ಪರಿಸರ ಸಂರಕ್ಷಣೆ ನಮ್ಮ ಸಂಪ್ರದಾಯ

7

ಪರಿಸರ ಸಂರಕ್ಷಣೆ ನಮ್ಮ ಸಂಪ್ರದಾಯ

Published:
Updated:
ಪರಿಸರ ಸಂರಕ್ಷಣೆ ನಮ್ಮ ಸಂಪ್ರದಾಯ

ಸೇಂಟ್‌ ಪೀಟರ್ಸ್‌ಬರ್ಗ್‌/ನವದೆಹಲಿ :  ಪ್ಯಾರಿಸ್‌ ಒಪ್ಪಂದ ಇಲ್ಲದಿದ್ದರೂ ಹವಾಮಾನ ಬದಲಾವಣೆ ತಡೆಗೆ ಭಾರತ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು. ಆದರೆ ಪ್ಯಾರಿಸ್‌ ಒಪ್ಪಂದದಿಂದ ಅಮೆರಿಕ ಹಿಂದೆ ಸರಿದಿರುವುದಕ್ಕೆ ಇದು ತಮ್ಮ ಪ್ರತಿಕ್ರಿಯೆ ಎಂದು ಅವರು ಹೇಳಿಲ್ಲ. 

ಪರಿಸರವನ್ನು ಗೌರವಿಸುವುದು ಮತ್ತು ದುರ್ಬಳಕೆ ಮಾಡದಿರುವುದು ಭಾರತಕ್ಕೆ ಸಾಂಪ್ರದಾಯಿಕವಾಗಿ ಬಂದಿದೆ ಎಂದುಪೀಟರ್ಸ್‌ಬರ್ಗ್‌ನಲ್ಲಿ ಅಂತರರಾಷ್ಟ್ರೀಯ ಆರ್ಥಿಕ ವೇದಿಕೆಯನ್ನು ಉದ್ದೇಶಿಸಿ ಅವರು ಹೇಳಿದರು.

ಟ್ರಂಪ್‌ ಅವರ ನಿರ್ಧಾರದ ಬಗ್ಗೆ ಕೇಳಲಾದ ಪ್ರಶ್ನೆಗೆ ಹೀಗೆ ಉತ್ತರಿಸಿದರು. ‘ಮೂರು ದಿನಗಳ ಹಿಂದೆ ಜರ್ಮನಿಯಲ್ಲಿ ಇದೇ ಮಾತನ್ನು ಹೇಳಿದ್ದೆ. ಆದರೆ ಆಗ ಯಾರೂ ಅದಕ್ಕೆ ಪ್ರತಿಕ್ರಿಯೆ ನೀಡಿರಲಿಲ್ಲ. ಇಂದೂ ಅದೇ ಮಾತನ್ನು ಹೇಳುತ್ತಿದ್ದೇನೆ’ ಎಂದು ಮೋದಿ ತಿಳಿಸಿದರು.

ಪ್ಯಾರಿಸ್‌ ಒಪ್ಪಂದಕ್ಕೆ ಸಂಬಂಧಿಸಿ ಭಾರತ ಯಾರ ಜತೆಗಿರುತ್ತದೆ ಎಂಬ ಪ್ರಶ್ನೆಗೆ ‘ನಾವು ಯಾರ ಜತೆಗೆ ಹೋಗುತ್ತೇವೆ ಎಂಬ ಪ್ರಶ್ನೆಯೇ ಇಲ್ಲಿ ಇಲ್ಲ. ನಾವು ಮುಂದಿನ ಪೀಳಿಗೆಗಳ ಜತೆಗೆ ಸಾಗುತ್ತೇವೆ’ ಎಂದರು.

ಪರಿಸರಕ್ಕೆ ಸಂಬಂಧಿಸಿ ಭಾರತ ಜವಾಬ್ದಾರಿಯುತ ದೇಶ. ನಾವು ಪರಿಸರವನ್ನು ಬಳಸಿಕೊಳ್ಳಬಹುದು ಆದರೆ ಅತಿ ಬಳಕೆಗೆ ಅವಕಾಶ ಇಲ್ಲ ಎಂದು ಅವರು ವಿವರಿಸಿದರು.

5000 ವರ್ಷಗಳ ಹಿಂದೆ ಕೂಡ ಪರಿಸರವನ್ನು ರಕ್ಷಿಸುವುದು ಭಾರತದ ಪದ್ಧತಿಯಾಗಿತ್ತು ಎಂದು ಅವರು ಹೇಳಿದರು. ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ ಪ್ರತ್ಯೇಕ ಪರಿಸರ ಸಂರಕ್ಷಣೆ ಸಚಿವಾಲಯವನ್ನೇ ಆರಂಭಿಸಿದ್ದನ್ನು ಅವರು ನೆನಪಿಸಿಕೊಂಡರು.

ನಮ್ಮದು ಸ್ಥಿರ ನಿಲುವು: ಯಾವುದೇ ದೇಶ ಯಾವುದೇ ನಿಲುವು ಕೈಗೊಂಡರೂ ಪ್ಯಾರಿಸ್‌ ಒಪ್ಪಂದಕ್ಕೆ ಭಾರತ ಬದ್ಧ ಎಂದು ಪರಿಸರ ಸಚಿವ ಹರ್ಷವರ್ಧನ್‌ ಹೇಳಿದರು.

‘ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ ಏರಿಕೆಯನ್ನು ತಡೆಯಲು ನಮ್ಮಿಂದಾಗುವ ಎಲ್ಲ ಪ್ರಯತ್ನಗಳನ್ನು ಮಾಡುತ್ತೇವೆ. 2015ರಲ್ಲಿ ಪ್ಯಾರಿಸ್‌ ಒಪ್ಪಂದದ ಮಾತುಕತೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೇ ನಾಯಕತ್ವ ವಹಿಸಿಕೊಂಡಿದ್ದರು’ ಎಂದು ಹರ್ಷವರ್ಧನ್‌ ತಿಳಿಸಿದರು.

ಅಮೆರಿಕ ಹಿಂದೆ ಸರಿದಿರುವುದು ಹವಾಮಾನ ಒಪ್ಪಂದದ ಶವಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆದಂತಾಗಿದೆ. ಆದರೆ ಇದು ಜಾಗತಿಕ

ಮಟ್ಟದಲ್ಲಿ ನಾಯಕತ್ವ ವಹಿಸಿಕೊಳ್ಳುವ ಅವಕಾಶವನ್ನು ಭಾರತಕ್ಕೆ ಒದಗಿಸಿದೆ ಎಂದು ವಿಜ್ಞಾನ ಮತ್ತು ಪರಿಸರ ಕೇಂದ್ರ ಹೇಳಿದೆ.

ಮಾಲಿನ್ಯ ತಡೆ ಪ್ರಯತ್ನ

*  ಅತಿ ಹೆಚ್ಚು ಮಾಲಿನ್ಯ ಉಂಟು ಮಾಡುವ ದೇಶ ಚೀನಾ. ಎರಡನೇ ಸ್ಥಾನದಲ್ಲಿ ಅಮೆರಿಕ ಇದೆ.

* 195 ದೇಶಗಳು ಒಪ್ಪಂದಕ್ಕೆ ಸಹಿ ಮಾಡಿವೆ. ಸಿರಿಯಾ ಮತ್ತು ನಿಕರಾಗುವ ಮಾತ್ರ ಸಹಿ ಮಾಡಿಲ್ಲ. ಈ ಸಾಲಿಗೆ ಈಗ ಅಮೆರಿಕ ಸೇರಿದೆ.

* ಚೀನಾ ಪ್ರಧಾನಿ ಲಿ ಕೆಕಿಯಾಂಗ್‌ ಮತ್ತು ಐರೋಪ್ಯ ಒಕ್ಕೂಟದ ಮುಖಂಡರು ಜಂಟಿ ಹೇಳಿಕೆ ಬಿಡುಗಡೆ ಮಾಡಿ, ಒಪ್ಪಂದಕ್ಕೆ ಬದ್ಧ ಎಂದು ಹೇಳಿದ್ದಾರೆ. ಇದು ಚೀನಾ ಮತ್ತು ಒಕ್ಕೂಟ ಜಂಟಿಯಾಗಿ ನೀಡಿದ ಮೊದಲ ಹೇಳಿಕೆ.

ಟ್ರಂಪ್‌ ಅವರ ನಿರ್ಧಾರವು ಪರಿಸರಕ್ಕೆ ಹಿನ್ನಡೆ. ಅಷ್ಟು ಮಾತ್ರ ಅಲ್ಲ, ಇದು ಅಮೆರಿಕ ಹೊಂದಿರುವ ಜಾಗತಿಕ ನಾಯಕತ್ವ ಸ್ಥಾನವನ್ನು ಇಲ್ಲವಾಗಿಸುತ್ತದೆ.

ಲಾಯ್ಡ್‌ ಬ್ಲಾಂಕ್‌ಫೇನ್‌

ಗೋಲ್ಟ್‌ಮನ್‌ ಸ್ಯಾಚ್‌ ಸಮೂಹದ ಸಿಇಒ.

ಭವಿಷ್ಯ ತಿರಸ್ಕರಿಸುವ ದೇಶಗಳ ಸಾಲಿಗೆ ಅಮೆರಿಕ ಸರ್ಕಾರವೂ ಸೇರಿದೆ. ಈ ಭೂಮಿಯನ್ನು ಮುಂದಿನ ತಲೆಮಾರಿಗೆ ಉಳಿಸಲು ಅಮೆರಿಕದ ರಾಜ್ಯಗಳು ಶ್ರಮಿಸುವ ವಿಶ್ವಾಸವಿದೆ.

ಬರಾಕ್‌ ಒಬಾಮ

ಅಮೆರಿಕದ ಮಾಜಿ ಅಧ್ಯಕ್ಷ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry