೆಗೂ ಬೊಟ್ಟು ಮಾಡುತ್ತಾರೆ. ಇಲಾಖೆಗೆ ಸರ್ಕಾರ ಹೆಚ್ಚು ಅನುದಾನ ನೀಡಬೇಕು. ಬಡವರು, ದಲಿತರು, ಅಲ್ಪಸಂಖ್ಯಾತರಷ್ಟೇ ಅಲ್ಲ, ಜಾನುವಾರುಗಳ ವಿಷಯದಲ್ಲೂ ಸರ್ಕಾರ ಉದಾರ ಆಗಬೇಕು ಎನ್ನುವ ಅನಿಸಿಕೆ ಹಲವರದ್ದು.

‘ಈ ನಿಯಮ ಎಪಿಎಂಸಿಗಳ ಹೊಣೆಗಾರಿಕೆಯನ್ನು ಹೆಚ್ಚಿಸಿದೆ. ಪಶು ಸಂಗೋಪನೆ ಇಲಾಖೆಗೆ ದೊಡ್ಡ ಪ್ರಮಾಣದಲ್ಲಿ ಅನುದಾನ ನೀಡಬೇಕು. ಹಿಂಡಿ ಖರೀದಿಗೆ ಸಹಾಯಧನ ನೀಡಬೇಕು. ಹುಲ್ಲಿನ ಬೀಜ ಸಕಾಲದಲ್ಲಿ ವಿತರಿಸಬೇಕು. ಮೇವು ವಿತರಿಸಲು ಕ್ರಮ ತೆಗೆದುಕೊಳ್ಳಬೇಕು. ಆಗ ಮಾತ್ರ ಗೊಡ್ಡು ಹಾಗೂ ಮುದಿ ಜಾನುವಾರುಗಳನ್ನು ಸಾಕಲು ಸಾಧ್ಯ’ ಎನ್ನುತ್ತಾರೆ ಧಾರವಾಡದ ರೈತ ಶ್ರೀನಿವಾಸ ಹಳೆಕಟ್ಟಿ.

‘ಹೈನುಗಾರರಿಗೆ ಹೊರೆಯಾಗಿರುವುದು ಗಂಡು ಕರುಗಳು. ಅವು ಉಪಯೋಗಕ್ಕೆ ಬರುವುದಿಲ್ಲ. ಸಣ್ಣ ಪ್ರಮಾಣದ ಹೈನುಗಾರರು ಗಂಡು ಕರು ಹುಟ್ಟದಿರಲಿ ಎಂದು ಬಯಸುತ್ತಾರೆ. ಒಂದು ವೇಳೆ ಗಂಡು ಹುಟ್ಟಿದರೂ ಸೂಕ್ತ ಆರೈಕೆ ಮಾಡುವುದಿಲ್ಲ’ ಎಂದೂ ಅವರು ಹೇಳುತ್ತಾರೆ.

ಟಿಲ್ಲರ್‌, ಟ್ರ್ಯಾಕ್ಟರ್‌ಗಳು ಬಂದ ಬಳಿಕ, ಎತ್ತುಗಳ ಬಳಕೆ ಕಡಿಮೆ ಆಗಿದೆ. ಭತ್ತದ ಗದ್ದೆಗಳು ಅಡಿಕೆ ತೋಟಗಳಾಗಿವೆ. ಆದರೆ ನಮ್ಮ ಕಡೆಯಿಂದ ಕಸಾಯಿಖಾನೆಗೆ ಕೊಟ್ಟಿಲ್ಲ ಎನ್ನುವುದಷ್ಟೆ ಸಮಾಧಾನ ಎನ್ನುವವರೂ ಇದ್ದಾರೆ.

ಅನುಪಯುಕ್ತ ಜಾನುವಾರುಗಳನ್ನು ಮತ್ತು ಗಂಡು ಕರುಗಳನ್ನು ಮಾರಾಟ ಮಾಡಿ ಹೊಸ ದನ, ಎತ್ತುಗಳನ್ನು ಖರೀದಿಸುವ ಸಂಪ್ರದಾಯ ಅನೂಚಾನವಾಗಿ ನಡೆದುಕೊಂಡು ಬಂದಿದೆ. ಇದರಿಂದಾಗಿ ಕೆಲವರಿಗೆ ಪೌಷ್ಟಿಕ ಆಹಾರ ಸಿಕ್ಕಿದೆ. ತೊಗಲು ಉದ್ಯಮ, ರಫ್ತು ಉದ್ದಿಮೆಗಳಿಗೆ ನಿರಂತರ­ವಾಗಿ ಕಚ್ಚಾ ಸಾಮಗ್ರಿ ಪೂರೈಕೆಯಾಗುತ್ತದೆ. ಈ ಆರ್ಥಿಕ ಸಮತೋಲನ ಗ್ರಾಮೀಣ ಪ್ರದೇಶಗಳನ್ನು ಹೈನುಗಾರಿಕೆಯನ್ನು ಪೋಷಿಸಿಕೊಂಡು ಬಂದಿದೆ. ಮುದಿ ಜಾನುವಾರು ಮಾರಾಟ ಮಾಡುವಂತಿಲ್ಲ. ಸರ್ಕಾರದ  ಗೋಶಾಲೆಯಲ್ಲಿ ಇರಿಸಬೇಕಾದರೆ ಆ ಭಾರವನ್ನೂ ರೈತರೇ ಹೊರಬೇಕಾಗುತ್ತದೆ. ಹೀಗಾದರೆ ಹೈನುಗಾರಿಕೆಯಲ್ಲಿ ನಷ್ಟ ಅನುಭವಿಸಬೇಕಾಗುತ್ತದೆ.

ಒಟ್ಟಿನಲ್ಲಿ ಈ ಅಧಿಸೂಚನೆ ಕೃಷಿ ಕ್ಷೇತ್ರದಲ್ಲಿ ದೊಡ್ಡ ಬಿಕ್ಕಟ್ಟು ಸೃಷ್ಟಿಸುವ ಆತಂಕವಂತೂ ಇದ್ದೇ ಇದೆ. ಹೀಗಾಗಿ ಕೃಷಿ ಮತ್ತು ಹೈನುಗಾರಿಕೆ ನೆಚ್ಚಿಕೊಂಡ ಸಮುದಾಯದ ಸಲಹೆ–ಅಭಿಪ್ರಾಯಗಳಿಗೆ ಸರ್ಕಾರ ಕಿವಿಗೊಡಬೇಕು.

**

ಮೃಗಾಲಯಕ್ಕೂ ತಟ್ಟಲಿದೆ ಬಿಸಿ

ಮೃಗಾಲಯದಲ್ಲಿರುವ ಪ್ರಾಣಿಗಳಿಗೂ ಆಹಾರ ಕೊರತೆ ಎದುರಾಗಲಿದೆ. ಹಣ ಮತ್ತು ಪೌಷ್ಟಿಕಾಂಶದ ದೃಷ್ಟಿಯಿಂದ ಇಲ್ಲಿನ ಪ್ರಾಣಿಗಳಿಗೆ ಗೋಮಾಂಸ ನೀಡುವುದೇ ಸೂಕ್ತ. ಆದರೆ ಪರ್ಯಾಯದ ಬಗ್ಗೆ ಪ್ರಶ್ನೆ ಈಗ ಎದ್ದಿದೆ.

ವಯಸ್ಸು ಮತ್ತು ದೇಹದಾರ್ಢ್ಯದ ಆಧಾರದಲ್ಲಿ ಮಾಂಸ ನೀಡಲಾಗುತ್ತದೆ. ಮೈಸೂರು ಮೃಗಾಲಯದ ವಯಸ್ಕ ಹೆಣ್ಣು ಸಿಂಹಕ್ಕೆ ದಿನಕ್ಕೆ ತಲಾ 15 ಕೆ.ಜಿ. ದನದ ಮಾಂಸ ನೀಡಲಾಗುತ್ತದೆ. ಗಂಡು ಸಿಂಹಕ್ಕೆ 12 ಕೆ.ಜಿ., ಮರಿಗಳಿಗೆ  4 ಕೆ.ಜಿ. ನೀಡಲಾಗುತ್ತದೆ. ದನದ ಮಾಂಸ ವರ್ಷಕ್ಕೆ 113.15 ಟನ್‌  ಅಗತ್ಯವಿದೆ. ಅದು ಸಿಗದಿದ್ದರೆ ಕುರಿ ಅಥವಾ ಕೋಳಿ ಮಾಂಸ ಖರೀದಿಸಬೇಕಾಗುತ್ತದೆ. ದನದ ಮಾಂಸಕ್ಕೆ ಕೆ.ಜಿಗೆ ₹ 200, ಕುರಿ ಮಾಂಸಕ್ಕೆ ಕೆ.ಜಿ.ಗೆ ₹ 450 ಇದೆ. ಸದ್ಯದ ಲೆಕ್ಕಾಚಾರ ಪ್ರಕಾರ ಕುರಿ ಮಾಂಸ ನೀಡಿದರೆ ದಿನವೊಂದಕ್ಕೆ  ₹ 1.40 ಲಕ್ಷ ಖರ್ಚಾಗುತ್ತದೆ. ದುಬಾರಿ ಹಣ ವ್ಯಯಿಸಿ ಪ್ರಾಣಿ ಪೋಷಣೆ ಮೃಗಾಲಯಗಳಿಗೆ ಹೊರೆಯಾಗಲಿದೆ  ಎನ್ನುತ್ತಾರೆ ಮೃಗಾಲಯವೊಂದರ ಅಧಿಕಾರಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.