ಪೂರ್ವಾನುಮತಿ ಇಲ್ಲದೇ ರಸ್ತೆ ವಿಸ್ತರಣೆ

7
ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ವನ್ಯಜೀವಿಧಾಮದಲ್ಲಿ ಕಾಡುಪ್ರಾಣಿಗಳ ಸಾವು ಹೆಚ್ಚಾಗುವ ಆತಂಕ

ಪೂರ್ವಾನುಮತಿ ಇಲ್ಲದೇ ರಸ್ತೆ ವಿಸ್ತರಣೆ

Published:
Updated:
ಪೂರ್ವಾನುಮತಿ ಇಲ್ಲದೇ ರಸ್ತೆ ವಿಸ್ತರಣೆ

ಬೆಂಗಳೂರು: ವನ್ಯಜೀವಿ ಸಂರಕ್ಷಣೆಗೆ ಹೆಸರುವಾಸಿಯಾದ  ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ವನ್ಯಜೀವಿ ಧಾಮದ ಹನೂರು ವಲಯದ ವ್ಯಾಪ್ತಿಯಲ್ಲಿ ಅಕ್ರಮವಾಗಿ ರಸ್ತೆ ವಿಸ್ತರಣೆ ಕಾಮಗಾರಿ ನಡೆಸಲಾಗುತ್ತಿದೆ.

ಈ ಕಾಮಗಾರಿ ಕಾಡುಪ್ರಾಣಿಗಳ ಪಾಲಿಗೆ ಕಂಟಕ ತಂದೊಡ್ಡಲಿದೆ ಎಂದು ವನ್ಯಜೀವಿ ಕಾರ್ಯಕರ್ತರು ಆತಂಕ ವ್ಯಕ್ತಪಡಿಸಿದ್ದಾರೆ.

‘ಹನೂರಿನಿಂದ ಅಜ್ಜೀಪುರದ ಮೂಲಕ ರಾಮಾಪುರವನ್ನು ಸಂಪರ್ಕಿಸುವ ಈ ರಸ್ತೆಯು ಕಾಡಿನ ಮೂಲಕವೂ ಹಾದುಹೋಗುತ್ತದೆ. ಈ ಪೈಕಿ 4.5 ಕಿ.ಮೀ ಉದ್ದದಷ್ಟು ರಸ್ತೆಯು  ವನ್ಯಜೀವಿಧಾಮದ ವೀಸಲು ಪ್ರದೇಶದಲ್ಲಿದೆ. ಇಲ್ಲಿನ ರಸ್ತೆ ಅಭಿವೃದ್ಧಿಗೆ ರಾಜ್ಯ ಹಾಗೂ ರಾಷ್ಟ್ರೀಯ ವನ್ಯಜೀವಿ ಮಂಡಳಿಗಳ ಒಪ್ಪಿಗೆ ಅಗತ್ಯ. ಆದರೆ, ಯಾವುದೇ ಅನುಮತಿ ಪಡೆಯದೆಯೇ ಲೋಕೋಪಯೋಗಿ ಇಲಾಖೆ ಇಲ್ಲಿ ರಸ್ತೆ ಕಾಮಗಾರಿ ನಡೆಸುತ್ತಿದೆ’ ಎಂದು ವನ್ಯಜೀವಿ ಕಾರ್ಯಕರ್ತರೊಬ್ಬರು ದೂರಿದ್ದಾರೆ.   

‘ಇಲ್ಲಿನ ಕಾಡು ವೈವಿಧ್ಯಮಯ ವನ್ಯಜೀವಿಗಳ ಆವಾಸಸ್ಥಾನವಾಗಿದೆ.  ದಶಕಗಳ ಕಾಲ ವೀರಪ್ಪನ್ ಅಟ್ಟಹಾಸದಿಂದ ನಲುಗಿದ್ದ ಈ ಕಾಡಿನಲ್ಲಿ ಕಾಡುಪ್ರಾಣಿಗಳ ಸಂತತಿ ಈಗ ಹೆಚ್ಚುತ್ತಿದೆ. ಜೀವವೈವಿಧ್ಯದ ಉಳಿವಿಗಾಗಿ ರಚಿಸಲಾಗಿರುವ ಈ ವನ್ಯಜೀವಿಧಾಮದಲ್ಲಿ ಕಾಡು ಪ್ರಾಣಿಗಳ ರಕ್ಷಣೆಗಿಂತ ಅವುಗಳಿಗೆ ಮಾರಕವಾಗುವ ಚಟುವಟಿಕೆಯೇ ಹೆಚ್ಚಾಗಿ ನಡೆಯುತ್ತಿರುವುದು ವಿಷಾದನೀಯ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಈ ರಸ್ತೆಯ ಎರಡೂ ಕಡೆ ಕಾಡು ಹಬ್ಬಿದೆ. ಸಾರಂಗ, ಆನೆ, ಕಡವೆ, ಕಾಡುಕೋಣ ಮೊದಲಾದ ಕಾಡುಪ್ರಾಣಿಗಳ ಓಡಾಟ ಇಲ್ಲಿ ಸಾಮಾನ್ಯ.  ಇತ್ತೀಚಿನ ದಿನಗಳಲ್ಲಿ, ಈ ರಸ್ತೆಯನ್ನು ಬಳಸುವ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಇದರಿಂದಾಗಿ ಕಾಡುಪ್ರಾಣಿಗಳ ಮುಕ್ತ ಸಂಚಾರಕ್ಕೆ ಅಡ್ಡಿ ಉಂಟಾಗಿದೆ. ಅವುಗಳು  ರಸ್ತೆ ದಾಟಲು ಸಮಸ್ಯೆ ಎದುರಿಸಬೇಕಾದ ಪರಿಸ್ಥಿತಿ ಇದೆ’ ಎಂದು ಅವರು ವಸ್ತುಸ್ಥಿತಿ ವಿವರಿಸಿದರು.

‘ಜನವರಿ ತಿಂಗಳಿನಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಎರಡು ಸಾರಂಗಗಳು ಇಲ್ಲಿ ರಸ್ತೆ ಅಪಘಾತಕ್ಕೆ  ಬಲಿಯಾಗಿವೆ. ಈಗ ಈ ರಸ್ತೆಯನ್ನು ಮತ್ತಷ್ಟು ವಿಸ್ತರಿಸಿದರೆ ವಾಹನಗಳು ಇನ್ನಷ್ಟು ವೇಗವಾಗಿ ಸಂಚರಿಸಲು ಅನುವು ಮಾಡಿಕೊಟ್ಟಂತೆ ಆಗುತ್ತದೆ. ವಾಹನಗಳ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ಆಗ ಇನ್ನಷ್ಟು ಕಾಡುಪ್ರಾಣಿಗಳ ಇನ್ನೂ ಹೆಚ್ಚು ಅಪಾಯ ಎದುರಿಸಬೇಕಾಗುತ್ತದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಹೆಚ್ಚಲಿದೆ ಸಂಘರ್ಷ: ‘ಕಾಡುಪ್ರಾಣಿಗಳು ಹೇರಳವಾಗಿರುವ ಈ ಸಂರಕ್ಷಿತ ಪ್ರದೇಶ ಈಗಾಗಲೇ ಮಾನವ ಚಟುವಟಿಕೆಯಿಂದ ಒತ್ತಡ ಎದುರಿಸುತ್ತಿದೆ. ಗಾಯದ ಮೇಲೆ ಬರೆ ಎಳೆದಂತೆ ಇಂತಹ ಅಕ್ರಮ ಯೋಜನೆಗಳು ಜಾರಿಯಾಗುತ್ತಿವೆ. ರಸ್ತೆ ಅಭಿವೃದ್ಧಿ ಕಾರ್ಯದಿಂದ ಮಾನವ–ವನ್ಯಜೀವಿ ಸಂಘರ್ಷ ಮತ್ತಷ್ಟು ಹೆಚ್ಚಾಗುವ ಅಪಾಯವೂ ಇದೆ’ ಎಂದು ಅವರು ಎಚ್ಚರಿಸಿದರು.

‘ಇಲ್ಲಿನ ಉಪ ಅರಣ್ಯ ಸಂರಕ್ಷಣಾಧಿಕಾರಿಯವರು ಅಧಿಕಾರ ವಹಿಸಿಕೊಂಡಾಗಿನಿಂದಲೂ, ಈ ವಿಭಾಗದಲ್ಲಿ ನಡೆಯುವ ಅಕ್ರಮ ಚಟುವಟಿಕೆ ಬಗ್ಗೆ ನಿಗಾ ಇಡುವಲ್ಲಿ ಸೋತಿದ್ದಾರೆ. ಈಗ ರಸ್ತೆ ವಿಸ್ತರಣೆಗೆ ಅನುವು ಮಾಡಿಕೊಟ್ಟಿದ್ದಾರೆ’ ಎಂದು ಅವರು ದೂರಿದರು.

**

ಅರ್ಜಿಯೇ ಬಂದಿಲ್ಲ: ಡಿಸಿಎಫ್‌

‘ಈ ರಸ್ತೆಯು ವನ್ಯಜೀವಿಧಾಮದ ಮೂಲಕ ಹಾದುಹೋಗುವುದು ನಿಜ. ರಸ್ತೆ ವಿಸ್ತರಣೆ ಬಗ್ಗೆ ಲೋಕೋಪಯೋಗಿ ಇಲಾಖೆಯಿಂದ ಯಾವುದೇ ಅರ್ಜಿ ಬಂದಿಲ್ಲ’ ಎಂದು ಮಲೆ ಮಹದೇಶ್ವರ ಬೆಟ್ಟದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಎಂ.ಮಾಲತಿಪ್ರಿಯ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಇಲ್ಲಿ ರಸ್ತೆ ವಿಸ್ತರಣೆ ನಡೆಸುವುದಿಲ್ಲ. ಇರುವ ರಸ್ತೆಗೆ ಡಾಂಬರು ಹಾಕುವುದಾಗಿ ಲೋಕೋಪಯೋಗಿ ಇಲಾಖೆಯವರು ನಮಗೆ ತಿಳಿಸಿದ್ದಾರೆ. ಕಾಮಗಾರಿಗೆ ಅನುಮತಿ ಪಡೆಯುವಂತೆ ಅವರಿಗೆ ಈಗಾಗಲೇ ಮೂರು ಬಾರಿ ಸೂಚಿಸಿದ್ದೇನೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry