ಅಖಿಲ ಭಾರತ ಪರ್ಮಿಟ್‌ ವಾಹನಗಳಿಗೆ ನೋಟಿಸ್‌

7
ಕೇರಳ ಪ್ರವಾಸಕ್ಕೆ ಹೆದರುತ್ತಿರುವ ವಾಹನ ಮಾಲೀಕರು!

ಅಖಿಲ ಭಾರತ ಪರ್ಮಿಟ್‌ ವಾಹನಗಳಿಗೆ ನೋಟಿಸ್‌

Published:
Updated:
ಅಖಿಲ ಭಾರತ ಪರ್ಮಿಟ್‌ ವಾಹನಗಳಿಗೆ ನೋಟಿಸ್‌

ಬೆಂಗಳೂರು: 2014ರಿಂದ 2016ರ ಅವಧಿಯಲ್ಲಿ  ಕೇರಳಕ್ಕೆ ಪ್ರವಾಸಿಗರನ್ನು ಕರೆದೊಯ್ದಿದ್ದ ‘ಆಲ್ ಇಂಡಿಯಾ ಪರ್ಮಿಟ್‌’ ಹೊಂದಿರುವ ರಾಜ್ಯದ ವಾಹನಗಳಿಂದ ತೆರಿಗೆ ಬಾಕಿ ವಸೂಲಿಗೆ ಅಲ್ಲಿನ ಸರ್ಕಾರ ಮುಂದಾಗಿದ್ದು, ಅವುಗಳ ಮಾಲೀಕರಿಗೆ ನೋಟಿಸ್ ಜಾರಿ ಮಾಡುತ್ತಿದೆ.

ಚೆಕ್‌ಪೋಸ್ಟ್‌ಗಳಲ್ಲಿ ವಾಹನಗಳನ್ನು ಅಡ್ಡಗಟ್ಟಿ ಬಾಕಿ ವಸೂಲಿ ಮಾಡಲಾಗುತ್ತಿದ್ದು, ಕೇರಳ ಪ್ರವಾಸಕ್ಕೆ ಹೋಗಲು ವಾಹನ ಮಾಲೀಕರು ಹೆದರುವಂತಾಗಿದೆ.

ಈ ಮೊದಲು ಎಲ್ಲ ವಾಹನಗಳಿಗೆ ಕೇರಳದಲ್ಲಿ ಏಳು ದಿನದ ಪ್ರವಾಸ ಕೈಗೊಳ್ಳಲು  ₹ 9,200 ತೆರಿಗೆ ಪಾವತಿಸಿ ಪರವಾನಗಿ ಪಡೆಯಬೇಕಿತ್ತು. 2014ರ ಏಪ್ರಿಲ್ 1ರಿಂದ ಹೊಸ ತೆರಿಗೆ ನೀತಿ ಜಾರಿಗೆ ಬಂದಿದ್ದು,  ಆಲ್‌ ಇಂಡಿಯಾ ಪರ್ಮಿಟ್‌ ವಾಹನಗಳ ಪರವಾನಗಿ ಅವಧಿಯನ್ನು ಮೂರು ತಿಂಗಳಿಗೆ ವಿಸ್ತರಿಸಲಾಯಿತು. ಅದೇ ರೀತಿ ತೆರಿಗೆ ಮೊತ್ತವನ್ನು ₹ 1.38 ಲಕ್ಷಕ್ಕೆ ಹೆಚ್ಚಿಸಿತು.

ಬಳಿಕ ಕರ್ನಾಟಕದ ಕೆಲವು ಟ್ರಾವೆಲ್‌ಏಜೆನ್ಸಿ ಮಾಲೀಕರು ನ್ಯಾಯಾಲಯದ ಮೊರೆ ಹೋಗಿ ಹೊಸ ನೀತಿ ಜಾರಿಗೆ ತಡೆಯಾಜ್ಞೆ ತಂದಿದ್ದರು. ಇತ್ತೀಚೆಗೆ ಅಲ್ಲಿನ ಹೈಕೋರ್ಟ್‌ ತಡೆಯಾಜ್ಞೆ ತೆರವುಗೊಳಿಸಿದೆ.

ಇದೀಗ 2014ರ ಏಪ್ರಿಲ್‌ 1ರಿಂದ 2016ರ ಜುಲೈ 18ರವರೆಗೆ ಕೇರಳ ಗಡಿ ದಾಟಿರುವ ವಾಹನಗಳ ಮಾಲೀಕರಿಂದ ಬಾಕಿ ವಸೂಲಿ ಮಾಡಲಾಗುತ್ತಿದೆ.

‘ಮೂರು ತಿಂಗಳ ಅವಧಿಯಲ್ಲಿ ಒಂದು ಬಾರಿ ಕೇರಳ ಗಡಿ ದಾಟಿದ್ದರೂ ₹ 1.38 ಲಕ್ಷ ತೆರಿಗೆ ನಿಗದಿ ಮಾಡಿ ನೋಟಿಸ್ ಜಾರಿ ಮಾಡಲಾಗಿದೆ’ ಎಂದು ವಾಹನ ಮಾಲೀಕರು ‘ಪ್ರಜಾವಾಣಿ’ ಬಳಿ ಅಳಲು ತೋಡಿಕೊಂಡರು.

‘ಏಳು ದಿನದ ಪರವಾನಗಿ ಪಡೆದು ಪ್ರವಾಸಿಗರನ್ನು ಕರೆದೊಯ್ದು ಎರಡು ವರ್ಷ ಕಳೆದಿದೆ. ಈಗ  ಬಾಕಿ ಕೇಳಿದರೆ ಪಾವತಿಸುವುದು ಹೇಗೆ’ ಎಂದು  ಅವರು ಪ್ರಶ್ನಿಸಿದರು.

‘ಎರಡು ವರ್ಷದ ಅವಧಿಯಲ್ಲಿ ವೋಲ್ವೊ ಬಸ್‌ನಲ್ಲಿ ಏಳು ಬಾರಿ ಕೇರಳಕ್ಕೆ ಪ್ರವಾಸಿಗರನ್ನು ಕರೆದೊಯ್ದಿದ್ದೇನೆ. ಪ್ರತಿ ಬಾರಿಯೂ ₹ 9,200 ಪಾವತಿ ಮಾಡಿದ್ದೇನೆ. ಈಗ ₹ 3.12 ಲಕ್ಷ   ಬಾಕಿ ಇದೆ ಎಂಬ ನೋಟಿಸ್‌ ಬಂದಿದೆ’ ಎಂದು ಬಸ್‌ ಮಾಲೀಕ  ಮಂಜುನಾಥ್ ದೂರಿದರು.

‘ನ್ಯಾಯಾಲಯದ ಆದೇಶ ಆಗಿರುವ ಕಾರಣ ರಾಜ್ಯ ಸರ್ಕಾರದ ಮಧ್ಯ ಪ್ರವೇಶ  ಕಷ್ಟ. ಬಾಕಿ ವಸೂಲಿ ಕೈಬಿಡುವಂತೆ ನ್ಯಾಯಾಲಯಕ್ಕೇ ಮತ್ತೊಮ್ಮೆ ಮನವಿ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ’ ಎಂದು ಅವರು ತಿಳಿಸಿದರು.

**

ಬಾಕಿ ತೆರಿಗೆ ವಸೂಲಿ ಕೈಬಿಡುವಂತೆ ಕೋರಿ ಕೇರಳ ಹೈಕೋರ್ಟ್‌ಗೆ ಮನವಿ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ.

–ಭೈರವ ಸಿದ್ದರಾಮಯ್ಯ

ಪ್ರವಾಸೋದ್ಯಮ ಖಾಸಗಿ ಸಾರಿಗೆ ವಾಹನ ಮಾಲೀಕರ ಸಂಘದ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry