ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡಿ ಕೀಲು ಜೋಡಣೆ ಶಸ್ತ್ರಚಿಕಿತ್ಸಾ ಶಿಬಿರಕ್ಕೆ ಚಾಲನೆ

ಬೆಂಗಳೂರಿನ ಸಂಜಯ್‌ ಗಾಂಧಿ ಟ್ರಾಮ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆ
Last Updated 2 ಜೂನ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸಂಜಯ್‌ ಗಾಂಧಿ ಟ್ರಾಮ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆಯಲ್ಲಿ ಸ್ಥಾಪಿಸಿರುವ ಅತ್ಯಾಧುನಿಕ ಸಿ.ಟಿ. ಸ್ಕ್ಯಾನ್‌ ಯಂತ್ರ ಹಾಗೂ ಉಚಿತ ಮಂಡಿ ಕೀಲು ಜೋಡಣೆ ಶಸ್ತ್ರಚಿಕಿತ್ಸಾ ಶಿಬಿರಕ್ಕೆ ಆರೋಗ್ಯ ಸಚಿವ ಕೆ.ಆರ್‌.ರಮೇಶ್‌ ಕುಮಾರ್‌ ಶುಕ್ರವಾರ ಚಾಲನೆ ನೀಡಿದರು.

ಸಂಸ್ಥೆಯ ನಿರ್ದೇಶಕ ಡಾ.ಎಚ್.ಎಸ್. ಚಂದ್ರಶೇಖರ್ ಮಾತನಾಡಿ, ‘ಸಂಸ್ಥೆಯಲ್ಲಿ ಇದ್ದ ಹಳೆಯ ಸಿ.ಟಿ. ಸ್ಕ್ಯಾನ್‌ ಕೆಟ್ಟಿತ್ತು. ಹೀಗಾಗಿ ಹೊಸ ಸಿ.ಟಿ. ಸ್ಕ್ಯಾನ್‌ ಖರೀದಿಸಲಾಗಿದೆ. ಇದರ ಜತೆಗೆ ಪ್ಯಾಕ್ಸ್‌ ಸಿಸ್ಟಮ್‌ ಎಂಬ ಯಂತ್ರವನ್ನೂ ಅಳವಡಿಸಲಾಗಿದೆ. ಸಿ.ಟಿ. ಸ್ಕ್ಯಾನ್‌ನಿಂದ ತೆಗೆದ ಛಾಯಾಚಿತ್ರಗಳನ್ನು ಸಂಸ್ಥೆಯ ಎಲ್ಲ ವಿಭಾಗದ ವೈದ್ಯರು ಕುಳಿತಲ್ಲೇ ವೀಕ್ಷಿಸುವಂತಹ ಗಣಕೀಕೃತ ವ್ಯವಸ್ಥೆಯನ್ನು ಇದು ಒಳಗೊಂಡಿದೆ’ ಎಂದು ತಿಳಿಸಿದರು.

‘ಸಂಸ್ಥೆಯಲ್ಲಿ 3,000 ರೋಗಿಗಳಿಗೆ ಮಂಡಿ ಕೀಲುಜೋಡಣೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಮಂಡಿ ಸವೆತದಿಂದ ತೊಂದರೆ ಅನುಭವಿಸುತ್ತಿರುವ ರೋಗಿಗಳಿಗೆ ನೆರವಾಗುವ ಉದ್ದೇಶದಿಂದ ಉಚಿತ ಶಸ್ತ್ರಚಿಕಿತ್ಸಾ ಶಿಬಿರ ಹಮ್ಮಿಕೊಂಡಿದ್ದೇವೆ. ಇದಕ್ಕಾಗಿ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ₹10 ಲಕ್ಷ, ವಿಧಾನ ಪರಿಷತ್‌ ಸದಸ್ಯ ಶರವಣ ₹5 ಲಕ್ಷ, ಸಂಸ್ಥೆಯೊಂದು ₹3 ಲಕ್ಷ ಹಾಗೂ ಸಾರ್ವಜನಿಕರು ₹50,000 ನೀಡಿದ್ದಾರೆ’ ಎಂದರು.

‘ಜೂನ್‌ 5ರಿಂದ 30ರವರೆಗೆ ಪ್ರತಿ ಸೋಮವಾರ ಮತ್ತು ಗುರುವಾರ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1ರವರೆಗೆ ತಪಾಸಣೆ ನಡೆಸುತ್ತೇವೆ. ಸಮಸ್ಯೆ ಇರುವ ರೋಗಿಗಳನ್ನು ನೋಂದಾಯಿಸಿಕೊಂಡು, ಶಸ್ತ್ರಚಿಕಿತ್ಸಾ ದಿನವನ್ನು ನಿಗದಿಪಡಿಸುತ್ತೇವೆ. ದಿನಕ್ಕೆ ಎರಡು ಶಸ್ತ್ರಚಿಕಿತ್ಸೆಗಳನ್ನು ಮಾಡುತ್ತೇವೆ. 3–4 ತಿಂಗಳಲ್ಲಿ 100 ಶಸ್ತ್ರಚಿಕಿತ್ಸೆಗಳನ್ನು ಮಾಡುವ ಗುರಿ ಇದೆ’ ಎಂದು ಹೇಳಿದರು.

‘ಸಂಸ್ಥೆಯಲ್ಲಿ ₹4 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಶಸ್ತ್ರಚಿಕಿತ್ಸಾ ಕೊಠಡಿಯನ್ನು  ಸ್ಥಾಪಿಸುತ್ತಿದ್ದೇವೆ. ಇದರಿಂದ ರೋಗಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಬೆನ್ನುಹುರಿ ಗಾಯ ಹಾಗೂ ಆಘಾತ ಚಿಕಿತ್ಸೆ ಒದಗಿಸಲು 10 ಹಾಸಿಗೆ ಸಾಮರ್ಥ್ಯದ ವೆಂಟಿಲೇಟರ್ ಸೌಲಭ್ಯವಿರುವ ಐಸಿಯು ಮತ್ತು 20 ಹಾಸಿಗೆಯ
ಪಾಲಿ ಟ್ರಾಮ ಕೇಂದ್ರವನ್ನು ₹14.32 ಕೋಟಿ ವೆಚ್ಚದಲ್ಲಿ ಸ್ಥಾಪಿಸಲಾಗುತ್ತದೆ’ ಎಂದು ವಿವರಿಸಿದರು.

**

ಕಾರ್ಪೊರೇಟ್‌ ಆಸ್ಪತ್ರೆಗಳಿಗಿಂತ ಗುಣಮಟ್ಟದ ಚಿಕಿತ್ಸೆ ನಮ್ಮ ಸಂಸ್ಥೆಯಲ್ಲಿ ನೀಡುತ್ತಿದ್ದೇವೆ. ರೋಗಿಗಳು ಇದರ ಉಪಯೋಗ ಪಡೆಯಬೇಕು.
–ಡಾ.ಎಚ್.ಎಸ್. ಚಂದ್ರಶೇಖರ್,
ನಿರ್ದೇಶಕ, ಸಂಜಯ್‌ ಗಾಂಧಿ ಟ್ರಾಮ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT