ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸಂತತೀರ್ಥ ಕಲ್ಯಾಣಿ ಮೂಲ ಸ್ವರೂಪಕ್ಕೆ ಧಕ್ಕೆ

Last Updated 2 ಜೂನ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಸಂತಪುರದ ವಸಂತವಲ್ಲಭಸ್ವಾಮಿ ದೇವಸ್ಥಾನದ ಬಳಿ ಶಿಥಿಲಾವಸ್ಥೆಯಲ್ಲಿದ್ದ ಪುರಾತನ ಕಾಲದ ವಸಂತತೀರ್ಥ ಕಲ್ಯಾಣಿಗೆ ಹೊಸ ರೂಪ ನೀಡಲು ಇನ್ಫೊಸಿಸ್‌ ಪ್ರತಿಷ್ಠಾನ ಮುಂದಾಗಿದೆ. ಆದರೆ, ಅಭಿವೃದ್ಧಿ ನೆಪದಲ್ಲಿ ವಿಶಾಲವಾಗಿದ್ದ ಕಲ್ಯಾಣಿಯ ಮುಕ್ಕಾಲು ಭಾಗ ಮುಚ್ಚಿ, ಕಿರಿದಾಗಿಸಲಾಗುತ್ತಿದೆ.

1 ಎಕರೆ 33 ಗುಂಟೆ ವಿಸ್ತೀರ್ಣದಲ್ಲಿದ್ದ ಕಲ್ಯಾಣಿಯನ್ನು ಮುಕ್ಕಾಲು ಭಾಗ ಮುಚ್ಚಿ, ಖಾಸಗಿ ಭೂಮಾಲೀಕರೊಬ್ಬರಿಗೆ ಅನುಕೂಲವಾಗುವಂತೆ 40 ಅಡಿ ರಸ್ತೆ ನಿರ್ಮಿಸಲು ಮುಜರಾಯಿ ಇಲಾಖೆ ಅಧಿಕಾರಿಗಳೇ ಕೈಜೋಡಿಸಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

ಬೆಂಗಳೂರು ದಕ್ಷಿಣ ತಾಲ್ಲೂಕಿನ ಕನಕಪುರ ರಸ್ತೆಯಲ್ಲಿರುವ ಈ ಕಲ್ಯಾಣಿಯನ್ನು ಇನ್ಫೊಸಿಸ್‌ ಪ್ರತಿಷ್ಠಾನ ₹2 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುತ್ತಿದೆ.

ಕಲ್ಯಾಣಿ ನಿರ್ವಹಣೆ ಇಲ್ಲದೆ ಬಹುತೇಕ ಮುಚ್ಚಿ ಹೋಗಿತ್ತು. ಹಳೆಕಟ್ಟಡಗಳ ಅವಶೇಷ ಮತ್ತು ತ್ಯಾಜ್ಯ ಸುರಿದು ಇಲ್ಲೊಂದು ಕಲ್ಯಾಣಿ ಇತ್ತೆನ್ನುವ ಕುರುಹು ಸಹ ಇಲ್ಲದಂತಾಗಿತ್ತು.

ಶಿಥಿಲಗೊಂಡಿದ್ದ ಕಲ್ಯಾಣಿ ಜೀರ್ಣೋದ್ಧಾಗೊಳಿಸಬೇಕೆನ್ನುವುದು ವಸಂತಪುರ ಗ್ರಾಮಸ್ಥರು ಮತ್ತು ವಲ್ಲಭಸ್ವಾಮಿ ದೇವಸ್ಥಾನದ ಭಕ್ತರ ದಶಕದ ಹಿಂದಿನ ಬೇಡಿಕೆಯಾಗಿತ್ತು.

ಸ್ಥಳೀಯರ ಒತ್ತಾಸೆ ಮತ್ತು ಬೇಡಿಕೆಗೆ ಸ್ಪಂದಿಸಿದ ಇನ್ಫೊಸಿಸ್‌ ಪ್ರತಿಷ್ಠಾನದ ಸುಧಾ ಮೂರ್ತಿ ಅವರು ಕಲ್ಯಾಣಿ ಪುನರ್‌ ನಿರ್ಮಾಣ ಮತ್ತು ಕಲ್ಯಾಣಿ ಪಕ್ಕದಲ್ಲಿ ಉದ್ಯಾನ ನಿರ್ಮಿಸಲು ಮುಂದಾಗಿದ್ದಾರೆ.

ವಾಸ್ತು ಮತ್ತು ಧರ್ಮಶಾಸ್ತ್ರಕ್ಕೆ ಅನುಗುಣವಾಗಿ,  ಲೋಕೋಪಯೋಗಿ ಮತ್ತು ಧಾರ್ಮಿಕ ದತ್ತಿ ಇಲಾಖೆ ಮೇಲ್ವಿಚಾರಣೆಯಲ್ಲಿ ಕಾಮಗಾರಿ ನಡೆಸುವ ಷರತ್ತಿನೊಂದಿಗೆ ಕಂದಾಯ ಇಲಾಖೆ (ಮುಜರಾಯಿ) 2016ರ ಮೇ 4ರಂದು ಪ್ರತಿಷ್ಠಾನಕ್ಕೆ ಕಾಮಗಾರಿ ನಡೆಸಲು ಅನುಮತಿ ನೀಡಿದೆ.

ಮೂಲಸ್ವರೂಪಕ್ಕೆ ಧಕ್ಕೆ: ಕಲ್ಯಾಣಿಯಲ್ಲಿ ತುಂಬಿಕೊಂಡಿದ್ದ ಹೂಳು ಮತ್ತು ತ್ಯಾಜ್ಯ ತೆಗೆಯಲಾಗಿದೆ. ಮುಕ್ಕಾಲು ಭಾಗ ಕಲ್ಯಾಣಿ ಮುಚ್ಚಿರುವುದರಿಂದ ಕಲ್ಯಾಣಿಯ ಮೂಲಸ್ವರೂಪಕ್ಕೆ ಧಕ್ಕೆ ಉಂಟಾಗಿದೆ. ಸದ್ಯ ಕಲ್ಯಾಣಿಗೆ ಸುತ್ತಲೂ ಕಲ್ಲು ಕಟ್ಟಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಮರಾಠರ ಆಳ್ವಿಕೆ ಕಾಲದಲ್ಲಿ ಈ ಕಲ್ಯಾಣಿಯನ್ನು ಶಿವಾಜಿ ತಂದೆ ಷಹಜಿ ರಾಜೆ ಬೋಸ್ಲೆ ನಿರ್ಮಿಸಿದರು  ಎನ್ನುತ್ತಾರೆ ಇತಿಹಾಸಕಾರರು. ಈ ಕಲ್ಯಾಣಿ ಪಕ್ಕದಲೇ ಚೋಳರ ಕಾಲದ ವಸಂತ ವಲ್ಲಭಸ್ವಾಮಿ ದೇವಸ್ಥಾನ ಇದೆ.

‘ಪುರಾತನ ಸ್ಮಾರಕ ವಿರೂಪಗೊಳಿಸುವುದು ಅಥವಾ ಮೂಲಸ್ವರೂಪಕ್ಕೆ ಧಕ್ಕೆ ತರುವುದು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧ. ಕಲ್ಯಾಣಿಯ ಒಂದಷ್ಟು ಭಾಗ ಮುಚ್ಚಿ, ಕಿರಿದುಗೊಳಿಸುವುದು ಕೂಡ ಕಾನೂನಿಗೆ ವಿರುದ್ಧವಾದುದು. ಈ ಬಗ್ಗೆ ಪರಿಶೀಲಿಸಿ ಕಲ್ಯಾಣಿ ಸಂರಕ್ಷಣೆಗೆ ಕ್ರಮ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸುತ್ತೇನೆ’ ಎಂದು ರಾಜ್ಯ ಪುರಾತತ್ವ ಇಲಾಖೆ ನಿರ್ದೇಶಕ ಗೋಪಾಲ್‌ ಪ್ರತಿಕ್ರಿಯಿಸಿದರು.

‘ಸ್ಥಳದಲ್ಲಿ ಹಳೆಯ ನಕ್ಷೆಯ ಫಲಕ ಪ್ರಕಟಿಸಿರುವುದರಿಂದ ಗೊಂದಲ ಉಂಟಾಗಿದೆ. ರಸ್ತೆ ನಿರ್ಮಿಸುವ ಯೋಜನೆಯನ್ನು 2013ರ ಡಿಸೆಂಬರ್‌ 5ರಂದೇ ರದ್ದುಪಡಿಸಲಾಗಿದೆ’ ಎಂದು ಮುಜರಾಯಿ ಇಲಾಖೆ ತಹಶೀಲ್ದಾರ್‌ ದಿನೇಶ್‌ ಸ್ಪಷ್ಟಪಡಿಸಿದರು.

ರಸ್ತೆ ನಿರ್ಮಿಸುತ್ತಿಲ್ಲವೆಂದು ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ‘ಕಲ್ಯಾಣಿಯ ಕೆಲ ಭಾಗ ಮುಚ್ಚಿರುವುದು ಹಾಗೂ ಕಾಮಗಾರಿ ಸ್ಥಳದಲ್ಲಿ ಹಾಕಲಾಗಿದ್ದ ನೀಲನಕ್ಷೆಯ ಫಲಕದಲ್ಲಿ ರಸ್ತೆ ನಿರ್ಮಾಣದ ವಿವರ ಇದ್ದಿದ್ದನ್ನು ಗಮನಿಸಿದರೆ ಅಧಿಕಾರಿಗಳು ವಾಸ್ತವ ಮರೆ ಮಾಚುತ್ತಿರುವುದನ್ನು ಎತ್ತಿ ತೋರಿಸಿದೆ’ ಎನ್ನುತ್ತಾರೆ ಸ್ಥಳೀಯರು.

ವೈಯಕ್ತಿಕ ಹಿತಾಸಕ್ತಿ ಇಲ್ಲ: ಸುಧಾಮೂರ್ತಿ
‘ವಸಂತತೀರ್ಥ ಕಲ್ಯಾಣಿ ಅಭಿವೃದ್ಧಿಯಲ್ಲಿ ನಮ್ಮ ವೈಯಕ್ತಿಕ ಹಿತಾಸಕ್ತಿ ಏನೂ ಇಲ್ಲ. ನಾವು ಹಣಕಾಸು ನೆರವು ಮಾತ್ರ ನೀಡುತ್ತಿದ್ದೇವೆ. ಕಲ್ಯಾಣಿ ಅಭಿವೃದ್ಧಿ ಯೋಜನೆ ಅನುಷ್ಠಾನ ಸಂಬಂಧಿಸಿದ  ಇಲಾಖೆಗಳ ಜವಾಬ್ದಾರಿ. ಇದಕ್ಕೆ ಸಾರ್ವಜನಿಕರ ಆಕ್ಷೇಪ ವ್ಯಕ್ತವಾದರೆ ಯೋಜನೆ ಕೈಬಿಡುತ್ತೇವೆ’ ಎಂದು ಇನ್ಫೊಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಸ್ಪಷ್ಟಪಡಿಸಿದರು.

***

ಕಲ್ಯಾಣಿ ಮತ್ತು ದೇವಸ್ಥಾನದ ಜಾಗ ಒತ್ತುವರಿಯಾಗಿಲ್ಲ. ಕಲ್ಯಾಣಿ ಸುತ್ತಲೂ ಕಾಂಪೌಂಡ್‌ ನಿರ್ಮಾಣವಾಗಲಿದೆ
-ದಿನೇಶ್‌, ತಹಶೀಲ್ದಾರ್‌, ಮುಜರಾಯಿ ಇಲಾಖೆ

ಸ್ಥಳದಲ್ಲಿ ಹಳೆಯ ನಕ್ಷೆ ಹಾಕಿರುವುದು ಜನರ ಗೊಂದಲಕ್ಕೆ ಕಾರಣವಾಗಿತ್ತು. ಗೊಂದಲ ನಿವಾರಿಸಲಾಗಿದೆ
-ಜಿ.ವಿ.ಶ್ರೀಧರ್‌, ಜಿಲ್ಲಾಧಿಕಾರಿ, ಮುಜರಾಯಿ ಇಲಾಖೆ

ಐತಿಹಾಸಿಕ ಸ್ಮಾರಕ ಮತ್ತು ತಾಣದ ಮೂಲಸ್ವರೂಪಕ್ಕೆ ಧಕ್ಕೆ ಉಂಟಾಗಿರುವ ಬಗ್ಗೆ ಲಿಖಿತ ದೂರು ಬಂದರೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ
-ಕೆ.ಮೂರ್ತೇಶ್ವರಿ,ಕೇಂದ್ರ ಪ್ರಾಚ್ಯವಸ್ತು ಮತ್ತು ಪುರಾತತ್ವ ಇಲಾಖೆ, ಪ್ರಾಚ್ಯವಸ್ತು ಶಾಸ್ತ್ರಜ್ಞರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT